ಭೂಮಿಯಿಂದ ಒಂದು ಬೆಳಕಿನ ದಿನ ದೂರ ಕ್ರಮಿಸಿ ದಾಖಲೆ ಬರೆದ 'ವಾಯೇಜರ್ 1'
Photo Credit ; NASA
ವಾಶಿಂಗ್ಟನ್: ನಾಸಾದ `ವಾಯೇಜರ್ 1' ಬುಧವಾರ ಭೂಮಿಯಿಂದ ಒಂದು ಜ್ಯೋತಿರ್ದಿನದ (ಬೆಳಕಿನ ದಿನ) ದೂರವನ್ನು ತಲುಪಿದ ಮಾನವಕುಲದ ಮೊದಲ ವಸ್ತುವಾಗಿ ಹೊರಹೊಮ್ಮಿದೆ. 49 ವರ್ಷಗಳ ಹಿಂದೆ ಉಡಾವಣೆಯಾದ ಈ ಬಾಹ್ಯಾಕಾಶ ನೌಕೆಯು 2,600 ಕೋಟಿ ಕಿಲೋಮೀಟರ್‌ಗಳಿಗೂ ಹೆಚ್ಚಿನ ದೂರ ಕ್ರಮಿಸಿ ದಾಖಲೆ ಬರೆದಿದೆ.
1977ರಲ್ಲಿ ಉಡಾವಣೆಯಾದ ಈ ರೋಬೋಟಿಕ್ ಗಗನನೌಕೆಯು, ಬುಧವಾರ ಬೆಳಿಗ್ಗೆ 5:16ಕ್ಕೆ (ಭಾರತೀಯ ಕಾಲಮಾನ ಮಧ್ಯಾಹ್ನ 3:46ಕ್ಕೆ) ಭೂಮಿಯಿಂದ ಒಂದು ಜ್ಯೋತಿರ್ದಿನದ ದೂರವನ್ನು (ಅಂದರೆ ಬೆಳಕು 24 ಗಂಟೆಗಳಲ್ಲಿ ಕ್ರಮಿಸುವ ಸುಮಾರು 2,600 ಕೋಟಿ ಕಿಲೋಮೀಟರ್ ದೂರ) ತಲುಪಿದೆ ಎಂದು ನಾಸಾ ಲೆಕ್ಕಹಾಕಿದೆ. ಗಂಟೆಗೆ ಸುಮಾರು 61,000 ಕಿ.ಮೀ ವೇಗದಲ್ಲಿ ಚಲಿಸುತ್ತಿರುವ ವಾಯೇಜರ್ 2012ರಲ್ಲಿ ಸೂರ್ಯನಿಂದ ಉತ್ಪತ್ತಿಯಾಗುವ ಕಣಗಳು ಮತ್ತು ಕಾಂತೀಯ ಕ್ಷೇತ್ರಗಳ ರಕ್ಷಣಾತ್ಮಕ ಗುಳ್ಳೆಯಾದ `ಹೀಲಿಯೋಸ್ಪಿಯರ್'ನ ಹೊರ ಅಂಚನ್ನು ದಾಟಿ ಅಂತರ್‍ತಾರಾ ಬಾಹ್ಯಾಕಾಶವನ್ನು ಪ್ರವೇಶಿಸಿತು. ವಾಯೇಜರ್ 1 ತನ್ನ ಕಾರ್ಯಾಚರಣೆಯ ಆರಂಭದಲ್ಲಿ ಸೌರಮಂಡಲದ ಎರಡು ಅತಿದೊಡ್ಡ ಗ್ರಹಗಳಾದ ಗುರು ಮತ್ತು ಶನಿ ಗ್ರಹಗಳನ್ನು ದಾಟಿ ಪ್ರಯಾಣಿಸಿತ್ತು. ಅದು ಈಗಲೂ ವೈಜ್ಞಾನಿಕ ದತ್ತಾಂಶಗಳನ್ನು ಸಂಗ್ರಹಿಸುತ್ತಲೇ ಇದೆ.