ಗಾಝಾದ ಎಲ್ಲ ಗಡಿದಾಟು ಮಾರ್ಗಗಳನ್ನು ತೆರೆಯಿರಿ; ಇನ್ನು ನೆಪ ಬೇಡ: ವಿಶ್ವಸಂಸ್ಥೆ
1.06 ಲಕ್ಷ ಜನರಿಗೆ ಮಳೆಯಿಂದ ಸಂಕಷ್ಟ
ನ್ಯೂಯಾರ್ಕ್: ಗಾಝಾಕ್ಕೆ ಮಾನವೀಯ ನೆರವು ತಲುಪಿಸಲು ಇನ್ನು ವಿಳಂಬ ಮಾಡುವುದು ಬೇಡ. ಒಂದೆರಡು ಗಡಿದಾಟು ಮಾರ್ಗಗಳನ್ನಲ್ಲ, ಎಲ್ಲ ಮಾರ್ಗಗಳನ್ನೂ ತೆರೆಯಿರಿ ಎಂದು ವಿಶ್ವಸಂಸ್ಥೆಯ ಮಾನವೀಯ ವ್ಯವಹಾರಗಳ ಅಧೀನ ಪ್ರಧಾನ ಕಾರ್ಯದರ್ಶಿ ಟಾಮ್ ಫ್ಲೆಚರ್ ಇಸ್ರೇಲ್ ಗೆ ಆಗ್ರಹಿಸಿದ್ದಾರೆ ಎಂದು Aljazeera ವರದಿ ಮಾಡಿದೆ.
ಗಾಝಾಕ್ಕೆ ನೆರವು ಪೂರೈಸಲು ಬೆಂಬಲ ಸೂಚಿಸಿರುವ ಕೆಲವು ದೇಶಗಳು, ಚಳಿಗಾಲಕ್ಕೆ ಅಗತ್ಯವಾದ ಸಾಮಗ್ರಿಗಳನ್ನು ತಲುಪಿಸಲು ಇಸ್ರೇಲ್ ನಲ್ಲಿ ಹೊಸ ಸರ್ಕಾರ ರಚನೆಯಾಗುವವರೆಗೆ ಕಾಯಬೇಕಾಗುತ್ತದೆ ಎಂದು ಹೇಳುತ್ತಿವೆ. ಈ ನಿಲುವಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಫ್ಲೆಚರ್, ಸರ್ಕಾರ ರಚನೆಯ ನೆಪದಲ್ಲಿ ನೆರವು ಪೂರೈಕೆಯನ್ನು ವಿಳಂಬಿಸುವುದು ಸ್ವೀಕಾರಾರ್ಹವಲ್ಲ ಎಂದು ಹೇಳಿದ್ದಾರೆ.
ವಿದೇಶಾಂಗ ಸಚಿವರು ನೆರವು ಕಾರ್ಯಾಚರಣೆಗಳಿಗೆ ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ, ಇಸ್ರೇಲ್ ನಲ್ಲಿ ಚುನಾವಣೆ ಬಳಿಕ ಪ್ರಗತಿ ಸಾಧಿಸುವುದು ಕಷ್ಟವಾಗಲಿದೆ ಎಂದು ಅವರು ಪದೇ ಪದೇ ಹೇಳುತ್ತಿದ್ದರು. ಈಗ ಹೊಸ ಸರ್ಕಾರ ರಚನೆಯಾಗುವವರೆಗೆ ಕಾಯುವಂತೆ ಸೂಚಿಸುತ್ತಿದ್ದಾರೆ ಎಂದು ಫ್ಲೆಚರ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಅಂತರರಾಷ್ಟ್ರೀಯ ಕಾನೂನನ್ನು ಉಲ್ಲೇಖಿಸಿರುವ ಅವರು, ನೆರವು ವಿತರಣೆಯಲ್ಲಿ ವಿಳಂಬ ಮಾಡುವುದು, ಅಡೆತಡೆಗಳನ್ನು ಸೃಷ್ಟಿಸುವುದು ಮತ್ತು ಹಣಕಾಸು ನೆರವು ಕಡಿತಗೊಳಿಸುವುದಕ್ಕೆ ಇಂತಹ ನೆಪಗಳನ್ನು ಒಪ್ಪಲಾಗದು ಎಂದು ಹೇಳಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಗಾಝಾದಲ್ಲಿ ಸುರಿದ ಭಾರಿ ಮಳೆಯಿಂದ 1.06 ಲಕ್ಷ ಜನರು ನೇರವಾಗಿ ತೊಂದರೆಗೊಳಗಾಗಿದ್ದಾರೆ ಎಂದು ಯುನಿಸೆಫ್ ತಿಳಿಸಿದೆ. ಸ್ಥಳಾಂತರಗೊಂಡ ಫೆಲೆಸ್ತೀನಿಯನ್ನರು ಆಶ್ರಯ ಪಡೆದಿರುವ ಸಾವಿರಾರು ಡೇರೆಗಳು ಮಳೆನೀರಿನಲ್ಲಿ ಮುಳುಗಿವೆ. ನಿರಾಶ್ರಿತರ ಶಿಬಿರಗಳಲ್ಲಿನ ಶೌಚಾಲಯಗಳು ಕೂಡ ನೀರಿನಿಂದ ತುಂಬಿ ತುಳುಕುತ್ತಿವೆ.
ಸೂಕ್ತ ಆಶ್ರಯ ವ್ಯವಸ್ಥೆ ಇದ್ದಿದ್ದರೆ, ಜನರು ಇಂತಹ ಹವಾಮಾನ ಪರಿಸ್ಥಿತಿಯಿಂದ ಅನಗತ್ಯ ಅಪಾಯ ಎದುರಿಸಬೇಕಿರಲಿಲ್ಲ. ಉತ್ತಮ ಗುಣಮಟ್ಟದ ಡೇರೆಗಳು ಮತ್ತು ಚಳಿಗಾಲಕ್ಕೆ ಅಗತ್ಯವಾದ ಸಾಮಗ್ರಿಗಳನ್ನು ಪೂರೈಸಲು ಅವಕಾಶ ನೀಡಿದ್ದರೆ ಈ ಸಂಕಷ್ಟವನ್ನು ತಪ್ಪಿಸಬಹುದಿತ್ತು ಎಂದು ಫ್ಲೆಚರ್ ಹೇಳಿದ್ದಾರೆ.
'ಇನ್ನು ವಿಳಂಬ ಬೇಡ. ಒಂದೆರಡು ಗಡಿದಾಟು ಮಾರ್ಗಗಳನ್ನಲ್ಲ, ಎಲ್ಲ ಮಾರ್ಗಗಳನ್ನೂ ತೆರೆಯಿರಿ. ನಮ್ಮ ಪ್ರಮುಖ ಸರ್ಕಾರೇತರ ಸಂಸ್ಥೆಗಳ ಪಾಲುದಾರರಿಗೆ ಕೆಲಸ ಮಾಡಲು ಅವಕಾಶ ನೀಡಿ. ವಾಣಿಜ್ಯ ಮಾರುಕಟ್ಟೆಗಳು ಕಾರ್ಯನಿರ್ವಹಿಸಲು ಬಿಡಿ. ಈ ಸಾಮೂಹಿಕ ಶಿಕ್ಷೆಯನ್ನು ನಿಲ್ಲಿಸಿ. ನೆರವು ಯೋಜನೆಗಳಿಗೆ ಹಣಕಾಸು ಒದಗಿಸಿ' ಎಂದು ಅವರು ಆಗ್ರಹಿಸಿದ್ದಾರೆ.