ಕ್ಸಿ ಜಿನ್ಪಿಂಗ್ ಮತ್ತು ಡೊನಾಲ್ಡ್ ಟ್ರಂಪ್  (Photo: India Today)

Delete Edit

ವಾಷಿಂಗ್ಟನ್: ಮೂರು ದಿನಗಳ ಅಮೆರಿಕ ಪ್ರವಾಸ ಕೈಗೊಂಡಿರುವ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಖುದ್ದು ವಿಮಾನ ನಿಲ್ದಾಣಕ್ಕೆ ತೆರಳಿ ಬರಮಾಡಿಕೊಂಡಿದ್ದಾರೆ.

ವ್ಯಾಪಾರ, ತೈವಾನ್ ಮತ್ತು ಕೃತಕ ಬುದ್ಧಿಮತ್ತೆ (AI) ಕುರಿತ ಉನ್ನತ ಮಟ್ಟದ ಮಾತುಕತೆಗಳಿಗಾಗಿ ಕ್ಸಿ ಜಿನ್ಪಿಂಗ್ ಅಮೆರಿಕಕ್ಕೆ ಭೇಟಿ ನೀಡಿದ್ದು, ವಾಷಿಂಗ್ಟನ್ ಹೊರವಲಯದ ‘ಜಾಯಿಂಟ್ ಬೇಸ್ ಆಂಡ್ರ್ಯೂಸ್’ಗೆ ಬಂದಿಳಿದರು.

ಭಾರೀ ಸುಂಕಗಳಿಂದ ತಾತ್ಕಾಲಿಕ ರಿಲೀಫ್ ನೀಡಿದ್ದ 11 ತಿಂಗಳ ವ್ಯಾಪಾರ ಒಪ್ಪಂದವನ್ನು ಮುಂದುವರಿಸಲು ಎರಡೂ ದೇಶಗಳು ಒಪ್ಪಿಕೊಂಡಿವೆ ಎಂದು ಟ್ರಂಪ್ ಆಡಳಿತ ಇತ್ತೀಚೆಗೆ ಪ್ರಕಟಿಸಿತ್ತು.

ಅಮೆರಿಕದ ಮಾಧ್ಯಮಗಳ ಪ್ರಕಾರ, ಕಳೆದ 11 ವರ್ಷಗಳಲ್ಲಿ ಅಮೆರಿಕದ ಅಧ್ಯಕ್ಷರೊಬ್ಬರು ವಿದೇಶಿ ನಾಯಕರೊಬ್ಬರನ್ನು ಈ ಸೇನಾ ನೆಲೆಯಲ್ಲಿ ಖುದ್ದು ಸ್ವಾಗತಿಸಿರುವುದು ಇದೇ ಮೊದಲು.

ಸ್ವಾಗತ ಸಮಾರಂಭದಲ್ಲಿ ಉಭಯ ನಾಯಕರು ಹಾಗೂ ಅವರ ಪತ್ನಿಯರು ಪರಸ್ಪರ ಹಸ್ತಲಾಘವ ಮಾಡಿ ಕೆಲ ನಿಮಿಷಗಳ ಕಾಲ ಮಾತುಕತೆ ನಡೆಸಿದರು. ಈ ವೇಳೆ ಮಿಲಿಟರಿ ಬ್ಯಾಂಡ್ ವಾದನ, ಫಿರಂಗಿ ನಮನ ಹಾಗೂ ಬಿ-1 ಯುದ್ಧ ವಿಮಾನದ ವೈಮಾನಿಕ ಗೌರವ ಸಮರ್ಪಿಸಲಾಯಿತು.

ಬಳಿಕ ಬಿಡುಗಡೆ ಮಾಡಿದ ಲಿಖಿತ ಹೇಳಿಕೆಯಲ್ಲಿ, ಅಮೆರಿಕ ಮತ್ತು ಚೀನಾ ಪರಸ್ಪರ ಪ್ರತಿಸ್ಪರ್ಧಿಗಳಾಗುವ ಬದಲು ಪಾಲುದಾರರಾಗಬೇಕು ಎಂದು ಕ್ಸಿ ಜಿನ್ಪಿಂಗ್ ಹೇಳಿರುವುದಾಗಿ ಚೀನಾದ ಅಧಿಕೃತ ಸುದ್ದಿ ಸಂಸ್ಥೆ Xinhua ವರದಿ ಮಾಡಿದೆ.

“ಚೀನಾದ ಪುನರುತ್ಥಾನ ಮತ್ತು ಅಮೆರಿಕವನ್ನು ಮತ್ತೆ ಮಹಾನ್ ದೇಶವನ್ನಾಗಿ ಮಾಡುವುದು ಒಟ್ಟೊಟ್ಟಿಗೆ ಸಾಗಬಹುದು. ಇವು ಪರಸ್ಪರ ಪೂರಕವಾಗಿದ್ದು, ಜಗತ್ತಿಗೆ ಪ್ರಯೋಜನಕಾರಿ” ಎಂದು ಅವರು ತಿಳಿಸಿದ್ದಾರೆ.

ಕಳೆದ ಹಲವು ದಶಕಗಳಲ್ಲಿ ಅಮೆರಿಕಕ್ಕೆ ಸರಿಸಮಾನವಾದ ಜಾಗತಿಕ ಸೂಪರ್ ಪವರ್ ಆಗಿ ಹೊರಹೊಮ್ಮಿರುವ ಬೀಜಿಂಗ್ನೊಂದಿಗೆ ವಾಷಿಂಗ್ಟನ್ ಹೊಂದಿರುವ ಸಂಬಂಧದ ಮಹತ್ವವನ್ನು ಟ್ರಂಪ್ ಅವರ ಈ ಆತ್ಮೀಯ ಸ್ವಾಗತವು ಬಿಂಬಿಸುತ್ತದೆ ಎಂದು ಅಲ್‌ ಜಝೀರಾ ವರದಿ ಮಾಡಿದೆ.

ಮೇ ತಿಂಗಳಲ್ಲಿ ಬೀಜಿಂಗ್ನಲ್ಲಿ ಟ್ರಂಪ್ ಅವರಿಗೆ ಆತಿಥ್ಯ ನೀಡಿದ ಬಳಿಕ ಕ್ಸಿ ಅವರ ಈ ಅಮೆರಿಕ ಪ್ರವಾಸ ನಡೆಯುತ್ತಿದೆ.

ಕ್ಸಿ ಅವರ ಈ ಪ್ರವಾಸದ ವೇಳಾಪಟ್ಟಿಯಲ್ಲಿ ಪ್ರಮುಖ ತಂತ್ರಜ್ಞಾನ ಕ್ಷೇತ್ರದ ಮುಖ್ಯಸ್ಥರು ಭಾಗವಹಿಸುವ ಅಧಿಕೃತ ಭೋಜನಕೂಟ, ಶ್ವೇತಭವನದಲ್ಲಿ ಮಿಲಿಟರಿ ಸಮಾರಂಭ ಹಾಗೂ ಅಮೆರಿಕದ ಸಂವಿಧಾನ ಮತ್ತು ಸ್ವಾತಂತ್ರ್ಯ ಘೋಷಣೆಯಂತಹ ಐತಿಹಾಸಿಕ ದಾಖಲೆಗಳನ್ನು ಹೊಂದಿರುವ ರಾಷ್ಟ್ರೀಯ ದಾಖಲೆಗಳ ಕೇಂದ್ರಕ್ಕೆ ಭೇಟಿ ನೀಡುವುದು ಸೇರಿದೆ.

ಇರಾನ್ ಮೇಲಿನ ಅಮೆರಿಕ–ಇಸ್ರೇಲ್ ಯುದ್ಧ, ಅಮೆರಿಕ–ಚೀನಾ ವ್ಯಾಪಾರ ಒಪ್ಪಂದ, ಎಐ ತಂತ್ರಜ್ಞಾನ ಹಾಗೂ ಚೀನಾ ತನ್ನದೆಂದು ಹೇಳಿಕೊಳ್ಳುತ್ತಿರುವ ಸ್ವಯಂ-ಆಡಳಿತದ ತೈವಾನ್ನೊಂದಿಗಿನ ಅಮೆರಿಕದ ಸಂಬಂಧಗಳ ಕುರಿತು ಉಭಯ ನಾಯಕರ ನಡುವೆ ಚರ್ಚೆ ನಡೆಯುವ ಸಾಧ್ಯತೆಯಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor