‘ಹೈದರಾಬಾದ್ ಕರ್ನಾಟಕ’ ಕಲ್ಯಾಣವಾಗುವುದು ಯಾವಾಗ?
ಈ ಭಾಗದ ಶಿಕ್ಷಣವೊಂದು ಸರಿಯಾದರೆ ಉಳಿದೆಲ್ಲವೂ ನಿಧಾನಕ್ಕೆ ಸರಿದಾರಿಗೆ ಬರುವ ಸಾಧ್ಯತೆ ಇದೆ. ಕಲ್ಯಾಣ ಕರ್ನಾಟಕವನ್ನು ಅಭಿವೃದ್ಧಿ ಮಾಡುವ ಪ್ರಾಮಾಣಿಕ ಕನಸಿದ್ದ ರಾಜಕಾರಣಿಗಳು ಅಧಿಕಾರಿಗಳು ಇಲ್ಲಿನ ಭ್ರಷ್ಟಗೊಂಡ ಶಿಕ್ಷಣವನ್ನು ಸರಿಪಡಿಸಬೇಕಿದೆ. ಕಲಬುರಗಿಯನ್ನು ಒಳಗೊಂಡಂತೆ ಕಲ್ಯಾಣ ಕರ್ನಾಟಕದಲ್ಲಿ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರನ್ನು ದೇವರನ್ನಾಗಿಸಿ ಶ್ರದ್ಧೆಯಿಂದ ಆರಾಧಿಸುತ್ತಾರೆ. ಆದರೆ ಅಂಬೇಡ್ಕರ್ ಕನಸು ಕಂಡ ನೈತಿಕ ಪ್ರಜ್ಞೆಯ ಶೇ. ಒಂದರಷ್ಟನ್ನು ಜನರು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡಿದ್ದರೆ ಬಹುಶಃ ಕಲ್ಯಾಣ ಕರ್ನಾಟಕದ ಸ್ಥಿತಿ ಹೀಗಿರುತ್ತಿರಲಿಲ್ಲ.
‘ಹೈದರಾಬಾದ್ ಕರ್ನಾಟಕ’ ಸೆಪ್ಟಂಬರ್ 1, 2019ರಂದು ಅಧಿಕೃತವಾಗಿ ‘ಕಲ್ಯಾಣ ಕರ್ನಾಟಕ’ ಎಂದು ಮರು ನಾಮಕರಣವಾಯಿತು. ಇದಕ್ಕೆ ಹೊಂದಿಕೊಂಡ ಎಲ್ಲಾ ಸಂಸ್ಥೆಗಳ ಹೆಸರುಗಳೂ ಬದಲಾದವು. ಇದೀಗ ಏಳು ವರ್ಷ ಪೂರೈಸಿದ ಮರುನಾಮಕರಣವನ್ನು ಮರುಪರಿಶೀಲಿಸಿದರೆ, ಇನ್ನೂ ‘ಹೈದರಾಬಾದ್ ಕರ್ನಾಟಕ’ವಾಗಿ ಉಳಿದಿದೆಯೇ ಅಥವಾ ಕಲ್ಯಾಣದ ಸಾಧ್ಯತೆಗಳು ಸಂಭವಿಸಿವೆಯೇ ಎನ್ನುವ ಪ್ರಶ್ನೆಯನ್ನು ಕೇಳಿಕೊಳ್ಳಬೇಕಿದೆ. ಆಡಿಟರ್ ಜನರಲ್ ಆಫ್ ಇಂಡಿಯಾವು 2023ರಲ್ಲಿ ಬಿಡುಗಡೆ ಮಾಡಿದ 140 ಪುಟದ ವರದಿಯನ್ನು ಅಧ್ಯಯನ ಮಾಡಿದರೆ ‘ಹೈದರಾಬಾದ್ ಕರ್ನಾಟಕ’ ಕಲ್ಯಾಣ ಆಗುವುದು ಯಾವಾಗ ಎನ್ನುವ ಪ್ರಶ್ನೆ ಎದುರಾಗುತ್ತದೆ. ಅಂತೆಯೇ ಕರ್ನಾಟಕದಲ್ಲಿ ಪ್ರಾದೇಶಿಕ ಅಸಮತೋಲನವನ್ನು ನಿವಾರಿಸುವ ಉದ್ದೇಶದಿಂದ ರಚನೆಯಾದ ಅರ್ಥಶಾಸ್ತ್ರಜ್ಞ ಪ್ರೊ.