ತಂದೆಯ ಗಡೀಪಾರಿನಿಂದ ಹುಟ್ಟಿದ ಹೋರಾಟದ ಕಿಚ್ಚು 'ಅಬರ್ ಕವಾಸ್'; ಈಗ ನ್ಯೂಯಾರ್ಕ್ನ ಸ್ಟೇಟ್ ಸೆನೆಟರ್!
ಶೇ. 75ರಷ್ಟು ಮತಗಳ ಭರ್ಜರಿ ಗೆಲುವು; ಹಿಜಾಬ್ ಧರಿಸುವ ಮೊದಲ ನ್ಯೂಯಾರ್ಕ್ ಸ್ಟೇಟ್ ಸೆನೆಟರ್ ಎಂಬ ಹೆಗ್ಗಳಿಕೆ
ನ್ಯೂಯಾರ್ಕ್: ವಲಸಿಗ ಕುಟುಂಬದ ಸಂಕಷ್ಟ, ತಂದೆಯ ಗಡೀಪಾರು, ಮುಸ್ಲಿಮರ ಮೇಲಿನ ತಾರತಮ್ಯ, ಇಂತಹ ಅನುಭವಗಳ ನಡುವೆಯೇ ಬೆಳೆದ ಅಬರ್ ಕವಾಸ್ ಈಗ ಅಮೆರಿಕದ ರಾಜಕೀಯ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದಿದ್ದಾರೆ. ನ್ಯೂಯಾರ್ಕ್ ರಾಜ್ಯ ಸೆನೆಟ್ ನ 12ನೇ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅವರು ಶೇ. 75ರಷ್ಟು ಮತಗಳನ್ನು ಪಡೆದು ಭರ್ಜರಿ ಗೆಲುವು ದಾಖಲಿಸಿದ್ದಾರೆ.
ಈ ಮೂಲಕ ನ್ಯೂಯಾರ್ಕ್ ರಾಜ್ಯ ಶಾಸಕಾಂಗಕ್ಕೆ ಆಯ್ಕೆಯಾದ ಮೊದಲ ಫೆಲೆಸ್ತೀನ್ ಮೂಲದ ಅಮೆರಿಕನ್ ಮಹಿಳೆ ಎಂಬ ಹೆಗ್ಗಳಿಕೆಗೆ ಕವಾಸ್ ಪಾತ್ರರಾಗಿದ್ದಾರೆ. ಹಿಜಾಬ್ ಧರಿಸಿ ಸ್ಟೇಟ್ ಸೆನೆಟರ್ ಆಗುತ್ತಿರುವ ನ್ಯೂಯಾರ್ಕ್ ನ ಮೊದಲ ಮಹಿಳೆ ಎಂಬ ದಾಖಲೆಯನ್ನೂ ನಿರ್ಮಿಸಿದ್ದಾರೆ. ಶೇ. 90ರಷ್ಟು ಮತಗಳ ಎಣಿಕೆ ಪೂರ್ಣಗೊಂಡಿದ್ದಾಗಲೇ 'ನ್ಯೂಯಾರ್ಕ್ ಟೈಮ್ಸ್' ಅವರ ಗೆಲುವನ್ನು ಪ್ರಕಟಿಸಿತ್ತು.
ಗೆಲುವಿನ ಸಂಭ್ರಮವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಕವಾಸ್, 'ನಾವು ಇತಿಹಾಸ ನಿರ್ಮಿಸಿದ್ದೇವೆ' ಎಂದು ಬರೆದುಕೊಂಡಿದ್ದಾರೆ.
ಇದು ಕೇವಲ ಒಬ್ಬ ಅಭ್ಯರ್ಥಿಯ ಚುನಾವಣಾ ಗೆಲುವಲ್ಲ. ವಲಸಿಗರು, ಕಾರ್ಮಿಕರು ಮತ್ತು ಸಮಾಜದ ಅಂಚಿನಲ್ಲಿರುವ ಸಮುದಾಯಗಳ ಧ್ವನಿಗೂ ಅಮೆರಿಕದ ಅಧಿಕಾರ ವ್ಯವಸ್ಥೆಯಲ್ಲಿ ಸ್ಥಾನ ಸಿಗುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.
