ಇರಾನ್‍ನ ಇಂಧನ ಮೂಲಸೌಕರ್ಯಗಳ ಮೇಲೆ ದಾಳಿಗೆ ಅಮೆರಿಕ, ಇಸ್ರೇಲ್ ಯೋಜನೆ: ವರದಿ
ಅಮೆರಿಕದ ಇಂಧನ ತಾಣಗಳಿಗೆ ಪ್ರತಿದಾಳಿ ನಡೆಸುವುದಾಗಿ ಇರಾನ್ ಎಚ್ಚರಿಕೆ
Photo Credit : AP, X
ವಾಶಿಂಗ್ಟನ್: ಕದನ ವಿರಾಮದ ಷರತ್ತುಗಳನ್ನು ಒಪ್ಪಿಕೊಳ್ಳುವಂತೆ ಇರಾನ್ ಮೇಲೆ ಒತ್ತಡ ಹೇರಲು, ಇರಾನ್‍ನ ಇಂಧನ ಮೂಲಸೌಕರ್ಯಗಳ ಮೇಲೆ ಕೆಲವೇ ದಿನಗಳಲ್ಲಿ ಇಸ್ರೇಲ್ ನೆರವಿನೊಂದಿಗೆ ಜಂಟಿ ವೈಮಾನಿಕ ದಾಳಿ ನಡೆಸುವ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪರಿಶೀಲಿಸುತ್ತಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಸಿಬಿಎಸ್ ಸುದ್ದಿಸಂಸ್ಥೆ ವರದಿ ಮಾಡಿದೆ.
ಅಧ್ಯಕ್ಷ ಟ್ರಂಪ್ ಈ ವಿಷಯದಲ್ಲಿ ಇನ್ನೂ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ, ಆದರೆ ಅವರ ಆಡಳಿತದಲ್ಲಿ ನಡೆಯುತ್ತಿರುವ ಚರ್ಚೆಗಳು ಇರಾನ್‍ನ ಇಂಧನ ಮೂಲಸೌಕರ್ಯ ಮತ್ತು ಸಾರ್ವಜನಿಕ ಸೇವಾ ಸೌಲಭ್ಯಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವುದರ ಮೇಲೆ ಗಮನ ಹರಿಸಿವೆ. ಈ ಕಾರ್ಯಾಚರಣೆಯಲ್ಲಿ ಇಸ್ರೇಲ್ ಕೂಡ ಸೇರಿಕೊಳ್ಳಬಹುದು ಎಂದು ವರದಿ ತಿಳಿಸಿದೆ.
ಅಮೆರಿಕದ ಇಂಧನ ತಾಣಗಳಿಗೆ ಪ್ರತಿದಾಳಿ ನಡೆಸುವುದಾಗಿ ಇರಾನ್ ಎಚ್ಚರಿಕೆ
ಇರಾನ್ ವಿರುದ್ಧದ ಕಾರ್ಯಾಚರಣೆಗಳನ್ನು ವಿಸ್ತರಿಸುವ ಸಾಧ್ಯತೆಯನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪರಿಶೀಲಿಸುತ್ತಿದ್ದಾರೆ ಎಂಬ ವರದಿಯ ಹಿನ್ನೆಲೆಯಲ್ಲಿ , ಅಮೆರಿಕ ಅಥವಾ ಇಸ್ರೇಲ್‍ನಿಂದ ಯಾವುದೇ ಹೊಸ ಮಿಲಿಟರಿ ಕ್ರಮ ಎದುರಾದರೆ ಪ್ರಾದೇಶಿಕ ಪ್ರಮುಖ ಇಂಧನ ಮೂಲಸೌಕರ್ಯಗಳನ್ನು ಗುರಿಯಾಗಿಸುವುದಾಗಿ ಇರಾನ್ ಎಚ್ಚರಿಕೆ ನೀಡಿದೆ.
ಇರಾನ್ ಈಗಾಗಲೇ ವ್ಯಾಪಕ ಪ್ರತಿಕ್ರಿಯಾ ಯೋಜನೆಗಳನ್ನು ಸಿದ್ಧಪಡಿಸಿದೆ. ಯಾವುದೇ ದಾಳಿ ನಡೆದರೆ ಇಸ್ರೇಲ್‍ನ ನಿರ್ಣಾಯಕ ಮೂಲಸೌಕರ್ಯಗಳು ಮತ್ತು ಪ್ರದೇಶದಲ್ಲಿರುವ ಅಮೆರಿಕದ ಇಂಧನ ಆಸ್ತಿಗಳ ಮೇಲೆ ಪ್ರತಿದಾಳಿ ನಡೆಸಲಾಗುವುದು. ಇಂತಹ ಕಾರ್ಯಾಚರಣೆಗಳನ್ನು ನಡೆಸಲು ಇರಾನ್ ಸಶಸ್ತ್ರ ಪಡೆಗಳು ಸಾಮಥ್ರ್ಯ ಮತ್ತು ಸಂಕಲ್ಪ ಎರಡನ್ನೂ ಹೊಂದಿವೆ ಎಂದು ಇರಾನ್‍ನ ಹಿರಿಯ ಭದ್ರತಾ ಅಧಿಕಾರಿಯೊಬ್ಬರು ಎಚ್ಚರಿಸಿರುವುದಾಗಿ `ತಸ್ನಿಮ್' ಸುದ್ದಿ ಸಂಸ್ಥೆ ವರದಿ ಮಾಡಿದೆ.