ಇರಾನ್ ಮೇಲಿನ ನಿರ್ಬಂಧಗಳ ಮೇಲ್ವಿಚಾರಣೆ ಕುರಿತ ವಿಶ್ವಸಂಸ್ಥೆ ನಿರ್ಣಯಕ್ಕೆ ರಶ್ಯ, ಚೀನಾ ತಡೆ: ಇರಾನ್‍ಗೆ ರಾಜತಾಂತ್ರಿಕ ಗೆಲುವು
Photo Credit : AP
ವಿಶ್ವಸಂಸ್ಥೆ: ಇರಾನ್ ಮೇಲಿನ ಅಂತಾರಾಷ್ಟ್ರೀಯ ನಿರ್ಬಂಧಗಳನ್ನು ಮೇಲ್ವಿಚಾರಣೆ ಮಾಡುವ ತಜ್ಞರ ಸಮಿತಿಯ ಅವಧಿಯನ್ನು ಮತ್ತೊಂದು ವರ್ಷ ವಿಸ್ತರಿಸುವ ಉದ್ದೇಶವನ್ನು ಹೊಂದಿದ್ದ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕರಡು ನಿರ್ಣಯವನ್ನು ರಶ್ಯ ಮತ್ತು ಚೀನಾ ವೀಟೋ (ವಿಶೇಷ ಅಧಿಕಾರ) ಚಲಾಯಿಸಿ ರದ್ದುಗೊಳಿಸಿವೆ. ಇದರಿಂದಾಗಿ ಸಮಿತಿಯ ಅವಧಿ ಮುಗಿದ ತಕ್ಷಣವೇ ಅದರ ಕಾರ್ಯನಿರ್ವಹಣೆ ಸ್ಥಗಿತಗೊಳ್ಳುತ್ತದೆ.
ಈ ಫಲಿತಾಂಶವು ಅಂತಾರಾಷ್ಟ್ರೀಯ ಮೇಲ್ವಿಚಾರಣಾ ವ್ಯವಸ್ಥೆಗಳನ್ನು ರದ್ದುಗೊಳಿಸುವಂತೆ ನಿರಂತರವಾಗಿ ಕರೆ ನೀಡುತ್ತಿದ್ದ ಇರಾನ್‍ಗೆ ರಾಜತಾಂತ್ರಿಕ ಗೆಲುವನ್ನು ಸೂಚಿಸುತ್ತದೆ.
ಅಮೆರಿಕ ರೂಪಿಸಿದ ಈ ನಿರ್ಣಯದ ಪರವಾಗಿ 11 ದೇಶಗಳು ಮತ ಚಲಾಯಿಸಿದವು ಮತ್ತು ಪಾಕಿಸ್ತಾನ ಸೇರಿದಂತೆ ಎರಡು ದೇಶಗಳು ಮತದಾನದಿಂದ ದೂರ ಉಳಿದವು. ಆದರೆ, ಕಾಯಂ ಸದಸ್ಯ ರಾಷ್ಟ್ರಗಳಾದ ರಶ್ಯ ಮತ್ತು ಚೀನಾ ವೀಟೊ ಚಲಾಯಿಸಿದ್ದರಿಂದ ನಿರ್ಣಯವು ವಿಫಲವಾಯಿತು.
ಇರಾನ್ ಮೇಲಿನ ವಿಶ್ವಸಂಸ್ಥೆಯ ನಿರ್ಬಂಧಗಳ ಅನುಸರಣೆಯನ್ನು ಪರಿಶೀಲಿಸುವ ಮತ್ತು ಸಂಭಾವ್ಯ ಉಲ್ಲಂಘನೆಗಳ ತನಿಖೆ ನಡೆಸುವ ತಜ್ಞರ ಸಮಿತಿಯ ಆಡಳಿತಾತ್ಮಕ ಮತ್ತು ತನಿಖಾ ಕಾರ್ಯಾಚರಣೆಗಳನ್ನು ನವೀಕರಿಸುವ ಉದ್ದೇಶವನ್ನು ಈ ನಿರ್ಣಯವು ಹೊಂದಿತ್ತು.
