ಟೆಹ್ರಾನ್: ಇರಾನ್‌ ನ ಪರಮಾಣು ತಾಣಗಳ ಪರಿಶೀಲನೆಗೆ ಅವಕಾಶ ನೀಡುವಂತೆ ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ (IAEA) ಮಾಡಿರುವ ಮನವಿಯನ್ನು ಇರಾನ್ ತಿರಸ್ಕರಿಸಿದೆ. ಯುದ್ಧ ಶಾಶ್ವತವಾಗಿ ಅಂತ್ಯಗೊಳ್ಳಬೇಕು ಮತ್ತು ಇರಾನ್‌ ನ ಎಲ್ಲ ಷರತ್ತುಗಳು ಈಡೇರಬೇಕು. ಅಲ್ಲಿಯವರೆಗೆ ಪರಮಾಣು ಸೌಲಭ್ಯಗಳಿಗೆ ಪ್ರವೇಶಿಸಲು ಅನುಮತಿ ನೀಡುವುದಿಲ್ಲ ಎಂದು ಇರಾನ್‌ನ ಉಪ ವಿದೇಶಾಂಗ ಸಚಿವ ಘರಿಬಾಬಾದಿ ಸ್ಪಷ್ಟಪಡಿಸಿದ್ದಾರೆ ಎಂದು Aljazeera ವರದಿ ಮಾಡಿದೆ.

ಇರಾನ್‌ ನ ಸರ್ಕಾರಿ ಟಿವಿಗೆ ನೀಡಿದ ಹೇಳಿಕೆಯಲ್ಲಿ ಮಾತನಾಡಿದ ಅವರು, ಪರಮಾಣು ಸೌಲಭ್ಯಗಳಿಗೆ ಪ್ರವೇಶಿಸಲು IRGC ಅನುಮತಿ ನೀಡುವುದಿಲ್ಲ ಎಂದು ತಿಳಿಸಿದ್ದಾರೆ.

ಪರಮಾಣು ತಾಣಗಳಿಗೆ ಪರಿಶೀಲಕರು ಮತ್ತೆ ಭೇಟಿ ನೀಡಲು ಅವಕಾಶ ಕಲ್ಪಿಸಬೇಕೆಂದು IAEA ಇತ್ತೀಚೆಗೆ ಮನವಿ ಮಾಡಿತ್ತು. ಈ ಮನವಿಗೆ ಪ್ರತಿಕ್ರಿಯಿಸಿರುವ ಘರಿಬಾಬಾದಿ, ಇರಾನ್‌ ನ ಹಾನಿಗೊಳಗಾದ ಪರಮಾಣು ತಾಣಗಳಿಗೆ ಭೇಟಿ ನೀಡುವಂತೆ ಸಂಸ್ಥೆ ಮಾಡಿರುವ ಮನವಿಯ ಉದ್ದೇಶದ ಬಗ್ಗೆಯೇ ಪ್ರಶ್ನೆ ಎತ್ತಿದ್ದಾರೆ.

ಈ ಭೇಟಿ ಬಹುಶಃ ಅಮೆರಿಕದ ಶಸ್ತ್ರಾಸ್ತ್ರಗಳ ಪರಿಣಾಮಕಾರಿತ್ವವನ್ನು ಮೌಲ್ಯಮಾಪನ ಮಾಡುವ ಉದ್ದೇಶ ಹೊಂದಿರಬಹುದು ಎಂದು ಅವರು ಆರೋಪಿಸಿದ್ದಾರೆ. ಇರಾನ್‌ ನ 'ಫಾರ್ಸ್' ಸುದ್ದಿ ಸಂಸ್ಥೆ ಬಿಡುಗಡೆ ಮಾಡಿರುವ ವಿಡಿಯೊದಲ್ಲಿ ಘರಿಬಾಬಾದಿ ಈ ಹೇಳಿಕೆ ನೀಡಿದ್ದಾರೆ.

IAEAಯಲ್ಲಿ ಇರಾನ್‌ ನ ಮಾಜಿ ರಾಯಭಾರಿಯೂ ಆಗಿರುವ ಅವರು, ಪರಮಾಣು ತಾಣಗಳಿಗೆ ಯಾವುದೇ ಪ್ರವೇಶ ಕಲ್ಪಿಸುವ ಮೊದಲು ಇರಾನ್‌ ನ ಎಲ್ಲ ಷರತ್ತುಗಳನ್ನು ಪಾಲಿಸಲಾಗುವುದು ಎಂಬ ಬಗ್ಗೆ ಅಮೆರಿಕ ಅಗತ್ಯ ಭರವಸೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor