ಹಾರ್ಮುಝ್ ಜಲಸಂಧಿ ವಿಚಾರದಲ್ಲಿ ಒಮಾನ್ ಮಧ್ಯಪ್ರವೇಶಿಸಿದರೆ ಬಾಂಬ್ ದಾಳಿ: ಟ್ರಂಪ್ ಎಚ್ಚರಿಕೆ

Update: 2026-08-17 20:28 IST

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (File Photo: PTI)

ವಾಷಿಂಗ್ಟನ್: ಹಾರ್ಮುಝ್ ಜಲಸಂಧಿಗೆ ಸಂಬಂಧಿಸಿದ ಅಮೆರಿಕ–ಇರಾನ್ ಸಂಘರ್ಷದಲ್ಲಿ ಒಮಾನ್ ಮಧ್ಯಪ್ರವೇಶಿಸಿದರೆ, ಆ ದೇಶದ ಮೇಲೆ ಬಾಂಬ್ ದಾಳಿ ನಡೆಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಎಚ್ಚರಿಕೆ ನೀಡಿದ್ದಾರೆ.

ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧ ವಿರಾಮ ಕೊನೆಗೊಳ್ಳಲು ಇನ್ನು ಕೆಲವೇ ದಿನಗಳು ಬಾಕಿ ಇರುವಾಗ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ. ಸೋಮವಾರ ಫಾಕ್ಸ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಅವರು ಒಮಾನ್‌ಗೆ ಈ ಎಚ್ಚರಿಕೆ ನೀಡಿದ್ದಾರೆ.

‘ಒಮಾನ್ ಏನಾದರೂ ಮಧ್ಯಪ್ರವೇಶಿಸಿದರೆ, ಅದರ ಮೇಲೆ ಬಾಂಬ್ ದಾಳಿ ನಡೆಸುತ್ತೇವೆ’ ಎಂದು ಟ್ರಂಪ್ ಹೇಳಿದ್ದಾರೆ.

ಹಾರ್ಮುಝ್ ಜಲಸಂಧಿಯ ಮೂಲಕ ಸರಕು ಸಾಗಣೆ ಹಡಗುಗಳು ಸಂಚರಿಸಲು ಅನುಕೂಲವಾಗುವಂತೆ ತಾತ್ಕಾಲಿಕ ವ್ಯವಸ್ಥೆ ಮಾಡಿಕೊಳ್ಳಲು ಇರಾನ್‌ನ ರಾಜತಾಂತ್ರಿಕರು ಕಳೆದ ಕೆಲವು ವಾರಗಳಿಂದ ಒಮಾನ್‌ನೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ.

ಮಧ್ಯಪ್ರಾಚ್ಯದ ಸಂಘರ್ಷದಲ್ಲಿ ಹಾರ್ಮುಝ್ ಜಲಸಂಧಿ ಪ್ರಮುಖ ಸಂಘರ್ಷದ ಕೇಂದ್ರವಾಗಿದೆ. ಈ ಜಲಸಂಧಿಯ ಮೇಲೆ ನಿಯಂತ್ರಣ ಸಾಧಿಸುವ ವಿಚಾರದಲ್ಲಿ ಇರಾನ್ ಮತ್ತು ಒಮಾನ್ ನಡುವೆ ಸಮಾನಾಂತರ ಮಾತುಕತೆಗಳು ನಡೆಯುತ್ತಿವೆ ಎಂಬ ಬಗ್ಗೆ ಟ್ರಂಪ್‌ಗೆ ಪ್ರಶ್ನೆ ಕೇಳಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಅವರು, ಒಮಾನ್ ಸಂಘರ್ಷದಲ್ಲಿ ಮಧ್ಯಪ್ರವೇಶಿಸಿದರೆ ಬಾಂಬ್ ದಾಳಿ ನಡೆಸುವುದಾಗಿ ಎಚ್ಚರಿಸಿದರು.

ಇದೇ ವೇಳೆ, ಇರಾನ್‌ಗೆ ಶರಣಾಗುವಂತೆ ಟ್ರಂಪ್ ಸೂಚಿಸಿದ್ದಾರೆ. ‘ಶರಣಾಗತಿಯ ಶ್ವೇತ ಬಾವುಟವನ್ನು ಹಾರಿಸಿ’ ಎಂದು ಅವರು ಇರಾನ್‌ಗೆ ಹೇಳಿದ್ದಾರೆ ಎಂದು ಫಾಕ್ಸ್ ನ್ಯೂಸ್‌ನ ಪತ್ರಕರ್ತ ಟ್ರೇ ಯಿಂಗ್ಸ್ಟ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

‘ಅವರು ಉತ್ತಮ ಪೋಕರ್ ಆಟಗಾರರು. ಆದರೆ, ಅವರು ಸಾಯುತ್ತಿದ್ದಾರೆ’ ಎಂದೂ ಟ್ರಂಪ್ ಸಂದರ್ಶನದಲ್ಲಿ ಹೇಳಿದ್ದಾರೆ ಎಂದು ಯಿಂಗ್ಸ್ಟ್ ತಮ್ಮ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News