ಭೀಕರ ಪ್ರವಾಹಕ್ಕೆ ತುತ್ತಾಗಿದ್ದರೂ ನೇಪಾಳ ಸರಕಾರ ವಿದೇಶಿ ರಕ್ಷಣಾ ತಂಡಗಳನ್ನು ನಿರಾಕರಿಸಲು ಕಾರಣವೇನು?
Photo Credit : PTI
ಕಠ್ಮಂಡು: ಭೀಕರ ಪ್ರವಾಹದಿಂದ ನೇಪಾಳವು ತತ್ತರಿಸಿದ್ದರೂ ಶೋಧ ಮತ್ತು ರಕ್ಷಣಾ ತಂಡಗಳನ್ನು ಕಳುಹಿಸುವ ಹಲವಾರು ವಿದೇಶಗಳ ಕೊಡುಗೆಗಳನ್ನು ತಿರಸ್ಕರಿಸಿದೆ. ತನ್ನ ದೇಶೀಯ ಭದ್ರತಾ ಏಜೆನ್ಸಿಗಳೇ ಈ ಕಾರ್ಯಾಚರಣೆಯನ್ನು ನಿರ್ವಹಿಸಲು ಸಂಪೂರ್ಣ ಸಮರ್ಥವಾಗಿವೆ ಎಂದು ಬಾಲೇನ್ ಶಾ ನೇತೃತ್ವದ ನೇಪಾಳ ಸರಕಾರವು ಶುಕ್ರವಾರ ಸ್ಪಷ್ಟಪಡಿಸಿದೆ.
ಬುಧವಾರ ದಿಢೀರ್ ಪ್ರವಾಹವುಂಟಾದ ಬಳಿಕ ಈವರೆಗೆ ಕನಿಷ್ಠ 472 ಜನರು ಪ್ರಾಣ ಕಳೆದುಕೊಂಡಿದ್ದು,1,500 ಕ್ಕೂ ಅಧಿಕ ಜನರು ನಾಪತ್ತೆಯಾಗಿದ್ದಾರೆ. ರಕ್ಷಣಾ ಸಿಬ್ಬಂದಿಗಳು ಕೆಸರು ಹಾಗೂ ಅವಶೇಷಗಳ ರಾಶಿಯೊಳಗೆ ಶೋಧ ಕಾರ್ಯವನ್ನು ಮುಂದುವರಿಸಿದ್ದಾರೆ,ಆದರೆ ಹೊಸದಾಗಿ ಸೃಷ್ಟಿಯಾಗಿರುವ ತಡೆಗೋಡೆ ಸರೋವರಗಳು ಮತ್ತಷ್ಟು ಪ್ರವಾಹದ ಭೀತಿಯನ್ನು ಹೆಚ್ಚಿಸಿವೆ.
ಭಾರತ, ಚೀನಾ, ಅಮೆರಿಕ, ಬ್ರಿಟನ್, ಜಪಾನ್, ದಕ್ಷಿಣ ಕೊರಿಯಾ, ಶ್ರೀಲಂಕಾ ಮತ್ತು ಬಾಂಗ್ಲಾದೇಶ ಸೇರಿದಂತೆ ಹಲವು ರಾಷ್ಟ್ರಗಳು ತಮ್ಮ ರಕ್ಷಣಾ ತಂಡಗಳನ್ನು ಕಳುಹಿಸಲು ಮುಂದಾಗಿದ್ದವು. ‘ನೆರವಿನ ಕೊಡುಗೆ ಸಹಜವೇ ಆಗಿದೆ. ಆದರೆ ಸದ್ಯಕ್ಕೆ ನಮಗೆ ಸಹಾಯದ ಅಗತ್ಯವಿಲ್ಲ. ನಮ್ಮ ಭದ್ರತಾ ಸಂಸ್ಥೆಗಳೇ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ’ ಎಂದು ನೇಪಾಳದ ವಿದೇಶಾಂಗ ಸಚಿವಾಲಯದ ವಕ್ತಾರ ಲೋಕ್ ಬಹದ್ದೂರ್ ಛೆಟ್ರಿ ತಿಳಿಸಿದ್ದಾರೆ.
ಈ ಮುನ್ನ ಭಾರತವು ಎರಡು ಐಎಎಫ್ ವಿಮಾನಗಳ ಮೂಲಕ ಪ್ರವಾಹಪೀಡಿತ ನೇಪಾಳಕ್ಕೆ ಡೇರೆಗಳು, ಕಂಬಳಿಗಳು, ಔಷಧಿಗಳು, ಆಹಾರ ಮತ್ತು ಜನರೇಟರ್‌ಗಳಂತಹ 47.5 ಟನ್ ತುರ್ತು ಸರಬರಾಜುಗಳನ್ನು ರವಾನಿಸಿತ್ತು. ಇದರೊಂದಿಗೆ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಂಪರ್ಕವನ್ನು ಮರುಸ್ಥಾಪಿಸಲು ಮತ್ತು ಪರಿಹಾರ ಕಾರ್ಯಾಚರಣೆಗಳನ್ನು ಚುರುಕುಗೊಳಿಸಲು ಭಾರತವು ಬೈಲಿ ಸೇತುವೆಗಳನ್ನು ಸಹ ಸಜ್ಜುಗೊಳಿಸುತ್ತಿದೆ.
ಏಕೆ ನೆರವಿಗೆ ನಿರಾಕರಣೆ?
