Photo Credit : X

ಟೆಹರಾನ್: ಅಮೆರಿಕದ ನೌಕಾ ದಿಗ್ಬಂಧನವನ್ನು ಎದುರಿಸಲು ಇರಾನ್ ತನ್ನೆಲ್ಲಾ ಅಸ್ತ್ರಗಳನ್ನು (ಮಾರ್ಗಗಳನ್ನು) ಬಳಸಲಿದೆ ಎಂದು ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಇಸ್ಮಾಯೀಲ್ ಬಘಾಯಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಇರಾನ್‍ಗೆ ಸಂಬಂಧಿಸಿದ ತೈಲ ರಫ್ತಿನ ಮೇಲೆ ಅಮೆರಿಕ ದಿಗ್ಬಂಧನ ವಿಧಿಸಿದೆ. `ನಾವು ಈ ದಿಗ್ಬಂಧನವನ್ನು ಖಂಡಿತವಾಗಿಯೂ ಸಹಿಸುವುದಿಲ್ಲ ಮತ್ತು ಅಮೆರಿಕದ ಈ ಆಕ್ರಮಣವನ್ನು ಎದುರಿಸಲು ನಮ್ಮ ಎಲ್ಲಾ ಸಾಧನಗಳನ್ನು ಬಳಸುತ್ತೇವೆ. ನೌಕಾ ದಿಗ್ಬಂಧನವನ್ನು ಮಿಲಿಟರಿ ಆಕ್ರಮಣವೆಂದು ಪರಿಗಣಿಸಲಾಗುತ್ತದೆ. ಈ ನಿಟ್ಟಿನಲ್ಲಿ ತನ್ನನ್ನು ತಾನು ರಕ್ಷಿಸಿಕೊಳ್ಳಲು ಲಭ್ಯವಿರುವ ಯಾವುದೇ ಮಾರ್ಗವನ್ನು ಬಳಸುವ ಹಕ್ಕು ಇರಾನ್‍ಗೆ ಇದೆ' ಎಂದು ಬಘಾಯಿ ಹೇಳಿದರು.

ತನ್ನ ಬಂದರುಗಳ ಮೇಲೆ ಅಮೆರಿಕ ಹೇರಿರುವ ದಿಗ್ಬಂಧನವನ್ನು ಭೇದಿಸಿ ಹನ್ನೆರಡಕ್ಕೂ ಹೆಚ್ಚು ತೈಲ ಟ್ಯಾಂಕರ್‌ಗಳನ್ನು ಕಳುಹಿಸಲು ಇರಾನ್ ಯೋಜಿಸುತ್ತಿದೆ ಎಂಬ ವರದಿಗಳು ವ್ಯಾಪಕ ಸಂಘರ್ಷದ ಭೀತಿಯನ್ನು ಹುಟ್ಟುಹಾಕಿವೆ. ಇದು ಅಪಾಯಕಾರಿ ಮುಖಾಮುಖಿಗೆ ಕಾರಣವಾಗಬಹುದು ಎಂದು ಕಡಲ ಭದ್ರತಾ ತಜ್ಞರು ಎಚ್ಚರಿಸಿದ್ದಾರೆ. ವರದಿಯಾಗಿರುವ ಈ ಕಾರ್ಯಾಚರಣೆಯಲ್ಲಿ, ಇರಾನ್‍ನ ಬಹುಪಾಲು ಕಚ್ಚಾ ತೈಲ ರಫ್ತನ್ನು ನಿರ್ವಹಿಸುವ ಖಾರ್ಗ್ ದ್ವೀಪದಿಂದ ಒಮಾನ್ ಕೊಲ್ಲಿಯ ಕಡೆಗೆ ಟ್ಯಾಂಕರ್‌ಗಳು ಪ್ರಯಾಣ ಬೆಳೆಸಲಿವೆ. ದಿಗ್ಬಂಧನವನ್ನು ಭೇದಿಸುವ ಸಂಭವನೀಯ ಪ್ರಯತ್ನಕ್ಕೂ ಮುನ್ನವೇ ಹಡಗುಗಳಿಗೆ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಅವುಗಳ ಮೇಲೆ ಇರಾನ್ ಧ್ವಜಗಳನ್ನು ಹಾರಿಸಲಾಗಿದೆ ಎಂದು ವರದಿಯಾಗಿದೆ.

ಕ್ಷಿಪಣಿ ಉಡಾವಣಾ ವಾಹನ ಅನಾವರಣಗೊಳಿಸಿದ ಇರಾನ್

ಅಮೆರಿಕಕ್ಕೆ ಸವಾಲೊಡ್ಡುವ ಸಂದೇಶಗಳೊಂದಿಗೆ ಇರಾನ್‍ನ ಹಿರಿಯ ಸೇನಾ ಕಮಾಂಡರ್‌ಗಳು ಇಸ್ಲಾಮಿಕ್ ಗಣರಾಜ್ಯದ ಸೇನಾ ಸಾಮರ್ಥ್ಯವನ್ನು ಕೊಂಡಾಡಿರುವ ಬೆನ್ನಲ್ಲೇ, ಇರಾನ್ ಹೊಸ ಕ್ಷಿಪಣಿ ಉಡಾವಣಾ ವಾಹನವನ್ನು ಅನಾವರಣಗೊಳಿಸಿದೆ.

ಏಕಕಾಲದಲ್ಲಿ ಎರಡು ದ್ರವ-ಇಂಧನ ಚಾಲಿತ ಕ್ಷಿಪಣಿಗಳನ್ನು ಉಡಾಯಿಸುವ ಸಾಮರ್ಥ್ಯವಿರುವ ಉಡಾವಣಾ ವಾಹನವನ್ನು ಇದೇ ಮೊದಲ ಬಾರಿಗೆ ಅನಾವರಣಗೊಳಿಸಲಾಗಿದೆ' ಎಂದು ಇರಾನ್‍ನ ಸರಕಾರಿ ಸ್ವಾಮ್ಯದ ದೂರದರ್ಶನ ವರದಿ ಮಾಡಿದೆ.

ಈ ತಿಂಗಳ ಆರಂಭದಲ್ಲಿ, ಇರಾನ್ ಬ್ಯಾಲಿಸ್ಟಿಕ್ ಮತ್ತು ಕ್ರೂಸ್ ಕ್ಷಿಪಣಿಗಳು ಹಾಗೂ ಉಡಾವಣಾ ವಾಹನಗಳನ್ನು ಒಳಗೊಂಡಿರುವ ಹೊಸ ಭೂಗತ ಕ್ಷಿಪಣಿ ನೆಲೆಯನ್ನು ಅನಾವರಣಗೊಳಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Contributor - ಕೃಷ್ಣ ಮೂರ್ತಿ , ವಾರ್ತಾಭಾರತಿ

contributor