‘ಫ್ರೀ ಫೆಲೆಸ್ತೀನ್’ ಘೋಷಣೆ: ಅಮೆರಿಕದ ರಾಪರ್ ಮ್ಯಾಕಲ್ ಮೋರ್ ರನ್ನು ಪ್ರವಾಸದಿಂದ ಕೈಬಿಟ್ಟ ಎಡ್ ಶೀರನ್
Photo: The Print
ಹೊಸದಿಲ್ಲಿ: ನ್ಯೂಜೆರ್ಸಿಯ ಮೆಟ್‌ಲೈಫ್ ಸ್ಟೇಡಿಯಂನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ‘ಫ್ರೀ ಫೆಲೆಸ್ತೀನ್’(ಫೆಲೆಸ್ತೀನ್ ಗೆ ಸ್ವಾತಂತ್ರ್ಯ ನೀಡಿ) ಎಂದು ಘೋಷಣೆ ಕೂಗಿದ ಬಳಿಕ ಅಮೆರಿಕದ ರಾಪರ್ ಮ್ಯಾಕಲ್ ಮೋರ್ ರನ್ನು ತಮ್ಮ ಅಮೆರಿಕದ ಸ್ಟೇಡಿಯಂ ಪ್ರವಾಸದಿಂದ ಬ್ರಿಟಿಷ್ ಗಾಯಕ ಎಡ್ ಶೀರನ್ ಕೈಬಿಟ್ಟಿದ್ದಾರೆ ಎಂದು ಮ್ಯಾಕಲ್‌ಮೋರ್ ಹೇಳಿದ್ದಾರೆ.
ತಮ್ಮನ್ನು ಪ್ರವಾಸದಿಂದ ಕೈಬಿಡುವಂತೆ ಬಿಲಿಯನೇರ್ ಹಾಗೂ ‘ನ್ಯೂ ಇಂಗ್ಲೆಂಡ್ ಪ್ಯಾಟ್ರಿಯಾಟ್ಸ್’ ತಂಡದ ಮಾಲಕ ರಾಬರ್ಟ್ ಕ್ರಾಫ್ಟ್ ಒತ್ತಡ ಹೇರಿದ್ದರು ಎಂದು ಮ್ಯಾಕಲ್‌ಮೋರ್ ಇನ್‌ಸ್ಟಾಗ್ರಾಮ್ ನಲ್ಲಿ ಆರೋಪಿಸಿದ್ದಾರೆ.
‘ಕ್ರಾಫ್ಟ್ ಅವರ ಸ್ಟೇಡಿಯಂನಲ್ಲಿ ನನಗೆ ಪ್ರದರ್ಶನ ನೀಡಲು ಅವಕಾಶ ನೀಡುವುದಿಲ್ಲ ಎಂದು ಅವರು ಹೇಳಿದ್ದಾರೆ ಎಂದು ಎಡ್ ನನಗೆ ತಿಳಿಸಿದರು’ ಎಂದು ಮ್ಯಾಕಲ್‌ಮೋರ್ ತಮ್ಮ ಪೋಸ್ಟ್‌ನಲ್ಲಿ ಹೇಳಿದ್ದಾರೆ.
ಶೀರನ್ ಅವರ ಪ್ರವಾಸದ ಮುಂದಿನ ಕಾರ್ಯಕ್ರಮ ಮ್ಯಾಸಚೂಸೆಟ್ಸ್ ನ ಫಾಕ್ಸ್‌ಬರೋದಲ್ಲಿರುವ ‘ಜಿಲೆಟ್ ಸ್ಟೇಡಿಯಂ’ನಲ್ಲಿ ನಡೆಯಬೇಕಿತ್ತು. ಈ ಸ್ಟೇಡಿಯಂ ಕ್ರಾಫ್ಟ್ ಗ್ರೂಪ್ ಗೆ ಸೇರಿದೆ.
‘ಇತರ ಕೆಲವು ಸ್ಟೇಡಿಯಂ ಮಾಲಕರನ್ನು ಕ್ರಾಫ್ಟ್ ಒಗ್ಗೂಡಿಸಿದ್ದರು. ಅವರೆಲ್ಲರೂ ಸೇರಿ ಎಡ್‌ಗೆ ಅಂತಿಮ ಎಚ್ಚರಿಕೆ ನೀಡಿದ್ದರು. ಮ್ಯಾಕಲ್‌ಮೋರ್ ಪ್ರವಾಸದಲ್ಲಿ ಮುಂದುವರಿದರೆ, ನಮ್ಮ ಸ್ಥಳಗಳಲ್ಲಿ ಪ್ರದರ್ಶನ ನೀಡಲು ನಿಮಗೆ ಅವಕಾಶ ನೀಡುವುದಿಲ್ಲ ಎಂದು ಅವರು ಎಡ್ ಗೆ ಹೇಳಿದ್ದರು’ ಎಂದು ಅವರು ತಿಳಿಸಿದ್ದಾರೆ.
