ಶೇಖ್ ಹಸೀನಾ ಮರಳುವ ವಿಚಾರದಲ್ಲಿ ಕಾನೂನು ಪ್ರಕ್ರಿಯೆ ತೀವ್ರಗೊಂಡ ಬೆನ್ನಲ್ಲೇ ಬಾಂಗ್ಲಾದೇಶದಲ್ಲಿ ಭುಗಿಲೆದ್ದ ಹಿಂಸಾಚಾರ; ವರದಿ
ನೂರಾರು ಅರೆಸೈನಿಕ ಪಡೆಗಳ ನಿಯೋಜನೆ
ಶೇಖ್ ಹಸೀನಾ (Photo: PTI)
ಢಾಕಾ: ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರು ದೇಶಕ್ಕೆ ಮರಳುವ ವಿಚಾರದ ಬಗ್ಗೆ ಚರ್ಚೆ ಬೆನ್ನಲ್ಲೇ ಬಾಂಗ್ಲಾದೇಶದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಇದರಿಂದಾಗಿ ನೂರಾರು ಅರೆಸೈನಿಕ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ವರದಿಯಾಗಿದೆ.
ನಿಷೇಧಿತ ಅವಾಮಿ ಲೀಗ್ ಪಕ್ಷದ ಬೆಂಬಲಿಗರು ಈ ಹಿಂಸಾಚಾರದಲ್ಲಿ ತೊಡಗಿದ್ದಾರೆ ಎಂದು ವರದಿಯಾಗಿದೆ. ಈ ನಡುವೆ ಘರ್ಷಣೆಗಳು, ಬಾಂಬ್ ಸ್ಫೋಟಗಳು ಮತ್ತು ಬೆಂಕಿ ಹಚ್ಚುವ ಘಟನೆಗಳು ನಡೆದಿವೆ.
ಶೇಖ್ ಹಸೀನಾ ಅವರನ್ನು ಭಾರತದಿಂದ ವಾಪಸ್ ಕರೆಸಿಕೊಳ್ಳಲು ಅಗತ್ಯವಿರುವ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಬಾಂಗ್ಲಾದೇಶ ಸರಕಾರ ಶನಿವಾರ ತಿಳಿಸಿತ್ತು. ಅವರನ್ನು ಹಸ್ತಾಂತರಿಸುವ ಅಂತಿಮ ನಿರ್ಧಾರ ಭಾರತದ ಕೈಯಲ್ಲಿದೆ ಎಂದೂ ಹೇಳಿತ್ತು.
ಬಾಂಗ್ಲಾದೇಶದಲ್ಲಿ 16 ವರ್ಷಗಳ ಕಾಲ ಅಧಿಕಾರದಲ್ಲಿದ್ದ ಶೇಖ್ ಹಸೀನಾ, ತಮ್ಮ ಸರಕಾರದ ವಿರುದ್ಧ ವಿದ್ಯಾರ್ಥಿಗಳ ನೇತೃತ್ವದಲ್ಲಿ ನಡೆದ ವ್ಯಾಪಕ ಪ್ರತಿಭಟನೆಗಳ ಬಳಿಕ 2024ರ ಆಗಸ್ಟ್ನಲ್ಲಿ ಭಾರತಕ್ಕೆ ಪಲಾಯನ ಮಾಡಿದ್ದರು. ಪ್ರತಿಭಟನಾಕಾರರ ದಮನಕ್ಕೆ ಸಂಬಂಧಿಸಿದಂತೆ ಮಾನವತೆಯ ವಿರುದ್ಧದ ಅಪರಾಧಗಳಿಗಾಗಿ ಬಾಂಗ್ಲಾದೇಶದ ಅಂತಾರಾಷ್ಟ್ರೀಯ ಅಪರಾಧಗಳ ನ್ಯಾಯಮಂಡಳಿಯು 2025ರ ನವೆಂಬರ್ನಲ್ಲಿ ಅವರಿಗೆ ಮರಣದಂಡನೆ ವಿಧಿಸಿತ್ತು.
ಶೇಖ್ ಹಸೀನಾ ಅವರು ಹೊಸ ಪಾಸ್ಪೋರ್ಟ್ ಮತ್ತು ಗುರುತಿನ ಚೀಟಿಗಾಗಿ ಮನವಿ ಸಲ್ಲಿಸಿದ್ದಾರೆ ಎನ್ನಲಾಗಿದೆ. ಆದರೆ, ಬಾಂಗ್ಲಾದೇಶ ಸರಕಾರ ಈ ಮನವಿಯನ್ನು ಈವರೆಗೆ ತಿರಸ್ಕರಿಸಿದೆ. ಇದರಿಂದ ಆಕ್ರೋಶಗೊಂಡ ಅವರ ಪಕ್ಷದ ಬೆಂಬಲಿಗರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ʼರಾಯಿಟರ್ಸ್ʼ ವರದಿ ಮಾಡಿದೆ.