ಎಂ. ಗೋವಿಂದರಾವ್ ನೇತೃತ್ವದ ವರದಿಯನ್ನು ಗಮನಿಸಿದರೆ ರಾಜ್ಯದ 236 ತಾಲೂಕುಗಳ ಪೈಕಿ 177 ತಾಲೂಕುಗಳು ಹಿಂದುಳಿದಿರುವುದು ತಿಳಿಯುತ್ತದೆ. ಹಿಂದುಳಿದ ತಾಲೂಕುಗಳ ಪೈಕಿ ಶೇ. 42ರಷ್ಟು ಅತಿ ಹಿಂದುಳಿದ ತಾಲೂಕುಗಳು ಕಲ್ಯಾಣ ಕರ್ನಾಟಕದಲ್ಲಿವೆ. ಈ ಎರಡೂ ವರದಿಗಳು ಈ ಭಾಗದ ತೀವ್ರತೆರನಾದ ಬಿಕ್ಕಟ್ಟುಗಳನ್ನು ಬಹಿರಂಗಪಡಿಸುತ್ತಿವೆ.
ಕರ್ನಾಟಕ ಸರಕಾರವು ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ, ಕಲಬುರಗಿ ಮತ್ತು ವಿಜಯನಗರ ಜಿಲ್ಲೆಗಳನ್ನು ಒಳಗೊಂಡಂತೆ ‘ಕಲ್ಯಾಣ ಕರ್ನಾಟಕ’ ಎಂದು ಗುರುತಿಸಿದೆ. ಪ್ರಾದೇಶಿಕ ಅಸಮಾನತೆಯನ್ನು ಹೋಗಲಾಡಿಸಲು 2007-08 ರಿಂದ ವಿಶೇಷ ಅನುದಾನವನ್ನು ಈ ಭಾಗಕ್ಕೆ ಬಿಡುಗಡೆ ಮಾಡುತ್ತಿದೆ. ಆಗ ಈ ಅನುದಾನವನ್ನು ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಎಚ್ಕೆಆರ್ಡಿಬಿ) ಗೆ ವಿತರಿಸಲಾಗುತ್ತಿತ್ತು. 2013ರಿಂದ 371 (ಜೆ) ಕಾಲಂನ ಅನ್ವಯ ಇದನ್ನು ‘ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ದಿ ಮಂಡಳಿ’ (ಕೆಕೆಆರ್ಡಿಬಿ)ಯನ್ನಾಗಿ ಪುನರ್ ರಚಿಸಲಾಗಿದೆ. ಈ ಭಾಗದ ಕಲ್ಯಾಣ ಯೋಜನೆಗಳಿಗಾಗಿ ಬರುವ ಅನುದಾನ ದ್ವಿಗುಣವಾಗಿದೆ. 2013-14ನೇ ಸಾಲಿನಿಂದ 2025-26ನೇ ಸಾಲಿನ ಜನವರಿ-26 ಅಂತ್ಯಕ್ಕೆ ರೂ. 24,773.30 ಕೋಟಿಗಳ ಅನುದಾನ ನಿಗದಿಯಾಗಿದ್ದು, ರೂ. 17,728.80 ಕೋಟಿಗಳ ಅನುದಾನವು ಬಿಡುಗಡೆಯಾಗಿದೆ. ಈ ಪೈಕಿ ರೂ. 15,803.92 ಕೋಟಿ ವೆಚ್ಚ ಭರಿಸಿ ಶೇ. 89ರಷ್ಟು ಪ್ರಗತಿ ಸಾಧಿಸಲಾಗಿದೆ. ಅದೇ ರೀತಿ 43,397 ಕಾಮಗಾರಿಗಳು ಅನುಮೋದನೆಗೊಂಡಿದ್ದು, 35,013 ಕಾಮಗಾರಿಗಳು ಮುಕ್ತಾಯಗೊಂಡಿರುತ್ತವೆ.
