ವೆನೆಝುವೆಲಾದಲ್ಲಿ ಸರಣಿ ಭೂಕಂಪ : ಮೃತರ ಸಂಖ್ಯೆ 589ಕ್ಕೆ ಏರಿಕೆ
Photo Credit : AP , PTI
ಕಾರಾಕಾಸ್, ಜೂ.26: ವೆನೆಝುವೆಲಾದಲ್ಲಿ ಸಂಭವಿಸಿದ ಅವಳಿ ಭೂಕಂಪಗಳ ಅಧಿಕೃತ ಸಾವಿನ ಸಂಖ್ಯೆ 589 ಕ್ಕೆ ಏರಿಕೆಯಾಗಿದ್ದು 3 ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ರಕ್ಷಣಾ ಸಿಬ್ಬಂದಿ ಅವಶೇಷಗಳಡಿ ಸಿಲುಕಿರುವ ಬದುಕುಳಿದವರಿಗಾಗಿ ಹುಡುಕಾಟವನ್ನು ಮುಂದುವರೆಸಿದ್ದಾರೆ ಎಂದು ಅಲ್ಲಿನ ಮಧ್ಯಂತರ ಅಧ್ಯಕ್ಷೆ ಡೆಲ್ಸಿ ರೊಡ್ರಿಗಸ್ ತಿಳಿಸಿದ್ದಾರೆ.
ಕೆಲವು ಶಾಲಾ ಕಟ್ಟಡಗಳನ್ನು ಆಶ್ರಯ ಮತ್ತು ದೇಣಿಗೆ ಕೇಂದ್ರಗಳಾಗಿ ಪರಿವರ್ತಿಸಿರುವ ಹಿನ್ನೆಲೆಯಲ್ಲಿ ಹಲವಾರು ದಿನಗಳವರೆಗೆ ತರಗತಿಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ದೇಶದ ಶಿಕ್ಷಣ ಇಲಾಖೆ ಘೋಷಿಸಿದೆ.
ವೆನೆಝುವೆಲಾಗೆ ಸಹಾಯ ಮಾಡಲು ಕನಿಷ್ಠ 17 ದೇಶಗಳ ಅಂತರರಾಷ್ಟ್ರೀಯ ಹುಡುಕಾಟ ಮತ್ತು ರಕ್ಷಣಾ ತಂಡಗಳನ್ನು ನಿಯೋಜಿಸಲಾಗುತ್ತಿದೆ ಎಂದು ವಿಶ್ವಸಂಸ್ಥೆ ತಿಳಿಸಿದೆ. ತಂಡಗಳನ್ನು ಪೀಡಿತ ಪ್ರದೇಶಗಳಿಗೆ ತಲುಪಿಸುವುದು ಈಗ ಅತ್ಯಂತ ಪ್ರಮುಖ ಆದ್ಯತೆಯಾಗಿದೆ ಎಂದು ವಿಶ್ವಸಂಸ್ಥೆಯ ಮಾನವೀಯ ಸಂಸ್ಥೆಯಾದ `ಒಸಿಎಚ್‍ಎ' ಹೇಳಿದೆ.
ಸುಮಾರು 1,000 ರಕ್ಷಣಾ ಸಿಬ್ಬಂದಿಯನ್ನು ಒಳಗೊಂಡ ಒಟ್ಟು 25 ತಂಡಗಳನ್ನು (ಇದರಲ್ಲಿ 17 ರಾಷ್ಟ್ರೀಯ ಶೋಧ ಮತ್ತು ರಕ್ಷಣಾ ಘಟಕಗಳು ಹಾಗೂ ತುರ್ತು ವೈದ್ಯಕೀಯ ಪ್ರತಿಕ್ರಿಯೆ ತಂಡಗಳು ಸೇರಿವೆ) ನಿಯೋಜಿಸಲಾಗುತ್ತಿದೆ. ಚಿಲಿ, ಕೊಲಂಬಿಯಾ, ಎಲ್ ಸಾಲ್ವಡಾರ್, ಇಟಲಿ, ಮೆಕ್ಸಿಕೋ, ಸ್ವಿಟ್ಸರ್‍ಲ್ಯಾಂಡ್ ಮತ್ತು ಅಮೆರಿಕದ ತಂಡಗಳು ಈಗಾಗಲೇ ವೆನೆಝುವೆಲಾದಲ್ಲಿ ಕಾರ್ಯಪ್ರವೃತ್ತವಾಗಿವೆ. ಟರ್ಕಿ, ಬ್ರಿಟನ್, ಜೆಕ್ ಗಣರಾಜ್ಯ, ಈಕ್ವೆಡಾರ್, ಫ್ರಾನ್ಸ್, ಜರ್ಮನಿ, ಜೋರ್ಡಾನ್, ನೆದಲ್ಯಾರ್ಂಡ್ಸ್, ಖತರ್ ಮತ್ತು ಸ್ಪೇನ್ ಸೇರಿದಂತೆ ಇತರ ದೇಶಗಳ ತಂಡಗಳನ್ನು ಸಹ ಸಜ್ಜುಗೊಳಿಸಲಾಗುತ್ತಿದೆ ಎಂದು ಜಿನೀವಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಒಸಿಎಚ್‍ಎ ವಕ್ತಾರ ಜೆನ್ಸ್ ಲಾರ್ಕೆ ತಿಳಿಸಿದ್ದಾರೆ.