×
Ad

ಇರಾನ್ ವಿರುದ್ಧದ ಯುದ್ಧದ ನಡುವೆ ಯುಎಇಗೆ ‘ರಹಸ್ಯ ಭೇಟಿ’ ನೀಡಿದ ನೆತನ್ಯಾಹು!

ವರದಿ ತಳ್ಳಿಹಾಕಿದ UAE

Update: 2026-05-14 11:50 IST

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು (Photo: PTI)

ಅಬುಧಾಬಿ: ಇರಾನ್ ವಿರುದ್ಧ ಅಮೆರಿಕ–ಇಸ್ರೇಲ್ ನಡೆಸಿದ ಯುದ್ಧ ಕಾರ್ಯಾಚರಣೆಯ ಅವಧಿಯಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಯುನೈಟೆಡ್ ಅರಬ್ ಎಮಿರೇಟ್ಸ್‌ (ಯುಎಇ) ಗೆ ‘ರಹಸ್ಯ ಭೇಟಿ’ ನೀಡಿದ್ದರು ಎಂಬ ವರದಿಯನ್ನು ಯುಎಇ ಸರ್ಕಾರ ನಿರಾಕರಿಸಿದೆ.

ಯುಎಇ ಸರ್ಕಾರದ ಅಧಿಕೃತ ಸುದ್ದಿ ಸಂಸ್ಥೆ WAM ಬುಧವಾರ ರಾತ್ರಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, “ಇಸ್ರೇಲ್‌ನೊಂದಿಗಿನ ಯುಎಇ ಸಂಬಂಧಗಳು ಸಾರ್ವಜನಿಕವಾಗಿದ್ದು, ಅವು 2020ರ ಅಬ್ರಹಾಂ ಒಪ್ಪಂದಗಳ ಚೌಕಟ್ಟಿನಲ್ಲಿವೆ. ಈ ಸಂಬಂಧಗಳು ಯಾವುದೇ ರಹಸ್ಯ ಒಪ್ಪಂದಗಳು ಅಥವಾ ಗುಪ್ತ ಸಂಪರ್ಕಗಳ ಆಧಾರದಲ್ಲಿಲ್ಲ” ಎಂದು ತಿಳಿಸಿದೆ.

“ಯುಎಇಯ ಅಧಿಕೃತ ಸಂಸ್ಥೆಗಳು ಪ್ರಕಟಿಸದ ಯಾವುದೇ ರಹಸ್ಯ ಭೇಟಿಗಳು ಅಥವಾ ವ್ಯವಸ್ಥೆಗಳ ಕುರಿತ ಹೇಳಿಕೆಗಳು ಆಧಾರರಹಿತ” ಎಂದೂ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

ಇದಕ್ಕೂ ಕೆಲವೇ ಗಂಟೆಗಳ ಮೊದಲು ನೆತನ್ಯಾಹು ಕಚೇರಿ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಣೆ ನೀಡಿ, ಇರಾನ್ ವಿರುದ್ಧದ ಬಾಂಬ್ ದಾಳಿ ಕಾರ್ಯಾಚರಣೆಯ ನಡುವೆ ಬೆಂಜಮಿನ್ ನೆತನ್ಯಾಹು ಅವರು ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ಅವರನ್ನು ‘ರಹಸ್ಯವಾಗಿ ಭೇಟಿ’ಯಾಗಿದ್ದರು ಎಂದು ಹೇಳಿಕೊಂಡಿತ್ತು. ಆದರೆ ಭೇಟಿ ನಡೆದ ದಿನಾಂಕ ಅಥವಾ ಸ್ಥಳದ ವಿವರಗಳನ್ನು ಬಹಿರಂಗಪಡಿಸಲಾಗಿರಲಿಲ್ಲ.

ನೆತನ್ಯಾಹು ಕಚೇರಿ ಈ ಭೇಟಿಯನ್ನು ಇಸ್ರೇಲ್–ಯುಎಇ ಸಂಬಂಧಗಳಲ್ಲಿನ “ಐತಿಹಾಸಿಕ ಪ್ರಗತಿ” ಎಂದು ಬಣ್ಣಿಸಿತ್ತು.

ಇತ್ತೀಚಿನ ತಿಂಗಳುಗಳಲ್ಲಿ ವಿಶೇಷವಾಗಿ ಇರಾನ್‌ಗೆ ಸಂಬಂಧಿಸಿದ ಭದ್ರತಾ ವಿಚಾರಗಳಲ್ಲಿ ಇಸ್ರೇಲ್ ಮತ್ತು ಗಲ್ಫ್ ರಾಷ್ಟ್ರಗಳ ನಡುವಿನ ಸಹಕಾರ ಹೆಚ್ಚುತ್ತಿರುವ ಸಂದರ್ಭದಲ್ಲೇ ಈ ಬೆಳವಣಿಗೆ ನಡೆದಿದೆ.