2025-26ರ ವಿಶೇಷ ಅಭಿವೃದ್ಧಿ ಯೋಜನೆಯಡಿ ಅನುದಾನ ಹಂಚಿಕೆಯಾದಂತೆ ರೂ.16,000 ಕೋಟಿಗಳ ಹೆಚ್ಚುವರಿ ಹೂಡಿಕೆಯಲ್ಲಿ ಕಲಬುರಗಿ ವಿಭಾಗದ ಪಾಲು ರೂ.6,400 ಕೋಟಿಗಳಾಗಿದ್ದು ಅದು ಗರಿಷ್ಠ ಮೊತ್ತವಾಗಿದೆ. ಕೆಕೆಆರ್ಡಿಬಿಗೆ ನೀಡಿದ ಅನುದಾನದಲ್ಲಿ ಶೇ. 89ರಷ್ಟು ಪ್ರಗತಿ ನಿಜಕ್ಕೂ ಆಗಿದ್ದರೆ ಇದು ಕಲ್ಯಾಣ ಕರ್ನಾಟಕದ ಪ್ರತೀ ಹಳ್ಳಿಗಳ ಲೆಕ್ಕ ಕೊಡಬೇಕಾಗುತ್ತದೆ. ಜನ ಚಳವಳಿಗಳು ಕೆಕೆಆರ್ಡಿಬಿಯ ಎದುರು ದಿನಕ್ಕೊಂದು ಹಳ್ಳಿಗಳಂತೆ ಬಂದು ತಮ್ಮ ಊರಿಗೆ ಏನು ಖರ್ಚು ಮಾಡಿದ್ದೀರಿ ಎಂದು ಲೆಕ್ಕ ಕೇಳುವಂತೆ ಜನಜಾಗೃತಿ ಮೂಡಿಸಬೇಕಾಗಿದೆ.
ಮೇಲಿನ ಹಾಗೆ ಲೆಕ್ಕ ಕೊಡುವ ಕರ್ನಾಟಕ ಆರ್ಥಿಕ ಸಮೀಕ್ಷೆ-2025-26ರಲ್ಲಿಯೇ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಜಿಲ್ಲಾ ಮಟ್ಟದಲ್ಲಿ ಅಸಮಾನತೆಗಳು ಇರುವುದನ್ನೂ ದಾಖಲಿಸುತ್ತದೆ. ಬೆಂಗಳೂರು ನಗರ (0.738) ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಮುಂಚೂಣಿಯಲ್ಲಿದೆ, ನಂತರ ದಕ್ಷಿಣ ಕನ್ನಡ (0.687), ಚಿಕ್ಕಮಗಳೂರು (0.668) ಮತ್ತು ಉಡುಪಿ (0.665) ನಂತರದ ಜಿಲ್ಲೆಗಳಾಗಿವೆ. ಆದರೆ ಯಾದಗಿರಿ (0.538), ಕಲಬುರಗಿ (0.539) ಮತ್ತು ರಾಯಚೂರು (0.562) ಕಡಿಮೆ ಮಾನವ ಅಭಿವೃದ್ಧಿ ಸೂಚ್ಯಂಕ ಮೌಲ್ಯಗಳನ್ನು ದಾಖಲಿಸಿವೆ. ಈ ವ್ಯತ್ಯಾಸಗಳು ಕರ್ನಾಟಕದಾದ್ಯಂತ ಪ್ರಾದೇಶಿಕ ಅಸಮಾನ ಅಭಿವೃದ್ಧಿ ಮಾದರಿಗಳನ್ನು ಪ್ರತಿಬಿಂಬಿಸುತ್ತವೆ ಎಂದು ಹೇಳುತ್ತಿದೆ. ಕಲ್ಯಾಣ ಕರ್ನಾಟಕದ ಮೂರು ಜಿಲ್ಲೆಗಳು ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಹಿಂದುಳಿದಿವೆ. ಕಲಬುರಗಿ ವಿಭಾಗದ ತಲಾ ಆದಾಯ 1,89,938ರಷ್ಟಿದ್ದು ಕೊನೆಯ ಸ್ಥಾನದಲ್ಲಿದೆ. ಮಾನವ ಅಭಿವೃದ್ಧಿ ಸೂಚ್ಯಂಕದ ಅತ್ಯಂತ ಹಿಂದುಳಿದ 10 ತಾಲೂಕುಗಳಲ್ಲಿ ಕಲ್ಯಾಣ ಕರ್ನಾಟಕದ 8 ತಾಲೂಕುಗಳು ಪಟ್ಟಿಯಲ್ಲಿವೆ. ಶಹಾಪುರ, ಚಿಂಚೊಳ್ಳಿ, ಸಿಂಧನೂರು, ಯಲಬುರ್ಗಾ, ಸುರಪುರ, ಕೂಡ್ಲಿಗಿ, ಜೇವರ್ಗಿ, ಯಾದಗಿರಿ. ಕರ್ನಾಟಕದ ಅತ್ಯಂತ ಹಿಂದುಳಿದ ತಾಲೂಕುಗಳಲ್ಲಿ ಯಾದಗಿರಿ ಕೊನೆಯ ಸ್ಥಾನದಲ್ಲಿದೆ.
