Yemen | ಸನಾ ವಿಮಾನ ನಿಲ್ದಾಣದ ಬಳಿ ಸೌದಿ ಪಡೆಗಳಿಂದ ವಾಯುದಾಳಿ
ರಿಯಾದ್ ನಲ್ಲಿ ಹೂತಿಗಳ ಡ್ರೋನ್ ದಾಳಿ ಬೆನ್ನಲ್ಲೇ ಮಿಲಿಟರಿ ಕಾರ್ಯಾಚರಣೆ ಚುರುಕು
ಸನಾ, ನ.25: ಯೆಮೆನ್ ರಾಜಧಾನಿ ಸನಾದಲ್ಲಿರುವ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಮುತ್ತಲಿನ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಸೌದಿ ನೇತೃತ್ವದ ಪಡೆಗಳು ಹಲವು ವಾಯುದಾಳಿಗಳನ್ನು ನಡೆಸಿವೆ ಎಂದು ಹೂತಿ ಪರ ಮಾಧ್ಯಮ ಅಲ್ ಮಸೀರಾ ಟಿವಿ ಬುಧವಾರ ವರದಿ ಮಾಡಿದೆ.
ವಿಮಾನ ನಿಲ್ದಾಣದ ಸಮೀಪ ಸರಣಿ ವಾಯುದಾಳಿಗಳು ನಡೆದಿದ್ದು, ಪ್ರಬಲ ಸ್ಫೋಟಗಳ ಸದ್ದು ಕೇಳಿಬಂದಿದೆ. ಸ್ಫೋಟದ ತೀವ್ರತೆಗೆ ಸಮೀಪದ ಮನೆಗಳ ಕಿಟಕಿಗಳೂ ಕಂಪಿಸಿದವು ಎಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ. ಆದರೆ, ದಾಳಿಗಳಿಂದ ಸಂಭವಿಸಿರುವ ಸಾವು-ನೋವು ಅಥವಾ ಆಸ್ತಿಪಾಸ್ತಿ ಹಾನಿಯ ಕುರಿತು ತಕ್ಷಣಕ್ಕೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಇದಕ್ಕೂ ಮುನ್ನ ಮಂಗಳವಾರ ಸೌದಿ ರಾಜಧಾನಿ ರಿಯಾದ್ ನ ಕಿಂಗ್ ಅಬ್ದುಲ್ಲಾ ಹಣಕಾಸು ಜಿಲ್ಲೆ (KAFD)ಯಲ್ಲಿರುವ ಸೌದಿ ಸಾರ್ವಜನಿಕ ಹೂಡಿಕೆ ನಿಧಿಯ (PIF) ಕೇಂದ್ರ ಕಚೇರಿ ಹೊಂದಿರುವ ಗಗನಚುಂಬಿ ಕಟ್ಟಡದ ಮೇಲೆ ಹೂತಿಗಳು ಡ್ರೋನ್ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ 11 ಮಂದಿ ಗಾಯಗೊಂಡಿದ್ದಾರೆ ಎಂದು ಸೌದಿ ನಾಗರಿಕ ರಕ್ಷಣಾ ಇಲಾಖೆ ತಿಳಿಸಿತ್ತು ಎಂದು ರಾಯಿಟರ್ಸ್ ವರದಿ ಮಾಡಿದೆ. ಗಾಯಗೊಂಡವರಲ್ಲಿ ಇಬ್ಬರು ಸೌದಿ ಪ್ರಜೆಗಳು, ಇಬ್ಬರು ಭಾರತೀಯರು, ಮೂವರು ನೇಪಾಳಿಗಳು ಹಾಗೂ ನಾಲ್ವರು ಈಜಿಪ್ಟ್ ಪ್ರಜೆಗಳು ಸೇರಿದ್ದಾರೆ.
ಡ್ರೋನ್ ಮೂಲಕ ಈ ದಾಳಿ ನಡೆಸಲಾಗಿದೆ ಎಂದು ಯೆಮೆನ್ ನಲ್ಲಿನ ಸೌದಿ ನೇತೃತ್ವದ ಮೈತ್ರಿಕೂಟದ ವಕ್ತಾರ ಮೇಜರ್ ಜನರಲ್ ತುರ್ಕಿ ಅಲ್ ಮಾಲಿಕಿ ತಿಳಿಸಿದ್ದಾರೆ. ನಾಗರಿಕರು ಮತ್ತು ನಾಗರಿಕ ಆಸ್ತಿಗಳನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಿಕೊಂಡಿರುವುದಕ್ಕೆ ನಿರ್ಣಾಯಕ ಪ್ರತಿಕ್ರಿಯೆ ನೀಡುವುದಾಗಿ ಅವರು ಎಚ್ಚರಿಕೆ ನೀಡಿದ್ದರು.
ಇದೇ ವೇಳೆ, ಕೆಂಪು ಸಮುದ್ರ ತೀರದ ಹೂತಿ ನಿಯಂತ್ರಿತ ಹುದೈದಾ ಬಂದರಿನ ನಿರ್ದಿಷ್ಟ ಪ್ರದೇಶಗಳಿಂದ ನಾಗರಿಕರು ಸ್ಥಳಾಂತರಗೊಳ್ಳುವಂತೆ ಸೌದಿ ನೇತೃತ್ವದ ಮೈತ್ರಿಕೂಟ ಮಂಗಳವಾರ ಎಚ್ಚರಿಕೆ ನೀಡಿತ್ತು. ಮೈತ್ರಿಕೂಟದ ವಕ್ತಾರ ಸಾಮಾಜಿಕ ಮಾಧ್ಯಮದಲ್ಲಿ ಈ ಕುರಿತು ಸಂದೇಶ ಪ್ರಕಟಿಸಿದ್ದರು. ಉತ್ತರ ಯೆಮೆನ್ ಗೆ ಆಹಾರ ಮತ್ತು ಇತರ ಅಗತ್ಯ ಸಾಮಗ್ರಿಗಳನ್ನು ಪೂರೈಸುವ ಪ್ರಮುಖ ಪ್ರವೇಶದ್ವಾರವಾಗಿರುವ ಹುದೈದಾ ಬಂದರಿನ ಮೇಲೂ ಬುಧವಾರ ಮೈತ್ರಿಕೂಟ ವಾಯುದಾಳಿ ನಡೆಸಿದೆ ಎಂದು Times of India ವರದಿ ಮಾಡಿದೆ.
ಹುದೈದಾ ಬಂದರಿನ ಮೇಲಿನ ದಾಳಿಗೆ ಪ್ರತಿಯಾಗಿ ಸೌದಿ ಅರೇಬಿಯಾದ ಕೆಂಪು ಸಮುದ್ರ ತೀರದ ಬಂದರುಗಳನ್ನು ಗುರಿಯಾಗಿಸುವುದಾಗಿ ಹೂತಿಗಳು ಎಚ್ಚರಿಕೆ ನೀಡಿದ್ದರು. ತಮ್ಮ ಹಡಗುಗಳನ್ನು ಬಂದರುಗಳಿಂದ ತೆರವುಗೊಳಿಸುವಂತೆಯೂ ಹಡಗು ಕಂಪೆನಿಗಳಿಗೆ ಸೂಚಿಸಿದ್ದರು.