ನೇಪಾಳಿ ಸೇನೆ ಮತ್ತು ಪೊಲೀಸರ ಶಿಫಾರಸಿನ ಮೇರೆಗೆ ವಿದೇಶಿ ರಕ್ಷಣಾ ತಂಡಗಳ ಸಹಾಯವನ್ನು ತಿರಸ್ಕರಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ. 2015ರ ವಿನಾಶಕಾರಿ ಗೂರ್ಕಾ ಭೂಕಂಪನದ ಸಮಯದಲ್ಲಿ ಆಗಮಿಸಿದ್ದ ಅನೇಕ ವಿದೇಶಿ ರಕ್ಷಣಾ ತಂಡಗಳಿಂದ ಉಂಟಾದ ಗೊಂದಲ ಹಾಗೂ ಸಮನ್ವಯದ ಕೊರತೆಯ ಕಹಿ ಅನುಭವವೇ ನಿರ್ಧಾರಕ್ಕೆ ಪ್ರಮುಖ ಕಾರಣವಾಗಿದೆ ಎಂದು ವಿದೇಶಾಂಗ ಸಚಿವಾಲಯದ ಹಿರಿಯ ಅಧಿಕಾರಿಗಳು ತಿಳಿಸಿದರು. ಭೂಕಂಪನದಿಂದಾಗಿ ಸುಮಾರು 9,000 ಜನರು ಮೃತಪಟ್ಟಿದ್ದು, 23,000ಕ್ಕೂ ಅಧಿಕ ಜನರು ಗಾಯಗೊಂಡಿದ್ದರು.
ಹಣಕಾಸು ನೆರವಿಗೆ ಕೋರಿಕೆ
ನೇಪಾಳವು ನೇರವಾದ ಮಾನವಶಕ್ತಿ ರಕ್ಷಣಾ ಸಹಾಯವನ್ನು ತಿರಸ್ಕರಿಸಿದ್ದರೂ,‘ಒನ್-ಡೋರ್ ಮೆಕ್ಯಾನಿಸಮ್’ ಮೂಲಕ ಹಣಕಾಸಿನ ನೆರವನ್ನು ಬಯಸಿದೆ. ಪ್ರಧಾನಮಂತ್ರಿ ಪರಿಹಾರ ನಿಧಿಯ ಮೂಲಕ ಮಾತ್ರ ನೆರವನ್ನು ಕೋರುವಂತೆ ವಿದೇಶಗಳಲ್ಲಿರುವ ತನ್ನ ರಾಜತಾಂತ್ರಿಕ ಕಚೇರಿಗಳಿಗೆ ಸರಕಾರವು ಸೂಚನೆ ನೀಡಿದೆ.
ಆ್ಯಪಲ್ ಕಂಪನಿಯ ಸಿಇಒ ಟಿಮ್ ಕುಕ್,ಅಮೆರಿಕ,ಬ್ರಿಟನ್ ಸೇರಿದಂತೆ ಕೆಲವು ದೇಶಗಳು ಮತ್ತು ವಿಶ್ವ ಬ್ಯಾಂಕ್ ನೇಪಾಳಕ್ಕೆ ಆರ್ಥಿಕ ನೆರವನ್ನು ಘೋಷಿಸಿವೆ.
ತುರ್ತು ಪ್ರತಿಕ್ರಿಯಾ ತಂಡ
ಪ್ರವಾಹ ಪೀಡಿತ ವಿದೇಶಿ ಪ್ರಜೆಗಳ ರಕ್ಷಣೆ ಹಾಗೂ ಮಾಹಿತಿಗಾಗಿ ನೇಪಾಳದ ವಿದೇಶಾಂಗ ಸಚಿವಾಲಯವು ತುರ್ತು ಪ್ರತಿಕ್ರಿಯಾ ತಂಡವನ್ನು ರಚಿಸಿದೆ. ನಾಪತ್ತೆಯಾಗಿರುವ ಬ್ರಿಟಿಷ್ ಪ್ರಜೆಗಳು ಸೇರಿದಂತೆ ಇತರೆ ವಿದೇಶಿ ಪ್ರಜೆಗಳನ್ನು ಪತ್ತೆಹಚ್ಚಲು ಮತ್ತು ಅವರ ಕುಟುಂಬಗಳೊಂದಿಗೆ ಸಮನ್ವಯ ಸಾಧಿಸಲು ವಿಶೇಷ ಅಧೀನ ಕಾರ್ಯದರ್ಶಿಗಳನ್ನು ನಿಯೋಜಿಸಲಾಗಿದೆ.
ರಸುವಾಗಢಿಯಲ್ಲಿ ಗಡಿ ದಾಟುವಿಕೆಯ ಬಳಿ ಲೆಂಡೆ ನದಿಗೆ ಬಂಡೆಗಳು ಮತ್ತು ಮಂಜುಗಡ್ಡೆ ಅಡ್ಡಗಟ್ಟಿ ಹೊಸ ಸರೋವರವೊಂದು ಸೃಷ್ಟಿಯಾಗಿದೆ. ಈ ಸರೋವರವು ಈಗಾಗಲೇ ಲಕ್ಷಾಂತರ ಘನ ಮೀಟರ್ ನೀರನ್ನು ಸಂಗ್ರಹಿಸಿ ಉಕ್ಕಿ ಹರಿಯುತ್ತಿದ್ದು, ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಗಂಭೀರವಾಗುವ ಸಾಧ್ಯತೆಯಿರುವುದರಿಂದ ಅಧಿಕಾರಿಗಳು ಹಗಲಿರುಳು ತೀವ್ರ ನಿಗಾ ವಹಿಸಿದ್ದಾರೆ.