ಈ ಭಾಗದಲ್ಲಿ ಬಹುಪಾಲು ಕಳಪೆ ರಸ್ತೆಗಳು ಇರುವುದು ವಾಸ್ತವ. ವೈರುಧ್ಯವೆಂದರೆ 2025-26ರ ಕರ್ನಾಟಕ ಆರ್ಥಿಕ ಸಮೀಕ್ಷೆಯಲ್ಲಿ ಕಲ್ಯಾಣ ಪಥ ಯೋಜನೆಯ ಅಂಗವಾಗಿ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಮಾದರಿಯಲ್ಲಿ ಕಲ್ಯಾಣ ಕರ್ನಾಟಕ ವ್ಯಾಪ್ತಿಯ 38 ಗ್ರಾಮೀಣ ವಿಧಾನ ಸಭಾ ಕ್ಷೇತ್ರಗಳಲ್ಲಿ 1,150 ಕಿ.ಮೀ. ರಸ್ತೆಗಳನ್ನು ರೂ. 1,000 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಡಿಸೆಂಬರ್ 2025ರವರೆಗೆ, 1,124.91 ಕಿ.ಮೀ. ರಸ್ತೆಗಳನ್ನು ಒಳಗೊಂಡ 63 ಪ್ಯಾಕೇಜ್ಗಳನ್ನು (286 ಕೆಲಸಗಳು) ತೆಗೆದುಕೊಳ್ಳಲಾಗಿದೆ; ರೂ. 208.56 ಕೋಟಿ ವೆಚ್ಚದಲ್ಲಿ 168.37 ಕಿ.ಮೀ. ಪೂರ್ಣಗೊಂಡಿದೆ. ಎಂದು ಸರಕಾರಿ ಲೆಕ್ಕ ಹೇಳುತ್ತಿದೆ.
