ಹೌತಿಗಳ ದಾಳಿ | ಸೌದಿ ಅರೇಬಿಯದಲ್ಲಿ 7,800ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದು: ರಾಯಿಟರ್ಸ್ ವರದಿ
ರಿಯಾದ್ ನಲ್ಲಿ ಶೇ. 86ರಷ್ಟು ವಿಮಾನಗಳ ಹಾರಾಟ ರದ್ದು
Photo Credit : reuters.com
ರಿಯಾದ್: ಯೆಮನ್ ನ ಹೌತಿಗಳು ನಡೆಸುತ್ತಿರುವ ಬ್ಯಾಲಿಸ್ಟಿಕ್ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳ ಪರಿಣಾಮ ಸೌದಿ ಅರೇಬಿಯದಲ್ಲಿ ವಿಮಾನಗಳ ಹಾರಾಟ ತೀವ್ರವಾಗಿ ಅಸ್ತವ್ಯಸ್ತಗೊಂಡಿದೆ. ಅ. 8ರಿಂದ 25ರವರೆಗೆ ದೇಶದಾದ್ಯಂತ ನಿಗದಿಯಾಗಿದ್ದ 7,800ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದಾಗಿದೆ ಅಥವಾ ಸ್ಥಗಿತಗೊಂಡಿದೆ. ಇದು ಒಟ್ಟು ನಿಗದಿತ ವಿಮಾನಗಳ ಶೇ. 45ರಷ್ಟಾಗಿದೆ ಎಂದು ವಾಯುಯಾನ ವಿಶ್ಲೇಷಣಾ ಸಂಸ್ಥೆ ಸಿರಿಯಮ್ ನ ದತ್ತಾಂಶ ತಿಳಿಸಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ಸೌದಿ ಅರೇಬಿಯದ ರಾಜಧಾನಿ ರಿಯಾದ್ ನ ಕಿಂಗ್ ಖಾಲಿದ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿಗದಿಯಾಗಿದ್ದ 4,736 ವಿಮಾನಗಳ ಪೈಕಿ 4,071 ವಿಮಾನಗಳ ಹಾರಾಟ ರದ್ದಾಗಿದೆ. ಇದು ಶೇ. 86ರಷ್ಟಾಗಿದೆ. ಅಕ್ಟೋಬರ್ 12ರಂದು ದೇಶಾದ್ಯಂತ ವಿಮಾನಗಳ ರದ್ದತಿ ಪ್ರಮಾಣ ಶೇ.60ರಷ್ಟನ್ನು ಮೀರಿತ್ತು.
ವಿಮಾನ ನಿಲ್ದಾಣಗಳು, ಬಂದರುಗಳು ಮತ್ತು ತೈಲ ಸೌಲಭ್ಯಗಳನ್ನು ಗುರಿಯಾಗಿಸಿಕೊಂಡು ಹೌತಿಗಳು ಈ ತಿಂಗಳು ಸೌದಿ ಅರೇಬಿಯದ ಮೇಲೆ ದಾಳಿಗಳನ್ನು ತೀವ್ರಗೊಳಿಸಿದ್ದಾರೆ.
ಜಿದ್ದಾ ಬಳಿಕ ದೇಶದ ಎರಡನೇ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣವಾಗಿರುವ ರಿಯಾದ್‌ನ ಕಿಂಗ್ ಖಾಲಿದ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೂ ಪದೇಪದೇ ದಾಳಿಗಳು ನಡೆದಿವೆ. ಅ.10ರಂದು ನಡೆದ ದಾಳಿಯಲ್ಲಿ 13 ಮಂದಿ ಸಾವನ್ನಪ್ಪಿದ್ದರು. ಒಂದು ದಶಕಕ್ಕೂ ಹೆಚ್ಚು ಅವಧಿಯಲ್ಲಿ ಸೌದಿ ಅರೇಬಿಯದಲ್ಲಿ ನಡೆದ ಅತ್ಯಂತ ಮಾರಕ ದಾಳಿ ಇದಾಗಿದೆ.
