ಟ್ರಂಪ್ ಆಡಳಿತದ ವಿರುದ್ಧ ಮತದಾರರ ಆಕ್ರೋಶ | ರಿಪಬ್ಲಿಕನ್ನರ ಸೋಲಿಗೆ ಇರಾನ್ ಯುದ್ಧ, ಇಸ್ರೇಲ್ ನೀತಿಯೇ ಕಾರಣ: ಜೆಡಿ ವ್ಯಾನ್ಸ್
ಜೆಡಿ ವ್ಯಾನ್ಸ್ |Photo credit : AP
ವಾಶಿಂಗ್ಟನ್: ಇರಾನ್ ನೊಂದಿಗಿನ ಯುದ್ಧ, ಇಸ್ರೇಲ್ ನೊಂದಿಗಿನ ಅಮೆರಿಕದ ಸಂಬಂಧ ಮತ್ತು ಹೆಚ್ಚುತ್ತಿರುವ ಜೀವನ ವೆಚ್ಚ, ಇವು ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಸೋಲಿಗೆ ಪ್ರಮುಖ ಕಾರಣಗಳಾಗಿವೆ. 2024ರಲ್ಲಿ ಡೊನಾಲ್ಡ್ ಟ್ರಂಪ್ ಅವರನ್ನು ಅಧಿಕಾರಕ್ಕೆ ತರಲು ಮತ ಹಾಕಿದ್ದವರೇ ಈ ಬಾರಿ ಅವರ ಪಕ್ಷದ ವಿರುದ್ಧ ತಿರುಗಿಬಿದ್ದಿದ್ದಾರೆ. ಇದನ್ನು ಸ್ವತಃ ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಒಪ್ಪಿಕೊಂಡಿದ್ದಾರೆ.
ಡೆಮೋಕ್ರಾಟ್ ಗಳು ಕಾಂಗ್ರೆಸ್ ನ ಎರಡೂ ಸದನಗಳ ಮೇಲೆ ಹಿಡಿತ ಸಾಧಿಸಿದ ಬೆನ್ನಲ್ಲೇ, ರಿಪಬ್ಲಿಕನ್ ಪಕ್ಷದ ಚುನಾವಣಾ ಹಿನ್ನಡೆಗೆ ಕಾರಣಗಳನ್ನು ವಿಶ್ಲೇಷಿಸಿರುವ ವ್ಯಾನ್ಸ್, ಇರಾನ್ ಯುದ್ಧವನ್ನು ನೇರವಾಗಿ ಹೊಣೆ ಮಾಡಿದ್ದಾರೆ.
Xನಲ್ಲಿ ಸುದೀರ್ಘ ಪೋಸ್ಟ್ ಪ್ರಕಟಿಸಿರುವ ಅವರು, ರಿಪಬ್ಲಿಕನ್ ಪಕ್ಷದ ಸೋಲಿಗೆ ಬೆಂಬಲಿಗರು ಮತದಾನದಿಂದ ದೂರ ಉಳಿದಿರುವುದು ಕಾರಣವಲ್ಲ. ಬದಲಾಗಿ, ಪಕ್ಷದ ಬೆಂಬಲಿಗರು ಮತಗಟ್ಟೆಗೆ ಬಂದಿದ್ದರೂ ಆಡಳಿತದ ನೀತಿಗಳಿಂದ ಅಸಮಾಧಾನಗೊಂಡು ಡೆಮೋಕ್ರಾಟ್ ಗಳಿಗೆ ಮತ ಹಾಕಿದ್ದಾರೆ ಎಂದು ಹೇಳಿದ್ದಾರೆ.
"ನಾವು ಸೋತಿದ್ದು ಯುದ್ಧದ ಕಾರಣದಿಂದ" ಎಂದು ವ್ಯಾನ್ಸ್ ಸ್ಪಷ್ಟವಾಗಿ ಹೇಳಿದ್ದಾರೆ. ಇರಾನ್ನೊಂದಿಗಿನ ಸಂಘರ್ಷವು ಟ್ರಂಪ್ ಆಡಳಿತಕ್ಕೆ ರಾಜಕೀಯವಾಗಿ ದೊಡ್ಡ ಹೊಡೆತ ನೀಡಿದೆ ಎಂಬುದನ್ನು ಅವರ ಹೇಳಿಕೆ ಬಹಿರಂಗಪಡಿಸಿದೆ.
►ಮತದಾರರ ಅಸಮಾಧಾನಕ್ಕೆ ನಾಲ್ಕು ಕಾರಣಗಳು:
ಆಂತರಿಕ ಸಮೀಕ್ಷೆಗಳು ಮತ್ತು ದತ್ತಾಂಶ ವಿಶ್ಲೇಷಣೆಗಳ ಆಧಾರದಲ್ಲಿ ಮತದಾರರು ರಿಪಬ್ಲಿಕನ್ ಪಕ್ಷದಿಂದ ದೂರ ಸರಿಯಲು ನಾಲ್ಕು ಪ್ರಮುಖ ಕಾರಣಗಳನ್ನು ವ್ಯಾನ್ಸ್ ಗುರುತಿಸಿದ್ದಾರೆ.
