ಒಂದು ಹೊಸ ಗುಡಾರದ ಕಥೆ
2011ರ ಜನಗಣತಿಯ ಪ್ರಕಾರ ಕರ್ನಾಟಕದಲ್ಲಿ ಬುಡುಗಜಂಗಮರು ಒಂದು ಲಕ್ಷದ ಹದಿನೇಳು ಸಾವಿರದಷ್ಟಿದ್ದಾರೆ. ಈಗ ಎಲ್ಲಾ ನಗರಗಳ ಮೈಗೆ ಅಂಟಿಕೊಂಡಂತೆ ಈ ಸಮುದಾಯ ಹಲವು ಸಮಸ್ಯೆಗಳೊಂದಿಗೆ ಉಸಿರುಕಟ್ಟಿ ಬದುಕುತ್ತಿದೆ. ಗಂಡಸರು ಚಿಕ್ಕಪುಟ್ಟ ವ್ಯಾಪಾರ ಮಾಡಿದರೆ, ಮಹಿಳೆಯರಲ್ಲಿ ಬಹುತೇಕರು ನಗರಗಳಲ್ಲಿ ಚಿಂದಿ ಹಾಯುತ್ತಾರೆ. ಮಕ್ಕಳ ಶಿಕ್ಷಣವೂ ಅನಿಶ್ಚಿತ. ಹೀಗೆ ನಾಗರಿಕ ಜಗತ್ತು ಬಳಸಿ ಬಿಸಾಡಿದ ವಸ್ತುಗಳಿಂದಲೇ ಬದುಕು ಕಟ್ಟಿಕೊಳ್ಳುವ ಈ ಸಮುದಾಯವನ್ನು ಸರಕಾರ ತಾಯ್ತನದಿಂದ ನೋಡಬೇಕಾಗಿದೆ.
ಅಂದು ನಾನು ಬೈಕ್‌ನಲ್ಲಿ ಕಲಬುರಗಿಯ ಹೊರವಲಯ ದಲ್ಲಿರುವ ಬುಡಗಜಂಗಾಲು ಸಮುದಾಯವನ್ನು ಹುಡುಕಿಕೊಂಡು ಹೊರಟೆ. ನಾವಿರುವ ಕುವೆಂಪು ನಗರದಲ್ಲಿ ಚಿಂದಿಹಾಯಲು ಬಂದಿದ್ದ ಮಹಿಳೆಯರನ್ನು ಮಾತನಾಡಿಸಿ ಅವರ ವಸತಿಯ ಬಗ್ಗೆ ಕೇಳಿದ್ದೆ. ಅವರು ‘‘ಶಾಬಾದ ರಿಂಗ್ ರೋಡಿಗೆ ಬಂದು ಜೋಪಡಿ ಪಟ್ಟಿ ಎಲ್ಲಿದೆ ಅಂತ ಕೇಳಿದ್ರೆ ಯಾರಾದ್ರೂ ಹೇಳ್ತಾರೆ ಸಾರ್’’ ಎಂದಿದ್ದರು. ಇದೇ ಮಾತನ್ನು ಗುರುತಾಗಿಟ್ಟುಕೊಂಡು ಶಾಬಾದ್ ರೋಡಿನ ಸುತ್ತಮುತ್ತ ಎಲ್ಲಾ ಕಡೆ ಹುಡುಕಿದರೂ ಜೋಪಡಿಪಟ್ಟಿ ಕಾಣಿಸಲಿಲ್ಲ. ಯಾದಗಿರಿ ಕಡೆ ಹೋಗುವ ರಸ್ತೆಯ ಸರ್ಕಲ್‌ನಲ್ಲಿ ಆಟೋ ಚಾಲಕನನ್ನು ವಿಚಾರಿಸಿದೆ. ಅವರ ವಾಸ ಕುಸುನೂರು ಪಕ್ಕ ಇದೆಯೆಂದೂ, ಹೇಗೆ ಹೋಗಬೇಕೆಂದೂ ತಿಳಿಸಿದರು. ಹೀಗೆ ಇವರು ಹೇಳಿದ ಹಾಗೆ ದಾರಿ ಹಿಡಿದು ಹೊರಟೆ.
