ಬಿಹಾರ: ‘ಬಡತನವೇ’ ಎನ್‌ಡಿಎ ಬಹುಮತದ ರಹಸ್ಯ
ನಿತೀಶ್ ಕುಮಾರ್ ಜಾಣ ಮಾತ್ರವಲ್ಲ ಬಹು ದೊಡ್ಡ ಸಮಯಸಾಧಕ ಎನ್ನುವುದನ್ನು ಮತ್ತೊಮ್ಮೆ ರುಜುವಾತುಪಡಿಸಿದ್ದಾರೆ. ಮಹಾಘಟಬಂಧನ್ ಭಾಗವಾಗಿದ್ದ ಮತ್ತು ‘ಇಂಡಿಯಾ’ ಕೂಟದಲ್ಲಿ ಸಕ್ರಿಯವಾಗಿರುವ ಎಲ್ಲ ಪಕ್ಷಗಳ ನಾಯಕರು ಈ ಚುನಾವಣೆಯ ಸೋಲನ್ನು ಗಂಭೀರವಾಗಿ ಪರಿಗಣಿಸಬೇಕು. ಮಾತು ಮತ್ತು ಕ್ರಿಯೆಯ ನಡುವಿನ ಅಂತರವನ್ನು ಚೆನ್ನಾಗಿ ಗ್ರಹಿಸಬೇಕು.
ಬಿಹಾರ ಮತ್ತು ಕರ್ನಾಟಕ ರಾಜ್ಯವನ್ನು ಅಭಿವೃದ್ಧಿಯಲ್ಲಿ ಹೋಲಿಸಲಾಗದು. ಆದರೆ, ಒಂದೆರಡು ಅಂಶಗಳಲ್ಲಿ ಹೋಲಿಕೆಯಿದೆ. ಕರ್ನಾಟಕದಲ್ಲಿ ದೇವರಾಜ ಅರಸು ಅವರು ಜಾರಿಗೆ ತಂದ ಭೂಸುಧಾರಣಾ ಕಾಯ್ದೆಯನ್ನು ಬಿಹಾರ ರಾಜ್ಯದಲ್ಲೂ ಅನುಷ್ಠಾನಗೊಳಿಸಲು ಪ್ರಯತ್ನಿಸಲಾಗಿತ್ತು. ಸಮಾಜವಾದಿ ನಾಯಕ ಕರ್ಪೂರಿ ಠಾಕೂರ್ ಅವರು ಭೂಸುಧಾರಣೆ ಕಾಯ್ದೆ ಜಾರಿಗೆ ತರಲು ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದರು. ಆದರೆ ಯಶಸ್ಸು ಪಡೆದಿರಲಿಲ್ಲ. ಕರ್ಪೂರಿ ಠಾಕೂರ್ ಅವರನ್ನು ಬಿಹಾರದ ದೇವರಾಜ ಅರಸು ಎಂದು ಕರೆಯು ತ್ತಾರೆ. ಕಳೆದ ವರ್ಷ ಕರ್ಪೂರಿ ಠಾಕೂರ್ ಅವರಿಗೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ‘ಭಾರತ ರತ್ನ’ ಪ್ರಶಸ್ತಿ ನೀಡಿ ಗೌರವಿಸಿತ್ತು.
ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಬಿಹಾರ ರಾಜ್ಯದಂತೆ ಕರ್ನಾಟಕವೂ ಲೋಕನಾಯಕ ಜಯಪ್ರಕಾಶ್ ನಾರಾಯಣ ಅವರ ಕರೆಗೆ ಓಗೊಟ್ಟಿತ್ತು. ಕರ್ನಾಟಕದ ಹಿರಿಯ ಸಮಾಜವಾದಿ ನಾಯಕ ಜಾರ್ಜ್ ಫೆರ್ನಾಂಡಿಸ್ ಬಿಹಾರ ರಾಜಕಾರಣದಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. ದಶಕಗಳ ಕಾಲ ಬಿಹಾರ ರಾಜ್ಯದಿಂದ ಲೋಕಸಭೆಗೆ ಆಯ್ಕೆಯಾಗುತ್ತಿದ್ದರು. ಜಯಪ್ರಕಾಶ್ ನಾರಾಯಣ್, ರಾಮಮನೋಹರ್ ಲೋಹಿಯಾ ಅವರಿಂದ ಪ್ರಭಾವಿತರಾಗಿ ರಾಜಕಾರಣಕ್ಕೆ ಪಾದಾರ್ಪಣೆ ಮಾಡಿದ ರಾಮಕೃಷ್ಣ ಹೆಗಡೆ, ಜೆ.ಎಚ್. ಪಟೇಲ್, ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿ.ಆರ್. ಪಾಟೀಲ್, ಬಿಹಾರದ ಲಾಲು ಪ್ರಸಾದ್ ಯಾದವ್, ನಿತೀಶ್ ಕುಮಾರ್, ರಾಮ್ ವಿಲಾಸ್ ಪಾಸ್ವಾನ್, ಶರದ್ ಯಾದವ್ ಹೆಚ್ಚು ಕಡಿಮೆ ಸಮಕಾಲೀನ ರಾಜಕಾರಣಿಯಾಗಿದ್ದರು. ಮೂಲ ಜನತಾ ಪಕ್ಷ ಮತ್ತು ಜನತಾ ದಳದ ಬೇರುಗಳು ಈಗಲೂ ಕರ್ನಾಟಕ-ಬಿಹಾರ ರಾಜ್ಯಗಳಲ್ಲಿ ಗಟ್ಟಿಯಾಗಿ ನೆಲೆ ನಿಂತಿವೆ. ಲಾಲು ಪ್ರಸಾದ್ ಯಾದವ್ ಅವರ ರಾಷ್ಟ್ರೀಯ ಜನತಾ ದಳ, ನಿತೀಶ್ ಕುಮಾರ್ ಅವರ ಸಂಯುಕ್ತ ಜನತಾ ದಳ, ರಾಮ್ ವಿಲಾಸ್ ಪಾಸ್ವಾನ್ ಪುತ್ರ ಚಿರಾಗ್ ಪಾಸ್ವಾನ್ ಮುನ್ನಡೆಸುತ್ತಿರುವ ಲೋಕ ಜನಶಕ್ತಿ ಪಾರ್ಟಿ ಮತ್ತು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ನೇತೃತ್ವದ ಜೆಡಿಎಸ್ ಜನತಾ ಪರಿವಾರದ ಟಿಸಿಲುಗಳು. ಬಿಹಾರ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಪರ್ಯಾಯ ರಾಜಕೀಯ ಶಕ್ತಿಯಾಗಿ ಬೆಳೆದ ಜನತಾ ಪರಿವಾರದ ಪಕ್ಷಗಳು ಈಗ ಪರಸ್ಪರ ಶತ್ರು ಪಕ್ಷಗಳಾಗಿ ಸೆಣಸಾಡುತ್ತಿವೆ. ದೀರ್ಘ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷ ಬಿಹಾರದಲ್ಲಿ ರಾಜಕೀಯ ನೆಲೆ ಕಂಡುಕೊಳ್ಳಲು ಪರದಾಡುತ್ತಿದೆ. ಲಾಲು ಪ್ರಸಾದ್ ಯಾದವ್ ನೇತೃತ್ವದ ಆರ್‌ಜೆಡಿಯನ್ನು ಅವಲಂಬಿಸಿ ರಾಜಕೀಯ ಮಾಡುತ್ತಿದೆ.
ಹಾಗೆ ನೋಡಿದರೆ, ಬಿಹಾರವು ಕರ್ನಾಟಕ ರಾಜ್ಯದ ಹಾಗೆ ಹೋರಾಟದ ನೆಲೆವೀಡು. ಬಿಹಾರ ಬುದ್ಧ ಗುರುವಿನ ಕರ್ಮ ಭೂಮಿಯೂ ಹೌದು. ಕರ್ನಾಟಕದಲ್ಲಿ ಬಸವಾದಿ ಶರಣರ ನೇತೃತ್ವದಲ್ಲಿ ನಡೆದ ವಚನ ಚಳವಳಿ ಇಂದಿಗೂ ಆಶಯದ ರೂಪದಲ್ಲಿ ಜೀವಂತವಾಗಿದೆ. ಮಹಾತ್ಮಾ ಗಾಂಧೀಜಿ ಆರಂಭಿಸಿದ ಮೊದಲ ರೈತ ಚಳವಳಿ ಬಿಹಾರ ರಾಜ್ಯದ ಚಂಪಾರಣ್ಯದಿಂದ ಶುರುವಾಗಿದ್ದು. ಸ್ವಾತಂತ್ರ್ಯ ಹೋರಾಟಕ್ಕೆ ನಾಂದಿಯಾಯಿತು.