‘ಫೆಲೆಸ್ತೀನಿಯರೇ ನಿಜವಾದ ಸಂತ್ರಸ್ತರು’
‘ನಾನು ಸಂತ್ರಸ್ತನಲ್ಲ. ಎಡ್ ಅಥವಾ ಪಿಂಕ್ ಕೂಡ ಸಂತ್ರಸ್ತರಲ್ಲ. ಆದರೆ ಫೆಲೆಸ್ತೀನಿಯರೇ ನಿಜವಾದ ಸಂತ್ರಸ್ತರು. ಅವರು ಹತ್ಯೆಗೀಡಾಗಿದ್ದಾರೆ, ಹಾನಿಗೊಳಗಾಗಿದ್ದಾರೆ, ಸ್ಥಳಾಂತರಗೊಂಡಿದ್ದಾರೆ. ಊಹಿಸಲಾಗದ ಹಿಂಸಾಚಾರದ ನಡುವೆ ಬದುಕುವಂತಾಗಿದೆ’ ಎಂದು ಮ್ಯಾಕಲ್‌ಮೋರ್ ಹೇಳಿದ್ದಾರೆ.
‘ಗಾಝಾದಲ್ಲಿಯೇ 20,000ಕ್ಕೂ ಹೆಚ್ಚು ಮಕ್ಕಳು ಮೃತಪಟ್ಟಿದ್ದಾರೆ. ಇಂದು ಜನರು ಕೊಲ್ಲಲ್ಪಡುತ್ತಿದ್ದಾರೆ; ನಾಳೆಯೂ ಕೊಲ್ಲಲ್ಪಡುತ್ತಾರೆ. ಈ ವಿಷಯದ ಕುರಿತು ಮಾತನಾಡುವಾಗ ಆ ಸಂಗತಿಯನ್ನು ನಾವು ಮರೆಯಬಾರದು ಎಂಬುದು ನನ್ನ ಆಶಯ’ ಎಂದು ಅವರು ಬರೆದಿದ್ದಾರೆ.
ತಾನು ಮತ್ತು ಶೀರನ್ 13 ವರ್ಷಗಳಿಂದ ಪರಸ್ಪರ ಪರಿಚಿತರು. ಶೀರನ್ ತನಗೆ ಸಹೋದರನಿದ್ದಂತೆ ಎಂದು 43 ವರ್ಷದ ಮ್ಯಾಕಲ್‌ಮೋರ್ ಹೇಳಿದ್ದಾರೆ. ದ್ವೇಷದಿಂದ ಅಥವಾ ಶೀರನ್ ಅವರ ವ್ಯಕ್ತಿತ್ವಕ್ಕೆ ಧಕ್ಕೆ ತರುವ ಉದ್ದೇಶದಿಂದ ಈ ಹೇಳಿಕೆಗಳನ್ನು ನೀಡುತ್ತಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.
‘ರಾಜಕೀಯೇತರ ನಿಲುವು ಹೊಂದಿದ್ದ ಅವರ ಧೋರಣೆಗೆ ಹಿಂದೆಂದೂ ಇಲ್ಲದ ರೀತಿಯಲ್ಲಿ ಸವಾಲು ಎದುರಾಗಿದೆ. “ಫ್ರೀ ಫೆಲೆಸ್ತೀನ್” ಎಂಬ ಮಾತುಗಳು ಮತ್ತು ಫೆಲೆಸ್ತೀನ್ ಧ್ವಜದ ಚಿತ್ರವು ತಾವು ಮಾತನಾಡಿದ ಅನೇಕ ಜನರಿಗೆ ನೋವುಂಟುಮಾಡಿದೆ ಎಂದು ಎಡ್ ನನಗೆ ಹೇಳಿದರು’ ಎಂದು ಅವರು ತಿಳಿಸಿದ್ದಾರೆ.
ಆದರೂ, ಈ ಬೆಳವಣಿಗೆಯಿಂದ ಶೀರನ್ ಅವರೊಂದಿಗಿನ ತಮ್ಮ ಸಂಬಂಧ ಅಂತ್ಯಗೊಳ್ಳುವುದಿಲ್ಲ ಎಂಬ ವಿಶ್ವಾಸವನ್ನು ಮ್ಯಾಕಲ್‌ಮೋರ್ ವ್ಯಕ್ತಪಡಿಸಿದ್ದಾರೆ.
‘ಒಂದು ನೋವಿನ ಭಿನ್ನಾಭಿಪ್ರಾಯದಿಂದಾಗಿ 13 ವರ್ಷಗಳ ಸ್ನೇಹ ಮಾಯವಾಗುವುದಿಲ್ಲ. ನಾವಿಬ್ಬರೂ ಪರಸ್ಪರರ ಮಾತುಗಳನ್ನು ಆಲಿಸುವುದನ್ನು, ಫೆಲೆಸ್ತೀನ್ ನಲ್ಲಿ ಏನಾಗುತ್ತಿದೆ ಎಂಬುದನ್ನು ಅಧ್ಯಯನ ಮಾಡುವುದನ್ನು ಮತ್ತು ಇಂತಹ ಸಂದರ್ಭದಲ್ಲಿ ತಟಸ್ಥ ನಿಲುವಿನ ಅರ್ಥವೇನು ಎಂಬುದರ ಕುರಿತು ಚಿಂತಿಸುವುದನ್ನು ಮುಂದುವರಿಸುತ್ತೇವೆ ಎಂದು ನಾನು ಭಾವಿಸುತ್ತೇನೆ’ ಎಂದು ಅವರು ಬರೆದಿದ್ದಾರೆ.