ಹೂತಿಗಳ ಡ್ರೋನ್, ಕ್ಷಿಪಣಿ ಉತ್ಪಾದನೆಗೆ ಕಡಿವಾಣ ಹಾಕುವ ನಿರ್ಣಯಕ್ಕೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಒಪ್ಪಿಗೆ
Photo Credits: United Nations
ನ್ಯೂಯಾರ್ಕ್, ನ.13: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಗುರುವಾರ ಯಮನ್ ಮೇಲಿನ ನಿರ್ಬಂಧಗಳನ್ನು ನವೀಕರಿಸಿದ್ದು, ಹೂತಿ ಬಂಡುಕೋರರ ವಿರುದ್ಧದ ಉದ್ದೇಶಿತ ಹಣಕಾಸು ನಿರ್ಬಂಧ ಮತ್ತು ಪ್ರಯಾಣ ನಿಷೇಧವನ್ನು 2027ರ ನ. 14ರವರೆಗೆ ವಿಸ್ತರಿಸಿದೆ.
ಭದ್ರತಾ ಮಂಡಳಿ ಅವಿರೋಧವಾಗಿ ಅಂಗೀಕರಿಸಿದ ಈ ನಿರ್ಣಯವು, ಯಮನ್ ನಲ್ಲಿ ಮಿಲಿಟರಿ ಆಕ್ರಮಣ, ಸೌದಿ ಅರೇಬಿಯ ವಿರುದ್ಧದ ದಾಳಿಗಳು ಮತ್ತು ವಾಣಿಜ್ಯ ಹಡಗುಗಳಿಗೆ ಒಡ್ಡುತ್ತಿರುವ ಬೆದರಿಕೆಗಳನ್ನು ಹೂತಿಗಳು ತಕ್ಷಣವೇ ನಿಲ್ಲಿಸಬೇಕೆಂದು ಒತ್ತಾಯಿಸಿದೆ. ನಿರ್ಬಂಧಗಳ ಮೇಲೆ ನಿಗಾ ಇಡುವ ತಜ್ಞರ ಸಮಿತಿಯ ಅವಧಿಯನ್ನು 2027ರ ಡಿ. 15ರವರೆಗೆ ವಿಸ್ತರಿಸಲಾಗಿದೆ.
ಸ್ಥಳೀಯವಾಗಿ ಶಸ್ತ್ರಾಸ್ತ್ರಗಳನ್ನು ತಯಾರಿಸಿಕೊಳ್ಳುವ ಬಂಡುಕೋರರ ಹೆಚ್ಚುತ್ತಿರುವ ಸಾಮರ್ಥ್ಯವನ್ನು ಹತ್ತಿಕ್ಕುವುದು ನಿರ್ಣಯದ ಪ್ರಮುಖ ಉದ್ದೇಶವಾಗಿದೆ. ಯಮನ್ ನ ಪ್ರಮುಖ ಆರ್ಥಿಕ ವಲಯಗಳ ಮೇಲಿನ ತಮ್ಮ ನಿಯಂತ್ರಣದಿಂದ ಹೂತಿಗಳು ಗಳಿಸುತ್ತಿರುವ ಆದಾಯವನ್ನು ಪತ್ತೆಹಚ್ಚಲು ಮತ್ತು ಆ ಹಣವನ್ನು ಮಿಲಿಟರಿ ಬಳಕೆಗೆ ತಿರುಗಿಸುವುದನ್ನು ತಡೆಯುವ ಮಾರ್ಗಗಳನ್ನು ಶಿಫಾರಸು ಮಾಡಲು ನಿರ್ಣಯವು ತಜ್ಞರ ಸಮಿತಿಯನ್ನು ಕೇಳಿದೆ.