ಆದರೆ ಇಪ್ಪತ್ತೊಂದನೆಯ ಶತಮಾನದ ಬಿಹಾರ ಮತ್ತು ಕರ್ನಾಟಕದ ನಡುವೆ ಅಜಾಗಜಾಂತರವಿದೆ. ಅಭಿವೃದ್ಧಿಯಲ್ಲಿ ಬಿಹಾರ ಕರ್ನಾಟಕಕ್ಕಿಂತ ನೂರು ವರ್ಷ ಹಿಂದಿದೆ. ಅಲ್ಲಿಯ ಬಡತನ, ನಿರುದ್ಯೋಗ, ವಲಸೆ ಮತ್ತು ಅರಾಜಕ ಆಡಳಿತ ವ್ಯವಸ್ಥೆ ಬಿಹಾರ ರಾಜ್ಯವನ್ನು ನೂರಾರು ವರ್ಷ ಹಿಂದಕ್ಕೆ ತಳ್ಳಿದೆ. ಕರ್ನಾಟಕ ಐಟಿ, ಬಿಟಿ ಕಾರಣಕ್ಕೆ ವಿಶ್ವದ ಗಮನ ಸೆಳೆದಿದೆ. ತಲಾ ಆದಾಯ, ಸಾಕ್ಷರತಾ ಪ್ರಮಾಣದ ವಿಷಯದಲ್ಲೂ ಬಿಹಾರ ಬಹಳ ಹಿಂದಿದೆ. ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಯನ್ನು ಬಿಹಾರ ರಾಜ್ಯದೊಂದಿಗೆ ತುಲನೆ ಮಾಡಬಹುದಾಗಿದೆ. ಬಿಹಾರ ರಾಜ್ಯದ ಕೆಲವು ಜಿಲ್ಲೆಗಳು ಕಲ್ಯಾಣ ಕರ್ನಾಟಕದ ಜಿಲ್ಲೆಗಳಿಗಿಂತ ನಿಕೃಷ್ಟ ಸ್ಥಿತಿಯಲ್ಲಿವೆ.
2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಐದು ಗ್ಯಾರಂಟಿಗಳನ್ನು ಘೋಷಿಸಲಾಗಿತ್ತು. ಬಿಜೆಪಿಯೊಳಗಿನ ಕಲಹ ಮತ್ತು ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳು ಒಟ್ಟಿಗೆ ಸೇರಿ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ 136 ಶಾಸಕರ ಬಲದೊಂದಿಗೆ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಯಿತು.