1. ಇರಾನ್ ನೊಂದಿಗಿನ ಯುದ್ಧವನ್ನು ಅಂತ್ಯಗೊಳಿಸಬೇಕು.
2. ಹೆಚ್ಚುತ್ತಿರುವ ಜೀವನ ವೆಚ್ಚ ಮತ್ತು ಹಣದುಬ್ಬರ ನಿಯಂತ್ರಣಕ್ಕೆ ಆದ್ಯತೆ ನೀಡಬೇಕು.
3. 'ಅಮೆರಿಕಾ ಫಸ್ಟ್' ಕಾರ್ಯಸೂಚಿಗೆ ಆಡಳಿತ ಬದ್ಧವಾಗಿರಬೇಕು.
4. ಇಸ್ರೇಲ್ ನೊಂದಿಗಿನ ಅಮೆರಿಕದ ಸಂಬಂಧದಲ್ಲಿ ಬದಲಾವಣೆ ತರಬೇಕು.
ಈ ನಾಲ್ಕು ವಿಷಯಗಳಲ್ಲಿ ಆಡಳಿತದ ನಿಲುವಿನ ಬಗ್ಗೆ ಅತೃಪ್ತಿ ಹೊಂದಿದ್ದ ಮತದಾರರು ಪಕ್ಷ ಬದಲಿಸಿ ಡೆಮೋಕ್ರಾಟ್ ಗಳನ್ನು ಬೆಂಬಲಿಸಿದ್ದಾರೆ ಎಂದು ವ್ಯಾನ್ಸ್ ವಿವರಿಸಿದ್ದಾರೆ.
►ಟ್ರಂಪ್ ಬೆಂಬಲಿಗರೇ ಕೈಕೊಟ್ಟರು!
2024ರ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಮತ್ತು ವ್ಯಾನ್ಸ್ ಅವರನ್ನು ಬೆಂಬಲಿಸಿದ್ದ ಮತದಾರರ ಮತದಾನದ ಮಾದರಿಯನ್ನು ರಿಪಬ್ಲಿಕನ್ ಪಕ್ಷದ ದತ್ತಾಂಶ ವಿಶ್ಲೇಷಕರು ಪರಿಶೀಲಿಸಿದ್ದರು. ಆರಂಭದಲ್ಲಿ ಪಕ್ಷದ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸುತ್ತಿರುವುದು ರಿಪಬ್ಲಿಕನ್ನರಿಗೆ ಅನುಕೂಲವಾಗಬಹುದು ಎಂಬ ನಿರೀಕ್ಷೆಯಿತ್ತು.
ಆದರೆ, ಮತದಾರರು ಮತಗಟ್ಟೆಗೆ ಬರುತ್ತಿದ್ದರೂ ರಿಪಬ್ಲಿಕನ್ ಅಭ್ಯರ್ಥಿಗಳಿಗೆ ಮತ ಹಾಕುತ್ತಿಲ್ಲ ಎಂಬುದು ಸಮೀಕ್ಷೆಗಳಲ್ಲಿ ಬಹಿರಂಗವಾಗಿತ್ತು.
ಸಮೀಕ್ಷೆಕಾರರೊಬ್ಬರು ವ್ಯಾನ್ಸ್ ಗೆ ನೀಡಿದ್ದ ಎಚ್ಚರಿಕೆಯನ್ನೂ ಅವರು ತಮ್ಮ ಪೋಸ್ಟ್ ನಲ್ಲಿ ಉಲ್ಲೇಖಿಸಿದ್ದಾರೆ. "ಸಮೀಕ್ಷೆಗಳು ಸೂಚಿಸುವುದಕ್ಕಿಂತ ನಾವು ಉತ್ತಮ ಪ್ರದರ್ಶನ ನೀಡಬಹುದು. ಆದರೆ, 2024ರಲ್ಲಿ ಟ್ರಂಪ್ ಮತ್ತು ವ್ಯಾನ್ಸ್ ಗೆ ಮತ ಹಾಕಿದ್ದ ಅನೇಕರು ಈಗ ಅಸಮಾಧಾನಗೊಂಡಿದ್ದಾರೆ. ಅವರು ಮತ ಚಲಾಯಿಸುತ್ತಾರೆ, ಆದರೆ ನಮಗೆ ಮತ ಹಾಕುವುದಿಲ್ಲ" ಎಂದು ವಿಶ್ಲೇಷಕರು ಹೇಳಿದ್ದರು.