ಜೋಪಡಿಪಟ್ಟಿಗೂ ಮೊದಲು ಸರಕಾರಿ ಪ್ರಾಥಮಿಕ ಶಾಲೆಯೊಂದು ಬಂತು. ಈ ಶಾಲೆಗೆ ಜೋಪಡಿಪಟ್ಟಿಯ ಮಕ್ಕಳು ಬರುತ್ತಿರಬಹುದೇ ಎಂಬ ಕುತೂಹಲಕ್ಕೆ ಶಾಲೆಯನ್ನು ಪ್ರವೇಶಿಸಿದೆ. ಮಧ್ಯಾಹ್ನದ ಬಿಸಿಯೂಟ ಮಾಡುವ ಹೆಣ್ಣುಮಗಳು ಯಾರೋ ಅಧಿಕಾರಿ ಬಂದರೆಂಬಂತೆ ಭಯಗೊಂಡಿದ್ದರು. ನಾನು ಏನನ್ನೂ ಕೇಳದೆಯೇ ‘‘ಸರ್ ಇದು ಅಡುಗೆ ಕೋಣೆ, ಅಡುಗೆಯನ್ನು ಸರಿಯಾಗಿ ಸ್ವಚ್ಛವಾಗಿ ಮಾಡುತ್ತೇವೆ’’ ಎಂದು ಅಡುಗೆ ಮನೆಯನ್ನು ತೋರಿಸಿದರು. ನಾನು ಎಲ್ಲವನ್ನು ಪರಿಶೀಲಿಸಿದಂತೆ ಮಾಡಿ, ‘‘ಬುಡಗಜಂಗಮ ಸಮುದಾಯದ ಮಕ್ಕಳು ಶಾಲೆಗೆ ಬರುತ್ತಾರೆಯೇ?’’ ಎಂದು ಕೇಳಿದೆ. ಅವರ ಮುಖ ಅರಳಿದಂತಾಯಿತು, ‘‘ಊ ಸರ್ ಜೋಪಡಿಪಟ್ಟಿ ಮಕ್ಕಳೆಲ್ಲಾ ನಮ್ ಶಾಲೆಗೆ ಬರೋದು’’ ಎಂದು ಹೇಳಿದರು.
ಆ ಕೋಣೆಯಲ್ಲಿ ಒಬ್ಬರು ದಪ್ಪ, ಎತ್ತರದ ವ್ಯಕ್ತಿ ಕಂಪ್ಯೂಟರಲ್ಲಿ ಏನೋ ಟೈಪ್ ಮಾಡುತ್ತಾ ಕೂತಿದ್ದರು. ಇಪ್ಪತ್ತರಷ್ಟು ಮಕ್ಕಳು ತಮ್ಮ ಪಾಡಿಗೆ ಮೇಷ್ಟ್ರು ಹಾಕಿಕೊಟ್ಟ ಕಾಗುಣಿತದ ಕಾಫಿರೈಟಿಂಗ್ ಮಾಡುತ್ತಿದ್ದರು. ಆ ವ್ಯಕ್ತಿ ನನ್ನನ್ನು ನೋಡಿ ‘‘ಏನಾಗಬೇಕಿತ್ತು ಸರ್’’ ಎಂದು ಮಾತನಾಡಿಸಿದರು. ನಾನು ನನ್ನ ಪರಿಚಯ ಹೇಳಿಕೊಂಡೆ. ಅವರು ಬಸವರಾಜ ಸಜ್ಜನ್, ಮುಖ್ಯೋಪಾಧ್ಯಾಯರೆಂದೂ ಪರಿಚಯಿಸಿಕೊಂಡರು. ಇವರನ್ನು ಒಳಗೊಂಡಂತೆ ಈ ಶಾಲೆಯಲ್ಲಿ ಮೂವರು ಶಿಕ್ಷಕಿಯರು ಕೆಲಸ ಮಾಡುತ್ತಿದ್ದಾರೆ. ನಾನು ಬುಡುಗ ಜಂಗಾಲು ಮಕ್ಕಳ ಬಗ್ಗೆ ವಿಚಾರಿಸಿದೆ. ಈ ಮಕ್ಕಳನ್ನು ತೋರಿಸಿದರು. ಈ ಮಕ್ಕಳನ್ನು ಕರೆತರಲು ಜೋಪಡಿ ಪಟ್ಟಿಗೆ ಹೋಗುವುದಾಗಿಯೂ, ಇವರಿಗೆ ಕನ್ನಡ ಸರಿಯಾಗಿ ಅರ್ಥವಾಗುವುದಿಲ್ಲ. ತೆಲುಗಿನ ಮೂಲಕ ಕನ್ನಡ ಕಲಿಸಬೇಕೆಂದೂ, ಅದಕ್ಕಾಗಿ ತಾನು ಈ ಶಾಲೆಗೆ ಬಂದ ಮೇಲೆ ತೆಲುಗು ಕಲಿತರು ಎಂದು ವಿವರಿಸಿದರು. ಈ ಮಕ್ಕಳ ನಡವಳಿಕೆಯನ್ನು ವಿವರಿಸಿದರು. ಅವರ ನಡೆ ನುಡಿಯಲ್ಲಿ ಮಕ್ಕಳಿಗೆ ಏನಾದರೂ ಕಲಿಸಬೇಕು ಎನ್ನುವ ಕಾಳಜಿ ಇದ್ದಂತೆ ಕಾಣುತ್ತಿತ್ತು.
