2023ರ ದಾಳಿಗೂ ಮುನ್ನವೇ ಹಮಾಸ್ ಸಂಚಿನ ಬಗ್ಗೆ ನೆತನ್ಯಾಹುಗೆ ಎಚ್ಚರಿಸಿದ್ದ UAE
► ಮಾಹಿತಿಯನ್ನು ಭದ್ರತಾ ಅಧಿಕಾರಿಗಳೊಂದಿಗೆ ಹಂಚಿಕೊಳ್ಳದ ಇಸ್ರೇಲ್ ಪ್ರಧಾನಿ!
ಬೆಂಜಮಿನ್ ನೆತನ್ಯಾಹು | Photo Credit : PTI
ಟೆಲ್ಅವೀವ್, ಸೆ. 8: 2023ರ ಅಕ್ಟೋಬರ್ 7ರಂದು ಇಸ್ರೇಲ್ ನಲ್ಲಿ ಹಮಾಸ್ ದಾಳಿ ನಡೆಸುವುದಕ್ಕೆ ಸುಮಾರು ಒಂದೂವರೆ ವಾರ ಮೊದಲು, UAE ಅಧ್ಯಕ್ಷ ಮೊಹಮ್ಮದ್ ಬಿನ್ ಝಾಯೆದ್ ಅವರು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಿ, ಗಾಝಾದಲ್ಲಿನ ಹಮಾಸ್ ನ ಮಾಜಿ ನಾಯಕ ಯಾಹ್ಯಾ ಸಿನ್ವರ್ ಇಸ್ರೇಲ್ ನಲ್ಲಿ ‘ಭೂಕಂಪ ಸದೃಶ’ವಾದಂತಹ ಭೀಕರ ದಾಳಿಯೊಂದನ್ನು ನಡೆಸಲು ಸಂಚು ಹೂಡಿರುವುದಾಗಿ ಎಚ್ಚರಿಸಿದ್ದರೆಂದು ಇಸ್ರೇಲಿ ಸುದ್ದಿಸಂಸ್ಥೆ ‘ಹಾರೆಟ್ಝ್’ ಮಂಗಳವಾರ ವರದಿ ಮಾಡಿದೆ.
ಆದರೆ, ನೆತನ್ಯಾಹು ಅವರು ಈ ಮಾಹಿತಿಗೆ ಸಂಬಂಧಿಸಿ ಸಕಾಲದಲ್ಲಿ ಕಾರ್ಯಪ್ರವೃತ್ತರಾಗಲಿಲ್ಲ. ಮಾತ್ರವಲ್ಲದೆ, UAE ಅಧ್ಯಕ್ಷರ ಜೊತೆ ತಾನು ನಡೆಸಿದ 45 ನಿಮಿಷಗಳ ಮಾತುಕತೆಯ ವಿವರಗಳನ್ನು ಇಸ್ರೇಲ್ ನ ಹಿರಿಯ ಭದ್ರತಾ ಅಧಿಕಾರಿಗಳಿಗೂ ಬಹಿರಂಗಪಡಿಸಲಿಲ್ಲವೆಂದು ವರದಿ ತಿಳಿಸಿದೆ.
ಇಸ್ರೇಲ್ ನಲ್ಲಿ ಹಮಾಸ್ ದಾಳಿ ನಡೆಯುವುದಕ್ಕೆ ಒಂದೂವರೆ ವಾರ ಮೊದಲೇ ನೆತನ್ಯಾಹು ಅವರಿಗೆ ಝಾಯೆದ್ ಈ ಎಚ್ಚರಿಕೆಯನ್ನು ನೀಡಿದ್ದರು. ಏನೋ ಒಂದು ಭಾರೀ ಅಪಾಯವು ಸ್ಫೋಟಗೊಳ್ಳಲಿದೆ ಎಂದು ಅವರು ಇಸ್ರೇಲ್ ಪ್ರಧಾನಿಗೆ ತಿಳಿಸಿದ್ದರೆನ್ನಲಾಗಿದೆ. ಆದರೆ, ಅಚ್ಚರಿಯೆಂಬಂತೆ ನೆತನ್ಯಾಹು ಅವರು ಈ ಎಚ್ಚರಿಕೆಗೆ ಶಾಂತಭಾವದಿಂದ ಪ್ರತಿಕ್ರಿಯಿಸಿದ್ದರೆಂದು ಸಂಭಾಷಣೆಯ ಸಂದರ್ಭ ಉಪಸ್ಥಿತರಿದ್ದ ಬಿನ್ ಝಾಯೆದ್ ಅವರ ಫೆಲೆಸ್ತೀನಿಯನ್ ಸಲಹೆಗಾರರೊಬ್ಬರು ಹಾರೆಟ್ಝ್ಗೆ ತಿಳಿಸಿದ್ದಾರೆ.
ಹಮಾಸ್ ಏನಿದ್ದರೂ ಪಶ್ಚಿಮದಂಡೆ ಪ್ರದೇಶದಲ್ಲಷ್ಟೇ ಕಾರ್ಯಾಚರಣೆ ನಡೆಸಬಹುದು ಮತ್ತು ಅಂತಹ ಯಾವುದೇ ಸನ್ನಿವೇಶವನ್ನು ಎದುರಿಸಲು ಇಸ್ರೇಲ್ ಸಿದ್ಧವಾಗಿದೆಯೆಂದು ನೆತನ್ಯಾಹು ಅವರು ಝಾಯೆದ್ ಅವರಿಗೆ ತಿಳಿಸಿದ್ದರು ಎನ್ನಲಾಗಿದೆ. ನೆತನ್ಯಾಹು ಜೊತೆಗೆ ತನ್ನ ದೂರವಾಣಿ ಮಾತುಕತೆಯ ವಿವರಗಳನ್ನು ಬಿನ್ ಝಾಯೆದ್ ಅವರು ಸಿಐಎ ನಿರ್ದೇಶಕ ವಿಲಿಯಂ ಜೆ. ಬರ್ನ್ಸ್ ಜೊತೆಗೆ ಇತ್ತೀಚೆಗೆ ನಡೆಸಿದ ಮಾತುಕತೆಯ ಸಂದರ್ಭ ನೆನಪಿಸಿಕೊಂಡಿದ್ದರು. ತಾನು ನೀಡಿದ್ದ ಎಚ್ಚರಿಕೆ ಸಂದೇಶಕ್ಕೆ ನೆತನ್ಯಾಹು ಅವರು ಮಿತವಾದ ಪ್ರತಿಕ್ರಿಯೆಯನ್ನು ನೀಡಿದ್ದರೂ, ಅವರು ಈ ಸಂದೇಶವನ್ನು ಗಂಭೀರವಾಗಿ ಪರಿಗಣಿಸುವರು ಹಾಗೂ ಸೂಕ್ತ ಕ್ರಮವನ್ನು ಕೈಗೊಳ್ಳುವರೆಂದು ಬಿನ್ ಝಾಯೆದ್ ಅವರು ಆಶಿಸಿದ್ದರೆಂದು ಹಾರೆಟ್ಝ್ ಸುದ್ದಿಸಂಸ್ಥೆಗೆ UAE ಅಧ್ಯಕ್ಷರ ಸಲಹೆಗಾರರೊಬ್ಬರು ತಿಳಿಸಿದ್ದಾರೆ.
ಆದಾಗ್ಯೂ, ನೆತನ್ಯಾಹು ಅವರು ಬಿನ್ ಝಾಯೆದ್ ಅವರು ನೀಡಿದ ಮಾಹಿತಿಯನ್ನು ಇಸ್ರೇಲಿನ ಭದ್ರತಾ ಸಂಸ್ಥೆಗಳಾದ ಶಿನ್ ಬೆಟ್, ಮೊಸ್ಸಾದ್ ಸೇರಿದಂತೆ ಯಾವುದೇ ಭದ್ರತಾ ಸಂಸ್ಥೆಗಳ ಮುಖ್ಯಸ್ಥರು ಅಥವಾ ಸೇನಾಪಡೆಗಳ ವರಿಷ್ಠರ ಜೊತೆಗಾಗಲಿ ಈ ಮಾತುಕತೆಯ ವಿವರಗಳನ್ನು ತಿಳಿಸಿಲ್ಲವೆಂದು ವರದಿ ತಿಳಿಸಿದೆ.
ಹಾರೆಟ್ಝ್ ನ ವರದಿಯನ್ನು ಇಸ್ರೇಲ್ ಪ್ರಧಾನಿಯವರ ಕಾರ್ಯಾಲಯ ತಳ್ಳಿಹಾಕಿದ್ದು, ವರದಿಯು ಅಪ್ಪಟ ಸುಳ್ಳು ಎಂಬುದಾಗಿ ಹೇಳಿದೆ.