ಕಣ್ಣಿನ ವಿಚಿತ್ರ ಚಲನೆ; ಅನ್ಯಗ್ರಹ ಜೀವಿಯೆಂಬ ವದಂತಿ!
‘ನಾನು ಮನುಷ್ಯನೇ, ಹಲ್ಲಿಯಲ್ಲ’: ವೈರಲ್ ವೀಡಿಯೊಗೆ ನ್ಯೂಯಾರ್ಕ್ ಶಾಸಕನ ಸ್ಪಷ್ಟನೆ
Screengrab : X
ನ್ಯೂಯಾರ್ಕ್: ಅಮೆರಿಕದ ನ್ಯೂಯಾರ್ಕ್ ರಾಜ್ಯ ವಿಧಾನಸಭಾ ಸದಸ್ಯರೊಬ್ಬರ ಕಣ್ಣಿನ ಚಲನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅವರು ಮನುಷ್ಯರ ವೇಷದಲ್ಲಿರುವ ಸರೀಸೃಪ ಜೀವಿ (ಲಿಝರ್ಡ್ ಪೀಪಲ್) ಎಂಬ ವಿಚಿತ್ರ ವದಂತಿಗಳಿಗೆ ಕಾರಣವಾಗಿದೆ. ಈ ಊಹಾಪೋಹಗಳಿಗೆ ಪ್ರತಿಕ್ರಿಯಿಸಿರುವ ನ್ಯೂಯಾರ್ಕ್ ನ ಡೆಮಾಕ್ರಟಿಕ್ ಶಾಸಕ ಜೋರ್ಡನ್ ರೈಟ್, ‘‘ನಾನು ಖಂಡಿತವಾಗಿಯೂ ಮನುಷ್ಯನೇ’’ ಎಂದು ಹೇಳುವ ಮೂಲಕ ವದಂತಿಗಳನ್ನು ತಳ್ಳಿಹಾಕಿದ್ದಾರೆ.
ಝೊಹ್ರಾನ್ ಮಮ್ದಾನಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದಾಗ ಹಿಂಬದಿಯಲ್ಲಿ ನಿಂತಿದ್ದ 32 ವರ್ಷದ ಶಾಸಕ ಜೋರ್ಡನ್ ರೈಟ್ ಅವರ ಕಣ್ಣಿನ ಚಲನೆ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಅವರು ಕಣ್ಣು ಮಿಟುಕಿಸಿ, ಕಣ್ಣುಗುಡ್ಡೆಗಳನ್ನು ಮೇಲಕ್ಕೆ ತಿರುಗಿಸಿದಂತೆ ವೀಡಿಯೊದಲ್ಲಿ ಕಾಣಿಸಿಕೊಂಡಿದ್ದರು. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದೆ.
ರೈಟ್ ಅವರ ಕಣ್ಣಿನ ಚಲನೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯ ಕೇಂದ್ರವಾಗಿದ್ದು, ವೀಡಿಯೊವನ್ನು ಸೂಕ್ಷ್ಮವಾಗಿ ಗಮನಿಸಿದ ಕೆಲವರು, ಸರೀಸೃಪಗಳು ಕಣ್ಣು ಮಿಟುಕಿಸುವ ರೀತಿಯಲ್ಲೇ ರೈಟ್ ಅವರ ಕಣ್ಣಿನ ಚಲನೆಯೂ ಇದೆ ಎಂದು ವಾದಿಸಿದ್ದಾರೆ.
ಈ ವೀಡಿಯೊ ಉಲ್ಲೇಖಿಸಿ, ‘‘ಮನುಷ್ಯರ ವೇಷದಲ್ಲಿರುವ ಅನ್ಯಗ್ರಹ ಜೀವಿಗಳು ನಮ್ಮ ನಡುವೆ ಸಂಚರಿಸುತ್ತಿರಬಹುದು. ಅವರು ಎಲ್ಲರ ಕಣ್ಣೆದುರೇ ಇದ್ದರೂ ಗುರುತಿಸಲು ಸಾಧ್ಯವಾಗುತ್ತಿಲ್ಲ’’ ಎಂದು ಎಕ್ಸ್ ಬಳಕೆದಾರರೊಬ್ಬರು ಬರೆದಿದ್ದಾರೆ. ಮತ್ತೊಬ್ಬರು, ‘‘ಅವು ನಿಜವಾಗಿಯೂ ಇವೆ’’ ಎಂದು ಪ್ರತಿಕ್ರಿಯಿಸಿದ್ದಾರೆ.
ಈ ಚರ್ಚೆಗೆ ಪ್ರತಿಕ್ರಿಯಿಸಿರುವ ರೈಟ್, ವೀಡಿಯೊದಲ್ಲಿ ಏನಾಗಿತ್ತು ಎಂಬುದು ತನಗೂ ಅರ್ಥವಾಗಿಲ್ಲ ಎಂದು ನ್ಯೂಯಾರ್ಕ್ ಪೋಸ್ಟ್ ಗೆ ತಿಳಿಸಿದ್ದಾರೆ.
