ಕುವೈತ್ | ಅಮೆರಿಕದ ಸೇನಾ ನೆಲೆಯ ಮೇಲೆ ಇರಾನ್ ಡ್ರೋನ್ ದಾಳಿ
Photo Credit : AP
ಟೆಹರಾನ್, ಜು.31: ಸುಮಾರು ಒಂದು ವಾರದ ಬಳಿಕ ಅಮೆರಿಕ ಮತ್ತು ಇರಾನ್ ನಡುವೆ ಮತ್ತೆ ಸಂಘರ್ಷ ಆರಂಭವಾಗಿದ್ದು, ಕುವೈತ್‍ನಲ್ಲಿರುವ ಅಮೆರಿಕ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡು ಡ್ರೋನ್ ದಾಳಿ ನಡೆಸಿದ್ದಾಗಿ ಇರಾನ್ ಮಿಲಿಟರಿ ಶುಕ್ರವಾರ ತಿಳಿಸಿದೆ.
ಕುವೈತ್‍ನ ಅಹ್ಮದ್ ಅಲ್-ಜಾಬರ್ ವೈಮಾನಿಕ ನೆಲೆಯಲ್ಲಿರುವ ಯುದ್ಧ ವಿಮಾನಗಳ ತಂಗುದಾಣಗಳು, ಉಪಗ್ರಹ ಸಂಪರ್ಕ ವ್ಯವಸ್ಥೆಗಳು ಮತ್ತು ಉಪಕರಣಗಳ ಸಂಗ್ರಹಣಾ ಸೌಲಭ್ಯಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ. ನಮ್ಮ ದೇಶದ ವಿರುದ್ಧ ಭಯೋತ್ಪಾದಕ ಅಮೆರಿಕ ಮಿಲಿಟರಿ ಇತ್ತೀಚೆಗೆ ನಡೆಸಿದ ಆಕ್ರಮಣ ಮತ್ತು ಕೇಷ್ಮ್ ದ್ವೀಪದಲ್ಲಿರುವ ವಸತಿ ಮನೆಯೊಂದರ ಮೇಲಿನ ಭೀಕರ ದಾಳಿಗೆ ಪ್ರತ್ಯುತ್ತರವಾಗಿ ಈ ದಾಳಿಗಳನ್ನು ನಡೆಸಲಾಗಿದೆ ಎಂದು ಇರಾನ್ ಸೇನೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಮಧ್ಯಪ್ರಾಚ್ಯಕ್ಕೆ ಸಂಬಂಧಿಸಿದ ಪ್ರಮುಖ ಬೆಳವಣಿಗೆಗಳು:
ಅಮೆರಿಕ ಮಿಲಿಟರಿಯ ವಾಯು ಬೆಂಗಾವಲಿನಲ್ಲಿ ಹಾರ್ಮುಝ್ ಜಲಸಂಧಿಯನ್ನು ದಾಟಲು ಯತ್ನಿಸುತ್ತಿದ್ದ ಎರಡು ತೈಲ ಟ್ಯಾಂಕರ್‌ಗಳ ಮೇಲೆ ದಾಳಿ ನಡೆಸಿರುವುದಾಗಿ ಇರಾನ್‍ನ ರೆವೊಲ್ಯೂಷನರಿ ಗಾಡ್ರ್ಸ್ (ಐಆರ್‌ಜಿಸಿ) ತಿಳಿಸಿದೆ.
ನಿಯಮಗಳನ್ನು ಪಾಲಿಸದ ತೈಲ ಟ್ಯಾಂಕರ್‌ಗಳ ಮೇಲೆ ದಾಳಿ ನಡೆಸಿ ಅವುಗಳನ್ನು ತಡೆಯಲಾಗಿದೆ, ಅದೇ ವೇಳೆ ಇತರ ನಾಲ್ಕು ತೈಲ ಟ್ಯಾಂಕರ್‌ಗಳು ತಕ್ಷಣವೇ ತಮ್ಮ ಮಾರ್ಗವನ್ನು ಬದಲಾಯಿಸಿ ಹಿಂದಿನ ಸ್ಥಾನಗಳಿಗೆ ಮರಳಿವೆ ಎಂದು ಐಆರ್‌ಜಿಸಿ ಹೇಳಿದೆ.
ಶುಕ್ರವಾರ ಬೆಳಿಗ್ಗೆ ತಮ್ಮ ವಾಯುಪ್ರದೇಶವನ್ನು ಪ್ರವೇಶಿಸಿದ ಡ್ರೋನ್‍ಗಳನ್ನು ನಾಶಪಡಿಸಲಾಗಿದೆ. ಬಿದ್ದ ಅವಶೇಷಗಳಿಂದಾಗಿ ಆಸ್ತಿಗೆ ಹಾನಿಯಾಗಿದೆಯೇ ಹೊರತು ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಕುವೈತ್ ಸೇನೆ ತಿಳಿಸಿದೆ.