ನಾಸಾ ಗುರಿಯಾಗಿಸಿಕೊಂಡಿದ್ದ ಚೀನಾ ಮೂಲದ ಹ್ಯಾಕಿಂಗ್ ಕಾರ್ಯಾಚರಣೆಗೆ ಅಮೆರಿಕ ತಡೆ
Photo Credit : @NASA
ವಾಶಿಂಗ್ಟನ್: ಅಮೆರಿಕದ ನ್ಯಾಯಾಂಗ ಇಲಾಖೆ, ನಾಸಾ, ಫೆಡರಲ್ ರಿಸರ್ವ್ ಮತ್ತು ಸೆನೆಟ್ ಸೇರಿದಂತೆ ಹಲವು ಸೂಕ್ಷ್ಮ ಸರಕಾರಿ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡಿದ್ದ ಚೀನಾ ಮೂಲದ ಹ್ಯಾಕಿಂಗ್ ಕಾರ್ಯಾಚರಣೆಯನ್ನು ತಾನು ತಡೆದಿರುವುದಾಗಿ ಅಮೆರಿಕ ತಿಳಿಸಿದೆ.
ಈ ಸೈಬರ್ ದಾಳಿಯಲ್ಲಿ `ಕ್ಯೂಸ್ಕ್ಯಾನ್' ಮತ್ತು 'ಕ್ಯೂಟಿರೂಟರ್' ಎಂಬ ಎರಡು ಹ್ಯಾಕಿಂಗ್ ಪ್ಲಾಟ್‍ಫಾರ್ಮ್‍ಗಳು ಭಾಗಿಯಾಗಿದ್ದವು ಮತ್ತು ಅವುಗಳು ಬಳಸುತ್ತಿದ್ದ ಡೊಮೇನ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನ್ಯಾಯಾಂಗ ಇಲಾಖೆ ಹೇಳಿದೆ. ಇಂಧನ ಇಲಾಖೆ, ಆರೋಗ್ಯ ಮತ್ತು ಮಾನವ ಸೇವೆಗಳ ಇಲಾಖೆ, ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಹೆಲ್ತ್ ಹಾಗೂ ಅಮೆರಿಕ ಮತ್ತು ದಕ್ಷಿಣ ಕೊರಿಯಾದ ನಾಲ್ಕು ಹೆಸರಿಸದ ಕಂಪನಿಗಳು ಸಹ ಈ ದಾಳಿಗೆ ಒಳಗಾಗಿವೆ ಎಂದು ಇಲಾಖೆಯ ಹೇಳಿಕೆ ತಿಳಿಸಿದೆ.
ಅಮೆರಿಕದ ನ್ಯಾಯಾಂಗ ಇಲಾಖೆಯ ಪ್ರಕಾರ, ಈ ಪ್ಲಾಟ್‍ಫಾರ್ಮ್‍ಗಳನ್ನು ಚೀನಾ ಮೂಲದ `ನಾಂಜಿಂಗ್ ಸಿಂಜಿಯುಯಿ ನೆಟ್‍ವರ್ಕ್ ಟೆಕ್ನಾಲಜಿ ಕಂಪನಿ' ನಿರ್ವಹಿಸುತ್ತಿತ್ತು. ಅಮೆರಿಕ ಮತ್ತು ಜಗತ್ತಿನಾದ್ಯಂತ ಇರುವ ನಿರ್ಣಾಯಕ ಮೂಲಸೌಕರ್ಯ ಹಾಗೂ ಇತರ ಸೂಕ್ಷ್ಮ ನೆಟ್‍ವರ್ಕ್‍ಗಳನ್ನು ಕದಡಲು ಈ ಹ್ಯಾಕಿಂಗ್ ಗುಂಪಿನ ಕಂಪ್ಯೂಟರ್ ಮೂಲಸೌಕರ್ಯವನ್ನು ಕನಿಷ್ಠ 2018 ರಿಂದ ಬಳಸಲಾಗುತ್ತಿದೆ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.