ಸಾಂದರ್ಭಿಕ ಚಿತ್ರ - Photo Credit : ANI

ಸನಾ: ಹೌದಿ ಬಂಡುಕೋರರು ಶನಿವಾರ ತಡರಾತ್ರಿ ನೆರೆಯ ಸೌದಿ ಅರೇಬಿಯಾದ ಮೇಲೆ ಹೊಸ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ನಡೆಸಿರುವುದಾಗಿ ವರದಿಯಾಗಿದೆ.

ಸೌದಿ ಅರೇಬಿಯಾದ ನಜ್ರಾನ್ ಪ್ರದೇಶದ ಶಾರುರಾ ಪ್ರಾಂತ್ಯದಲ್ಲಿರುವ ಮಿಲಿಟರಿ ನೆಲೆಯನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆ. ದಕ್ಷಿಣದ ಶರೂರಾ ನೆಲೆ ಮೇಲಿನ ಈ ದಾಳಿಯು ನಮ್ಮ ರಾಷ್ಟ್ರ ಮತ್ತು ಜನರ ವಿರುದ್ಧದ ಆಕ್ರಮಣವನ್ನು ನಿಯಂತ್ರಿಸುತ್ತಿದ್ದ ಶಸ್ತ್ರಾಸ್ತ್ರ ಉಗ್ರಾಣಗಳು ಹಾಗೂ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್‌ಗಳನ್ನು ಗುರಿಯಾಗಿಸಿಕೊಂಡಿತ್ತು. ಬ್ಯಾಲಿಸ್ಟಿಕ್ ಕ್ಷಿಪಣಿ ಮತ್ತು ಡ್ರೋನ್ ಜಂಟಿ ದಾಳಿಯು ನಿಗದಿತ ಗುರಿಗಳನ್ನು ತಲುಪಿದೆ ಮತ್ತು ಯಮನ್ ಮೇಲಿನ ಸೌದಿ ದಾಳಿಗಳು ಮುಂದುವರಿದರೆ ಇನ್ನಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳುವುದಾಗಿ ಹೌದಿ ಮಿಲಿಟರಿ ವಕ್ತಾರ ಬ್ರಿಗೇಡಿಯರ್ ಜನರಲ್ ಯಹ್ಯಾ ಸಾರಿ ಎಚ್ಚರಿಸಿದ್ದಾರೆ.

ಕೆಂಪು ಸಮುದ್ರದ ಉದ್ದಕ್ಕೂ ಯಮನ್ ಗಡಿಯ ಬಳಿ ಇರುವ ಅಲ್-ತವ್ವಾಲ್ ಗವರ್ನರೇಟ್‍ನಲ್ಲಿ ಕ್ಷಿಪಣಿ ಅಪ್ಪಳಿಸಿದ್ದು ಇಬ್ಬರು ಗಾಯಗೊಂಡಿದ್ದಾರೆ ಮತ್ತು ಮಸೀದಿ ಸೇರಿದಂತೆ ಹಲವು ಕಟ್ಟಡಗಳಿಗೆ ಹಾನಿಯಾಗಿದೆ. ಶಾರುರಾ ಪ್ರಾಂತದಲ್ಲಿ ಸೈರನ್ ಶಬ್ದಗಳು ಕೇಳಿ ಬಂದಿವೆಯಾದರೂ, ಅಲ್ಲಿ ಯಾವುದೇ ಸಾವುನೋವು ಅಥವಾ ಹಾನಿ ವರದಿಯಾಗಿಲ್ಲ ಎಂದು ಸೌದಿ ನಾಗರಿಕ ರಕ್ಷಣಾ ಪಡೆ ಮಾಹಿತಿ ನೀಡಿದೆ.

ಹೌದಿ ಬಂಡುಕೋರರಿಗೆ ಸೂಕ್ತ ಪ್ರತ್ಯುತ್ತರ ನೀಡುವುದಾಗಿ ಯಮನ್‍ನ ಸೌದಿ ಬೆಂಬಲಿತ ಸರಕಾರ ಹೇಳಿದೆ. ಪ್ರಮುಖ ಪ್ರದೇಶಗಳಲ್ಲಿ ಸರಕಾರದ ಹಿಡಿತ ತಪ್ಪಿರುವುದನ್ನು ಹಿರಿಯ ಯಮನ್ ಅಧಿಕಾರಿಯೊಬ್ಬರು ಪ್ರಮುಖ ಹಿನ್ನಡೆ ಎಂದು ಬಣ್ಣಿಸಿದ್ದಾರೆ. ಹಾರ್ಮುಝ್ ಜಲಸಂಧಿಗೆ ಪ್ರಮುಖ ನೌಕಾ ಪರ್ಯಾಯವಾಗಿರುವ ಬಾಬ್ ಎಲ್-ಮಂಡೆಬ್ ಜಲಸಂಧಿಯ ಪ್ರಮುಖ ಬಂದರು ನಗರ ಮತ್ತು ದ್ವೀಪವನ್ನು ಹೌದಿಗಳು ವಶಪಡಿಸಿಕೊಂಡಿರುವುದು ಮಾರುಕಟ್ಟೆಗಳನ್ನು ಕಂಗೆಡಿಸಿದೆ ಮತ್ತು ಯಮನ್ ನಾಗರಿಕರಲ್ಲಿ ಮತ್ತೊಮ್ಮೆ ವಿನಾಶಕಾರಿ ಅಂತರ್ಯುದ್ಧದ ಭೀತಿಯನ್ನು ಹುಟ್ಟುಹಾಕಿದೆ. ಇತರ ವಾಣಿಜ್ಯ ಹಡಗುಗಳಿಗೆ ಬೆದರಿಕೆಯಿಲ್ಲ ಎಂದು ಹೌದಿಗಳು ಹೇಳಿದ್ದರೂ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆಗಳು ಮತ್ತೆ ಏರಿಕೆಯಾಗಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor