×
Ad

ಒಬಾಮಾ ಒಪ್ಪಂದವನ್ನು ರದ್ದುಪಡಿಸಿದ್ದ ಟ್ರಂಪ್; ಹೊಸ ಇರಾನ್ ಒಡಂಬಡಿಕೆ ಹೇಗೆ ಭಿನ್ನ?

Update: 2026-06-18 22:57 IST

ಡೊನಾಲ್ಡ್ ಟ್ರಂಪ್ , ಬರಾಕ್ ಒಬಾಮಾ | Photo Credit : NDTV 

ವಾಷಿಂಗ್ಟನ್: 2015ರಲ್ಲಿ ಇರಾನ್‌ ನೊಂದಿಗೆ ಮಾಡಿಕೊಂಡಿದ್ದ ಪರಮಾಣು ಒಪ್ಪಂದವನ್ನು ‘ಭಯಾನಕ’ ಹಾಗೂ ‘ಏಕಪಕ್ಷೀಯ’ ಎಂದು ಟೀಕಿಸಿ 2018ರಲ್ಲಿ ಅಮೆರಿಕವನ್ನು ಅದರಿಂದ ಹೊರಬರುವಂತೆ ಮಾಡಿದ್ದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇದೀಗ ಇರಾನ್‌ ನೊಂದಿಗೆ ಹೊಸ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಿದ್ದಾರೆ. ಟ್ರಂಪ್ ಆಡಳಿತದ ಪ್ರಕಾರ, ಈ ಹೊಸ ಒಪ್ಪಂದವು ಬರಾಕ್ ಒಬಾಮಾ ಅವಧಿಯ ‘ಜಂಟಿ ಸಮಗ್ರ ಕ್ರಿಯಾ ಯೋಜನೆ’ (JCPOA) ಒಪ್ಪಂದಕ್ಕಿಂತ ಉತ್ತಮವಾಗಿದೆ.

ಜೂನ್ 17ರಂದು ಅಮೆರಿಕ ಮತ್ತು ಇರಾನ್ ‘ಇಸ್ಲಾಮಾಬಾದ್ ಒಡಂಬಡಿಕೆ ಪತ್ರ’ಕ್ಕೆ ಸಹಿ ಹಾಕಿವೆ. 14 ಅಂಶಗಳನ್ನು ಒಳಗೊಂಡಿರುವ ಈ ಒಪ್ಪಂದದ ಚೌಕಟ್ಟು, ಸುಮಾರು 110 ದಿನಗಳಿಂದ ಮುಂದುವರಿದಿದ್ದ ಮಧ್ಯಪ್ರಾಚ್ಯದ ಬಿಕ್ಕಟ್ಟಿಗೆ ಅಂತ್ಯ ಹಾಡುವ ಗುರಿ ಹೊಂದಿದೆ. ಆದರೆ, ಒಬಾಮಾ ಅವಧಿಯ ಒಪ್ಪಂದ ಮತ್ತು ಹೊಸ ಒಡಂಬಡಿಕೆ ಪತ್ರದ ನಡುವೆ ಹಲವು ಮಹತ್ವದ ವ್ಯತ್ಯಾಸಗಳಿವೆ.

2015ರ ಜಂಟಿ ಸಮಗ್ರ ಕ್ರಿಯಾ ಯೋಜನೆ (JCPOA) ಒಪ್ಪಂದವು ಅಮೆರಿಕ, ಇರಾನ್ ಹಾಗೂ ಚೀನಾ, ರಷ್ಯಾ, ಬ್ರಿಟನ್, ಫ್ರಾನ್ಸ್ ಮತ್ತು ಜರ್ಮನಿ ಸೇರಿದಂತೆ ಹಲವು ರಾಷ್ಟ್ರಗಳ ನಡುವೆ ನಡೆದಿದ್ದ ಬಹುಪಕ್ಷೀಯ ಒಪ್ಪಂದವಾಗಿತ್ತು. ಸುಮಾರು 18 ತಿಂಗಳ ಮಾತುಕತೆಗಳ ಬಳಿಕ ಅಂತಿಮಗೊಂಡಿದ್ದ ಈ ಒಪ್ಪಂದದಲ್ಲಿ ಇರಾನ್‌ನ ಪರಮಾಣು ಚಟುವಟಿಕೆಗಳ ಮೇಲೆ ಕಟ್ಟುನಿಟ್ಟಿನ ನಿಯಂತ್ರಣ ಹಾಗೂ ಅಂತರರಾಷ್ಟ್ರೀಯ ತಪಾಸಣಾ ವ್ಯವಸ್ಥೆಗಳನ್ನು ಒಳಗೊಂಡಿತ್ತು.

ಇದಕ್ಕೆ ವಿರುದ್ಧವಾಗಿ, ಇಸ್ಲಾಮಾಬಾದ್ ಒಡಂಬಡಿಕೆ ಪತ್ರವು ಕೇವಲ 14 ಅಂಶಗಳ ಚೌಕಟ್ಟು ದಾಖಲೆಯಾಗಿದೆ. ಇದು ಕದನವಿರಾಮ ಮತ್ತು ಮುಂದಿನ ಸಂಧಾನಗಳಿಗೆ ನೀಲನಕ್ಷೆಯಾಗಿ ಕಾರ್ಯನಿರ್ವಹಿಸಲಿದ್ದು, ತಾಂತ್ರಿಕ ವಿವರಗಳನ್ನು ಮುಂದಿನ 60 ದಿನಗಳಲ್ಲಿ ಅಂತಿಮಗೊಳಿಸುವ ಉದ್ದೇಶ ಹೊಂದಿದೆ. ಅಮೆರಿಕವು ಅಗತ್ಯವಿದ್ದರೆ ಸೇನಾ ಕ್ರಮದ ಆಯ್ಕೆಯನ್ನು ತೆರೆದಿಟ್ಟಿರುವುದರಿಂದ ಈ ಒಪ್ಪಂದವು JCPOAಗಿಂತ ಭಿನ್ನವಾಗಿದೆ ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಹೇಳಿದ್ದಾರೆ.

►ಪರಮಾಣು ಶಸ್ತ್ರಾಸ್ತ್ರಗಳ ಕುರಿತು ಬದ್ಧತೆ

ಎರಡೂ ಒಪ್ಪಂದಗಳ ಮೂಲ ಉದ್ದೇಶ ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದದಂತೆ ತಡೆಯುವುದಾಗಿದೆ. ಆದರೆ, ಈ ವಿಷಯದಲ್ಲಿ ಬಳಸಿರುವ ಭಾಷೆಯಲ್ಲಿ ಗಮನಾರ್ಹ ವ್ಯತ್ಯಾಸವಿದೆ.

JCPOA ಒಪ್ಪಂದದಲ್ಲಿ ‘ಯಾವುದೇ ಸಂದರ್ಭದಲ್ಲೂ ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಪಡೆಯುವುದಿಲ್ಲ, ಅಭಿವೃದ್ಧಿಪಡಿಸುವುದಿಲ್ಲ ಅಥವಾ ಹೊಂದಿರುವುದಿಲ್ಲ’ ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿತ್ತು.

ಆದರೆ, ಇಸ್ಲಾಮಾಬಾದ್ ಒಡಂಬಡಿಕೆ ಪತ್ರದಲ್ಲಿ ‘ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಖರೀದಿಸಬಾರದು ಅಥವಾ ಅಭಿವೃದ್ಧಿಪಡಿಸಬಾರದು’ ಎಂದು ಮಾತ್ರ ಹೇಳಲಾಗಿದೆ. ಈ ಬದ್ಧತೆಯನ್ನು ಹೇಗೆ ಜಾರಿಗೆ ತರಲಾಗುವುದು ಎಂಬುದು ಮುಂದಿನ ಮಾತುಕತೆಗಳ ಮೇಲೆ ಅವಲಂಬಿತವಾಗಿದೆ.

►ಯುರೇನಿಯಂ ಸಂವರ್ಧನೆ ಕುರಿತು ಸ್ಪಷ್ಟತೆ ಇಲ್ಲ

JCPOA ಒಪ್ಪಂದದಡಿ ಇರಾನ್ ತನ್ನ ಸಂವರ್ಧಿತ ಯುರೇನಿಯಂ ಸಂಗ್ರಹವನ್ನು 15 ವರ್ಷಗಳ ಕಾಲ ಶೇ.3.67ರ ಮಟ್ಟಕ್ಕೆ ಸೀಮಿತಗೊಳಿಸಲು ಒಪ್ಪಿಕೊಂಡಿತ್ತು. ಯುರೇನಿಯಂ ಸಂವರ್ಧನೆಯನ್ನು ನತಾಂಜ್‌ ನಲ್ಲಿರುವ ಏಕೈಕ ಸೌಲಭ್ಯಕ್ಕೆ ಮಾತ್ರ ಸೀಮಿತಗೊಳಿಸಲಾಗಿತ್ತು. ಸೆಂಟ್ರಿಫ್ಯೂಜ್‌ಗಳ ಸಂಖ್ಯೆ ಮತ್ತು ಮಾದರಿಗಳ ಮೇಲೂ ನಿರ್ಬಂಧ ವಿಧಿಸಲಾಗಿತ್ತು. ಇದರ ಪರಿಣಾಮವಾಗಿ ಇರಾನ್‌ನ ಸುಮಾರು ಶೇ.97ರಷ್ಟು ಸಂವರ್ಧಿತ ಯುರೇನಿಯಂ ಸಂಗ್ರಹವನ್ನು ದೇಶದ ಹೊರಗೆ ಸಾಗಿಸಲಾಗಿತ್ತು.