ತಂದೆಯ ಗಡೀಪಾರು ಹೊತ್ತಿಸಿದ ಹೋರಾಟದ ಕಿಚ್ಚು
1992ರ ಮಾರ್ಚ್ 8ರಂದು ಬ್ರೂಕ್ಲಿನ್ ನಲ್ಲಿ ಜನಿಸಿದ ಅಬರ್ ಕವಾಸ್ ಅವರ ತಂದೆ-ತಾಯಿ ಫೆಲೆಸ್ತೀನ್ ನಿರಾಶ್ರಿತರು. 1990ರ ದಶಕದಲ್ಲಿ ಜೋರ್ಡಾನ್ ನಿಂದ ಅಮೆರಿಕಕ್ಕೆ ವಲಸೆ ಬಂದಿದ್ದ ಅವರು, ದಕ್ಷಿಣ ಬ್ರೂಕ್ಲಿನ್ ನ ಬೇ ರಿಡ್ಜ್ ಪ್ರದೇಶದಲ್ಲಿ ಬೆಳೆದರು. ಈ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯ ವಲಸಿಗ ಕಾರ್ಮಿಕ ಕುಟುಂಬಗಳು ವಾಸಿಸುತ್ತವೆ.
ಕವಾಸ್ ಅವರ ಬದುಕಿನ ದಿಕ್ಕನ್ನೇ ಬದಲಿಸಿದ ಎರಡು ಪ್ರಮುಖ ಘಟನೆಗಳಿವೆ. 2001ರ ಸೆಪ್ಟೆಂಬರ್ 11ರ ದಾಳಿಯ ಬಳಿಕ ಅಮೆರಿಕದಲ್ಲಿ ಮುಸ್ಲಿಂ ಸಮುದಾಯದ ಮೇಲೆ ಪೊಲೀಸ್ ಕಣ್ಗಾವಲು ಹೆಚ್ಚಾಯಿತು. ತಾರತಮ್ಯವನ್ನೂ ಎದುರಿಸಬೇಕಾಯಿತು. ಈ ಬೆಳವಣಿಗೆ ಅವರ ಮೇಲೆ ಆಳವಾದ ಪರಿಣಾಮ ಬೀರಿತು.
ಇದರ ಬೆನ್ನಲ್ಲೇ, ಅವರು ಪ್ರೌಢಶಾಲೆಯಲ್ಲಿ ಓದುತ್ತಿದ್ದಾಗ ಫೆಡರಲ್ ವಲಸೆ ಅಧಿಕಾರಿಗಳು ಅವರ ತಂದೆಯನ್ನು ಬಂಧಿಸಿ ಜೋರ್ಡಾನ್ ಗೆ ಗಡೀಪಾರು ಮಾಡಿದರು. ಕುಟುಂಬದ ಆಧಾರವಾಗಿದ್ದ ತಂದೆ ದೂರವಾದ ಪರಿಣಾಮ ಇಡೀ ಕುಟುಂಬ ಆರ್ಥಿಕ ಮತ್ತು ಮಾನಸಿಕ ಸಂಕಷ್ಟಕ್ಕೆ ಸಿಲುಕಿತು. ಮನೆಯ ಎಲ್ಲ ಮಕ್ಕಳು ಚಿಕ್ಕ ವಯಸ್ಸಿನಲ್ಲೇ ದುಡಿಯಬೇಕಾಯಿತು.
ಕುಟುಂಬ ಎದುರಿಸಿದ ಈ ನೋವು ಕವಾಸ್ ಅವರನ್ನು ವಲಸಿಗರ ಹಕ್ಕುಗಳ ಹೋರಾಟದತ್ತ ಕರೆದೊಯ್ದಿತು. ತಾವು ಅನುಭವಿಸಿದ ಸಂಕಷ್ಟ ಮತ್ತಷ್ಟು ಕುಟುಂಬಗಳಿಗೆ ಎದುರಾಗಬಾರದು ಎಂಬ ಉದ್ದೇಶದಿಂದ ಜನರ ಹಕ್ಕುಗಳಿಗಾಗಿ ಹೋರಾಡಲು ಮುಂದಾದರು.
