ಭಯೋತ್ಪಾದನೆ ವಿರುದ್ಧ ಜಂಟಿ ಉಪಕ್ರಮ: ಭಾರತ-ಇಟಲಿ ಘೋಷಣೆ
Photo Credit : PTI
ರೋಮ್, ಮೇ 20: ಭಯೋತ್ಪಾದನೆ ಮತ್ತು ಭಯೋತ್ಪಾದಕ ಚಟುವಟಿಕೆಗಳಿಗೆ ಆರ್ಥಿಕ ನೆರವಿನ ವಿರುದ್ಧ ಜಂಟಿ ಉಪಕ್ರಮಕ್ಕೆ ಭಾರತ ಮತ್ತು ಇಟಲಿ ನಿರ್ಧರಿಸಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಘೋಷಿಸಿದ್ದಾರೆ.
ಐದು ರಾಷ್ಟ್ರಗಳ ಪ್ರವಾಸದ ಕೊನೆಯ ಚರಣವಾಗಿ ಮಂಗಳವಾರ ತಡರಾತ್ರಿ ಇಟಲಿ ತಲುಪಿದ ಪ್ರಧಾನಿ ನರೇಂದ್ರ ಮೋದಿ ಬುಧವಾರ ರೋಮ್ನಲ್ಲಿ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡರು.
ಭಯೋತ್ಪಾದನೆ ಮನುಕುಲಕ್ಕೆ ದೊಡ್ಡ ಸವಾಲಾಗಿದೆ ಎಂಬ ನಿಲುವಿನಲ್ಲಿ ಭಾರತ ಮತ್ತು ಇಟಲಿ ಒಗ್ಗಟ್ಟಾಗಿದೆ. ಭಯೋತ್ಪಾದನೆಗೆ ಹಣಕಾಸು ನೆರವನ್ನು ನಿರ್ಬಂಧಿಸುವಲ್ಲಿ ಉಭಯ ದೇಶಗಳ ಸಹಯೋಗವು ಪ್ರಪಂಚದ ಮುಂದೆ ಒಂದು ಉದಾಹರಣೆಯಾಗಿ ಹೊರಹೊಮ್ಮಿದೆ ಎಂದು ಮೋದಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ನಡುವಿನ ಮಾತುಕತೆಗಳ ನಂತರ ಭಾರತ ಮತ್ತು ಇಟಲಿ ವಿಶೇಷ ಕಾರ್ಯತಂತ್ರದ ಪಾಲುದಾರಿಕೆಗೆ ತಮ್ಮ ಸಂಬಂಧಗಳನ್ನು ಹೆಚ್ಚಿಸಲು ಹಾಗೂ ವ್ಯಾಪಾರ, ಹೂಡಿಕೆ ಮತ್ತು ಹೊಸ ತಂತ್ರಜ್ಞಾನಗಳ ಕ್ಷೇತ್ರಗಳಲ್ಲಿ ಸಹಕಾರವನ್ನು ವೃದ್ಧಿಸಲು ನಿರ್ಧರಿಸಿವೆ.
ಭಾರತ-ಇಟಲಿ ಬಾಂಧವ್ಯವನ್ನು ಹೆಚ್ಚಿಸುವ ಕುರಿತು ನಾವು ವ್ಯಾಪಕವಾಗಿ ಚರ್ಚಿಸಿದ್ದೇವೆ. ಭಾರತ-ಇಟಲಿ ಜಂಟಿ ಕಾರ್ಯತಂತ್ರದ ಕ್ರಿಯಾ ಯೋಜನೆ 2025-2029 ನಮ್ಮ ಸಂಬಂಧಗಳಿಗೆ ಪ್ರಾಯೋಗಿಕ ಮತ್ತು ಭವಿಷ್ಯದ ಚೌಕಟ್ಟನ್ನು ನೀಡುತ್ತದೆ. ಎಐ, ಕ್ವಾಂಟಮ್ ತಂತ್ರಜ್ಞಾನ, ಬಾಹ್ಯಾಕಾಶ ಮತ್ತು ನಾಗರಿಕ ಪರಮಾಣು ಶಕ್ತಿಯಂತಹ ಕ್ಷೇತ್ರಗಳಲ್ಲಿ ಸಹಕಾರಕ್ಕಾಗಿ ಭಾರತ ಮತ್ತು ಇಟಲಿ ಅಪಾರ ಸಾಮರ್ಥ್ಯಗಳನ್ನು ಹಂಚಿಕೊಳ್ಳುತ್ತವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ದ್ವಿಪಕ್ಷೀಯ ಮಾತುಕತೆಗೆ ಮುನ್ನ ಇಟಲಿ ಅಧ್ಯಕ್ಷ ಸೆರ್ಗಿಯೊ ಮಟ್ಟರೆಲ್ಲಾ ಅವರನ್ನು ಭೇಟಿ ಮಾಡಿದ ಮೋದಿ, ವ್ಯಾಪಾರ, ಹೂಡಿಕೆ ಮತ್ತು ಸಾಂಸ್ಕೃತಿಕ ಸಂಬಂಧಗಳು ಸೇರಿದಂತೆ ಭಾರತ-ಇಟಲಿ ಸ್ನೇಹಕ್ಕೆ ಸಂಬಂಧಿಸಿದ ವಿವಿಧ ಅಂಶಗಳನ್ನು ಚರ್ಚಿಸಿದರು. ಅಲ್ಲದೆ ಎಐ, ವಿರಳ ಖನಿಜ, ಬಾಹ್ಯಾಕಾಶ ಮತ್ತು ಪರಮಾಣು ಇಂಧನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಹಯೋಗದ ಬಗ್ಗೆ ಚರ್ಚೆ ನಡೆಸಿದರು. ಬಳಿಕ ಪ್ರಧಾನಿ ಮೆಲೋನಿ ಜೊತೆ ನಡೆದ ದ್ವಿಪಕ್ಷೀಯ ಸಭೆಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ವಿದೇಶಾಂಗ ಇಲಾಖೆ ಕಾರ್ಯದರ್ಶಿ (ಪಶ್ಚಿಮ) ಸಿಬಿ ಜಾರ್ಜ್, ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಹಾಗೂ ಇತರ ಉನ್ನತ ರಾಜತಾಂತ್ರಿಕ ಅಧಿಕಾರಿಗಳು ಉಪಸ್ಥಿತರಿದ್ದರು.