ಬಲೂಚಿಸ್ತಾನದಲ್ಲಿ ಪಾಕಿಸ್ತಾನದ ಮಿಲಿಟರಿಯಿಂದ ವಾಯುದಾಳಿ | 21 ನಾಗರಿಕರು ಮೃತ್ಯು : ವರದಿ

Update: 2026-08-12 20:42 IST

ಸಾಂದರ್ಭಿಕ ಚಿತ್ರ(AP)

 

ಪೇಷಾವರ, ಆ.12: ಬಲೂಚಿಸ್ತಾನದಲ್ಲಿ ಹಿಂಸಾಚಾರ ತೀವ್ರಗೊಂಡಿದ್ದು, ಪಾಕಿಸ್ತಾನ ಮಿಲಿಟರಿ ನಡೆಸಿದ ವಾಯುದಾಳಿಯಲ್ಲಿ ದೊಡ್ಡ ಮಟ್ಟದ ನಾಗರಿಕ ಸಾವು-ನೋವು ಸಂಭವಿಸಿದೆ ಎಂದು ವರದಿಯಾಗಿದೆ. ಇದರ ಬೆನ್ನಲ್ಲೇ, ಬಲೂಚ್ ಪ್ರತ್ಯೇಕತಾವಾದಿ ಹೋರಾಟಗಾರರು ಪ್ರಾಂತದ ವಿವಿಧ ಜಿಲ್ಲೆಗಳಲ್ಲಿ ಸಂಘಟಿತ ದಾಳಿಗಳನ್ನು ನಡೆಸಿರುವುದಾಗಿ ಹೇಳಿಕೊಂಡಿದ್ದಾರೆ.

ಸೊರಾಬ್ ಮತ್ತು ಗ್ವಾದರ್ ಸುತ್ತಮುತ್ತ ನಡೆದ ವಾಯುದಾಳಿಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ 21 ನಾಗರಿಕರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ದಾಳಿಯ ಬೆನ್ನಲ್ಲೇ ಪೀಡಿತ ಪ್ರದೇಶಗಳಲ್ಲಿ ಇಂಟರ್ನೆಟ್ ಮತ್ತು ಟೆಲಿಕಾಂ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಈ ವಾಯುದಾಳಿಗಳು ಪ್ರತ್ಯೇಕವಾದಿ ಹೋರಾಟಗಾರರ ಅಡಗುದಾಣಗಳ ಮೇಲಷ್ಟೇ ಅಲ್ಲದೆ, ಜನರು ವಾಸಿಸುವ ಪ್ರದೇಶಗಳ ಮೇಲೆಯೂ ನಡೆದಿವೆ ಎಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ.

ಚಾಗೈ ಜಿಲ್ಲೆಯಲ್ಲಿ ಮಂಗಳವಾರ ತಡರಾತ್ರಿ ನಡೆದ ಬಾಂಬ್ ದಾಳಿಯಲ್ಲಿ ಪೊಲೀಸ್ ಠಾಣೆಯೊಂದು ಧ್ವಂಸಗೊಂಡಿದ್ದು, ಮೂವರು ಭದ್ರತಾ ಸಿಬ್ಬಂದಿ ಬಲಿಯಾಗಿದ್ದಾರೆ . ಯಾಕ್ಮಾಚ್‍ನಲ್ಲಿ, ಶಸ್ತ್ರಸಜ್ಜಿತ ದಾಂದಲೆಕೋರರು ವಾಣಿಜ್ಯ ವಾಹನಗಳನ್ನು ತಡೆದು ಟ್ರಕ್ ಒಂದನ್ನು ಅಪಹರಿಸಿದ್ದಾರೆ. ಖುಜ್ದಾರ್ ಆರ್‍ಸಿಡಿ ಹೆದ್ದಾರಿಯಲ್ಲಿ ಭದ್ರತಾ ಪಡೆಗಳ ಬೆಂಗಾವಲು ಪಡೆ ಮತ್ತು ಶಸ್ತ್ರಸಜ್ಜಿತ ವಾಹನದ ಮೇಲೆ ದಾಳಿ ನಡೆಸಲಾಗಿದೆ. ಸಮೀಪದ ವಾಧ್‍ನಲ್ಲಿ, ಸೇನಾ ವಾಹನಗಳ ಮೇಲೆ ನಡೆದ ಹೊಂಚು ದಾಳಿಯಲ್ಲಿ ಹಲವಾರು ಸಾವು-ನೋವುಗಳು ವರದಿಯಾಗಿವೆ.

ಹಿಂಸಾಚಾರವು ಮಂಗುಚಾರ್ ಬಜಾರ್‍ಗೂ ಹರಡಿದ್ದು, ಭದ್ರತಾ ಚೆಕ್‍ಪೋಸ್ಟ್ ಮೇಲಿನ ದಾಳಿಯ ಸಮಯದಲ್ಲಿ ಸ್ಫೋಟಗಳು ಮತ್ತು ತೀವ್ರ ಗುಂಡಿನ ಚಕಮಕಿ ವರದಿಯಾಗಿದ್ದು ವ್ಯಾಪಾರ-ವಹಿವಾಟುಗಳು ತಾತ್ಕಾಲಿಕವಾಗಿ ಸ್ಥಗಿತಗೊಂಡವು. ಝಾವೊದಲ್ಲಿ, ಉಗ್ರರು ಪಾಕಿಸ್ತಾನ ಮಿಲಿಟರಿ ಕ್ಯಾಂಪ್ ಮೇಲೆ ರಾತ್ರಿ ವೇಳೆ ದಾಳಿ ನಡೆದಿದೆ.

ಈ ಘಟನೆಯು ಸೊರಾಬ್ ಮತ್ತು ಗ್ವಾದರ್‍ನಲ್ಲಿ ಭಾರೀ ಪ್ರತಿಭಟನೆಗೆ ಕಾರಣವಾಗಿದ್ದು, ನಿವಾಸಿಗಳು ಮಿಲಿಟರಿ ಕ್ರಮವನ್ನು ಖಂಡಿಸಿ, ಹೊಣೆಗಾರಿಕೆಗೆ ಆಗ್ರಹಿಸಿರುವುದಾಗಿ ವರದಿಯಾಗಿದೆ.

ಕನಿಷ್ಠ 10 ಭಯೋತ್ಪಾದಕರ ಹತ್ಯೆ

ವಾಯವ್ಯ ಪಾಕಿಸ್ತಾನದ ಖೈಬರ್ ಪಖ್ತುಂಕ್ವಾ ಪ್ರಾಂತದಲ್ಲಿ ಭದ್ರತಾ ಪಡೆಗಳು ನಡೆಸಿದ ಗುಪ್ತಚರ ಮಾಹಿತಿ ಆಧಾರಿತ ಕಾರ್ಯಾಚರಣೆಗಳಲ್ಲಿ ಕನಿಷ್ಠ 10 ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದ್ದು, 16 ಜನರು ಗಾಯಗೊಂಡಿದ್ದಾರೆ ಎಂದು ಬುಧವಾರ ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News