ಈ ಅಂದಾಜು ನಿಜವಾಗಿದೆ ಎಂದು ವ್ಯಾನ್ಸ್ ಒಪ್ಪಿಕೊಂಡಿದ್ದಾರೆ.
ಫ್ಲೋರಿಡಾದ ಉದಾಹರಣೆ ನೀಡಿರುವ ಅವರು, ಅಲ್ಲಿ ಡೆಮೋಕ್ರಾಟ್ ಗಳಿಗಿಂತ ಶೇ. 9ರಷ್ಟು ಹೆಚ್ಚು ರಿಪಬ್ಲಿಕನ್ ಮತದಾರರಿದ್ದರೂ ಪಕ್ಷಕ್ಕೆ ನಿರೀಕ್ಷಿತ ಬೆಂಬಲ ದೊರೆಯಲಿಲ್ಲ ಎಂದಿದ್ದಾರೆ. 2024ರಲ್ಲಿ ಟ್ರಂಪ್ ಗೆ ಮತ ಹಾಕಿದ್ದ ಅನೇಕರು 2026ರಲ್ಲಿ ಡೆಮೋಕ್ರಾಟ್ ಗಳ ಪರ ಮತ ಚಲಾಯಿಸಿರುವುದೇ ಪಕ್ಷದ ಸೋಲಿನ ಪ್ರಮುಖ ಕಾರಣ ಎಂದು ಹೇಳಿದ್ದಾರೆ.
►ಯುದ್ಧ ನಿಲ್ಲಿಸಿದರೆ ಮತದಾರರು ಮರಳುತ್ತಾರೆಯೇ?
ರಿಪಬ್ಲಿಕನ್ ಪಕ್ಷದ ಸಮೀಕ್ಷೆಕಾರರೊಬ್ಬರು ಕಾಂಗ್ರೆಸ್ ಚುನಾವಣೆಯ ಸಾಮಾನ್ಯ ಮತಪತ್ರದಲ್ಲಿ ಪಕ್ಷವು ಶೇ. 13 ಅಂಕಗಳ ಅಂತರದಿಂದ ಸೋಲನುಭವಿಸಬಹುದು ಎಂದು ಮುನ್ಸೂಚನೆ ನೀಡಿದ್ದರು. ಕಾಂಗ್ರೆಸ್ ನ ನಿಯಂತ್ರಣ ಯಾವ ಪಕ್ಷದ ಕೈಯಲ್ಲಿರಬೇಕು ಎಂಬ ಮತದಾರರ ಆದ್ಯತೆಯನ್ನು ಈ ಸಮೀಕ್ಷೆ ಅಳೆಯುತ್ತದೆ.
2024ರಲ್ಲಿ ಟ್ರಂಪ್ ಅವರನ್ನು ಬೆಂಬಲಿಸಿ, ಈ ಬಾರಿ ಡೆಮೋಕ್ರಾಟ್ ಗಳಿಗೆ ಮತ ಹಾಕಲು ನಿರ್ಧರಿಸಿದ್ದವರನ್ನು ಮರಳಿ ಸೆಳೆಯಲು ಏನು ಮಾಡಬೇಕು ಎಂದು ಕೇಳಿದಾಗ ನಾಲ್ಕು ಪ್ರಮುಖ ಬೇಡಿಕೆಗಳು ವ್ಯಕ್ತವಾಗಿದ್ದವು. ಇರಾನ್ ಯುದ್ಧ ಅಂತ್ಯಗೊಳಿಸುವುದು, ಹಣದುಬ್ಬರ ನಿಯಂತ್ರಿಸುವುದು, 'ಅಮೆರಿಕಾ ಫಸ್ಟ್' ನೀತಿಗೆ ಬದ್ಧವಾಗಿರುವುದು ಮತ್ತು ಇಸ್ರೇಲ್ ನೊಂದಿಗಿನ ಸಂಬಂಧವನ್ನು ಮರುಪರಿಶೀಲಿಸುವುದು ಅವುಗಳಾಗಿದ್ದವು.
►ಟ್ರಂಪ್ ಆಡಳಿತಕ್ಕೆ ಹೆಚ್ಚಿದ ಸವಾಲು
ಮಧ್ಯಂತರ ಚುನಾವಣೆಯಲ್ಲಿ ಡೆಮೋಕ್ರಾಟ್ ಗಳು ಪ್ರತಿನಿಧಿಗಳ ಸಭೆ(house of representatives) ಮತ್ತು ಸೆನೆಟ್ ಎರಡರಲ್ಲೂ ಬಹುಮತ ಗಳಿಸಿರುವುದು ಟ್ರಂಪ್ ಆಡಳಿತಕ್ಕೆ ದೊಡ್ಡ ಹಿನ್ನಡೆಯಾಗಿದೆ. ಅಧಿಕಾರಾವಧಿಯ ಉಳಿದ ಎರಡು ವರ್ಷಗಳಲ್ಲಿ ಆಡಳಿತದ ನಿರ್ಧಾರಗಳನ್ನು ಪ್ರಶ್ನಿಸಲು ಮತ್ತು ತನಿಖೆ ನಡೆಸಲು ಡೆಮೋಕ್ರಾಟ್ ಗಳಿಗೆ ಇದರಿಂದ ಹೆಚ್ಚಿನ ಅಧಿಕಾರ ದೊರೆಯಲಿದೆ.
ಇರಾನ್ ಯುದ್ಧ, ವಲಸೆ ನೀತಿ ಜಾರಿ ಮತ್ತು ಆರ್ಥಿಕ ನಿರ್ವಹಣೆ ಸೇರಿದಂತೆ ಪ್ರಮುಖ ವಿಷಯಗಳ ಕುರಿತು ತನಿಖೆ ನಡೆಸಲು, ಅಧಿಕಾರಿಗಳನ್ನು ವಿಚಾರಣೆಗೆ ಕರೆಸಲು ಹಾಗೂ ಕಾಂಗ್ರೆಸ್ ಸಮಿತಿಗಳ ಮೂಲಕ ಸಮನ್ಸ್ ಜಾರಿಗೊಳಿಸಲು ಅವರಿಗೆ ಅವಕಾಶವಿದೆ.
►ಸೋಲಿಗೆ ಅಭ್ಯರ್ಥಿಗಳನ್ನೇ ದೂಷಿಸಿದ ಟ್ರಂಪ್
ಚುನಾವಣಾ ಫಲಿತಾಂಶವನ್ನು ತಮ್ಮ ಆಡಳಿತದ ವಿರುದ್ಧದ ಜನಾದೇಶವೆಂದು ಪರಿಗಣಿಸಲು ಟ್ರಂಪ್ ನಿರಾಕರಿಸಿದ್ದಾರೆ. 'ಫಾಕ್ಸ್ ನ್ಯೂಸ್'ಗೆ ದೂರವಾಣಿ ಮೂಲಕ ನೀಡಿದ ಸಂದರ್ಶನದಲ್ಲಿ ತಮ್ಮ ಆಡಳಿತದ ಸಾಧನೆಗಳನ್ನು ಸಮರ್ಥಿಸಿಕೊಂಡಿದ್ದಾರೆ.
"ಆರ್ಥಿಕತೆ ಸೇರಿದಂತೆ ನಾವು ಕೈಗೊಂಡಿರುವ ಎಲ್ಲ ಕಾರ್ಯಗಳನ್ನು ಗಮನಿಸಿದರೆ, ಅಧ್ಯಕ್ಷೀಯ ಇತಿಹಾಸದಲ್ಲೇ ಕಳೆದ ಎರಡು ವರ್ಷಗಳು ಅತ್ಯುತ್ತಮವಾಗಿವೆ. ಇದನ್ನು ನನ್ನ ವಿರುದ್ಧದ ಟೀಕೆ ಅಥವಾ ಹಿನ್ನಡೆ ಎಂದು ಪರಿಗಣಿಸುವುದಿಲ್ಲ" ಎಂದು ಹೇಳಿದ್ದಾರೆ.
ಇರಾನ್ ನೊಂದಿಗಿನ ಸಂಘರ್ಷವು ಸೋಲಿಗೆ ಕಾರಣವಾಗಿರಬಹುದು ಎಂಬುದನ್ನು ಒಪ್ಪಿಕೊಂಡರೂ, ರಿಪಬ್ಲಿಕನ್ ಅಭ್ಯರ್ಥಿಗಳು ಮತದಾರರನ್ನು ಮತಗಟ್ಟೆಗೆ ಸೆಳೆಯುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದ್ದಾರೆ. ತಮ್ಮ ಹೆಸರು ಮತಪತ್ರದಲ್ಲಿ ಇಲ್ಲದಿರುವುದೂ ಪಕ್ಷದ ಸೋಲಿಗೆ ಕಾರಣ ಎಂದು ಹೇಳಿದ್ದಾರೆ.
"ಅವರು ಜನರನ್ನು ಹೊರಬಂದು ಮತ ಚಲಾಯಿಸುವಂತೆ ಪ್ರೇರೇಪಿಸಲಿಲ್ಲ. ನಾನು ಮತಪತ್ರದಲ್ಲಿ ಇದ್ದಿದ್ದರೆ ಜನರು ಖಂಡಿತವಾಗಿಯೂ ಮತ ಚಲಾಯಿಸಲು ಬರುತ್ತಿದ್ದರು" ಎಂದು ಟ್ರಂಪ್ ಸಮರ್ಥಿಸಿಕೊಂಡಿದ್ದಾರೆ.