ಅನುಚ್ಛೇದ 371(ಜೆ)ಯಡಿ ಮಂಜೂರಾದ ಹಾಗೂ ಭರ್ತಿಯಾದ ಮತ್ತು ಮುಂಭಡ್ತಿ ನೀಡಿರುವ ಹುದ್ದೆಗಳ ಸ್ಥಿತಿಯನ್ನು ನೋಡುವುದಾದರೆ, ನೇರ ನೇಮಕಾತಿಯಡಿ ಸ್ಥಳೀಯ ವೃಂದದಲ್ಲಿ 1,16,816 ಹುದ್ದೆಗಳು ಮಂಜೂರಾಗಿದ್ದು, 79,373 ಹುದ್ದೆಗಳು ಭರ್ತಿಯಾಗಿ 37,443 ಹುದ್ದೆಗಳು ಖಾಲಿ ಇವೆ. ನೇರ ನೇಮಕಾತಿಯಡಿ ರಾಜ್ಯವ್ಯಾಪಿ ವೃಂದದಲ್ಲಿ (ಶೇ. 8) 13,183 ಹುದ್ದೆಗಳು ಮಂಜೂರಾಗಿದ್ದು, 7,393 ಹುದ್ದೆಗಳು ಭರ್ತಿಯಾಗಿ 5,790 ಹುದ್ದೆಗಳು ಖಾಲಿ ಇವೆ. ಸ್ಥಳೀಯ ವೃಂದದ ಮುಂಭಡ್ತಿಯಲ್ಲಿ 40,724 ಹುದ್ದೆಗಳನ್ನು ಮೀಸಲಿಡಲಾಗಿದ್ದು, 25,806 ಹುದ್ದೆಗಳು ಭರ್ತಿಯಾಗಿದ್ದು 14,658 ಹುದ್ದೆಗಳು ಖಾಲಿ ಇವೆ. ರಾಜ್ಯವ್ಯಾಪಿ ವೃಂದದ ಮುಂಭಡ್ತಿಯಲ್ಲಿ 4,513 ಹುದ್ದೆಗಳನ್ನು ಮೀಸಲಿಡಲಾಗಿದ್ದು, ಈ ಪೈಕಿ 2,658 ಹುದ್ದೆಗಳು ಭರ್ತಿಯಾಗಿರುತ್ತವೆ ಮತ್ತು 1,829 ಹುದ್ದೆಗಳು ಖಾಲಿ ಇರುತ್ತವೆ. ಎಲ್ಲವನ್ನೂ ಲೆಕ್ಕ ಹಾಕಿದರೆ ಇನ್ನೂ 59,720 ಹುದ್ದೆಗಳು ಖಾಲಿ ಇದ್ದು ಭರ್ತಿ ಮಾಡಬೇಕಾಗಿದೆ.
ಮೇಲಿನ ಕರ್ನಾಟಕ ಸರಕಾರವೇ ಕೊಟ್ಟ ಅಂಕೆ ಸಂಖ್ಯೆಗಳನ್ನು ನೋಡಿದರೆ ವೈರುಧ್ಯಗಳು ಢಾಳಾಗಿ ಕಾಣುತ್ತವೆ. ಕರ್ನಾಟಕದ ಈ ಭಾಗ ಇನ್ನೂ ಕಲ್ಯಾಣಕ್ಕಾಗಿ ಕಾದು ಕೂತಂತಿದೆ. ಇಲ್ಲಿನ ಸಮಸ್ಯೆಗೆ ಯಾವುದೋ ಒಂದು ರಾಜಕೀಯ ಪಕ್ಷವನ್ನು, ಯಾರೋ ಕೆಲವು ರಾಜಕಾರಣಿ-ಅಧಿಕಾರಿ ವರ್ಗವನ್ನು ದೂರುವಂತಿಲ್ಲ, ಯಾವುದೋ ಒಂದು ಕಾಲಘಟ್ಟವನ್ನು ಬೆರಳುಮಾಡಿ ತೋರುವಂತಿಲ್ಲ. ಸ್ವಾತಂತ್ರ್ಯ ನಂತರ ಬಂದ ಎಲ್ಲಾ ಪಕ್ಷಗಳ ಸರಕಾರಗಳೂ ಬಹುಪಾಲು ರಾಜಕಾರಣಿಗಳು ಇಲ್ಲಿನ ಜನರನ್ನು ನಿರಂತರವಾಗಿ ವಂಚಿಸಿದ್ದಾರೆ. ಹಾಗೆ ನೋಡಿದರೆ ದಮನಿತ ದಲಿತ ಸಮುದಾಯದಿಂದ ಬಂದ ರಾಜಕಾರಣಿಗಳೇ ಒಂದಷ್ಟು ಈ ಭಾಗದ ಬೆಳವಣಿಗೆಗೆ ಕೆಲಸ ಮಾಡಿದ್ದಾರೆ. ಡಾ.