ಶೇಖ್ ಹಸೀನಾ | Photo : PTI

ಢಾಕಾ: ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರಿಗೆ ಮರಣದಂಡನೆ ಶಿಕ್ಷೆ ಎದುರಿಸುವುದು ಬಿಟ್ಟು ಬೇರೆ ಯಾವುದೇ ಕಾನೂನು ಮಾರ್ಗವಿಲ್ಲ ಎಂದು ಬಾಂಗ್ಲಾದೇಶದ ಅಂತಾರಾಷ್ಟ್ರೀಯ ಅಪರಾಧ ನ್ಯಾಯಮಂಡಳಿಯ ಮುಖ್ಯ ಅಭಿಯೋಜಕ ಎಂ.ಡಿ.ಅಮಿನುಲ್ ಇಸ್ಲಾಂ ಹೇಳಿದ್ದಾರೆ ಎಂದು 'ದಿ ಡೈಲಿ ಸ್ಟಾರ್' ವರದಿ ಮಾಡಿದೆ.

ಪಾಸ್‌ಪೋರ್ಟ್ ಅಥವಾ ಪ್ರಯಾಣ ದಾಖಲೆಯನ್ನು ನೀಡುವ ಸಾಧ್ಯತೆಯನ್ನು ಅವರು ತಳ್ಳಿಹಾಕಿದ್ದಾರೆ ಎಂದು ವರದಿ ತಿಳಿಸಿದೆ.

ಶೇಖ್ ಹಸೀನಾ ಅವರ ವಕೀಲರು ಹೊಸ ಪಾಸ್‌ಪೋರ್ಟ್ ಹಾಗೂ ರಾಷ್ಟ್ರೀಯ ಗುರುತಿನ ಚೀಟಿ ನೀಡುವಂತೆ ಕೋರಿ, ಹೊಸದಿಲ್ಲಿಯಲ್ಲಿರುವ ಬಾಂಗ್ಲಾದೇಶ ಹೈಕಮಿಷನ್‌ಗೆ ಮನವಿ ಸಲ್ಲಿಸಿದ್ದರು. ಡಿಸೆಂಬರ್‌ನಲ್ಲಿ ದೇಶಕ್ಕೆ ಹಿಂದಿರುಗಿ, ಕಾನೂನು ಪ್ರಕ್ರಿಯೆ ಎದುರಿಸುವ ಇಂಗಿತವನ್ನು ಅವರು ವ್ಯಕ್ತಪಡಿಸಿದ್ದರು.

2024ರ ಆಗಸ್ಟ್‌ನಲ್ಲಿ ಬಾಂಗ್ಲಾದೇಶದಲ್ಲಿ ವಿದ್ಯಾರ್ಥಿ ನೇತೃತ್ವದ ದಂಗೆಯಿಂದಾಗಿ, ಶೇಖ್ ಹಸೀನಾ ಅವರ ಅವಾಮಿ ಲೀಗ್ ಸರ್ಕಾರ ಪತನಗೊಂಡಿತು. ಅಲ್ಲಿಂದ ಪಲಾಯನ ಮಾಡಿ, ಹಸೀನಾ ಭಾರತಕ್ಕೆ ಆಗಮಿಸಿದ್ದರು.

ಪ್ರತಿಭಟನಾಕಾರರ ವಿರುದ್ಧ ನಡೆಸಿದ ದಮನಕಾರಿ ಕ್ರಮಕ್ಕೆ ಸಂಬಂಧಿಸಿದಂತೆ, ವಿವಿಧ ಅಪರಾಧ ಪ್ರಕರಣಗಳಲ್ಲಿ ಅವರು ಗೈರುಹಾಜರಿದ್ದಾಗಲೇ ಮರಣದಂಡನೆ ಶಿಕ್ಷೆ ವಿಧಿಸಲಾಗಿತ್ತು. ಆದರೆ ತಾವು ಯಾವುದೇ ತಪ್ಪು ಮಾಡಿಲ್ಲ ಎಂದು ಅವರು ಕಾನೂನು ಪ್ರಕ್ರಿಯೆಯ ಸಿಂಧುತ್ವವನ್ನೇ ಪ್ರಶ್ನಿಸಿದ್ದರು.

'ಶೇಖ್ ಹಸೀನಾ ಅವರಿಗೆ ನಿಜವಾಗಿಯೂ ಬಾಂಗ್ಲಾದೇಶಕ್ಕೆ ಮರಳುವ ಇಚ್ಛೆ ಇದ್ದಿದ್ದರೆ, ವಿಚಾರಣೆ ನಡೆಯುತ್ತಿರುವಾಗಲೇ ಹಿಂತಿರುಗಿ ಬಂದು ಪ್ರಕರಣವನ್ನು ಎದುರಿಸಬಹುದಿತ್ತು. ಅಲ್ಲದೆ, ತೀರ್ಪು ಪ್ರಕಟವಾದ 30 ದಿನಗಳಲ್ಲಿ ಮೇಲ್ಮನವಿ ಸಲ್ಲಿಸಲು ವಾಪಾಸ್ ಬರಬಹುದಿತ್ತು' ಎಂದು ಅಮಿನುಲ್ ಇಸ್ಲಾಂ ಹೇಳಿದ್ದಾರೆ ' ಎಂದು ದಿ ಡೈಲಿ ಸ್ಟಾರ್' ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor