ʼಸುಂಟರಗಾಳಿಗೆ ಮೊದಲು ಶಾಂತವಾಗಿರುತ್ತದೆʼ: ಇರಾನ್ ಮೇಲೆ ಅಮೆರಿಕದ ಸಂಭಾವ್ಯ ದಾಳಿ ಕುರಿತ ವರದಿ ಮಧ್ಯೆ AI ರಚಿತ ಚಿತ್ರದೊಂದಿಗೆ ಟ್ರಂಪ್ ಪೋಸ್ಟ್
Photo source: truthsocial.com/@realDonaldTrump
ವಾಷಿಂಗ್ಟನ್: ಇರಾನ್ ವಿರುದ್ಧ ಅಮೆರಿಕ ಮತ್ತೆ ದಾಳಿ ನಡೆಸಬಹುದು ಎಂಬ ಊಹಾಪೋಹಗಳ ನಡುವೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ʼಸುಂಟರಗಾಳಿಗೆ ಮೊದಲು ಶಾಂತವಾಗಿರುತ್ತದೆʼ ಎಂದು ಪೋಸ್ಟ್ ಮಾಡಿದ್ದಾರೆ.
ಈ ಕುರಿತು ಟ್ರೂತ್ ಸೋಶಿಯಲ್ ನಲ್ಲಿ AI- ರಚಿತ ಚಿತ್ರದೊಂದಿಗೆ ಟ್ರಂಪ್ ಪೋಸ್ಟ್ ಮಾಡಿದ್ದಾರೆ. ಚಿತ್ರದಲ್ಲಿ ನೌಕಾಪಡೆಯ ಅಡ್ಮಿರಲ್ ಪಕ್ಕದಲ್ಲಿ “Make America Great Again” ಎಂದು ಬರೆದಿರುವ ಟೋಪಿ ಧರಿಸಿ ಟ್ರಂಪ್ ನಿಂತುಕೊಂಡಿದ್ದಾರೆ. ಅದರ ಹಿಂದೆ ಯುದ್ಧನೌಕೆಗಳು ಮತ್ತು ಇರಾನ್ ಧ್ವಜ ಹೊತ್ತ ಹಡಗುಗಳಿರುವುದು ಕಂಡು ಬಂದಿದೆ.
ಶಾಂತಿ ಒಪ್ಪಂದ ಶೀಘ್ರದಲ್ಲೇ ಆಗದಿದ್ದರೆ "ಇರಾನ್ ತುಂಬಾ ಕೆಟ್ಟ ಕಾಲ" ಎದುರಿಸಲಿದೆ ಎಂದು ಟ್ರಂಪ್ ಇತ್ತೀಚೆಗೆ ಹೇಳಿದ್ದರು. "ಅವರು ಒಪ್ಪಂದಕ್ಕೆ ಬರಲು ಆಸಕ್ತಿ ಹೊಂದಿದ್ದಾರೆ" ಎಂದು ಟ್ರಂಪ್ ಫ್ರೆಂಚ್ ಮಾಧ್ಯಮಕ್ಕೆ ನೀಡಿದ ದೂರವಾಣಿ ಸಂದರ್ಶನದಲ್ಲಿ ಹೇಳಿದ್ದರು.
ಇರಾನ್-ಅಮೆರಿಕ ನಡುವಿನ ಯುದ್ಧ ಕೊನೆಗೊಳಿಸುವ ಕುರಿತ ಪಾಕಿಸ್ತಾನದ ಮಧ್ಯಸ್ಥಿಕೆಯ ಮಾತುಕತೆಯಲ್ಲಿ ಯಾವುದೇ ಪ್ರಗತಿ ಕಂಡು ಬಂದಿಲ್ಲ. ಹಾರ್ಮುಝ್ ಜಲಸಂಧಿಯ ಮೇಲೆ ಇರಾನ್ ತನ್ನ ಹಿಡಿತವನ್ನು ಮುಂದುವರಿಸಿದೆ. ಈ ಮಧ್ಯೆ ಟ್ರಂಪ್ ಮಾಡಿರುವ ಪೋಸ್ಟ್ ಕುತೂಹಲ ಮೂಡಿಸಿದೆ.