ಅಂತಿಮ ಒಪ್ಪಂದಕ್ಕೆ ಬರದಿದ್ದರೆ ಹಾರ್ಮುಝ್ ನಲ್ಲಿ ಟೋಲ್: ಟ್ರಂಪ್ ಎಚ್ಚರಿಕೆ
ಡೊನಾಲ್ಡ್ ಟ್ರಂಪ್ | Photo Credit : PTI
ವಾಷಿಂಗ್ಟನ್, ಜೂ.21: ಇರಾನ್ ಜೊತೆಗಿನ ಅಂತಿಮ ಒಪ್ಪಂದವು 60 ದಿನಗಳಲ್ಲಿ ಪೂರ್ಣಗೊಳ್ಳದಿದ್ದರೆ ಹಾರ್ಮುಝ್ ಜಲಸಂಧಿಯಲ್ಲಿ ಅಮೆರಿಕ ಟೋಲ್ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.
ಇರಾನ್ ಜೊತೆಗಿನ ಯುದ್ಧವನ್ನು ಕೊನೆಗೊಳಿಸುವ ಆರಂಭಿಕ ಒಪ್ಪಂದದ ಪ್ರಕಾರ, ಈ ಪ್ರಮುಖ ಜಲಮಾರ್ಗದಲ್ಲಿ 60 ದಿನಗಳವರೆಗೆ ಟೋಲ್‌ಮುಕ್ತ (ಉಚಿತ) ಸಂಚಾರಕ್ಕೆ ಅವಕಾಶ ನೀಡಲಾಗಿದೆ ಎಂಬುದನ್ನು ಟ್ರಂಪ್ ಒತ್ತಿ ಹೇಳಿದ್ದಾರೆ.
60 ದಿನಗಳ ಅವಧಿ ಮುಗಿದ ನಂತರ ಯಾವುದೇ ಟೋಲ್ ಇರುವುದಿಲ್ಲ. ಒಂದು ವೇಳೆ ಒಪ್ಪಂದವು ಪೂರ್ಣಗೊಳ್ಳದಿದ್ದರೆ ಅಮೆರಿಕ ಮಾತ್ರ ತನ್ನ ಪರವಾಗಿ ಟೋಲ್ ವಿಧಿಸಬಹುದಾಗಿದೆ. ಈ ಹಣವನ್ನು ‘ಮಧ್ಯಪ್ರಾಚ್ಯದ ದೇಶಗಳಿಗೆ ಗಾರ್ಡಿಯನ್ ಏಂಜೆಲ್ (ರಕ್ಷಕ ದೇವತೆ) ಆಗಿ ಸೇವೆ ಸಲ್ಲಿಸಿರುವುದಕ್ಕಾಗಿ ಹಾಗೂ ಅದಕ್ಕೆ ಸಂಬಂಧಿಸಿದ ಹಿಂದಿನ, ಪ್ರಸ್ತುತ ಮತ್ತು ಭವಿಷ್ಯದ ವೆಚ್ಚಗಳ ಮರುಪಾವತಿಗಾಗಿ’ ಬಳಸಲಾಗುವುದು ಎಂದು ಟ್ರಂಪ್ ಹೇಳಿದ್ದಾರೆ.
ಹಾರ್ಮುಝ್ ಜಲಸಂಧಿಯ ಮೂಲಕ ವಾಣಿಜ್ಯ ಹಡಗುಗಳನ್ನು ಸುರಕ್ಷಿತವಾಗಿ ಮಾರ್ಗದರ್ಶನ ಮಾಡಲು ಸಹಾಯ ಮಾಡಿದ ಅಮೆರಿಕ ಮಿಲಿಟರಿ ಉಪಕ್ರಮವನ್ನು ಟ್ರಂಪ್ ಉಲ್ಲೇಖಿಸಿರಬಹುದು ಎಂದು ಮಾಧ್ಯಮಗಳು ವಿಶ್ಲೇಷಿಸಿವೆ.