ಬಿ.ಆರ್.ಅಂಬೇಡ್ಕರ್ 1945 ರಲ್ಲಿ ಸ್ಥಾಪಿಸಿದ ‘ಪೀಪಲ್ಸ್ ಎಜುಕೇಷನ್ ಸೊಸೈಟಿ’ಯ ಬೈಲಾವನ್ನೇ ಅನ್ವಯಿಸಿಕೊಂಡು ‘ಕರ್ನಾಟಕ ಪೀಪಲ್ಸ್ ಎಜುಕೇಷನ್ ಸೊಸೈಟಿ’ ಸ್ಥಾಪಿಸಿ ಬಡ ದಲಿತ ದಮನಿತ ವಿದ್ಯಾರ್ಥಿಗಳಿಗಾಗಿ ವಿದ್ಯಾ ಸಂಸ್ಥೆಗಳನ್ನು ತೆರೆದಿರುವುದನ್ನು ಮೊದಲುಗೊಂಡು, 371 (ಜೆ)ಯಂತಹ ಮಹತ್ವದ ಪ್ರಾತಿನಿಧ್ಯವನ್ನು ಒಳಗೊಂಡಂತೆ ಹಲವು ಮಹತ್ವದ ಯೋಜನೆಗಳನ್ನು ತಂದ ಮಲ್ಲಿಕಾರ್ಜುನ ಖರ್ಗೆ ಅವರದು ಎದ್ದು ಕಾಣುವ ಹೆಸರು. ಈಚೆಗೆ ಹೊಸ ತಲೆಮಾರಿನ ರಾಜಕಾರಣಿಗಳಾದ ಪ್ರಿಯಾಂಕ್ ಖರ್ಗೆ, ಅಜಯ್ ಸಿಂಗ್, ಇ.ತುಕಾರಾಮ, ಜಿ.ಕುಮಾರ ನಾಯಕ, ಜೆ.ಎನ್.ಗಣೇಶ್, ಬಸವನಗೌಡ ತುರುವಿಹಾಳ, ಎನ್.ಟಿ.ಶ್ರೀನಿವಾಸ ಹೀಗೆ ಬೆರಳೆಣಿಕೆಯ ರಾಜಕಾರಣಿಗಳ ಬಗ್ಗೆ ಒಂದಷ್ಟು ಭರವಸೆ ಇಡಬಹುದಾಗಿದೆ.
ಹಾಗೆ ನೋಡಿದರೆ ಕಲ್ಯಾಣ ಕರ್ನಾಟಕದಲ್ಲಿ ಒಗ್ಗಟ್ಟು ಸಂಘಟನೆ ಅದಲು ಬದಲಾಗಿದೆ. ಬಲಾಢ್ಯರು, ಶ್ರೀಮಂತರು, ಜಮೀನ್ದಾರರು, ಮೇಲ್ವರ್ಗದವರು ಇವರೆಲ್ಲರನ್ನೂ ಒಳಗೊಂಡ ರಾಜಕಾರಣಿಗಳು ಆಡಳಿತ ವರ್ಗ, ನೌಕರ ವರ್ಗ, ಇವರ ವ್ಯವಹಾರಗಳನ್ನು ಕುದುರಿಸುವ ಪುಡಿ ರಾಜಕಾರಣಿಗಳು, ಮಧ್ಯವರ್ತಿಗಳು. ಈ ಎಲ್ಲರಿಗೂ ಬೆಂಬಲವಾಗಿರುವ ಕೆಲವು ಜನಚಳವಳಿ ಹೆಸರಿನ ಸಂಘಟನೆಗಳು, ಪ್ರಾದೇಶಿಕ ಮಾಧ್ಯಮಗಳು ಇವರುಗಳೆಲ್ಲ ಅಖಂಡವಾಗಿ ಒಗ್ಗಟ್ಟಾಗಿದ್ದಾರೆ. ರಾಜಕಾರಣಿಗಳನ್ನು ಪ್ರಶ್ನಿಸಬೇಕಾದ ಸಾಮಾನ್ಯ ಜನರು, ಅಧಿಕಾರಿಗಳನ್ನು ಜನಪರವಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುವಂತೆ ಎಚ್ಚರಿಸಬೇಕಾದ ವಿದ್ಯಾವಂತರು ಪ್ರಜ್ಞಾವಂತರು, ಇಲ್ಲಿನ ಅವ್ಯವಸ್ಥೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕಾಗಿದ್ದ ಪ್ರಾಮಾಣಿಕ ಜನಚಳವಳಿಯ ಸಂಘಟನೆಗಳು, ಪ್ರಾದೇಶಿಕ ಮಾಧ್ಯಮಗಳು ಒಡೆದು ಚೂರಾಗಿವೆ ಅಥವಾ ಇವುಗಳನ್ನೆಲ್ಲಾ ಭ್ರಷ್ಟಗೊಳಿಸಲಾಗಿದೆ. ಮೇಲಿನ ಸೂತ್ರ ಅದಲು ಬದಲಾಗದಿದ್ದರೆ ಇನ್ನೂ ನೂರು ವರ್ಷ ಲಕ್ಷಾಂತರ ಕೋಟಿ ರೂ.ಗಳನ್ನು ಸುರಿದರೂ ಕಲ್ಯಾಣ ಕರ್ನಾಟಕ ಅಭಿವೃದ್ಧಿಯಾಗುವುದಿಲ್ಲ. ನಿಜಕ್ಕೂ ಕಲ್ಯಾಣ ಕರ್ನಾಟಕದಲ್ಲಿ ಅಭಿವೃದ್ದಿ ಆಗಿರುವ ವರ್ಗಗಳೆಂದರೆ ಪಕ್ಷಾತೀತವಾಗಿ ಎಲ್ಲಾ ರಾಜಕಾರಣಿಗಳು, ಅಧಿಕಾರಿ ಮತ್ತು ನೌಕರ ವರ್ಗ, ಈ ಇಬ್ಬರಿಗೂ ಜತೆಯಾದ ಮಧ್ಯವರ್ತಿಗಳು, ಕೆಲವು ಚಳವಳಿಗಾರರು ಮತ್ತು ಜನಪರ ಎಂದು ಹೇಳಿಕೊಳ್ಳುವ ಕೆಲವು ಸಂಘಟನೆಗಳು, ಕೆಲವು ಪಾದೇಶಿಕ ಮಾಧ್ಯಮಗಳ ಪ್ರತಿನಿಧಿಗಳು ಮಾತ್ರ.
ನಿಜಕ್ಕೂ ಕಲ್ಯಾಣ ಕರ್ನಾಟಕದ ಸಮಸ್ಯೆಯ ಬೇರು ಇರುವುದು ಇಲ್ಲಿನ ಭ್ರಷ್ಟಗೊಂಡ ಶಿಕ್ಷಣದಲ್ಲಿ. ನೆಲ್ಸನ್ ಮಂಡೇಲಾ ಅವರು ‘ಒಂದು ದೇಶವನ್ನು ನಾಶ ಮಾಡಲು ಮದ್ದು ಗುಂಡಿನ ಅಗತ್ಯವಿಲ್ಲ, ಅಲ್ಲಿನ ಶಿಕ್ಷಣವನ್ನು ಭ್ರಷ್ಟಗೊಳಿಸಿದರೆ ಸಾಕು ಆ ದೇಶ ತಾನಾಗೆ ನಾಶವಾಗುತ್ತದೆ’ ಎನ್ನುತ್ತಾರೆ. ಡಾ.ಬಿ.ಆರ್.ಅಂಬೇಡ್ಕರ್ ಅವರು ‘ನಿಜವಾದ ಶಿಕ್ಷಣವು ಮಾನಸಿಕ ಮತ್ತು ಬೌದ್ಧಿಕ ಬೆಳವಣಿಗೆಗೆ ಅಸ್ತ್ರವಿದ್ದಂತೆ, ಶಿಕ್ಷಣವು ಗುಲಾಮಿತನದಿಂದ ಹೊರಬಂದು ರಾಜಕೀಯ ಸ್ವಾತಂತ್ರ್ಯ ಪಡೆಯಲು ಕೀಲಿ ಕೈ’ ಎನ್ನುತ್ತಾರೆ. ಈ ಎರಡೂ ಮಾತುಗಳ ಕಣ್ಣೋಟದಲ್ಲಿ ಕಲ್ಯಾಣ ಕರ್ನಾಟಕದ ಶಿಕ್ಷಣವನ್ನು