ಗಾಝಾದ ನಾಸರ್ ಆಸ್ಪತ್ರೆ ಮೇಲೆ ಇಸ್ರೇಲ್ ನಿಂದ ವಾಯುದಾಳಿ: ಕನಿಷ್ಠ 6 ಮೃತ್ಯು, 20ಕ್ಕೂ ಹೆಚ್ಚು ಮಂದಿಗೆ ಗಾಯ
ಮರುದಿನ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಿದ್ದವರೂ ಮೃತ್ಯು
Photo: x.com/aawsat_News
ಖಾನ್ ಯೂನಿಸ್ (ಗಾಝಾ): ದಕ್ಷಿಣ ಗಾಝಾದ ಖಾನ್ ಯೂನಿಸ್ ನಲ್ಲಿರುವ ನಾಸರ್ ವೈದ್ಯಕೀಯ ಸಂಕೀರ್ಣದ ಮೇಲೆ ಇಸ್ರೇಲ್ ನಡೆಸಿದ ವಾಯುದಾಳಿಯಲ್ಲಿ ಆರು ಮಂದಿ ಫೆಲೆಸ್ತೀನಿಯನ್ನರು ಮೃತಪಟ್ಟಿದ್ದು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ರೋಗಿಗಳು ಮತ್ತು ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿ ಸೇರಿದ್ದಾರೆ ಎಂದು Aljazeera ವರದಿ ಮಾಡಿದೆ.
ಆಸ್ಪತ್ರೆಯ ಎರಡನೇ ಮಹಡಿಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ. ದಾಳಿಯ ಬಳಿಕ ಸ್ಥಳಕ್ಕೆ ಧಾವಿಸಿದ ನಾಗರಿಕ ರಕ್ಷಣಾ ತಂಡಗಳು ಶೋಧ ಮತ್ತು ಪರಿಶೀಲನಾ ಕಾರ್ಯಾಚರಣೆ ಪೂರ್ಣಗೊಳಿಸಿದ್ದು, ಆರು ಮಂದಿ ಮೃತಪಟ್ಟಿರುವುದನ್ನು ದೃಢಪಡಿಸಿವೆ.
ಗಾಝಾ ಪಟ್ಟಿಯ ಅತಿದೊಡ್ಡ ಆಸ್ಪತ್ರೆಗಳಲ್ಲಿ ಒಂದಾಗಿರುವ ನಾಸರ್ ವೈದ್ಯಕೀಯ ಸಂಕೀರ್ಣವು ಖಾನ್ ಯೂನಿಸ್ ನಗರದ ಏಕೈಕ ಆಸ್ಪತ್ರೆಯಾಗಿದೆ. ದಕ್ಷಿಣ ಗಾಝಾದ ಕನಿಷ್ಠ ಐದು ಲಕ್ಷ ಜನರಿಗೆ ಈ ಆಸ್ಪತ್ರೆಯೇ ಪ್ರಮುಖ ವೈದ್ಯಕೀಯ ಸೇವಾ ಕೇಂದ್ರವಾಗಿದೆ.
ದಾಳಿಯ ಭೀಕರತೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಬಲಿಯಾಗಿದ್ದಾರೆ. ಮರುದಿನ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಿದ್ದವರೂ ಮೃತಪಟ್ಟವರಲ್ಲಿ ಸೇರಿದ್ದಾರೆ. ಚಿಕಿತ್ಸೆ ಪಡೆಯುವ ಸರದಿಗಾಗಿ ಹಲವು ದಿನಗಳಿಂದ ಕಾಯುತ್ತಿದ್ದ ಅವರು ಆಸ್ಪತ್ರೆಯೊಳಗೆ ಮಲಗಿದ್ದಾಗಲೇ ಬಾಂಬ್ ದಾಳಿ ನಡೆದಿದೆ.
ದಾಳಿ ನಡೆಯುವ ಮೊದಲು ಇಸ್ರೇಲ್ ಸೇನೆಯಿಂದ ಯಾವುದೇ ಎಚ್ಚರಿಕೆ ಬಂದಿರಲಿಲ್ಲ. ಆಸ್ಪತ್ರೆಯನ್ನು ಖಾಲಿ ಮಾಡುವಂತೆ ರೋಗಿಗಳಿಗೆ ಅಥವಾ ಸಿಬ್ಬಂದಿಗೆ ಸೂಚನೆಯನ್ನೂ ನೀಡಿರಲಿಲ್ಲ. ಯಾವುದೇ ಮುನ್ಸೂಚನೆ ಇಲ್ಲದೆ ಸ್ಫೋಟ ಸಂಭವಿಸಿತು ಎಂದು ಸ್ಥಳೀಯ ನಿವಾಸಿಗಳು ಮತ್ತು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಕಳೆದ ಎರಡು ವರ್ಷಗಳಲ್ಲಿ ನಾಸರ್ ವೈದ್ಯಕೀಯ ಸಂಕೀರ್ಣದ ಮೇಲೆ ಇಸ್ರೇಲ್ ನಡೆಸಿದ ಏಳನೇ ದಾಳಿ ಇದಾಗಿದೆ. 2025ರ ಆಗಸ್ಟ್ 25ರಂದು ನಡೆದ ದಾಳಿ ಇನ್ನಷ್ಟು ಭೀಕರವಾಗಿತ್ತು. ಅಂದು ಆಸ್ಪತ್ರೆಯ ಮೇಲೆ ಎರಡು ಬಾರಿ ಬಾಂಬ್ ದಾಳಿ ನಡೆಸಲಾಗಿತ್ತು. ಐವರು ಪತ್ರಕರ್ತರು ಸೇರಿದಂತೆ ಕನಿಷ್ಠ 22 ಮಂದಿ ಫೆಲೆಸ್ತೀನಿಯನ್ನರು ಮೃತಪಟ್ಟಿದ್ದರು.
ಯಾವುದೇ ಮುನ್ಸೂಚನೆ ನೀಡದೆ ಆಸ್ಪತ್ರೆಯನ್ನು ಪದೇ ಪದೇ ಗುರಿಯಾಗಿಸಲಾಗುತ್ತಿದೆ ಎಂದು Aljazeera ವರದಿ ಉಲ್ಲೇಖಿಸಿದೆ.