×
Ad

ಸ್ವಿಟ್ಜರ್ಲ್ಯಾಂಡ್ ನಲ್ಲಿ ಅಮೆರಿಕ–ಇರಾನ್ ಮಾತುಕತೆ ಆರಂಭ

Update: 2026-06-21 20:59 IST

Photo : PTI

ಬರ್ನ್, ಜೂ.21: ಮಧ್ಯಪ್ರಾಚ್ಯ ಯುದ್ಧಕ್ಕೆ ಶಾಶ್ವತ ಅಂತ್ಯ ಹಾಡುವ ಉದ್ದೇಶದಿಂದ ಸ್ವಿಟ್ಜರ್ಲ್ಯಾಂಡ್ ನಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ಮಾತುಕತೆಗಳು ಆರಂಭವಾಗಿರುವುದನ್ನು ಮಧ್ಯಸ್ಥಿಕೆ ವಹಿಸಿರುವ ದೇಶವಾದ ಖತರ್ ರವಿವಾರ ದೃಢಪಡಿಸಿದೆ.

‘ಅಮೆರಿಕ ಸಂಯುಕ್ತ ಸಂಸ್ಥಾನ, ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ಮತ್ತು ಮಧ್ಯಸ್ಥಿಕೆ ವಹಿಸಿರುವ ಎರಡು ರಾಷ್ಟ್ರಗಳಾದ ಖತರ್ ಹಾಗೂ ಇಸ್ಲಾಮಿಕ್ ರಿಪಬ್ಲಿಕ್ ಆಫ್ ಪಾಕಿಸ್ತಾನದ ಪ್ರತಿನಿಧಿಗಳ ಭಾಗವಹಿಸುವಿಕೆಯೊಂದಿಗೆ ‘ಲೇಕ್ ಲುಸರ್ನ್ ಶೃಂಗಸಭೆ’ ಮತ್ತು ಉನ್ನತ ಮಟ್ಟದ ಸಮಿತಿಯ ಮೊದಲ ಸಭೆಯು ಆರಂಭವಾಗಿದೆ’ ಎಂದು ಖತರ್‌ನ ವಿದೇಶಾಂಗ ಸಚಿವಾಲಯ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಈ ವಾರದ ಆರಂಭದಲ್ಲಿ ಅಮೆರಿಕ ಮತ್ತು ಇರಾನ್ ಸಹಿ ಹಾಕಿದ್ದ ತಿಳುವಳಿಕಾ ಒಪ್ಪಂದದಲ್ಲಿ ಉಲ್ಲೇಖಿಸಲಾದ ಎಲ್ಲಾ ಅಂಶಗಳನ್ನು ಒಳಗೊಂಡ ‘ಸಮಗ್ರ ಮತ್ತು ಸುದೀರ್ಘಾವಧಿಯ ಒಪ್ಪಂದ’ಕ್ಕೆ ಈ ಸಭೆಗಳು ದಾರಿ ಮಾಡಿಕೊಡಲಿವೆ ಎಂದು ಕತರ್ ಆಶಯ ವ್ಯಕ್ತಪಡಿಸಿದೆ.

ಇರಾನ್ ಜೊತೆಗಿನ ಪ್ರಸ್ತುತ ತಾಂತ್ರಿಕ ಮಾತುಕತೆಗಳು ಪ್ರತಿಯೊಂದು ಭಿನ್ನಾಭಿಪ್ರಾಯವನ್ನೂ ಬಗೆಹರಿಸದೇ ಇರಬಹುದು. ಆದರೆ ಉಭಯ ದೇಶಗಳನ್ನು ನೇರ ತಂಡ-ಮಟ್ಟದ ಮಾತುಕತೆಗೆ ಒಟ್ಟಿಗೆ ತರುವ ಮೂಲಕ ಈಗಾಗಲೇ ಐತಿಹಾಸಿಕ ಮುನ್ನಡೆಯೊಂದು ಸಾಧಿಸಲಾಗಿದೆ ಎಂದು ಅಮೆರಿಕದ ನಿಯೋಗದ ನೇತೃತ್ವ ವಹಿಸಿರುವ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಹೇಳಿದ್ದಾರೆ.

ಲೆಬನಾನ್ ಸಂಘರ್ಷ ಮತ್ತು ಟೆಹ್ರಾನ್‌ನ ಮುಟ್ಟುಗೋಲು ಹಾಕಿಕೊಳ್ಳಲಾದ ಆಸ್ತಿಗಳ ಬಿಡುಗಡೆಗೆ ಸಂಬಂಧಿಸಿದಂತೆ ಅಮೆರಿಕ ಮತ್ತು ಕತರ್ ಒಳಗೊಂಡ ತ್ರಿಪಕ್ಷೀಯ ಸಭೆಯಲ್ಲಿ ಚರ್ಚೆ ನಡೆಯುತ್ತಿದೆ ಎಂದು ಇರಾನ್‌ನ ಸರ್ಕಾರಿ ಸ್ವಾಮ್ಯದ ಮಾಧ್ಯಮ ವರದಿ ಮಾಡಿದೆ. ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಹಾಗೂ ಸೇನಾ ಮುಖ್ಯಸ್ಥ ಆಸಿಮ್ ಮುನೀರ್ ಅವರೂ ಮಾತುಕತೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News