‘‘ಆ ವೀಡಿಯೊದಲ್ಲಿ ಏನಾಗುತ್ತಿತ್ತು ಎಂಬುದರ ಬಗ್ಗೆ ನನಗೂ ಯಾವುದೇ ಕಲ್ಪನೆಯಿಲ್ಲ. ನಿಜವಾಗಿಯೂ ನನಗೆ ಗೊತ್ತಿಲ್ಲ. ಆದರೆ ನಾನು ಖಂಡಿತವಾಗಿಯೂ ಮನುಷ್ಯನೇ. ಹಾರ್ಲೆಮ್ನಲ್ಲಿರುವ ಡಬ್ಲ್ಯುಇ ಆಕ್ಟ್ ಪರಿಸರ ನ್ಯಾಯ ಕೇಂದ್ರಕ್ಕೆ 40 ಲಕ್ಷ ಡಾಲರ್ ಅನುದಾನ ಒದಗಿಸಿರುವಂತಹ ನನ್ನ ಜನಪರ ಕೃತ್ಯಗಳಲ್ಲೇ ನನ್ನ ಮಾನವೀಯತೆಯನ್ನು ಕಾಣಬಹುದು. ಸರೀಸೃಪಗಳು ಅಥವಾ ಅನ್ಯಗ್ರಹ ಜೀವಿಗಳ ಬಗ್ಗೆ ನಾನು ಏನನ್ನೂ ಹೇಳಲಾರೆ’’ ಎಂದು ಅವರು ಹೇಳಿದ್ದಾರೆ.
ಮಾಜಿ ಶಾಸಕ ಕೀತ್ ಎಲ್.ಟಿ. ರೈಟ್ ಅವರ ಪುತ್ರ ಹಾಗೂ ನ್ಯೂಯಾರ್ಕ್ ಸುಪ್ರೀಂ ಕೋರ್ಟ್ ನ ಮಾಜಿ ನ್ಯಾಯಾಧೀಶ ಬ್ರೂಸ್ ರೈಟ್ ಅವರ ಮೊಮ್ಮಗನಾಗಿರುವ ಜೋರ್ಡನ್ ಜೆ.ಜಿ. ರೈಟ್, ನ್ಯೂಯಾರ್ಕ್ನ 70ನೇ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.
2017ರಲ್ಲಿ ಸಿರಾಕ್ಯೂಸ್ ವಿಶ್ವವಿದ್ಯಾಲಯದಿಂದ ಮನೋವಿಜ್ಞಾನದಲ್ಲಿ ಪದವಿ ಪಡೆದ ಅವರು, ಮ್ಯಾನ್ಹ್ಯಾಟನ್ ನ ಹಲವು ಶಾಲೆಗಳಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸಿದ್ದರು. ನ್ಯೂಯಾರ್ಕ್ ನಗರ ಕೌನ್ಸಿಲ್ ಸದಸ್ಯ ಯೂಸೆಫ್ ಸಲಾಮ್ ಅವರ ಮುಖ್ಯ ಸಿಬ್ಬಂದಿಯಾಗಿ ಸೇವೆ ಸಲ್ಲಿಸಿದ್ದ ರೈಟ್, ಆ ಹುದ್ದೆಗೆ ರಾಜೀನಾಮೆ ನೀಡಿ 2025ರಲ್ಲಿ ನ್ಯೂಯಾರ್ಕ್ ರಾಜ್ಯ ವಿಧಾನಸಭಾ ಸದಸ್ಯರಾಗಿ ಆಯ್ಕೆಯಾಗಿ ಅಧಿಕಾರ ವಹಿಸಿಕೊಂಡಿದ್ದರು.
►ಲಿಝರ್ಡ್ ಪೀಪಲ್ ವದಂತಿ ಹಿಂದಿನ ಪಿತೂರಿ ಸಿದ್ಧಾಂತ
ಲಿಝರ್ಡ್ ಪೀಪಲ್ ಕುರಿತ ವದಂತಿಗಳು ಈ ಹಿಂದೆಯೂ ಹಲವು ಬಾರಿ ಮುನ್ನೆಲೆಗೆ ಬಂದಿವೆ. Reptilian Conspiracy Theory ಎಂದು ಕರೆಯಲ್ಪಡುವ ಈ ಪಿತೂರಿ ಸಿದ್ಧಾಂತವನ್ನು ಬ್ರಿಟಿಷ್ ಲೇಖಕ ಡೇವಿಡ್ ಐಕ್ 1990ರ ದಶಕದಲ್ಲಿ ವ್ಯಾಪಕವಾಗಿ ಜನಪ್ರಿಯಗೊಳಿಸಿದ್ದರು. ಜಗತ್ತಿನ ಹಲವು ಪ್ರಭಾವಿ ರಾಜಕಾರಣಿಗಳು, ಉದ್ಯಮಿಗಳು ಮತ್ತು ರಾಜಮನೆತನದವರು ಮನುಷ್ಯರ ವೇಷದಲ್ಲಿರುವ, ರೂಪ ಬದಲಾಯಿಸಬಲ್ಲ ಸರೀಸೃಪ ಜೀವಿಗಳು ಎಂಬುದು ಈ ಸಿದ್ಧಾಂತದ ಪ್ರತಿಪಾದನೆ. ಈ ಆರೋಪಗಳಿಗೆ ಯಾವುದೇ ವಿಶ್ವಾಸಾರ್ಹ ವೈಜ್ಞಾನಿಕ ಸಾಕ್ಷ್ಯವಿಲ್ಲ.
Hola @grok qué está pasando acá? Un reptiliano? https://t.co/MESvxL1VDK
— CapitanPike (@pike_capit3704) November 21, 2026