ಈ ಶಾಲೆಯಲ್ಲಿ ಬುಡುಗಜಂಗಾಲು ಸಮುದಾಯದ ಒಂದರಿಂದ ಐದನೇ ತರಗತಿಯ ತನಕ 43 ಹುಡುಗರು, 41 ಹುಡುಗಿಯರನ್ನು ಒಳಗೊಂಡಂತೆ ಒಟ್ಟು 84 ಮಕ್ಕಳು ಓದುತ್ತಿದ್ದಾರೆ. ‘‘ಇದರಲ್ಲಿ ಅರ್ಧದಷ್ಟು ಆಬ್ಸೆಂಟ್ ಆದರೆ ಅರ್ಧದಷ್ಟು ಹಾಜರಾಗುತ್ತಾರೆ. ಇಂದು ಬಂದವರು ನಾಳೆ ಬರುವುದಿಲ್ಲ, ನಾಳೆ ಬಂದವರು ನಾಡಿದ್ದು ಬರುವುದಿಲ್ಲ. ಜೋಪಡಿಪಟ್ಟಿಯಲ್ಲಿ ಮದುವೆ ಹಬ್ಬ ಇದ್ದರಂತೂ ವಾರಗಟ್ಟಲೆ ಶಾಲೆ ಕಡೆ ತಲೆ ಹಾಕುವುದಿಲ್ಲ. ಹೀಗಾಗಿ ನಿಯಮಿತವಾಗಿ ಶಾಲೆಗೆ ಬರದ ಕಾರಣ ಇವರಿಗೆ ಕಲಿಸುವುದು ನಮಗೆ ಬಹಳ ಕಷ್ಟವಾಗಿದೆ. ನಾವು ಜೋಪಡಿಪಟ್ಟಿಗೆ ಹೋಗಿ ಅವರ ತಂದೆ ತಾಯಂದಿರಿಗೆ ಹೇಳೋಣವೆಂದರೆ ಬಹುತೇಕರು ಕೆಲಸಕ್ಕೆ ಹೋಗಿರುವುದರಿಂದ ಅವರು ನಮಗೆ ಸಿಗುವುದೇ ಕಷ್ಟ.’’ ಎಂದು ತಮ್ಮ ಕಷ್ಟವನ್ನು ಹೇಳಿಕೊಂಡರು. ಇರುವ ಮಕ್ಕಳಿಗೆ ರೂಮುಗಳು ಸಾಕಾಗುತ್ತಿಲ್ಲವೆಂದೂ ನೀವೇನಾದರೂ ನಮಗೆ ರೂಮು ಕೊಡಿಸಲು ಸಹಾಯ ಮಾಡಬಹುದೇ ಎಂದು ಕೇಳಿದರು. ನಾನು ‘‘ಈಗ ಅಧ್ಯಯನ ಶುರುಮಾಡಿದ್ದೇನೆ. ಅಧ್ಯಯನ ಮುಗಿದು ಒಂದು ವರದಿಯನ್ನು ಸಿದ್ಧಪಡಿಸುವೆ, ಅದರಲ್ಲಿ ನಿಮ್ಮ ಶಾಲೆಯ ಸಮಸ್ಯೆಯ ಬಗ್ಗೆ ಬರೆಯುವೆ. ನಿಮ್ಮ ಸಮಸ್ಯೆಯನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರಬಲ್ಲೆ. ಅಷ್ಟು ಮಾತ್ರ ನನ್ನಿಂದ ಸಾಧ್ಯ’’ ಎಂದು ನನ್ನ ಮಿತಿಯಲ್ಲಿ ಅವರಿಗೆ ಭರವಸೆ ನೀಡಿದೆ. ಬುಡುಗಜಂಗಾಲು ಮಕ್ಕಳ ಜತೆ ಮಾತನಾಡಿ ಅವರೊಂದಿಗೆ ಸೆಲ್ಫಿ ತೆಗೆದುಕೊಂಡು, ಮೇಷ್ಟ್ರು ಕೈ ತೋರಿದ ಕಡೆ ಮುಂದೆ ಸಾಗಿದೆ.