ಆದರೆ, ಹೊಸ ಒಡಂಬಡಿಕೆ ಪತ್ರದಲ್ಲಿ ಈ ಕುರಿತು ಯಾವುದೇ ನಿರ್ದಿಷ್ಟ ನಿಯಮಗಳನ್ನು ಉಲ್ಲೇಖಿಸಲಾಗಿಲ್ಲ. ‘ಸಂವರ್ಧಿತ ಯುರೇನಿಯಂ ಸ್ಥಳಾಂತರದ ವಿಷಯವನ್ನು ಬಗೆಹರಿಸಿಕೊಳ್ಳಲು ಸಮ್ಮತಿಸಲಾಗಿದೆ’ ಎಂಬ ಸಂಕ್ಷಿಪ್ತ ಉಲ್ಲೇಖ ಮಾತ್ರ ದಾಖಲಾಗಿದೆ.

►ಆರ್ಥಿಕ ದಿಗ್ಬಂಧನ ಸಡಿಲಿಕೆ

JCPOA ಒಪ್ಪಂದದಡಿ ಇರಾನ್ ತನ್ನ ಬದ್ಧತೆಗಳನ್ನು ಪಾಲಿಸುತ್ತಿದ್ದಂತೆ ಅದರ ಮೇಲಿನ ಆರ್ಥಿಕ ದಿಗ್ಬಂಧನಗಳನ್ನು ಹಂತಹಂತವಾಗಿ ಸಡಿಲಿಸಲಾಗುತ್ತಿತ್ತು. ಆ ನಿರ್ಬಂಧಗಳನ್ನು ವಿಧಿಸಿದ್ದ ಹಲವು ರಾಷ್ಟ್ರಗಳೇ ಒಪ್ಪಂದದ ಪಾಲುದಾರರಾಗಿದ್ದವು.

ಇಸ್ಲಾಮಾಬಾದ್ ಒಡಂಬಡಿಕೆ ಪತ್ರದಲ್ಲಿಯೂ ಅಂತಿಮ ಒಪ್ಪಂದದ ಬಳಿಕ ನಿಗದಿತ ಅವಧಿಯಲ್ಲಿ ಆರ್ಥಿಕ ದಿಗ್ಬಂಧನಗಳನ್ನು ಹಿಂತೆಗೆದುಕೊಳ್ಳುವ ಭರವಸೆ ನೀಡಲಾಗಿದೆ. ಆದರೆ, ಇದು ಅಮೆರಿಕ ಮತ್ತು ಇರಾನ್ ನಡುವಿನ ದ್ವಿಪಕ್ಷೀಯ ಒಪ್ಪಂದವಾಗಿರುವುದರಿಂದ ಯುರೋಪಿನ ರಾಷ್ಟ್ರಗಳು ಸೇರಿದಂತೆ ಇತರ ದೇಶಗಳು ಹೇಗೆ ಪ್ರತಿಕ್ರಿಯಿಸಲಿವೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

►ಮರುನಿರ್ಮಾಣಕ್ಕೆ 300 ಶತಕೋಟಿ ಡಾಲರ್ ಯೋಜನೆ

ಇಸ್ಲಾಮಾಬಾದ್ ಒಡಂಬಡಿಕೆ ಪತ್ರದ ಆರನೇ ಅಂಶದ ಪ್ರಕಾರ, ಇರಾನ್‌ ನ ಮರುನಿರ್ಮಾಣ ಹಾಗೂ ಆರ್ಥಿಕ ಅಭಿವೃದ್ಧಿಗಾಗಿ ಅಮೆರಿಕ ಮತ್ತು ಅದರ ಪ್ರಾದೇಶಿಕ ಪಾಲುದಾರರು ಪರಸ್ಪರ ಒಪ್ಪಿಗೆಯ ಯೋಜನೆಯನ್ನು ಜಾರಿಗೊಳಿಸಲು ಬದ್ಧರಾಗಿವೆ.

JCPOA ಒಪ್ಪಂದದಲ್ಲಿ ಇಂತಹ ಯಾವುದೇ ಮರುನಿರ್ಮಾಣ ಯೋಜನೆ ಅಥವಾ ನಿಧಿಯ ಪ್ರಸ್ತಾಪ ಇರಲಿಲ್ಲ. ಇದರ ಜೊತೆಗೆ, ಬ್ಯಾಲಿಸ್ಟಿಕ್ ಕ್ಷಿಪಣಿಗಳ ಅಭಿವೃದ್ಧಿ ಮತ್ತು ಸಂಘಟನೆಗಳಿಗೆ ಹಣಕಾಸು ನೆರವು ಒದಗಿಸುವ ವಿಚಾರಗಳನ್ನೂ ಹೊಸ ಒಡಂಬಡಿಕೆ ಪತ್ರದಲ್ಲಿ ಪ್ರಸ್ತಾಪಿಸಲಾಗಿದೆ.

ಸೌಜನ್ಯ: NDTV

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News