ಐಸಿಜೆ ಹವಾಮಾನ ತೀರ್ಪಿಗೆ ವಿಶ್ವಸಂಸ್ಥೆ ಬೆಂಬಲ: ಮತದಾನದಿಂದ ದೂರವುಳಿದ ಭಾರತ
Photo Credit : un.org
ವಿಶ್ವಸಂಸ್ಥೆ, ಮೇ 21: ಹವಾಮಾನ ಬದಲಾವಣೆಯ ಮೇಲಿನ ತಮ್ಮ ಜವಾಬ್ದಾರಿಗಳನ್ನು ಅನುಸರಿಸಲು ದೇಶಗಳಿಗೆ ಕರೆ ನೀಡುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ನಿರ್ಣಯದ ಮೇಲಿನ ಮತದಾನದಿಂದ ಭಾರತ ದೂರವುಳಿದಿದೆ. ನಿರ್ಣಯವನ್ನು ಸಭೆ 141-8 ಮತಗಳಿಂದ ಅನುಮೋದಿಸಿದೆ.
ನಿರ್ಣಯವು ಐಸಿಜೆ(ಅಂತರರಾಷ್ಟ್ರೀಯ ನ್ಯಾಯಾಲಯ)ಯ ಜುಲೈ 2026ರ ಸಲಹಾ ಅಭಿಪ್ರಾಯವನ್ನು ಅನುಮೋದಿಸುತ್ತದೆ. ಇದು ಜಾಗತಿಕ ತಾಪಮಾನ ಏರಿಕೆಯನ್ನು ನಿಭಾಯಿಸಲು ಸರ್ಕಾರಗಳು ಅಂತರರಾಷ್ಟ್ರೀಯ ಕಾನೂನಿನಡಿಯಲ್ಲಿ ಬಾಧ್ಯತೆ ಹೊಂದಿದೆ ಮತ್ತು ಕಾರ್ಯನಿರ್ವಹಿಸಲು ವಿಫಲವಾದರೆ ರಾಷ್ಟ್ರಗಳನ್ನು ಹೊಣೆಗಾರಿಕೆ ಮತ್ತು ಮರುಪಾವತಿಗೆ ಬದ್ಧವಾಗಿಸಬಹುದು ಎಂದು ಐಸಿಜೆ ಸಲಹಾ ಅಭಿಪ್ರಾಯ ಹೇಳುತ್ತದೆ.
ನ್ಯಾಯಾಲಯದ ಅಭಿಪ್ರಾಯಗಳ ಮೂಲಕ ಕಾನೂನು ಬಾಧ್ಯತೆಗಳನ್ನು ಅಳವಡಿಕೆ ಮಾಡುವುದರಿಂದ ಪ್ಯಾರಿಸ್ ಒಪ್ಪಂದದ ಸಂಧಾನದ ಚೌಕಟ್ಟಿಗೆ ಅಡ್ಡಿಯಾಗಬಹುದು ಎಂದು ಹಲವು ದೇಶಗಳು ಕಳವಳ ವ್ಯಕ್ತಪಡಿಸಿವೆ. 141 ದೇಶಗಳು ನಿರ್ಣಯದ ಪರ ಮತ ಚಲಾಯಿಸಿದೆ, ಅಮೆರಿಕ, ಸೌದಿ ಅರೇಬಿಯಾ, ರಷ್ಯ , ಇಸ್ರೇಲ್, ಇರಾನ್ ಸೇರಿದಂತೆ 8 ದೇಶಗಳು ವಿರೋಧಿಸಿವೆ. ಭಾರತ, ಖತರ್, ಟರ್ಕಿ ಸೇರಿದಂತೆ 28 ದೇಶಗಳು ಮತದಾನದಿಂದ ದೂರವುಳಿದಿವೆ.