ಶೇಖ್ ಹಸೀನಾ |Photo Credit : PTI 

ಢಾಕಾ, ನ. 24: ಡಿ. 16ರಂದು ದೇಶದ ರಾಷ್ಟ್ರೀಯ ವಿಮಾನಯಾನ ಸಂಸ್ಥೆ ಬಿಮಾನ್ ಬಾಂಗ್ಲಾದೇಶ್ ಏರ್ಲೈನ್ಸ್' ಮೂಲಕ ತಾಯ್ನಾಡಿಗೆ ಮರಳಲು ಪದಚ್ಯುತ ಪ್ರಧಾನಿ ಶೇಖ್ ಹಸೀನಾ ವ್ಯಕ್ತಪಡಿಸಿರುವ ಇಚ್ಛೆಯನ್ನು ಬಾಂಗ್ಲಾದೇಶ ಸರಕಾರ ತಳ್ಳಿಹಾಕಿದೆ. ಅವರನ್ನು ಪರಾರಿಯಾಗಿರುವ ಭಯೋತ್ಪಾದಕಿ' ಎಂದು ಕರೆದಿರುವ ಬಾಂಗ್ಲಾದೇಶ, ಹಸ್ತಾಂತರ ಪ್ರಕ್ರಿಯೆಯ ಮೂಲಕ ಮಾತ್ರ ಅವರನ್ನು ವಾಪಸ್ ಕರೆತರಬಹುದು. ಅವರು ಕೈಕೋಳ ತೊಟ್ಟು ಅಥವಾ ಕಟ್ಟುನಿಟ್ಟಿನ ಕಣ್ಗಾವಲಿನಲ್ಲಿ ಮರಳಬೇಕಾಗುತ್ತದೆ ಎಂದು ಹೇಳಿದೆ.

ತಾರಿಕ್ ರೆಹಮಾನ್ ನೇತೃತ್ವದ ಸರಕಾರವು ಡಿ. 16ರಂದು ಮರಳುವ ಶೇಖ್ ಹಸೀನಾ ಅವರ ಇಚ್ಛೆಯನ್ನು ತಳ್ಳಿಹಾಕಿದ್ದು, ಅವರ ಬಯಕೆಯು ವಾಸ್ತವಿಕ ಪರಿಸ್ಥಿತಿಗೆ ವಿರುದ್ಧವಾಗಿದೆ ಎಂದು ಹೇಳಿದೆ. ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಹುಮಾಯೂನ್ ಕಬೀರ್ ಅವರು ಮಾಜಿ ಪ್ರಧಾನಿ ಸಾಮಾನ್ಯ ಪ್ರಯಾಣಿಕರಂತೆ ಮರಳುವ ಸಾಧ್ಯತೆಯನ್ನು ತಳ್ಳಿಹಾಕಿದ್ದಾರೆ. ಅವರನ್ನು ಕೈಕೋಳ ತೊಡಿಸಿ ಅಥವಾ ಕಟ್ಟುನಿಟ್ಟಿನ ಕಣ್ಗಾವಲಿನಲ್ಲಿ ಮಾತ್ರ ವಾಪಸ್ ಕರೆತರಬಹುದು ಎಂದು ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಶೇಖ್ ಹಸೀನಾ ಅವರ ಅವಾಮಿ ಲೀಗ್ ಸರಕಾರದ ಆಡಳಿತಾವಧಿಯಲ್ಲಿ ನಡೆದಿದೆ ಎನ್ನಲಾದ ಸರಕಾರಿ ಪ್ರಾಯೋಜಿತ ಭಯೋತ್ಪಾದನೆಗೆ ಹಸೀನಾ ಅವರೇ ಹೊಣೆ. ಅವರು ಶಿಕ್ಷೆಗೊಳಗಾದ ಅಪರಾಧಿ ಮತ್ತು ಪರಾರಿಯಾಗಿರುವ ಭಯೋತ್ಪಾದಕಿ ಎಂದು ಕಬೀರ್ ಆರೋಪಿಸಿದ್ದಾರೆ.

2024ರ ವಿದ್ಯಾರ್ಥಿ ದಂಗೆಯ ಬಳಿಕ ಬಾಂಗ್ಲಾದೇಶದಿಂದ ಪಲಾಯನ ಮಾಡಿ ಹೊಸದಿಲ್ಲಿಯಲ್ಲಿ ಆಶ್ರಯ ಪಡೆದಿರುವ ಶೇಖ್ ಹಸೀನಾ ಅವರಿಗೆ, ಗೈರುಹಾಜರಿಯಲ್ಲಿ ವಿಚಾರಣೆ ನಡೆಸಿದ ಬಾಂಗ್ಲಾದೇಶದ ನ್ಯಾಯಮಂಡಳಿಯು ಕಳೆದ ವರ್ಷ ನವೆಂಬರ್ನಲ್ಲಿ ಮರಣದಂಡನೆ ವಿಧಿಸಿತ್ತು. ವಿದ್ಯಾರ್ಥಿಗಳ ಪ್ರತಿಭಟನೆಯನ್ನು ಹತ್ತಿಕ್ಕಲು ನಡೆಸಿದ ಮಾರಣಾಂತಿಕ ಕಾರ್ಯಾಚರಣೆಗೆ ಆದೇಶ ನೀಡಿದ ಆರೋಪದಲ್ಲಿ ಈ ಶಿಕ್ಷೆ ವಿಧಿಸಲಾಗಿತ್ತು. ಆದರೆ, ಹಸೀನಾ ಆರೋಪಗಳನ್ನು ನಿರಾಕರಿಸಿದ್ದಾರೆ.

ಡಿ. 16ರಂದು ತಾಯ್ನಾಡಿಗೆ ಮರಳಲು ಬಿಮಾನ್ ಬಾಂಗ್ಲಾದೇಶ್ ಏರ್ಲೈನ್ಸ್ನಲ್ಲಿ ಪ್ರಯಾಣ ವ್ಯವಸ್ಥೆ ಮಾಡುವಂತೆ ಮತ್ತು ಅಗತ್ಯ ಪ್ರಯಾಣ ದಾಖಲೆಗಳನ್ನು ಒದಗಿಸುವಂತೆ ಹಸೀನಾ ಬಾಂಗ್ಲಾದೇಶ ಸರಕಾರವನ್ನು ಕೋರಿದ್ದರು. ಅವರ ವಕ್ತಾರ ಸೈಯದ್ ಮೊಝಮ್ಮೆಲ್ ಅಲಿ ಅವರು ಈ ವಿಷಯವನ್ನು Reuters ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಕೃಷ್ಣ ಮೂರ್ತಿ , ವಾರ್ತಾಭಾರತಿ

contributor