ಈ ಜಂಟಿ ವೀಟೋ, ಅಂತಾರಾಷ್ಟ್ರೀಯ ಪರಮಾಣು ನಿಯಂತ್ರಣ ಜಾರಿ ಮತ್ತು ಪ್ರಾದೇಶಿಕ ಭದ್ರತಾ ವಿಚಾರಗಳಲ್ಲಿ ಪಾಶ್ಚಿಮಾತ್ಯ ದೇಶಗಳು ಹಾಗೂ ಚೀನಾ-ರಶ್ಯ ಬಣಗಳ ನಡುವೆ ಬೆಳೆಯುತ್ತಿರುವ ಭಿನ್ನಾಭಿಪ್ರಾಯವನ್ನು ಎತ್ತಿ ತೋರಿಸುತ್ತದೆ. ಮೇಲ್ವಿಚಾರಣಾ ಸಂಸ್ಥೆಯನ್ನು ವಿಸರ್ಜಿಸುವುದರಿಂದ ಪಶ್ಚಿಮ ಏಷ್ಯಾದ ರಾಜತಾಂತ್ರಿಕತೆಯ ನಿರ್ಣಾಯಕ ಘಟ್ಟದಲ್ಲಿ ಜಾಗತಿಕ ಮೇಲ್ವಿಚಾರಣಾ ವ್ಯವಸ್ಥೆಯ ಸಾಮರ್ಥ್ಯ ಕುಸಿಯುತ್ತದೆ ಎಂದು ಪಾಶ್ಚಿಮಾತ್ಯ ರಾಜತಾಂತ್ರಿಕರು ವಾದಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ರಶ್ಯ ಮತ್ತು ಚೀನಾದ ಪ್ರತಿನಿಧಿಗಳು `ಪ್ರಸ್ತುತ ಇರುವ ಮೇಲ್ವಿಚಾರಣಾ ವ್ಯವಸ್ಥೆಗಳು ರಾಜಕೀಯ ಪ್ರೇರಿತವಾಗುತ್ತಿವೆ ಹಾಗೂ ಶಿಕ್ಷಾರ್ಹ ಮೇಲ್ವಿಚಾರಣಾ ಕ್ರಮಗಳು ರಚನಾತ್ಮಕ ರಾಜತಾಂತ್ರಿಕ ತೊಡಗಿಸಿಕೊಳ್ಳುವಿಕೆಯನ್ನು ಉತ್ತೇಜಿಸುವಲ್ಲಿ ವಿಫಲವಾಗುತ್ತವೆ ಎಂದು ವಾದಿಸಿದರು.
ತಜ್ಞರ ಸಮಿತಿಯ ವಿಸರ್ಜನೆಯು ಇರಾನ್‍ಗೆ ಸಂಬಂಧಿಸಿದ ಕಾನೂನುಬಾಹಿರ ವರ್ಗಾವಣೆಗಳು, ಮಿಲಿಟರಿ ತಂತ್ರಜ್ಞಾನಗಳು ಮತ್ತು ಅನುಸರಣೆ ವರದಿಗಳನ್ನು ದಾಖಲಿಸಲು ವಿಶ್ವಸಂಸ್ಥೆಗೆ ತೊಡಕಾಗಲಿದೆ. ಭದ್ರತಾ ಮಂಡಳಿಗೆ ನೇರವಾಗಿ ವರದಿ ಮಾಡುವ ಸ್ವತಂತ್ರ ಮೇಲ್ವಿಚಾರಣಾ ತಂಡವಿಲ್ಲದೆ, ನಿರ್ಬಂಧಗಳ ಉಲ್ಲಂಘನೆಯನ್ನು ಪತ್ತೆಹಚ್ಚುವುದು ಈಗ ಪ್ರತ್ಯೇಕ ರಾಷ್ಟ್ರಗಳ ಗುಪ್ತಚರ ಮೌಲ್ಯಮಾಪನಗಳನ್ನೇ ಹೆಚ್ಚು ಅವಲಂಬಿಸಿರುತ್ತದೆ ಎಂದು ಮಾಧ್ಯಮಗಳು ವಿಶ್ಲೇಷಿಸಿವೆ.