ಗಮನಿಸಿದರೆ ಬಹುಪಾಲು ಶಿಕ್ಷಣವನ್ನು ಭ್ರಷ್ಟಗೊಳಿಸಲಾಗಿದೆ. ಪದವಿ ವಿದ್ಯಾರ್ಥಿಗಳಿಗೆ ಕನ್ನಡ ಓದಲು ಬರೆಯಲು ಬಾರದಷ್ಟು ಕಳಪೆಯಾಗಿದೆ. ಕಳಪೆ ಡಾಕ್ಟರುಗಳು, ಇಂಜಿನಿಯರುಗಳೂ ಉತ್ಪಾದನೆಯಾಗುತ್ತಿದ್ದಾರೆ. ಹೀಗೆ ಕಳಪೆ ಶಿಕ್ಷಣ ಪಡೆದವರೇ ಇಲ್ಲಿ ಶಿಕ್ಷಕರಾಗಿ, ಅಧ್ಯಾಪಕರಾಗಿ ನೇಮಕವಾಗುತ್ತಾರೆ. ಅವರು ಪಡೆದ ಕಳಪೆ ಶಿಕ್ಷಣಕ್ಕಿಂತ ಕೆಳಮಟ್ಟದ ಶಿಕ್ಷಣವನ್ನು ಮಕ್ಕಳಿಗೆ ಕೊಡುತ್ತಾರೆ. ಇದೊಂದು ವೃತ್ತಾಕಾರದ ಹಿಮ್ಮುಖ ಚಲನೆ. ವಿದ್ಯಾರ್ಥಿಗಳು ಸ್ವಂತ ಆಲೋಚಿಸುವಂತೆ, ಪ್ರಶ್ನಿಸುವಂತೆ ಕಲಿಸದಿರುವುದೇ ಇಲ್ಲಿನ ಸಮಸ್ಯೆಯ ಆಳದಲ್ಲಿರುವ ಮೂಲ. ಈ ಭಾಗದ ಶಿಕ್ಷಣವೊಂದು ಸರಿಯಾದರೆ ಉಳಿದೆಲ್ಲವೂ ನಿಧಾನಕ್ಕೆ ಸರಿದಾರಿಗೆ ಬರುವ ಸಾಧ್ಯತೆ ಇದೆ. ಕಲ್ಯಾಣ ಕರ್ನಾಟಕವನ್ನು ಅಭಿವೃದ್ಧಿ ಮಾಡುವ ಪ್ರಾಮಾಣಿಕ ಕನಸಿದ್ದ ರಾಜಕಾರಣಿಗಳು ಅಧಿಕಾರಿಗಳು ಇಲ್ಲಿನ ಭ್ರಷ್ಟಗೊಂಡ ಶಿಕ್ಷಣವನ್ನು ಸರಿಪಡಿಸಬೇಕಿದೆ. ಕಲಬುರಗಿಯನ್ನು ಒಳಗೊಂಡಂತೆ ಕಲ್ಯಾಣ ಕರ್ನಾಟಕದಲ್ಲಿ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರನ್ನು ದೇವರನ್ನಾಗಿಸಿ ಶ್ರದ್ಧೆಯಿಂದ ಆರಾಧಿಸುತ್ತಾರೆ. ಆದರೆ ಅಂಬೇಡ್ಕರ್ ಕನಸು ಕಂಡ ನೈತಿಕ ಪ್ರಜ್ಞೆಯ ಶೇ. ಒಂದರಷ್ಟನ್ನು ಜನರು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡಿದ್ದರೆ ಬಹುಶಃ ಕಲ್ಯಾಣ ಕರ್ನಾಟಕದ ಸ್ಥಿತಿ ಹೀಗಿರುತ್ತಿರಲಿಲ್ಲ.
(ಅಂಕಣಕಾರರು ಕಲಬುರಗಿಯ ಡಾ.ಅಂಬೇಡ್ಕರ್ ಪದವಿ ಮಹಾವಿದ್ಯಾನಿಲಯ ಮತ್ತು ಸ್ನಾತಕೋತ್ತರ ಕೇಂದ್ರದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ)