ರೂಹುಲ್ ಕಬೀರ್ ರಿಝ್ವಿPhoto: wikipedia

ಢಾಕಾ: ಬಾಂಗ್ಲಾದೇಶಕ್ಕೆ ವಿದ್ಯುತ್ ಸರಬರಾಜು ಮಾಡುವ ಅದಾನಿ ಪವರ್ನ ಉಷ್ಣ ವಿದ್ಯುತ್ ಸ್ಥಾವರದಲ್ಲಿ ವಿದ್ಯುತ್ ವ್ಯತ್ಯಯ ಉಂಟಾದ ಕೆಲವೇ ದಿನಗಳ ಬಳಿಕ, ಆಡಳಿತಾರೂಢ ಬಿಎನ್ಪಿಯ ಹಿರಿಯ ನಾಯಕರೊಬ್ಬರು, ಈ ಸ್ಥಾವರ ಸ್ಥಗಿತಕ್ಕೂ ಪ್ರಧಾನಿ ತಾರಿಕ್ ರೆಹಮಾನ್ ಅವರು ಬ್ರಿಕ್ಸ್ ಶೃಂಗಸಭೆಗೆ ಗೈರಾಗುವ ನಿರ್ಧಾರಕ್ಕೂ ನೇರ ಸಂಬಂಧವಿದೆ ಎಂದು ಆರೋಪಿಸಿದ್ದಾರೆ.

ಜಾರ್ಖಂಡ್ ನ ಗೊಡ್ಡಾ ಸ್ಥಾವರದ ಒಂದು ಘಟಕವು ಸೆಪ್ಟೆಂಬರ್ 10ರ ತಡರಾತ್ರಿ ಬಾಯ್ಲರ್ ದೋಷದಿಂದಾಗಿ ಸ್ಥಗಿತಗೊಂಡಿತ್ತು. ಇದರಿಂದ ಬಾಂಗ್ಲಾದೇಶಕ್ಕೆ ಪೂರೈಕೆಯಾಗುತ್ತಿದ್ದ ವಿದ್ಯುತ್ ಪ್ರಮಾಣ ಅರ್ಧದಷ್ಟು ಕುಸಿದಿತ್ತು. ಬಳಿಕ ಸೆಪ್ಟೆಂಬರ್ 13ರಂದು ದೋಷವನ್ನು ಸರಿಪಡಿಸಿ ಘಟಕವನ್ನು ಮತ್ತೆ ವಿದ್ಯುತ್ ಗ್ರಿಡ್ಗೆ ಸಂಪರ್ಕಿಸಲಾಯಿತು.

ಹೊಸದಿಲ್ಲಿಯಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯನ್ನು ಬಾಂಗ್ಲಾದೇಶ ಪ್ರಧಾನಿ ತಾರಿಕ್ ರೆಹಮಾನ್ ಅವರು ಬಹಿಷ್ಕರಿಸಿದ್ದಕ್ಕೂ ಹಾಗೂ ಅದಾನಿ ಪವರ್ನ ಈ ಸ್ಥಾವರ ಸ್ಥಗಿತಗೊಂಡಿದ್ದಕ್ಕೂ ಸಂಬಂಧವಿದೆ ಎಂದು ಆಡಳಿತಾರೂಢ ಬಿಎನ್ಪಿಯ (ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿ) ಹಂಗಾಮಿ ಪ್ರಧಾನ ಕಾರ್ಯದರ್ಶಿ ರೂಹುಲ್ ಕಬೀರ್ ರಿಝ್ವಿ ಗಂಭೀರ ಆರೋಪ ಮಾಡಿದ್ದಾರೆ.

ಈ ಕುರಿತು ಢಾಕಾದ ಜಾಟೀಯೊ ಪ್ರೆಸ್ ಕ್ಲಬ್ ಹೊರಗೆ ನಡೆದ ಪ್ರತಿಭಟನಾ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಬಿಎನ್ಪಿಯ ಹಂಗಾಮಿ ಪ್ರಧಾನ ಕಾರ್ಯದರ್ಶಿ ರೂಹುಲ್ ಕಬೀರ್ ರಿಝ್ವಿ, ಭಾರತವು ಬಾಂಗ್ಲಾದೇಶದ ವಿರುದ್ಧ “ಪಿತೂರಿಯ ಜಾಲ” ಹೆಣೆಯುತ್ತಿದೆ ಎಂದು ಆರೋಪಿಸಿದ್ದಾರೆ ಎಂದು ಢಾಕಾದ ‘ದ ಡೈಲಿ ಸ್ಟಾರ್’ ವರದಿ ಮಾಡಿದೆ.

ತಾರಿಕ್ ರೆಹಮಾನ್ ಅವರು ಬ್ರಿಕ್ಸ್ ಶೃಂಗಸಭೆಗೆ ಗೈರಾಗುವ ನಿರ್ಧಾರವು ಬಾಂಗ್ಲಾದೇಶದ ಸ್ವಾತಂತ್ರ್ಯ ಮತ್ತು ಸಾರ್ವಭೌಮತ್ವವನ್ನು ಎತ್ತಿಹಿಡಿದಿದೆ ಎಂದು ರಿಝ್ವಿ ಹೇಳಿದ್ದಾರೆ ಎಂದು ಬಾಂಗ್ಲಾದೇಶದ ‘ದ ಫೈನಾನ್ಷಿಯಲ್ ಎಕ್ಸ್ಪ್ರೆಸ್’ ವರದಿ ಮಾಡಿದೆ.

“ಇದು ಭಾರತದ ಕುಮ್ಮಕ್ಕಿನಿಂದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರು ಬಾಂಗ್ಲಾದೇಶದ ಸ್ವಾತಂತ್ರ್ಯ ಮತ್ತು ಸಾರ್ವಭೌಮತ್ವದ ವಿರುದ್ಧ ನಡೆಸುತ್ತಿರುವ ಪಿತೂರಿ” ಎಂದು ರಿಝ್ವಿ ಆರೋಪಿಸಿದ್ದಾರೆ.

ರಿಝ್ವಿ ಅವರು ಬಿಎನ್ಪಿಯ ಹಂಗಾಮಿ ಪ್ರಧಾನ ಕಾರ್ಯದರ್ಶಿಯಾಗಿದ್ದು, ಪಕ್ಷದ ಅಧ್ಯಕ್ಷ ಹಾಗೂ ಪ್ರಧಾನಿ ತಾರಿಕ್ ರೆಹಮಾನ್ ಅವರ ನಂತರದ ಎರಡನೇ ಅತ್ಯುನ್ನತ ಹುದ್ದೆಯನ್ನು ಹೊಂದಿದ್ದಾರೆ. ಬಾಂಗ್ಲಾದೇಶದ ಅಧ್ಯಕ್ಷ ಮಿರ್ಜಾ ಫಕ್ರುಲ್ ಇಸ್ಲಾಂ ಆಲಂಗೀರ್ ಅವರು ಆಗಸ್ಟ್ನಲ್ಲಿ ದೇಶದ ಅತ್ಯುನ್ನತ ಹುದ್ದೆಗೆ ಆಯ್ಕೆಯಾಗುವ ಮೊದಲು ಇದೇ ಹುದ್ದೆಯಲ್ಲಿದ್ದರು.

ರಿಝ್ವಿ ಈ ರೀತಿಯ ಭಾರತ ವಿರೋಧಿ ನಿಲುವು ತಳೆದಿರುವುದು ಇದೇ ಮೊದಲಲ್ಲ. 2024ರ ಡಿಸೆಂಬರ್ ನಲ್ಲಿ ಭಾರತೀಯ ಉತ್ಪನ್ನಗಳ ಬಹಿಷ್ಕಾರಕ್ಕೆ ಕರೆ ನೀಡಿದ್ದ ಸಂದರ್ಭದಲ್ಲಿ, ರಾಜಶಾಹಿ ನಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅವರು ತಮ್ಮ ಪತ್ನಿಯ ಭಾರತೀಯ ಸೀರೆಯನ್ನು ಸಾರ್ವಜನಿಕವಾಗಿ ಸುಟ್ಟುಹಾಕಿದ್ದರು ಎಂದು ವರದಿಯಾಗಿದೆ.

“ಅವರು [ತಾರಿಕ್] ಹೋಗದಿರಲು ನಿರ್ಧರಿಸಿದರು. ಮರುದಿನವೇ ವಿದ್ಯುತ್ ಸ್ಥಾವರ ಸ್ಥಗಿತಗೊಂಡಿತು. ಇದರ ಹಿಂದಿನ ಕಾರಣವೇನು? ಇದನ್ನು ಅರ್ಥಮಾಡಿಕೊಳ್ಳಲು ನೀವು ಬಾರ್ ಪರೀಕ್ಷೆಯಲ್ಲಿ ತೇರ್ಗಡೆಯಾಗಬೇಕೇ? ವಿಶ್ವವಿದ್ಯಾಲಯದಿಂದ ಪಿಎಚ್ಡಿ ಪಡೆಯಬೇಕೇ? ಏನು ನಡೆಯಿತೆಂದು ನಮಗೆ ಸ್ಪಷ್ಟವಾಗಿ ಅರ್ಥವಾಗುತ್ತದೆ” ಎಂದು ರಿಝ್ವಿ ಹೇಳಿದ್ದಾರೆ ಎಂದು ‘ದ ಡೈಲಿ ಸ್ಟಾರ್’ ಉಲ್ಲೇಖಿಸಿದೆ.

“ಆ ವಿದ್ಯುತ್ ಸ್ಥಾವರ ಬಾಂಗ್ಲಾದೇಶಕ್ಕೆ 1,300 ಮೆಗಾವ್ಯಾಟ್ ವಿದ್ಯುತ್ ಪೂರೈಸುತ್ತದೆ. ಅದು ಭಾರತದಲ್ಲೇ ಇರುವುದರಿಂದ ಅದನ್ನು ಯಾವಾಗ ಬೇಕಾದರೂ ‘ಆನ್ ಮತ್ತು ಆಫ್’ ಮಾಡಬಹುದು” ಎಂದು ರಿಝ್ವಿ ಹೇಳಿದ್ದಾರೆ ಎಂದು ‘ಜಾಗೋನ್ಯೂಸ್24’ ವರದಿ ಮಾಡಿದೆ.

ಜಾರ್ಖಂಡ್ನ 1,600 ಮೆಗಾವ್ಯಾಟ್ ಸಾಮರ್ಥ್ಯದ ಗೊಡ್ಡಾ ಸ್ಥಾವರದ ಎರಡು ಘಟಕಗಳ ಪೈಕಿ ಒಂದು ಸೆಪ್ಟೆಂಬರ್ 10ರ ತಡರಾತ್ರಿ ಬಾಯ್ಲರ್ ಸಮಸ್ಯೆಯಿಂದಾಗಿ ಸ್ಥಗಿತಗೊಂಡಿತ್ತು. ಇದರಿಂದ ಬಾಂಗ್ಲಾದೇಶಕ್ಕೆ ಪೂರೈಕೆಯಾಗುತ್ತಿದ್ದ ವಿದ್ಯುತ್ ಪ್ರಮಾಣ 1,496 ಮೆಗಾವ್ಯಾಟ್ನಿಂದ 800 ಮೆಗಾವ್ಯಾಟ್ಗಿಂತ ಕಡಿಮೆಗೆ ಇಳಿದಿತ್ತು.

ಆ ಸಮಯದಲ್ಲಿ ಬಾಂಗ್ಲಾದೇಶವು ತೀವ್ರ ಇಂಧನ ಬಿಕ್ಕಟ್ಟನ್ನು ಎದುರಿಸುತ್ತಿತ್ತು. ಅಂತಿಮವಾಗಿ ಸೆಪ್ಟೆಂಬರ್ 13ರ ವೇಳೆಗೆ ಸ್ಥಾವರದ ತಾಂತ್ರಿಕ ದೋಷವನ್ನು ಸರಿಪಡಿಸಲಾಯಿತು.

ಎರಡು ಬಾರಿ ಆಹ್ವಾನ ನೀಡಲಾಗಿದೆ: ಭಾರತ ಸ್ಪಷ್ಟನೆ

ಪ್ರಧಾನಿ ತಾರಿಕ್ ರೆಹಮಾನ್ ಅವರಿಗೆ ಭಾರತ ಸರ್ಕಾರವು ಎರಡು ಬಾರಿ ಆಹ್ವಾನ ನೀಡಿರುವುದಾಗಿ ಸ್ಪಷ್ಟಪಡಿಸಿದೆ.

ಈ ಬಗ್ಗೆ ಆಗಸ್ಟ್ ನಲ್ಲಿ ಪ್ರತಿಕ್ರಿಯಿಸಿದ್ದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ಪ್ರಾದೇಶಿಕ ಒಕ್ಕೂಟಗಳ ಮುಖ್ಯಸ್ಥರನ್ನು ಆಹ್ವಾನಿಸುವ ಸಂಪ್ರದಾಯದಂತೆ, ಪ್ರಸ್ತುತ BIMSTEC ಅಧ್ಯಕ್ಷರಾಗಿರುವ ಬಾಂಗ್ಲಾದೇಶ ಪ್ರಧಾನಿ ತಾರಿಕ್ ರೆಹಮಾನ್ ಅವರನ್ನು ಹೊಸದಿಲ್ಲಿಯಲ್ಲಿ ನಡೆಯಲಿರುವ ಬ್ರಿಕ್ಸ್ ಔಟ್ರೀಚ್ ಅಧಿವೇಶನಕ್ಕೆ ಭಾರತ ಆಹ್ವಾನಿಸಿದೆ ಎಂದು ಹೇಳಿದ್ದರು.

ಆಹ್ವಾನದ ಸ್ವರೂಪದ ಬಗ್ಗೆ ಬಾಂಗ್ಲಾದೇಶದ ಅಧಿಕಾರಿಗಳು ತಕರಾರು ಎತ್ತಿದ ಬಳಿಕ, ಸೆ.15ರಂದು ಜೈಸ್ವಾಲ್ ಅವರು ಸ್ಪಷ್ಟನೆ ನೀಡಿ, ರೆಹಮಾನ್ ಅವರಿಗೆ ಎರಡು ಪ್ರತ್ಯೇಕ ಆಹ್ವಾನಗಳು ತಲುಪಿವೆ ಎಂದು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor