ಡ್ರೋನ್ ದಾಳಿ ಬಳಿಕ ಅಬುಧಾಬಿಯ ಪರಮಾಣು ವಿದ್ಯುತ್ ಸ್ಥಾವರದಲ್ಲಿ ಕಾಣಿಸಿಕೊಂಡ ಬೆಂಕಿ: ವರದಿ
ಸಾಂದರ್ಭಿಕ ಚಿತ್ರ |Photo Credit : aljazeera.com
ಅಬುದಾಭಿ,ಮೇ 16: ಅಮೆರಿಕ-ಇರಾನ್ ಕದನ ವಿರಾಮದ ಬಗ್ಗೆ ಅನಿಶ್ಚಿತತೆ ಮೂಡಿರುವ ನಡುವೆಯೇ, ಯುಎಇನ ಅಲ್ ಧಾಫ್ರಾ ಪ್ರಾಂತದಲ್ಲಿರುವ ಬರಖಾ ಅಣುವಿದ್ಯುತ್ ಸ್ಥಾವರದ ಮೇಲೆ ರವಿವಾರ ಡ್ರೋನ್ ದಾಳಿ ನಡೆದಿದ್ದು, ವಿದ್ಯುತ್ ಜನರೇಟರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆಯೆಂದು ಅಬುದಾಭಿಯ ಮಾಧ್ಯಮ ಕಚೇರಿಯ ವರದಿಯೊಂದು ತಿಳಿಸಿದೆ.
ದಾಳಿಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಹಾಗೂ ಅಣುವಿದ್ಯುತ್ ಸ್ಥಾವರದ ಹೊರವಲಯದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸ್ಥಾವರದ ವಿಕಿರಣ ಸುರಕ್ಷತಾ ಮಟ್ಟಗಳ ಮೇಲೆ ಯಾವುದೇ ಪರಿಣಾಮವಾಗಿಲ್ಲವೆಂದು ಯುಎಇನ ಅಣುಶಕ್ತಿ ನಿಯಂತ್ರಣ ಕುರಿತ ಫೆಡರಲ್ ಪ್ರಾಧಿಕಾರ ತಿಳಿಸಿದೆ. ಸ್ಥಾವರದ ಪ್ರಮುಖ ವ್ಯವಸ್ಥೆಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ ಎಂದು ಇಲಾಖೆಯ ಹೇಳಿಕೆ ತಿಳಿಸಿದೆ.
ಶಂಕಿತ ಡ್ರೋನ್ ದಾಳಿಯನ್ನು ಯಾರು ನಡೆಸಿದ್ದಾರೆಂಬುದನ್ನು ಯುಎಇ ತನ್ನ ಹೇಳಿಕೆಯಲ್ಲಿ ಬಹಿರಂಗಪಡಿಸಿಲ್ಲ.
ಇಸ್ರೇಲ್-ಅಮೆರಿಕ ಹಾಗೂ ಇರಾನ್ ಸಂಘರ್ಷ ಸಂದರ್ಭ ಯುಎಇ ಹಲವಾರು ಕ್ಷಿಪಣಿ ಹಾಗೂ ಡ್ರೋನ್ ದಾಳಿಗಳನ್ನು ಎದುರಿಸಿತ್ತು.
ಹಾರ್ಮುಝ್ ಜಲಸಂಧಿಯನ್ನು ಅವಲಂಭಿಸದೆಯೇ ಯುಎಇ, ತೈಲ ರಫ್ತನ್ನು ಹೆಚ್ಚಿಸುವುದಕ್ಕೆ ನೆರವಾಗಲಿವ ಪೈಪ್ಲೈನ್ ಯೋಜನೆಯನ್ನು ಯುಎಇ ತ್ವರಿತಗೊಳಿಸಿರುವ ಸಮಯದಲ್ಲೇ ಈ ದಾಳಿ ನಡೆದಿರುವುದು ಗಮನಾರ್ಹವಾಗಿದೆ.
ಅಬುದಾಭಿಯ ಯುವರಾಜ ಶೇಖ್ ಖಾಲಿದ್ ಬಿನ್ ಮೊಹಮ್ಮದ್ ಬಿನ್ ಝಾಯೆದ್ ಅಲ್ನಹ್ಯಾನ್ ಅವರು ಪೈಪ್ಲೈನ್ ಯೋಜನೆಯನ್ನು ತ್ವರಿತಗೊಳಿಸಲು ಸಾರ್ವಜನಿಕ ರಂಗದ ತೈಲ ಕಂಪೆನಿ ಎಡಿಎನ್ಓಸಿಗೆ ಸೂಚನೆಯನ್ನು ನೀಡಿದ್ದರೆಂದು ಅಬುದಾಭಿ ಮಾಧ್ಯಮ ಕಚೇರಿ ತಿಳಿಸಿದೆ.
ಫುಜೈರಾ ಮೂಲಕ ಸಾಗುವ ನೂತನ ಪೈಪ್ಲೈನ್ ಸಂಸ್ಥೆಯ ತೈಲ ರಫ್ತು ಸಾಮರ್ಥ್ಯವನ್ನು ದುಪ್ಪಟ್ಟುಗೊಳಿಸಲಿದೆ ಹಾಗೂ ಮುಂದಿನ ವರ್ಷ ಕಾರ್ಯಾರಂಭಿಸಲು ಸಜ್ಜಾಗಿದೆ.
ಅಮೆರಿಕ-ಇರಾನ್ ಸಂಘರ್ಷದಲ್ಲಿ ನಾಲ್ಕು ರಿಯಾಕ್ಟರ್ಗಳನ್ನು ಹೊಂದಿರುವ ಬರಾಖಾ ಅಣು ವಿದ್ಯುತ್ ಸ್ಥಾವರವನ್ನು ಗುರಿಯಿರಿಸಿ ದಾಳಿ ನಡೆಸಿರುವುದು ಇದು ಮೊದಲಾಗಿದೆ. ಅಬುದಾಬಿಯ ಪಶ್ಚಿಮ ಭಾಗದ ಮರುಭೂಮಿ ಪ್ರದೇಶದಲ್ಲಿ ಈ ಅಣುವಿದ್ಯುತ್ ಸ್ಥಾವರವಿದ್ದು, ಸೌದಿ ಆರೇಬಿಯದ ಗಡಿಯ ಸನಿಹದಲ್ಲಿದೆ.
ಅಮೆರಿಕ-ಇರಾನ್ ಸಂಘರ್ಷದ ಸಂದರ್ಭ ತನ್ನ ಬಶೇರಾ ಅಣುವಿದ್ಯುತ್ ಸ್ಥಾವರದ ಮೇಲೆ ದಾಳಿ ನಡೆಸಲಾಗಿದೆಯೆಂದು ಟೆಹ್ರಾನ್ ಪದೇ ಪದೇ ಹೇಳಿಕೊಳ್ಳುತ್ತಲೇ ಬಂದಿತ್ತು. ಆದಾಗ್ಯೂ ಆ ಅಣು ವಿದ್ಯುತ್ ಸ್ಥಾವರಕ್ಕೆ ನೇರವಾಗಿ ಹಾನಿಯಾಗಿರಲಿಲ್ಲ ಮತ್ತು ಅಣುವಿಕಿರಣ ಸೋರಿಕೆಯಾಗಿರಲಿಲ್ಲ.
ಡ್ರೋನ್ ದಾಳಿಯ ಬಳಿಕ ಬರಖಾ ಅಣುವಿದ್ಯುತ್ ಸ್ಥಾವರದಲ್ಲಿ ಯಾವುದೇ ವಿಕಿರಣ ಸೋರಿಕೆ ಅಪಾಯವುಂಟಾಗಿಲ್ಲವೆಂದು ಅಂತಾರಾಷ್ಟ್ರೀಯ ಅಣುಶಕ್ತಿ ಏಜೆನ್ಸಿ(ಏಎಇಎ) ತಿಳಿಸಿದೆ. ಪರಿಸ್ಥಿತಿಯನ್ನು ತಾವು ನಿಕಟವಾಗಿ ಅವಲೋಕಿಸುತ್ತಿದ್ದು, ಅಗತ್ಯವಿದ್ದಲ್ಲಿ ನೆರವು ನೀಡಲು ತಾನು ಸಿದ್ಧನಿರುವುದಾಗಿ ತಿಳಿಸಿದೆ.
ಬರಖಾ ಅಣುವಿದ್ಯುತ್ ಸ್ಥಾವರವನ್ನು ದಕ್ಷಿಣ ಕೊರಿಯದ ನೆರವಿನೊಂದಿಗೆ ಯುಎಇ 20 ಶತಕೋಟಿ ಡಾಲರ್ ವೆಚ್ಚದಲ್ಲಿ ನಿರ್ಮಿಸಿದ್ದು, 2020ರಿಂದ ಕಾರ್ಯಾಚರಿಸುತ್ತಿದೆ. ಆರೇಬಿಯ ಪರ್ಯಾಯ ದ್ವೀಪದಲ್ಲಿರುವ ಏಕೈಕ ಅಣುಸ್ಥಾವರ ಇದಾಗಿದೆ.