ರಿಯಲ್ ಎಸ್ಟೇಟಿನ ಹಾವಳಿ ಇಲ್ಲಿಯೂ ನಡೆದಿತ್ತು. ಕಾಲನಿಯೊಂದರ ಕಾಮಗಾರಿ ನಡೆದಿತ್ತು. ಈ ಕಾಲನಿಯನ್ನು ದಾಟಿಕೊಂಡು ಮುಂದೆ ಹೋದರೆ ನೂರಾರು ಗುಡಾರಗಳು ಎದುರಾದವು. ಕೆಲವು ಗುಡಿಸಲುಗಳ ಮಧ್ಯೆಯೇ ಅಲ್ಲೊಂದು ಇಲ್ಲೊಂದು ಆರ್‌ಸಿಸಿ ಮನೆಗಳಿದ್ದವು. ಸಿಮೆಂಟ್ ಕಾಂಕ್ರಿಟ್ ರಸ್ತೆ ಇತ್ತು. ಆರಂಭಕ್ಕೆ ‘ಬಸವರಾಜ ಮತ್ತಿಮೂಡ ಕಾಲನಿ’ ಎಂದು ಈ ಭಾಗದ ಶಾಸಕರ ಫೋಟೊ ಇರುವ ಬೋರ್ಡ್ ಎದುರಾಯಿತು.. ಇದರ ಮುಂದೆ ಬುದ್ಧ, ಬಸವ, ಅಂಬೇಡ್ಕರ್ ಚಿತ್ರದೊಂದಿಗೆ ‘ಬೇಡ ಬುಡ್ಗ ಜಂಗಮ ಕಾಲನಿ ಕುಸನೂರು, ಕಲಬುರಗಿ’ ಎನ್ನುವ ಬೋರ್ಡೂ ಕಾಣಿಸಿತು. ಒಂದು ಹೆಸರು ಶಾಸಕರ ಹೆಸರಲ್ಲಿದ್ದರೆ, ಮತ್ತೊಂದು ಹೆಸರು ಸಮುದಾಯದವರದ್ದು.
ಕೆಲವರನ್ನು ಮಾತನಾಡಿಸಿದಾಗ ಸಮುದಾಯದ ಅಧ್ಯಕ್ಷ ಮರಿಲಿಂಗಪ್ಪ ಅವರ ಬಗ್ಗೆ ತಿಳಿಸಿದರು. ನಾನು ಮರಿಲಿಂಗಪ್ಪ ಅವರ ಮನೆಗೆ ಹೋದೆ. ಕನಿಷ್ಠ ಸೌಲಭ್ಯಗಳಿರುವ ಆರ್‌ಸಿಸಿ ಮನೆಯೊಳಗಿಂದ ಅವರು ಬಂದರು. ಮನೆ ಮಕ್ಕಳಿಂದ ಗಿಜಿಗುಡುತ್ತಿತ್ತು. ಅವರ ಬಳಿ ನನ್ನನ್ನು ಪರಿಚಯಿಸಿಕೊಂಡೆ. ಹಾಗೆಯೇ ಅವರಿಗೆ ಪರಿಚಯವಿದ್ದ ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಬುಡಕಟ್ಟು ಅಧ್ಯಯನ ವಿಭಾಗದ ಪ್ರೊ.ಕೆ.ಎಂ. ಮೇತ್ರಿ ಅವರಿಗೆ ಕಾಲ್ ಮಾಡಿ ಮಾತನಾಡಿಸಿದೆ. ಹೀಗೆ ಪರಿಚಯ ವಿಶ್ವಾಸಕ್ಕೆ ತಿರುಗಿತು. ನಾನು ನನ್ನನ್ನು ಕಾಲೇಜಿನಲ್ಲಿ ಪಾಠ ಮಾಡುವ ಮೇಷ್ಟ್ರು ಎಂದೂ, ಯಾವುದೇ ಪದವಿಗಾಗಿಯೋ, ಯಾವುದೋ ಸರಕಾರಿ ಯೋಜನೆಗಾಗಿಯೋ ಅಧ್ಯಯನ ಮಾಡಲು ಬಂದಿಲ್ಲ. ನನ್ನ ವೈಯಕ್ತಿಕ ಆಸಕ್ತಿಯಿಂದ ಸರ್ವೇ ಮಾಡಿ, ಒಂದು ವರದಿ ಸಿದ್ಧಪಡಿಸಿ, ನಿಮ್ಮ ಸಮಸ್ಯೆಗಳನ್ನು ಸಂಬಂಧಿಸಿದ ಅಧಿಕಾರಿಗಳಿಗೆ ಸಲ್ಲಿಸಿ ನಿಮ್ಮಿಂದಲೇ ಹಕ್ಕೊತ್ತಾಯ ಮಂಡಿಸುವೆ. ಏನಾದರೂ ಸ್ಪಂದನ ಸಿಕ್ಕರೆ, ಸೌಲಭ್ಯಗಳು ಸಿಕ್ಕರೆ ಅದುವೇ ನನಗೆ ಆದ ಲಾಭ ಎಂದು ವಿವರಿಸಿದೆ. ಮರಿಲಿಂಗಪ್ಪನವರು ‘‘ನಮ್ಮ ಸಮುದಾಯಕ್ಕೆ ನಿಮ್ಮ ಅಧ್ಯಯನದಿಂದ ಏನಾದರೂ ಚೂರು ಸೌಲಭ್ಯಗಳು ಸಿಗುವುದಾದರೆ ಮಾಡಿ ನಮ್ಮ ಬೆಂಬಲವಿದೆ’’ ಎಂದರು. ಹೀಗೆ ಜೋಪಡಿ ಪಟ್ಟಿಯ ಗುಡಾರಗಳ ಸರ್ವೇಯನ್ನು ಶರುಮಾಡಿದೆ.
ಇದೇ ಸಂದರ್ಭದಲ್ಲಿ ಹೊಸ ಗುಡಾರವೊಂದನ್ನು ಹಾಕುತ್ತಿರುವ ಸಂಭ್ರಮ ಸಡಗರ ಜೋರು ಮಾತುಕತೆ ಕೇಳುತ್ತಿತ್ತು. ನಾನು ಕುತೂಹಲದಿಂದ ಹೀಗೆ ಹೊಸ ಗುಡಾರ ಹಾಕುವವರ ಬಳಿ ಹೋಗಿ ಮಾತನಾಡುತ್ತಾ ಕೂತೆ. ಬೆಳಗಿನ ಜಾವದಿಂದ ಗುಡಾರ ಹಾಕುವ ಕೆಲಸ ನಡೆದಿತ್ತು. ಎಂಟು-ಹತ್ತು ಜನರು ಈ ಗುಡಾರ ಹಾಕುವುದರಲ್ಲಿ ತೊಡಗಿದ್ದರು. ಈ ಗುಡಾರವು ಇತರೆಲ್ಲಾ ಗುಡಾರಕ್ಕಿಂತ ಚೂರು ಭಿನ್ನವಾಗಿತ್ತು. ಎಲ್ಲವೂ ಬಾಗುವ ವಾರೆಯಾಗಿರುವ ಗುಡಾರಗಳು. ಮಳೆನೀರು ಬಿದ್ದರೆ ಹಾಗೆ ಜಾರಿ ನೆಲಕ್ಕೆ ಬಿದ್ದು ಹರಿದುಹೋಗಬೇಕು ಅಂತಹ ಮಾದರಿಯವು. ಆದರೆ ಈ ಗುಡಾರ ಸುತ್ತಲೂ ಗೋಡೆ ಮತ್ತು ಮೇಲೆ ವಾರೆಯಾದ ಹಂಚೋ ಚಪ್ಪರವನ್ನೋ ಹಾಕುವ ಮಾದರಿಯದ್ದು. ಆದರೆ ಸುತ್ತಲೂ ಸೀರೆಯಲ್ಲಿ ಹೆಣೆದ ಕೌದಿ, ಮೇಲೆಯೂ ಕೌದಿಯದೇ ಹೊದಿಕೆ.