15 ವರ್ಷಗಳ ಜನಪರ ಹೋರಾಟ
2014ರಲ್ಲಿ ಸಿಟಿ ಕಾಲೇಜ್ ಆಫ್ ನ್ಯೂಯಾರ್ಕ್ ನಿಂದ ಅಂತಾರಾಷ್ಟ್ರೀಯ ಅಧ್ಯಯನ ವಿಷಯದಲ್ಲಿ ಪದವಿ ಪಡೆದ ಕವಾಸ್, ಲ್ಯಾಟಿನ್ ಅಮೆರಿಕನ್ ಅಧ್ಯಯನವನ್ನೂ ಪ್ರಮುಖ ವಿಷಯವಾಗಿ ಆಯ್ಕೆ ಮಾಡಿಕೊಂಡಿದ್ದರು. 2019ರಲ್ಲಿ ಉನ್ನತ ಶಿಕ್ಷಣಕ್ಕಾಗಿ ದಕ್ಷಿಣ ಆಫ್ರಿಕಾಕ್ಕೆ ತೆರಳಿದ್ದರು.
ಚುನಾವಣಾ ರಾಜಕೀಯಕ್ಕೆ ಪ್ರವೇಶಿಸುವ ಮುನ್ನ ಸುಮಾರು 15 ವರ್ಷಗಳ ಕಾಲ ತಳಮಟ್ಟದಲ್ಲಿ ಜನರ ಹಕ್ಕುಗಳಿಗಾಗಿ ಕೆಲಸ ಮಾಡಿದ್ದರು.
ಅರಬ್ ಅಮೆರಿಕನ್ ಅಸೋಸಿಯೇಷನ್ ಆಫ್ ನ್ಯೂಯಾರ್ಕ್ನಲ್ಲಿ ಹಕ್ಕುಗಳ ಪರ ವಕಾಲತ್ತು ವಿಭಾಗದ ನಿರ್ದೇಶಕಿಯಾಗಿ, ಬಳಿಕ ಕ್ಯೂನಿ ಕ್ಲಿಯರ್ ಸಂಸ್ಥೆಯ ಪಾಲುದಾರಿಕೆ ವಿಭಾಗದ ಸಹ ನಿರ್ದೇಶಕಿಯಾಗಿ ಕಾರ್ಯನಿರ್ವಹಿಸಿದ್ದರು. ಮುಸ್ಲಿಂ ಸಮುದಾಯದ ಹಕ್ಕುಗಳ ರಕ್ಷಣೆ, ಕಾನೂನು ಜಾರಿ ಸಂಸ್ಥೆಗಳ ತಾರತಮ್ಯದ ವಿರುದ್ಧ ಜನಜಾಗೃತಿ ಮೂಡಿಸುವ ಕೆಲಸದಲ್ಲಿ ಮುಂಚೂಣಿಯಲ್ಲಿದ್ದರು.
ಮಮ್ದಾನಿ, ಸ್ಯಾಂಡರ್ಸ್ ಬೆಂಬಲ
ಕವಾಸ್ ಅವರ ರಾಜಕೀಯ ಪಯಣಕ್ಕೆ 'ಡೆಮಾಕ್ರಟಿಕ್ ಸೋಷಿಯಲಿಸ್ಟ್ಸ್ ಆಫ್ ಅಮೆರಿಕ' ಸಂಘಟನೆಯ ನಂಟಿದೆ. ನ್ಯೂಯಾರ್ಕ್ ನಗರದ ಮೇಯರ್ ಝೊಹ್ರಾನ್ ಮಮ್ದಾನಿ, ಸೆನೆಟರ್ ಬರ್ನಿ ಸ್ಯಾಂಡರ್ಸ್ ಮತ್ತು ಕಾಂಗ್ರೆಸ್ ಸದಸ್ಯೆ ರಶೀದಾ ತ್ಲೈಬ್ ಸೇರಿದಂತೆ ಹಲವು ಪ್ರಗತಿಪರ ನಾಯಕರು ಅವರ ಬೆನ್ನಿಗೆ ನಿಂತಿದ್ದರು.