ಅ.10ರಂದು ಸ್ಥಗಿತಗೊಂಡಿದ್ದ ವಿಮಾನ ನಿಲ್ದಾಣದ ಕಾರ್ಯಾಚರಣೆಯನ್ನು ಸೌದಿ ಅಧಿಕಾರಿಗಳು ರವಿವಾರ ಭಾಗಶಃ ಪುನರಾರಂಭಿಸಿದ್ದಾರೆ. ಟರ್ಮಿನಲ್ 1ರಿಂದ ದೇಶೀಯ ವಿಮಾನಗಳ ಹಾರಾಟ ಆರಂಭವಾಗಿದ್ದು, ರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳಿಗೆ ಟರ್ಮಿನಲ್ 2ರಿಂದ ಅಂತರರಾಷ್ಟ್ರೀಯ ವಿಮಾನ ಸೇವೆಗಳನ್ನು ನಡೆಸಲು ಅವಕಾಶ ನೀಡಲಾಗಿದೆ.
ಆದರೆ, ರಿಯಾದ್ ವಿಮಾನ ನಿಲ್ದಾಣದ ಮೇಲೆ ಸೋಮವಾರ ಮತ್ತೆ ದಾಳಿ ನಡೆಸಿರುವುದಾಗಿ ಹೌತಿಗಳು ಹೇಳಿಕೊಂಡಿದ್ದಾರೆ. ವಿಮಾನ ನಿಲ್ದಾಣವನ್ನು ಸೇನಾ ಗುರಿ ಎಂದು ಅವರು ಹೇಳಿದ್ದಾರೆ. ದಾಳಿಗಳ ಹಿನ್ನೆಲೆಯಲ್ಲಿ ಹಲವು ಅಂತರರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳು ನವೆಂಬರ್ ವರೆಗೂ ರಿಯಾದ್ ಗೆ ವಿಮಾನ ಸೇವೆಗಳನ್ನು ಸ್ಥಗಿತಗೊಳಿಸಿವೆ. ಡೆಲ್ಟಾ ಏರ್‌ಲೈನ್ಸ್ ಕೂಡ ರಿಯಾದ್ ಗೆ ತನ್ನ ವಿಮಾನ ಸೇವೆಯ ಆರಂಭವನ್ನು ಮುಂದಿನ ವರ್ಷಕ್ಕೆ ಮುಂದೂಡಿದೆ.
ವಿಮಾನ ಸಂಚಾರ ವ್ಯತ್ಯಯದಿಂದಾಗಿ ರಿಯಾದ್ ನಲ್ಲಿ ನಡೆಯಬೇಕಿದ್ದ ಹಲವು ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿದೆ ಅಥವಾ ಮುಂದೂಡಲಾಗಿದೆ. ಸೌದಿ ಅರೇಬಿಯದ ಪ್ರಮುಖ ಹೂಡಿಕೆ ಸಮ್ಮೇಳನವೂ ಇದರಲ್ಲಿ ಸೇರಿದೆ.
ದೇಶದ ಇತರ ವಿಮಾನ ನಿಲ್ದಾಣಗಳಲ್ಲೂ ವಿಮಾನ ಸಂಚಾರಕ್ಕೆ ಹೊಡೆತ ಬಿದ್ದಿದೆ. ದಮ್ಮಾಮ್ ನಲ್ಲಿ ಶೇ. 42ರಷ್ಟು ಹಾಗೂ ಅಬ್ಹಾದಲ್ಲಿ ಶೇ. 46.7ರಷ್ಟು ನಿಗದಿತ ವಿಮಾನಗಳ ಹಾರಾಟ ರದ್ದಾಗಿದೆ. ಯೆಮನ್ ಗಡಿಯ ಸಮೀಪದ ನಜ್ರಾನ್ ವಿಮಾನ ನಿಲ್ದಾಣದಲ್ಲಿ ನಿಗದಿಯಾಗಿದ್ದ ಎಲ್ಲ ವಿಮಾನಗಳ ಹಾರಾಟವೂ ರದ್ದಾಗಿದೆ ಎಂದು ಸಿರಿಯಮ್ ನ ದತ್ತಾಂಶ ತಿಳಿಸಿದೆ.