ಪ್ರತಿಯೊಬ್ಬರಿಗೂ ಮನೆಕಟ್ಟಿಸುವುದು ದೊಡ್ಡ ಕನಸು. ಮನೆ ಕಟ್ಟುವ ಪ್ರತಿಯೊಬ್ಬರ ಕನಸೂ ಅವರವರ ಸಾಮಾಜಿಕ ಆರ್ಥಿಕ ಹಿನ್ನೆಲೆಯಲ್ಲಿ ಬದಲಾಗುತ್ತದೆ. ಹಾಗೆಯೇ ಅಲೆಮಾರಿ ಬುಡುಗ ಜಂಗಮರದು ಗುಡಾರ ಹಾಕಿಕೊಳ್ಳುವುದೂ ಒಂದು ಕನಸು. ಈ ಕನಸು ಶುರುವಾದಾಗ ಹಳೆಯ ಹರಕಲು ಗುಡಾರದಲ್ಲಿರುತ್ತಾರೆ. ಹೊಸ ಗುಡಾರ ಹಾಕುವ ಕನಸು ಚಿಗುರೊಡೆದಂದಿನಿಂದ ಹಳೆಯ ಸೀರೆಗಳನ್ನು ಸಂಗ್ರಹಿಸಲು ಶುರು ಮಾಡುತ್ತಾರೆ. ಕನಿಷ್ಠ ಅರುವತ್ತರಿಂದ ನೂರು ಸೀರೆಗಳ ತನಕ ಸಂಗ್ರಹ ಮಾಡುತ್ತಾರೆ. ಕೆಲವನ್ನು ಚಿಂದಿಹಾಯುವಾಗ ಯಾರಾದರೂ ಕೊಟ್ಟಿರುತ್ತಾರೆ. ಮತ್ತೆ ಕೆಲವನ್ನು ಹಳೆ ಬಟ್ಟೆಗಳ ಮಾರುಕಟ್ಟೆಯಲ್ಲಿ ಕೊಳ್ಳುತ್ತಾರೆ. ಹೀಗೆ ಗುಡಾರಕ್ಕೆ ಸಾಕಾಗುವಷ್ಟು ಸೀರೆಗಳನ್ನು ಕಲೆಹಾಕಿದ ಮೇಲೆ, ಮೂರು ನಾಲ್ಕು ಸೀರೆಗಳನ್ನು ಸೇರಿಸಿ ಕೌದಿ ಹೊಲಿಯುತ್ತಾರೆ.
ಹೀಗೆ ಒಂದು ಗುಡಾರಕ್ಕೆ ಬೇಕಾಗುವಷ್ಟು ಕೌದಿ ಸಿದ್ಧವಾದ ನಂತರ, ಗುಡಾರಕ್ಕೆ ಬೇಕಾದ ಮೂರ್ನಾಲ್ಕು ಗೂಟ ಅಥವಾ ಕಂಬಗಳನ್ನು ಜೋಡಿಸಿಕೊಳ್ಳುತ್ತಾರೆ. ಕೆಲವೊಮ್ಮೆ ಕಾಡಿನಿಂದಲೋ ಹೊಲಗಳ ಬದುವಿನಿಂದಲೋ ಕಡಿದು ತರುತ್ತಾರೆ. ಆದರೆ ಈಗೀಗ ಸಾಮಿಲ್‌ನಿಂದಲೋ, ಮೇದಾರರಿಂದಲೋ ಕೊಂಡುಕೊಳ್ಳುತ್ತಾರೆ. ಗುಡಾರವನ್ನು ಮೂರು ತರದಲ್ಲಿ ಹಾಕುತ್ತಾರೆ. ಮೊದಲ ತರ ಸೀರೆಯ ಕೌದಿ. ನಂತರದ್ದು ನೀರನ್ನು ಹಿಡಿಯದ ಪ್ಲಾಸ್ಟಿಕ್ ತಾಡಪಾಲು(ಕೆಲವೊಮ್ಮೆ ಬಜಾರುಗಳಲ್ಲಿ ಹಾಕಿರುವ ಪ್ಲೆಕ್ಸ್/ಹೋರ್ಡಿಂಗ್ಸ್ ಸಂಗ್ರಹಿಸಿಟ್ಟುಕೊಂಡು ಹಾಕುತ್ತಾರೆ) ನಂತರ ಹೀಗೆ ಪ್ಲಾಸ್ಟಿಕ್ ಪದರು ಹಾರಿ ಹೋಗದಂತೆ ಮೇಲೆ ಮತ್ತೆ ದಪ್ಪನೆ ಕೌದಿ ಹಾಸಿ ಗಾಳಿಗೆ ಅಲುಗದಂತೆ ಹಗ್ಗಗಳಿಂದ ಬಿಗಿದು ಕಟ್ಟುತ್ತಾರೆ. ಜಾಗ ಕೆಲವೊಮ್ಮೆ ಅವರದ್ದೇ ಆಗಿರುತ್ತದೆ, ಆದರೆ ಬಹಳ ಕುಟುಂಬಗಳು ತಮ್ಮದಲ್ಲದ ಜಾಗದಲ್ಲಿಯೂ ಗುಡಾರ ಹಾಕುತ್ತಾರೆ. ಜಾಗ ಅವರದ್ದೇ ಆಗಿದ್ದರೆ ಮೊದಲಿಗೆ ನೆಲಕ್ಕೆ ಕಡಪಾ ಕಲ್ಲಿನದೋ ಸಿಮೆಂಟಿನದೋ ನೆಲಹಾಸನ್ನು ಸಿದ್ಧಪಡಿಸಿಕೊಳ್ಳುತ್ತಾರೆ.
ಹೀಗೆ ಇಡೀ ಮನೆಗೆ ಬೇಕಾಗುವಷ್ಟು ಬಿದಿರನ್ನು ಕೊಂಡು ಅದನ್ನು ಅರ್ಧಕ್ಕೆ ಸೀಳಿಟ್ಟುಕೊಂಡಿರುತ್ತಾರೆ. ಹೀಗೆ ಎಲ್ಲವೂ ಸಿದ್ಧಗೊಂಡ ನಂತರ ಐದರಿಂದ ಹತ್ತು ಜನರನ್ನು ಗುಡಾರ ಹಾಕಲು ಜೋಡಿಸಿಕೊಳ್ಳುತ್ತಾರೆ. ಅವರಿಗೆ ದಿನಕ್ಕೆ ರೂ. ಐದುನೂರೋ ಸಾವಿರವೋ ಕೊಡಬೇಕು. ಇಲ್ಲವೇ ಸಾಟಿಯಾಗುವಂತೆ ಕುಡಿತ, ಹೊಟ್ಟೆತುಂಬಾ ನಾನ್‌ವೆಜ್ ಊಟವನ್ನು ಮಾಡಿಸಬೇಕಾಗುತ್ತದೆ. ಹೀಗೆ ಒಂದು ಪುಟ್ಟ ಗುಡಾರ ಸಿದ್ದವಾಗಲು ಮೂರ್ನಾಲ್ಕು ತಿಂಗಳ ಸಿದ್ಧತೆ ಮತ್ತು ಕನಿಷ್ಠ ಹತ್ತರಿಂದ ಹದಿನೈದು ಸಾವಿರ ಹಣ ಬೇಕಾಗುತ್ತದೆ. ಹೀಗೊಂದು ಹೊಸ ಗುಡಾರ ಹಾಕಿದಾಗ ಗುಡಾರದ ಒಳಗಿದ್ದ ತಾಯಿಯ ಕಣ್ಣಲ್ಲಿ ಎಂಥದೋ ವಿವರಿಸಲಾಗದ ಸಂತೋಷ. ಸ್ವಂತ ಜಾಗ ಇಲ್ಲದಿದ್ದ ಸಂದರ್ಭದಲ್ಲಿ ಆ ಜಾಗದ ಮೂಲ ವಾರಸುದಾರರು ತಕರಾರು ತೆಗೆದು ಹಾಕಿದ ಗುಡಾರಗಳನ್ನು ನಿರ್ದಯವಾಗಿ ಕಿತ್ತೆಸೆಯುತ್ತಾರೆ. ಇಂತಹ ಸಂದರ್ಭಗಳಲ್ಲಿ ಇಡೀ ಕುಟುಂಬ ಕಣ್ಣೀರಾಗುತ್ತದೆ. ಇದು ಕರ್ನಾಟಕದಾದ್ಯಂತ ಇರುವ ಎಲ್ಲಾ ಬುಡುಗಜಂಗಮರ ಸುಡುವ ವಾಸ್ತವ.
ಮೂಲತಃ ಆದಿ ಚೆಂಚರಿಂದ ಶುರುವಾದ ಈ ಸಮುದಾಯ ಬೇರೆ ಬೇರೆ ಹೆಸರುಗಳಲ್ಲಿ ದಕ್ಷಿಣ ಭಾರತದಾದ್ಯಂತ ಹರಡಿಕೊಂಡಿದ್ದಾರೆ. ಈ ಸಮುದಾಯದ ಬಗ್ಗೆ ಹಲವು ನೆಲೆಗಳಲ್ಲಿ ಅಧ್ಯಯನಗಳು ನಡೆದಿವೆ. ಮೂಲತಃ ಆಂಧ್ರದ ಶ್ರೀಶೈಲದ ಅರಣ್ಯದ ಭಾಗದಿಂದ ವಲಸೆ ಬಂದವರು ಎನ್ನುವ ಮೌಖಿಕ ಚರಿತ್ರೆ ಇದೆ. ಮನೆ ಮಾತು ತೆಲುಗು. ಬುರ‌್ರಕಥೆ ಹೇಳುವುದು, ಹಗಲುವೇಷ, ಬಾಳಸಂತೋಷಿ ಹೀಗೆ ಹಲವು ವೇಷ ಮತ್ತು ಹಾಡಿಕೆ ಸಂಪ್ರದಾಯ ಈ ಸಮುದಾಯಕ್ಕಿದೆ. 2011ರ ಜನಗಣತಿಯ ಪ್ರಕಾರ ಕರ್ನಾಟಕದಲ್ಲಿ ಬುಡುಗಜಂಗಮರು ಒಂದು ಲಕ್ಷದ ಹದಿನೇಳು ಸಾವಿರದಷ್ಟಿದ್ದಾರೆ. ಈಗ ಎಲ್ಲಾ ನಗರಗಳ ಮೈಗೆ ಅಂಟಿಕೊಂಡಂತೆ ಈ ಸಮುದಾಯ ಹಲವು ಸಮಸ್ಯೆಗಳೊಂದಿಗೆ ಉಸಿರುಕಟ್ಟಿ ಬದುಕುತ್ತಿದೆ. ಗಂಡಸರು ಚಿಕ್ಕಪುಟ್ಟ ವ್ಯಾಪಾರ ಮಾಡಿದರೆ, ಮಹಿಳೆಯರಲ್ಲಿ ಬಹುತೇಕರು ನಗರಗಳಲ್ಲಿ ಚಿಂದಿ ಹಾಯುತ್ತಾರೆ. ಮಕ್ಕಳ ಶಿಕ್ಷಣವೂ ಅನಿಶ್ಚಿತ. ಹೀಗೆ ನಾಗರಿಕ ಜಗತ್ತು ಬಳಸಿ ಬಿಸಾಡಿದ ವಸ್ತುಗಳಿಂದಲೇ ಬದುಕು ಕಟ್ಟಿಕೊಳ್ಳುವ ಈ ಸಮುದಾಯವನ್ನು ಸರಕಾರ ತಾಯ್ತನದಿಂದ ನೋಡಬೇಕಾಗಿದೆ.