ಕಳೆದ ವಾರ ಅವಾಮಿ ಲೀಗ್, ಶೇಖ್ ಹಸೀನಾ ಅವರ ವಾಪಸಾತಿಗೆ ಬೆಂಬಲಿಸಿ ವಾರದ ಕಾಲ ಪ್ರತಿಭಟನೆಯನ್ನು ಘೋಷಿಸಿತ್ತು. ಗುರುವಾರ ರಾಷ್ಟ್ರದಾದ್ಯಂತ ಇದೇ ವಿಚಾರದಲ್ಲಿ ಪ್ರತಿಭಟನೆ ನಡೆದಿದೆ.
ಬಾಂಗ್ಲಾದೇಶದಲ್ಲಿ ಕಳೆದ 10 ದಿನಗಳಲ್ಲಿ ಕನಿಷ್ಠ 28 ಜಿಲ್ಲೆಗಳಲ್ಲಿ ಡಜನ್ಗಟ್ಟಲೆ ಕಚ್ಚಾ ಬಾಂಬ್ ಸ್ಫೋಟಗಳು ಮತ್ತು ವಾಹನಗಳಿಗೆ ಬೆಂಕಿ ಹಚ್ಚಿದ್ದರಿಂದ ಹಲವಾರು ಪೊಲೀಸ್ ಸಿಬ್ಬಂದಿ ಮತ್ತು ನಾಗರಿಕರು ಗಾಯಗೊಂಡಿದ್ದಾರೆ.
ಮುಹಮ್ಮದ್ ಯೂನುಸ್ ನಿವಾಸಕ್ಕೆ ಬೆಂಕಿ:
ಬಾಂಗ್ಲಾದೇಶದ ಮಧ್ಯಂತರ ಸರಕಾರದ ಮಾಜಿ ಮುಖ್ಯಸ್ಥ ಹಾಗೂ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಮುಹಮ್ಮದ್ ಯೂನುಸ್ ಅವರ ಪೂರ್ವಜರ ಮನೆಯಲ್ಲಿ ತಡರಾತ್ರಿ ಬೆಂಕಿ ಕಾಣಿಸಿಕೊಂಡಿದೆ. ಈ ಬೆಂಕಿಯನ್ನು ಉದ್ದೇಶಪೂರ್ವಕವಾಗಿ ಹಚ್ಚಿರುವ ಸಾಧ್ಯತೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪದಚ್ಯುತ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು ದೇಶಕ್ಕೆ ಮರಳುವ ಯೋಜನೆಯನ್ನು ಘೋಷಿಸಿದ ಬೆನ್ನಲ್ಲೇ ಬಾಂಗ್ಲಾದೇಶದಲ್ಲಿ ಹಿಂಸಾಚಾರ ಮತ್ತು ಆಸ್ತಿಪಾಸ್ತಿಗಳಿಗೆ ಹಾನಿ ಘಟನೆ ಹೆಚ್ಚಳವಾಗಿದೆ.
ಬುಧವಾರ ಮಧ್ಯರಾತ್ರಿ ಮುಹಮ್ಮದ್ ಯೂನುಸ್ ಅವರ ಪೂರ್ವಜರ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ರಾಜೀನಾಮೆಗೆ ಕಾರಣವಾದ ಬೃಹತ್ ಜನಾಂದೋಲನದ ಬಳಿಕ ಮುಹಮ್ಮದ್ ಯೂನುಸ್ ಅವರು 18 ತಿಂಗಳ ಕಾಲ ಬಾಂಗ್ಲಾದೇಶದ ಮಧ್ಯಂತರ ಸರಕಾರದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದರು.
ನವೆಂಬರ್ 7 ಮತ್ತು ನವೆಂಬರ್ 17 ರ ನಡುವೆ ಕನಿಷ್ಠ 70 ಕಚ್ಚಾ ಬಾಂಬ್ ಸ್ಫೋಟಗಳು ಸಂಭವಿಸಿದೆ ಮತ್ತು 57 ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ನವೆಂಬರ್ 1 ಮತ್ತು ನವೆಂಬರ್ 17 ರ ನಡುವೆ, ಅಶಾಂತಿಯಲ್ಲಿ ಭಾಗಿಯಾಗಿದ್ದಕ್ಕಾಗಿ 520ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ.
ಮಂಗಳವಾರ, ಹಸೀನಾ ಅವರ ತವರು ಜಿಲ್ಲೆ ಗೋಪಾಲ್ಗಂಜ್ ಬಳಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಆಡಳಿತಾರೂಢ ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಕ್ಷದ ಸದಸ್ಯರೊಬ್ಬರನ್ನು ಅಪರಿಚಿತ ವ್ಯಕ್ತಿಗಳು ಹತ್ಯೆ ಮಾಡಿದ್ದಾರೆ ಎಂದು ವರದಿಯಾಗಿದೆ.