ಅಮೆರಿಕದೊಂದಿಗೆ ಐತಿಹಾಸಿಕ ಒಪ್ಪಂದ: ಇರಾನ್ ಅಧ್ಯಕ್ಷ ಮಸೂದ್ ಪೆಝೆಷ್ಕಿಯನ್
ಮಸೂದ್ ಪೆಝೆಷ್ಕಿಯನ್ | Photo Credit : aljazeera.com
ಟೆಹರಾನ್/ವಾಷಿಂಗ್ಟನ್: ಅಮೆರಿಕದೊಂದಿಗಿನ ಒಪ್ಪಂದವನ್ನು ಸ್ವಾಗತಿಸಿರುವ ಇರಾನ್ ಅಧ್ಯಕ್ಷ ಮಸೂದ್ ಪೆಝೆಷ್ಕಿಯನ್, ಅಮೆರಿಕ ಯುದ್ಧವನ್ನು ಅಂತ್ಯಗೊಳಿಸಿ ಅಂತಿಮ ಒಪ್ಪಂದದ ಸಂಧಾನಕ್ಕೆ ದಾರಿ ಮಾಡಿಕೊಡುವ ಈ ಒಪ್ಪಂದವು ಐತಿಹಾಸಿಕ ಮಹತ್ವದ್ದಾಗಿದೆ ಎಂದು ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಅವರು, “ಪರಸ್ಪರ ಗೌರವದ ಆಧಾರದ ಮೇಲೆ ಶಾಂತಿಯನ್ನು ಸಾಧಿಸಬಹುದು ಎಂಬುದಕ್ಕೆ ಇದು ಇರಾನ್‌ನ ಐತಿಹಾಸಿಕ ದಾಖಲೆ ಹಾಗೂ ಬಲಿಷ್ಠ ಸಂದೇಶವಾಗಿದೆ” ಎಂದು ಬರೆದಿದ್ದಾರೆ. ತಮ್ಮ ಪೋಸ್ಟ್‌ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಮಧ್ಯಸ್ಥಿಕೆ ವಹಿಸಿದ ಪಾಕಿಸ್ತಾನದ ಪ್ರಧಾನಿ ಶೆಹಬಾಝ್ ಶರೀಫ್ ಅವರ ಸಹಿಗಳನ್ನು ಒಳಗೊಂಡಿರುವ ಒಪ್ಪಂದದ ದಾಖಲೆಯನ್ನೂ ಅವರು ಲಗತ್ತಿಸಿದ್ದಾರೆ.
Islamabad :18 June 2026.
— Prime Minister's Office (@PakPMO) June 18, 2026
Prime Minister of Pakistan Muhammad Shehbaz Sharif signed the Islamabad Memorandum of Understanding (Islamabad MoU)، as mediator.
The Islamabad MOU has been signed by President of USA Donald J. Trump and Iranian President Masoud Pezeshkian. pic.twitter.com/M0LKK9XoK8
ಬುಧವಾರ ಫ್ರಾನ್ಸ್‌ನ ವೆರ್ಸೈಲೆಸ್ ನಲ್ಲಿ ಒಪ್ಪಂದಕ್ಕೆ ಸಹಿ ಮಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್ ತನ್ನ ಸಂವರ್ಧಿತ ಯುರೇನಿಯಂ ಸಂಗ್ರಹವನ್ನು ಕಡಿತಗೊಳಿಸಬೇಕೆಂದು ಆಗ್ರಹಿಸಿದ್ದಾರೆ. ಜೊತೆಗೆ, ಅಮೆರಿಕದ ಬೆಂಬಲಿತ ಆರ್ಥಿಕ ದಿಗ್ಬಂಧನಗಳನ್ನು ಹಿಂಪಡೆಯಲಾಗುವುದು ಎಂದು ಘೋಷಿಸಿದ್ದಾರೆ. ತಕ್ಷಣದಿಂದಲೇ ಜಾರಿಗೆ ಬರುವಂತೆ ಇರಾನ್ ತನ್ನ ತೈಲವನ್ನು ಮುಕ್ತವಾಗಿ ಮಾರಾಟ ಮಾಡಲು ಅವಕಾಶ ನೀಡಲಾಗುವುದು ಎಂದು ಉಭಯ ದೇಶಗಳು ಬಿಡುಗಡೆ ಮಾಡಿರುವ ವಿವರಗಳಲ್ಲಿ ತಿಳಿಸಲಾಗಿದೆ.
ಇದಕ್ಕೆ ಪ್ರತಿಯಾಗಿ ಟೆಹರಾನ್ ನಲ್ಲಿ ಇರಾನ್ ಪರವಾಗಿ ಅಧ್ಯಕ್ಷ ಮಸೂದ್ ಪೆಝೆಷ್ಕಿಯನ್ ಕೂಡ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎಂದು ಸರ್ಕಾರಿ ಸುದ್ದಿ ಸಂಸ್ಥೆ ಐಆರ್‌ಎನ್‌ಎ ವರದಿ ಮಾಡಿದೆ. ಡೊನಾಲ್ಡ್ ಟ್ರಂಪ್ ಹಾಗೂ ತಮ್ಮ ಸಹಿಗಳನ್ನು ಹೊಂದಿರುವ ಒಪ್ಪಂದ ಪತ್ರವನ್ನು ಕೈಯಲ್ಲಿ ಹಿಡಿದಿರುವ ಪೆಝೆಷ್ಕಿಯನ್ ಅವರ ಚಿತ್ರವನ್ನೂ ಸಂಸ್ಥೆ ಪ್ರಕಟಿಸಿದೆ.
ಉಭಯ ದೇಶಗಳ ನಾಯಕರು ಒಪ್ಪಂದ ಪತ್ರಕ್ಕೆ ಸಹಿ ಮಾಡಿದ ಬಳಿಕ ಕದನವು ತಕ್ಷಣದಿಂದಲೇ ಅಂತ್ಯಗೊಳ್ಳಲಿದೆ ಎಂದು ಈ ಒಪ್ಪಂದದ ಮಧ್ಯಸ್ಥಿಕೆದಾರರಾಗಿ ಕಾರ್ಯನಿರ್ವಹಿಸಿದ ಪಾಕಿಸ್ತಾನದ ಪ್ರಧಾನಿ ಶೆಹಬಾಝ್ ಶರೀಫ್ ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದ್ದಾರೆ.
ಈ ಒಪ್ಪಂದದ ಮಧ್ಯಸ್ಥಿಕೆ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಶೆಹಬಾಝ್ ಶರೀಫ್ ಅವರು ಗುರುವಾರ ಒಪ್ಪಂದ ಪತ್ರಕ್ಕೆ ಸಹಿ ಹಾಕಿದ್ದಾರೆ.