'FUND DIGNITY, FIGHT DESTRUCTION' (ಜನರ ಘನತೆಯ ಬದುಕಿಗೆ ಹಣ ನೀಡಿ, ವಿನಾಶದ ವಿರುದ್ಧ ಹೋರಾಡಿ) ಎಂಬ ಘೋಷಣೆಯೊಂದಿಗೆ ಅವರು ಚುನಾವಣಾ ಪ್ರಚಾರ ನಡೆಸಿದ್ದರು.
ಎಲ್ಲರಿಗೂ ಆರೋಗ್ಯ ಸೇವೆ, ಕೈಗೆಟುಕುವ ದರದಲ್ಲಿ ವಸತಿ, ವಿಶ್ವಾಸಾರ್ಹ ಸಾರ್ವಜನಿಕ ಸಾರಿಗೆ, ಹವಾಮಾನ ಬದಲಾವಣೆ ತಡೆ ಹಾಗೂ ಯುದ್ಧಗಳಿಗೆ ಅಮೆರಿಕ ನೀಡುತ್ತಿರುವ ನೆರವನ್ನು ನಿಲ್ಲಿಸುವುದು ಅವರ ಪ್ರಣಾಳಿಕೆಯ ಪ್ರಮುಖ ಭರವಸೆಗಳಾಗಿದ್ದವು.
ಅಕ್ರಮ ವಸಾಹತುಗಳಿಗೆ ಹಣ ನೀಡುವುದಕ್ಕೆ ವಿರೋಧ
ಇಸ್ರೇಲ್ ಆಕ್ರಮಿತ ಫೆಲೆಸ್ತೀನ್ ಪ್ರದೇಶಗಳಲ್ಲಿ ಅಕ್ರಮ ವಸಾಹತುಗಳ ನಿರ್ಮಾಣಕ್ಕೆ ಹಣಕಾಸು ನೆರವು ನೀಡುವ ನ್ಯೂಯಾರ್ಕ್ ನ ಲಾಭರಹಿತ ಸಂಸ್ಥೆಗಳ ತೆರಿಗೆ ವಿನಾಯಿತಿಯನ್ನು ರದ್ದುಪಡಿಸಬೇಕು ಎಂಬುದು ಕವಾಸ್ ಅವರ ಪ್ರಮುಖ ಹೋರಾಟಗಳಲ್ಲಿ ಒಂದು.
ಈ ಉದ್ದೇಶದ 'ನಾಟ್ ಆನ್ ಅವರ್ ಡೈಮ್' (Not on Our Dime) ಮಸೂದೆಯನ್ನು ಸಿದ್ಧಪಡಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಈ ಹಿಂದೆ ನ್ಯೂಯಾರ್ಕ್ ಮೇಯರ್ ಝೊಹ್ರಾನ್ ಮಮ್ದಾನಿ ಮತ್ತು ರಾಜ್ಯ ಸೆನೆಟರ್ ಜಬಾರಿ ಬ್ರಿಸ್ಪೋರ್ಟ್ ಈ ಮಸೂದೆಯನ್ನು ಮಂಡಿಸಿದ್ದರು. ಆದರೆ, ಅದು ಕಾನೂನಾಗಿ ಜಾರಿಯಾಗಿರಲಿಲ್ಲ. ಇದೀಗ ಕವಾಸ್ ಕೂಡ ರಾಜ್ಯ ಸೆನೆಟ್ ಪ್ರವೇಶಿಸಿರುವುದರಿಂದ ಈ ಹೋರಾಟಕ್ಕೆ ಮತ್ತಷ್ಟು ಬಲ ಸಿಗುವ ನಿರೀಕ್ಷೆಯಿದೆ.
ಸ್ಥಳೀಯ ಪೊಲೀಸರು ಫೆಡರಲ್ ವಲಸೆ ಅಧಿಕಾರಿಗಳೊಂದಿಗೆ ಸಹಕರಿಸುವುದನ್ನು ನಿರ್ಬಂಧಿಸುವ 'ನ್ಯೂಯಾರ್ಕ್ ಫಾರ್ ಆಲ್ ಆ್ಯಕ್ಟ್' ಪರವಾಗಿಯೂ ಅವರು ಧ್ವನಿ ಎತ್ತಿದ್ದಾರೆ.
ನೆತನ್ಯಾಹು ವಿರುದ್ಧದ ಪ್ರತಿಭಟನೆಯಲ್ಲಿ ಬಂಧನ
ಫೆಲೆಸ್ತೀನ್ ಪರ ಹೋರಾಟದಲ್ಲೂ ಕವಾಸ್ ಹಿಂದೆ ಸರಿದವರಲ್ಲ. ಈ ವರ್ಷದ ಆರಂಭದಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ನ್ಯೂಯಾರ್ಕ್ ಗೆ ಭೇಟಿ ನೀಡಿದ ಸಂದರ್ಭದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಅವರು ಬಂಧನಕ್ಕೊಳಗಾಗಿದ್ದರು.
ನ್ಯೂಯಾರ್ಕ್ ಪೊಲೀಸ್ ಇಲಾಖೆ ಮತ್ತು ಇಸ್ರೇಲ್ನ ಕಾಗ್ನೈಟ್ ಸಂಸ್ಥೆಯ ನಡುವಿನ ಮೊಬೈಲ್ ಕಣ್ಗಾವಲು ಒಪ್ಪಂದವನ್ನೂ ಅವರು ಬಹಿರಂಗವಾಗಿ ವಿರೋಧಿಸಿದ್ದರು. ಈ ಒಪ್ಪಂದ ರದ್ದಾಗುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ವಲಸಿಗ ಕುಟುಂಬದಲ್ಲಿ ಹುಟ್ಟಿ, ತಂದೆಯ ಗಡೀಪಾರಿನಿಂದ ಸಂಕಷ್ಟ ಅನುಭವಿಸಿ, ಮುಸ್ಲಿಂ ಸಮುದಾಯದ ಹಕ್ಕುಗಳಿಗಾಗಿ ಹೋರಾಡಿದ ಕವಾಸ್ ಈಗ ಅದೇ ಸಮುದಾಯದ ಧ್ವನಿಯಾಗಿ ಶಾಸಕಾಂಗ ಪ್ರವೇಶಿಸಿದ್ದಾರೆ. ಅವರ ಗೆಲುವು ಅಮೆರಿಕದ ರಾಜಕೀಯದಲ್ಲಿ ವಲಸಿಗರು, ಕಾರ್ಮಿಕರು ಮತ್ತು ಅಂಚಿನಲ್ಲಿರುವ ಸಮುದಾಯಗಳ ಪ್ರಾತಿನಿಧ್ಯ ಹೆಚ್ಚುತ್ತಿರುವುದನ್ನು ತೋರಿಸಿದೆ.
ದಶಕಗಳಿಂದ ಅಧಿಕಾರದಿಂದ ದೂರ ಉಳಿದಿದ್ದ ಸಮುದಾಯಗಳ ಸಮಸ್ಯೆಗಳಿಗೆ ಶಾಸಕಾಂಗದಲ್ಲಿ ಧ್ವನಿ ಸಿಗುವಂತಾಗಿದೆ. ಆಡಳಿತದ ನೀತಿಗಳು ಮತ್ತು ಜನಸಾಮಾನ್ಯರ ಬದುಕಿನ ನಡುವಿನ ಅಂತರವನ್ನು ಕಡಿಮೆ ಮಾಡಲು ಇಂತಹ ನಾಯಕರ ಉಪಸ್ಥಿತಿ ಮುಂಬರುವ ದಿನಗಳಲ್ಲಿ ಮಹತ್ವದ ಬದಲಾವಣೆಗಳಿಗೆ ಕಾರಣವಾಗಬಹುದು ಎಂಬ ನಿರೀಕ್ಷೆಯಿದೆ.