ಇಸ್ರೇಲ್‌ ನಲ್ಲಿನ ಅಮೆರಿಕ ರಾಯಭಾರಿ ಮೈಕ್ ಹಕಬೀ ಅವರು ಇತ್ತೀಚೆಗೆ ಮಾತನಾಡಿ, ಇರಾನ್‌ ನಿಂದ ಸಂಭವಿಸಬಹುದಾದ ದಾಳಿಗಳನ್ನು ಎದುರಿಸಲು ಇಸ್ರೇಲ್ ಯುಎಇಗೆ ‘ಐರನ್ ಡೋಮ್’ ವಾಯು ರಕ್ಷಣಾ ವ್ಯವಸ್ಥೆ ಹಾಗೂ ಸಿಬ್ಬಂದಿಯನ್ನು ನಿಯೋಜಿಸಿದೆ ಎಂದು ತಿಳಿಸಿದ್ದರು. ಟೆಲ್ ಅವೀವ್‌ ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಇಸ್ರೇಲ್ ಮತ್ತು ಗಲ್ಫ್ ಅರಬ್ ರಾಷ್ಟ್ರಗಳ ನಡುವಿನ ಬೆಳೆಯುತ್ತಿರುವ ಸಂಬಂಧಗಳನ್ನು ಉಲ್ಲೇಖಿಸಿ ಯುಎಇಯನ್ನು ಶ್ಲಾಘಿಸಿದ್ದರು.

WAM ವರದಿಯ ಪ್ರಕಾರ, ಮೇ 5ರಂದು ಯುಎಇ ಮೇಲೆ ನಡೆದ ಇರಾನಿನ ದಾಳಿಯ ಬಳಿಕ ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಝಾಯೆದ್ ಅವರಿಗೆ ಹಲವು ಪ್ರಾದೇಶಿಕ ನಾಯಕರಿಂದ ಕರೆಗಳು ಬಂದಿದ್ದವು. ಅದರಲ್ಲಿ ನೆತನ್ಯಾಹು ಕೂಡ ಸೇರಿದ್ದು, ಯುಎಇ ಭದ್ರತೆ ಮತ್ತು ಸ್ಥಿರತೆಯ ಪರ ಬೆಂಬಲ ವ್ಯಕ್ತಪಡಿಸಿದ್ದರು.

ಫೆಬ್ರವರಿ ಅಂತ್ಯದಲ್ಲಿ ಅಮೆರಿಕ ಮತ್ತು ಇಸ್ರೇಲ್ ಇರಾನ್ ಮೇಲೆ ವಾಯುದಾಳಿ ಆರಂಭಿಸಿದ ಬಳಿಕ, ಯುಎಇ ಸೇರಿ ಹಲವು ಅರಬ್ ರಾಷ್ಟ್ರಗಳು ಇರಾನಿನ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳ ಗುರಿಯಾಗಿದ್ದವು. ಬಳಿಕ ಎಪ್ರಿಲ್ 8ರಿಂದ ಅಮೆರಿಕ ಮತ್ತು ಇರಾನ್ ನಡುವಿನ ದುರ್ಬಲ ಕದನ ವಿರಾಮ ಜಾರಿಯಲ್ಲಿದೆ.

ಇಸ್ರೇಲ್ ಮತ್ತು ಯುಎಇ ನಡುವಿನ ಸಂಬಂಧಗಳು 2020ರಲ್ಲಿ ಸಹಿ ಮಾಡಲಾದ ಅಬ್ರಹಾಂ ಒಪ್ಪಂದಗಳ ಬಳಿಕ ಕ್ರಮೇಣ ಬಲಗೊಂಡಿವೆ. ಅಮೆರಿಕ ಮಧ್ಯಸ್ಥಿಕೆಯಲ್ಲಿ ನಡೆದ ಈ ಒಪ್ಪಂದಕ್ಕೆ 2020ರ ಸೆಪ್ಟೆಂಬರ್ 15ರಂದು ವಾಷಿಂಗ್ಟನ್‌ ನಲ್ಲಿ ಯುಎಇ ವಿದೇಶಾಂಗ ಸಚಿವ ಶೇಖ್ ಅಬ್ದುಲ್ಲಾ ಬಿನ್ ಝಾಯೆದ್ ಅಲ್ ನಹ್ಯಾನ್ ಹಾಗೂ ನೆತನ್ಯಾಹು ಸಹಿ ಹಾಕಿದ್ದರು.

ಆ ಸಂದರ್ಭದಲ್ಲಿ ಜೋರ್ಡಾನ್ ಕಣಿವೆ ಸೇರಿ ಆಕ್ರಮಿತ ಪಶ್ಚಿಮ ದಂಡೆಯ ಕೆಲವು ಭಾಗಗಳನ್ನು ಸ್ವಾಧೀನಪಡಿಸಿಕೊಳ್ಳುವ ಯೋಜನೆಯನ್ನು ಇಸ್ರೇಲ್ ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದಾಗಿ ತಿಳಿಸಲಾಗಿತ್ತು. ಆದರೆ ಬಳಿಕ ಗಾಝಾ ಪಟ್ಟಿಯಲ್ಲಿ ಇಸ್ರೇಲ್ ಯುದ್ಧ ಕಾರ್ಯಾಚರಣೆಗಳನ್ನು ತೀವ್ರಗೊಳಿಸಿದ್ದು, ಪಶ್ಚಿಮ ದಂಡೆ ಹಾಗೂ ಲೆಬನಾನ್‌ನಲ್ಲಿಯೂ ನಿರಂತರ ದಾಳಿಗಳನ್ನು ಮುಂದುವರಿಸಿದೆ.

ಇದೇ ವೇಳೆ, ಗಾಝಾದಲ್ಲಿನ ಯುದ್ಧ ಅಪರಾಧ ಆರೋಪಗಳಿಗೆ ಸಂಬಂಧಿಸಿ ಅಂತರರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯವು 2024ರ ನವೆಂಬರ್‌ ನಲ್ಲಿ ನೆತನ್ಯಾಹು ವಿರುದ್ಧ ಬಂಧನ ವಾರಂಟ್ ಹೊರಡಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News