“ಅಲ್ಲಾಹನಿಗೆ ಸ್ತುತಿ… ಹಾರ್ಮುಝ್ ಜಲಸಂಧಿಯ ಮೇಲೆ ಅಮೆರಿಕ ಸಂಪೂರ್ಣ ನಿಯಂತ್ರಣ ಸಾಧಿಸಿದೆ”: ಟ್ರಂಪ್ ಘೋಷಣೆ
ಡೊನಾಲ್ಡ್ ಟ್ರಂಪ್ | Photo Credit : PTI
ವಾಷಿಂಗ್ಟನ್: ಅಲ್ಲಾಹನಿಗೆ ಸ್ತುತಿ… ಹಾರ್ಮುಝ್ ಜಲಸಂಧಿಯ ಮೇಲೆ ಅಮೆರಿಕ ಸಂಪೂರ್ಣ ನಿಯಂತ್ರಣ ಸಾಧಿಸಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಈ ನಿಯಂತ್ರಣವನ್ನು ಅಮೆರಿಕ ಮುಂದುವರಿಸಲಿದೆ ಎಂದೂ ಅವರು ತಿಳಿಸಿದ್ದಾರೆ.
ಇರಾನ್ನೊಂದಿಗಿನ ಉದ್ವಿಗ್ನತೆ ನಡುವೆಯೇ ಟ್ರಂಪ್ ಅವರು ತಮ್ಮ ಟ್ರೂತ್ ಸೋಶಿಯಲ್ ಖಾತೆಯಲ್ಲಿ ಈ ಹೇಳಿಕೆ ನೀಡಿದ್ದಾರೆ.
“ಹಾರ್ಮುಝ್ ಜಲಸಂಧಿಯ ಮೇಲೆ ಅಮೆರಿಕ ಸಂಪೂರ್ಣ ನಿಯಂತ್ರಣ ಹೊಂದಿದೆ. ನಾವು ಅದನ್ನು ಉಳಿಸಿಕೊಳ್ಳುತ್ತೇವೆ ಎಂದು ನಾನು ಭಾವಿಸುತ್ತೇನೆ!” ಎಂದು ಟ್ರಂಪ್ ಬರೆದಿದ್ದಾರೆ.
ಅಮೆರಿಕದ ನೌಕಾ ದಿಗ್ಬಂಧನವನ್ನು ‘ಉಕ್ಕಿನ ಗೋಡೆ’ ಎಂದು ಬಣ್ಣಿಸಿರುವ ಟ್ರಂಪ್, ಈ ದಿಗ್ಬಂಧನವನ್ನು ಎದುರಿಸಲು ಇರಾನ್ಗೆ ಯಾವುದೇ ಸಾಧ್ಯತೆ ಇಲ್ಲ ಎಂದು ಹೇಳಿದ್ದಾರೆ.
“ನಮ್ಮ ನೌಕಾ ದಿಗ್ಬಂಧನವನ್ನು ಎಲ್ಲರೂ ‘ಉಕ್ಕಿನ ಗೋಡೆ’ ಎಂದು ಕರೆಯುತ್ತಿದ್ದಾರೆ. ಇರಾನ್ ಅದನ್ನು ಎದುರಿಸಲು ಏನೂ ಮಾಡಲು ಸಾಧ್ಯವಿಲ್ಲ” ಎಂದು ಅವರು ಹೇಳಿದ್ದಾರೆ.
ಇರಾನ್ನ ಮಿಲಿಟರಿ ಮತ್ತು ನಾಯಕತ್ವದ ವಿರುದ್ಧವೂ ಟ್ರಂಪ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇರಾನ್ಗೆ ನೌಕಾಪಡೆ ಅಥವಾ ವಾಯುಪಡೆ ಇಲ್ಲ. ಅಲ್ಲದೆ, ಇರಾನ್ ನ ಉಳಿದಿರುವ ಸೈನಿಕರಿಗೆ ವೇತನ ಪಾವತಿಯಾಗುತ್ತಿಲ್ಲ ಎಂದೂ ಟ್ರಂಪ್ ಉಲ್ಲೇಖಿಸಿದ್ದಾರೆ.