ಕರ್ನಾಟಕದ ಮಾದರಿಯನ್ನೇ ಬಿಹಾರ ರಾಜ್ಯದಲ್ಲಿ ಬಿಜೆಪಿ ಮತ್ತು ನಿತೀಶ್ ಕುಮಾರ್ ನೇತೃತ್ವದ ಎನ್‌ಡಿಎ ಕೂಟ ಚುನಾವಣೆಗೂ ಮುಂಚೆ ಜನಪ್ರಿಯ ಕಾರ್ಯಕ್ರಮಗಳನ್ನು ಪ್ರಕಟಿಸಿತ್ತು. ಇವತ್ತು ಹೊರ ಬೀಳುತ್ತಿರುವ ಬಿಹಾರ ಚುನಾವಣೆಯ ಫಲಿತಾಂಶ ಆರ್‌ಜೆಡಿ ಮತ್ತು ಕಾಂಗ್ರೆಸ್ ನೇತೃತ್ವದ ಮಹಾಘಟಬಂಧನ್ ಕೂಟಕ್ಕೆ ಆಘಾತಕಾರಿ ಸುದ್ದಿಯಾಗಿದೆ. ಒಂದು ವರ್ಷದಿಂದ ಎನ್‌ಡಿಎ ಮೈತ್ರಿ ಕೂಟ ಬಿಹಾರ ರಾಜ್ಯದಲ್ಲಿ ತಂತ್ರಗಾರಿಕೆ ರೂಪಿಸುತ್ತಲೇ ಇತ್ತು. ತಂತ್ರಗಾರಿಕೆಯ ಭಾಗವಾಗಿಯೇ ಚುನಾವಣಾ ಆಯೋಗವನ್ನು ಶಕ್ತಿ ಮೀರಿ ಬಳಸಿಕೊಳ್ಳುತ್ತಲೇ ಇತ್ತು. ಮತದಾರರ ಪಟ್ಟಿ ಪರಿಷ್ಕರಣೆಯ ಹೆಸರಲ್ಲಿ ಚುನಾವಣಾ ಆಯೋಗ ಎನ್‌ಡಿಎ ಮೈತ್ರಿ ಕೂಟಕ್ಕೆ ಪೂರಕವಾಗಿ ಕಾರ್ಯ ನಿರ್ವಹಿಸುತ್ತಿತ್ತು ಎಂಬುದು ಫಲಿತಾಂಶ ಗಮನಿಸಿದರೆ ಸ್ಪಷ್ಟವಾಗುತ್ತದೆ. ಎನ್‌ಡಿಎ ಮೈತ್ರಿ ಕೂಟದ ಕುತಂತ್ರವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಮಾತ್ರ ಗ್ರಹಿಸಿದ್ದರು. ಮತಗಳ್ಳತನ ಆಂದೋಲನವೇನೋ ಶುರು ಮಾಡಿದ್ದರು. ಆದರೆ ವೋಟ್ ಚೋರಿ ತಡೆಯಲಾಗಲಿಲ್ಲ.
2020ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಹಿನ್ನಡೆ ಅನುಭವಿಸಿದ್ದು ನಿತೀಶ್ ಕುಮಾರ್ ನೇತೃತ್ವದ ಸಂಯುಕ್ತ ಜನತಾ ದಳ. 2015ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಸಂಯುಕ್ತ ಜನತಾದಳ 71ಶಾಸಕರನ್ನು ಗೆಲ್ಲಿಸಿಕೊಂಡಿತ್ತು. ಆದರೆ 2020ರ ಹೊತ್ತಿಗೆ ಸಂಯುಕ್ತ ಜನತಾ ದಳ ಶಾಸಕರ ಸಂಖ್ಯೆ 43ಕ್ಕೆ ಕುಸಿದಿತ್ತು. ನಿತೀಶ್ ಕುಮಾರ್ ಪಕ್ಷದ ಶಾಸಕರ ಸಂಖ್ಯೆ ಕುಸಿಯಲು ತಾನು ಕಾರಣ ಎಂದು ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಭ್ರಮೆಯಾಗಿತ್ತು. 2015ರ ವಿಧಾನಸಭಾ ಚುನಾವಣೆಯಲ್ಲಿ ಪ್ರಶಾಂತ್ ಕಿಶೋರ್ ನಿತೀಶ್ ಕುಮಾರ್ ಜೊತೆಗಿದ್ದು ತಂತ್ರಗಾರಿಕೆ ರೂಪಿಸಿದ್ದರು. 2020ರ ಚುನಾವಣೆಯ ಹೊತ್ತಿಗೆ ಪ್ರಶಾಂತ್ ಕಿಶೋರ್ ನಿತೀಶ್ ಕುಮಾರ್ ಅವರಿಂದ ದೂರವಾಗಿದ್ದರು. ಅಷ್ಟು ಮಾತ್ರವಲ್ಲ ‘ಜನ ಸುರಾಜ್’ ಎಂಬ ಸ್ವಂತ ಪಕ್ಷ ಸ್ಥಾಪಿಸಿ ನಿತೀಶ್ ಕುಮಾರ್ ಅವರ ರಾಜಕೀಯ ಮುಗಿಸಿಯೇ ಬಿಡುತ್ತೇನೆ ಎಂದು ಆರ್ಭಟಿಸಿದ್ದರು. ಎಲ್ಲರೂ ಹುಬ್ಬೇರಿಸುವ ರೀತಿಯಲ್ಲಿ 2025ರ ವಿಧಾನಸಭಾ ಚುನಾವಣೆಯಲ್ಲಿ ನಿತೀಶ್ ಕುಮಾರ್ ಸಂಯುಕ್ತ ಜನತಾದಳದ ಶಕ್ತಿಯನ್ನು ಹೆಚ್ಚಿಸಿಕೊಂಡು ಮಿತ್ರ ಪಕ್ಷ ಬಿಜೆಪಿಗೂ ಸವಾಲಾಗಿದ್ದಾರೆ.
ಹಾಗೆ ನೋಡಿದರೆ 2020ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚು ಲಾಭವಾಗಿತ್ತು. ಆಗ ಸುಶೀಲ್‌ಕುಮಾರ್ ಮೋದಿ ಬದುಕಿದ್ದರು. ಬಿಜೆಪಿ 74 ಶಾಸಕರನ್ನು ಗೆಲ್ಲಿಸಿಕೊಂಡು ಹಿಂದಿನ ಚುನಾವಣೆಗಿಂತ 21 ಹೆಚ್ಚುವರಿ ಶಾಸಕರನ್ನು ಸೇರಿಸಿಕೊಂಡಿತ್ತು. ಸಂಯುಕ್ತ ಜನತಾದಳಕ್ಕಿಂತಲೂ ಹೆಚ್ಚು ಶಾಸಕರನ್ನು ಹೊಂದಿಯೂ ಬಿಜೆಪಿ ಹೈಕಮಾಂಡ್ ಆದೇಶದ ಮೇರೆಗೆ ಮುಖ್ಯಮಂತ್ರಿ ಹುದ್ದೆಯನ್ನು ನಿತೀಶ್ ಕುಮಾರ್ ಅವರಿಗೆ ಬಿಟ್ಟು ಕೊಟ್ಟಿತ್ತು.
ಕಳೆದ ವಿಧಾನಸಭಾ ಚುನಾವಣೆಯಲ್ಲೇ ಆರ್‌ಜೆಡಿ ಶಾಸಕರ ಬಲ 80ರಿಂದ 75ಕ್ಕೆ ಕುಸಿದಿತ್ತು. ಕಾಂಗ್ರೆಸ್ ಮತ್ತು ಎಡ ಪಕ್ಷಗಳು ಉತ್ತಮ ಸಾಧನೆ ಮಾಡಿದ್ದರಿಂದ ಮಹಾಘಟಬಂಧನ್ ಸಂಖ್ಯಾ ಬಲ 110ರಷ್ಟಿತ್ತು. ಅಷ್ಟಾಗಿಯೂ ಮಹಾಘಟಬಂಧನ್ ಮೈತ್ರಿ ಕೂಟಕ್ಕೆ ಅಧಿಕಾರದ ಚುಕ್ಕಾಣಿ ಹಿಡಿಯಲು ಸಾಧ್ಯವಾಗಿರಲಿಲ್ಲ. 125 ಶಾಸಕರ ಬಲದ ಎನ್‌ಡಿಎ ಮೈತ್ರಿ ಕೂಟ ನಿತೀಶ್ ಕುಮಾರ್ ನೇತೃತ್ವದಲ್ಲಿ ಆಡಳಿತದ ಚುಕ್ಕಾಣಿಯನ್ನು ವಶಕ್ಕೆ ಪಡೆದಿತ್ತು. ಬಹುತೇಕ ರಾಜಕೀಯ ಪಂಡಿತರು ಅಲ್ಪ ಮತಗಳ ಅಂತರದಿಂದ ಮಹಾಘಟಬಂಧನ್ ಅಧಿಕಾರದಿಂದ ವಂಚಿತವಾಯಿತು ಎಂದು ವ್ಯಾಖ್ಯಾನಿಸಿದ್ದರು. ಎನ್‌ಡಿಎ ಮತ್ತು ಮಹಾಘಟಬಂಧನ್ ಮೈತ್ರಿ ಕೂಟಗಳು ಪಡೆದ ಒಟ್ಟು ಮತಗಳ ಅಂತರ ಕೇವಲ ಹನ್ನೆರಡು ಸಾವಿರ ಇತ್ತು ಎಂದು ಸೋಲಿನ ಭಾವನೆಯನ್ನು ಇತ್ಯಾತ್ಮಕವಾಗಿ ಪರಿವರ್ತಿಸಿಕೊಂಡಿದ್ದರು.
ಜಾಣ ಲೆಕ್ಕಾಚಾರ ಹಾಕಿ ಸೋಲಿನ ವಾಸ್ತವ ಮುಚ್ಚಿಡಲು ಯತ್ನಿಸುವುದು ತಾತ್ಕಾಲಿಕ ಉಪಶಮನವಷ್ಟೇ. ಆದರೆ ವಾಸ್ತವದಲ್ಲಿ ಅಧಿಕಾರ ತಂದು ಕೊಡುವುದಿಲ್ಲ. ಆರ್‌ಜೆಡಿ ಅಧಿನಾಯಕ ಲಾಲು ಪ್ರಸಾದ್ ಯಾದವ್, ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್ ಮತ್ತು ಮಿತ್ರ ಪಕ್ಷ ಕಾಂಗ್ರೆಸ್ ನಿತೀಶ್ ಕುಮಾರ್ ಅವರ ಇಳಿ ವಯಸ್ಸನ್ನೇ ದೌರ್ಬಲ್ಯ ಎಂದು ಭಾವಿಸಿ ವಿಫಲ ತಂತ್ರಗಾರಿಕೆ ರೂಪಿಸಿ ಹೀನಾಯವಾಗಿ ಸೋಲು ಅನುಭವಿಸುವಂತಾಗಿದೆ. ಎನ್‌ಡಿಎ ಮೈತ್ರಿ ಕೂಟ ಸಂಪೂರ್ಣ ಬಹುಮತ ಪಡೆದದ್ದು ಮಾತ್ರವಲ್ಲ ನಿತೀಶ್ ಕುಮಾರ್ ಮತ್ತಷ್ಟು ಶಕ್ತಿಶಾಲಿಯಾಗಿ ಹೊರಹೊಮ್ಮಿದ್ದಾರೆ. ಮತ್ತೊಮ್ಮೆ ನಿತೀಶ್ ಕುಮಾರ್ ಬಿಹಾರ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವುದರಲ್ಲಿ ಅನುಮಾನ ಪಡಬೇಕಾಗಿಲ್ಲ.
ಈ ಬಾರಿ ನಿತೀಶ್ ಕುಮಾರ್ ಪಕ್ಷ ಧೂಳೀಪಟವಾಗಲಿದೆ ಎಂದೇ ಅವರ ವಿರೋಧಿಗಳು ಭಾವಿಸಿದ್ದರು. ವಿಶೇಷವಾಗಿ ಜನ ಸುರಾಜ್ ಪಕ್ಷದ ಪ್ರಶಾಂತ್ ಕಿಶೋರ್ ಟಿ.ವಿ. ಸಂದರ್ಶನದಲ್ಲಿ ನಿತೀಶ್ ಕುಮಾರ್ ನೇತೃತ್ವದ ಸಂಯುಕ್ತ ಜನತಾ ದಳ 25 ಶಾಸಕರನ್ನು ಗೆಲ್ಲಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಒಂದು ವೇಳೆ ಸಂಯುಕ್ತ ಜನತಾ ದಳ 25ಕ್ಕೂ ಹೆಚ್ಚು ಶಾಸಕರನ್ನು ಗೆಲ್ಲಿಸಿಕೊಂಡರೆ ತಾನು ರಾಜಕೀಯ ನಿವೃತ್ತಿ ಘೋಷಿಸುವುದಾಗಿ ಸವಾಲು ಹಾಕಿದ್ದರು. ಆರ್‌ಜೆಡಿ ಮತ್ತು ಕಾಂಗ್ರೆಸ್ ನಾಯಕರಿಗೆ ಆಡಳಿತ ವಿರೋಧಿ ಅಲೆ ಕೈ ಹಿಡಿಯಬಹುದೆಂಬ ಬಲವಾದ ಆಸೆ ಇತ್ತು. ವೋಟ್ ಚೋರಿ ಪ್ರಕರಣವನ್ನು ಚುನಾವಣೆಯ ವಿಷಯ ಮಾಡಿಕೊಳ್ಳುವುದರಿಂದ ಯಾವ ಮಟ್ಟದ ಲಾಭ ಆಗಬಹುದೆಂಬುದು ಕಾಂಗ್ರೆಸ್ ನಾಯಕರು ಅಂದಾಜಿಸಲಿಲ್ಲ. ಯಾಕೆಂದರೆ ವೋಟ್ ಚೋರಿ ಪ್ರಕರಣ ಜನತಂತ್ರದ ಪಾವಿತ್ರ್ಯ ಮತ್ತು ಮತದ ಹಕ್ಕಿನ ಪ್ರಶ್ನೆಯಾಗಿತ್ತು. ಆದರೆ ಹಸಿವಿನಿಂದ ನರಳುವ ಬಡ ಬಿಹಾರಿಗಳಿಗೆ ವೋಟ್ ಚೋರಿ ಪ್ರಕರಣ ಕನೆಕ್ಟ್ ಆಗಲಿಲ್ಲ ಎನಿಸುತ್ತದೆ. ಯಾವುದೇ ರಾಜ್ಯದ ಚುನಾವಣೆಯಲ್ಲಿ ಒಂದೋ ಎರಡು ವಿಷಯಗಳು ಚುನಾವಣಾ ಫಲಿತಾಂಶವನ್ನು ನಿರ್ಧರಿಸುವುದಿಲ್ಲ. ಆರ್‌ಜೆಡಿ ಮತ್ತು ಕಾಂಗ್ರೆಸ್‌ನ ಮೈತ್ರಿ ಕೂಟ ಬಿಹಾರ ಜನತೆ ಗಂಭೀರವಾಗಿ ಎದುರಿಸುತ್ತಿರುವ ಬಡತನ, ನಿರುದ್ಯೋಗ, ವಲಸೆ ಮತ್ತು ಗುಣಮಟ್ಟದ ಶಿಕ್ಷಣ ಕುರಿತು ವಿಶೇಷ ಗಮನ ಸೆಳೆಯಬೇಕಿತ್ತು. ಆರ್‌ಜೆಡಿ ಪಕ್ಷದೊಂದಿಗೆ ದಶಕಗಳಿಂದ ಅಂಟಿಕೊಂಡಿರುವ ಜಂಗಲ್‌ರಾಜ್ ವಿಶೇಷಣವನ್ನು ಅಳಿಸಿ ಹಾಕಲು ಲಾಲು ಪ್ರಸಾದ್ ಯಾದವ್, ಅವರ ಪುತ್ರ ತೇಜಸ್ವಿ ಯಾದವ್ ಚುನಾವಣಾ ಪ್ರಚಾರದಲ್ಲಿ ತಂತ್ರಗಾರಿಕೆ ಅಳವಡಿಸಿಕೊಂಡಿರಲಿಲ್ಲ.
ಬಿಹಾರದಲ್ಲಿ ಬಿಜೆಪಿಗೆ ಹೇಳಿಕೊಳ್ಳುವಂತಹ ನಾಯಕತ್ವವಿಲ್ಲ. ಸುಶೀಲ್‌ಕುಮಾರ್ ಮೋದಿ ನಿಧನ ಹೊಂದಿದ ಮೇಲೆ ಹಾಳೂರಿಗೆ ಉಳಿದವರೇ ಗೌಡರಾಗಿದ್ದರು. ಸಾಮ್ರಾಟ್ ಚೌಧರಿ ಮುಂತಾದವರು ಮುಖ್ಯಮಂತ್ರಿ ಹುದ್ದೆಯ ಘನತೆ ಹಾಳು ಮಾಡುವ ಮಟ್ಟದವರು. ಬಿಜೆಪಿಯ ಬಹುಪಾಲು ನಾಯಕರು, ಅದರಲ್ಲೂ ಮಂಚೂಣಿಯಲ್ಲಿ ನಿಂತು ಮುಖ್ಯಮಂತ್ರಿ ಹುದ್ದೆಯ ಕನಸು ಕಾಣುತ್ತಿದ್ದ ಸಾಮ್ರಾಟ್ ಚೌಧರಿಯಂತಹ ಅರೆಬೆಂದ ನಾಯಕರು ಸಂಯುಕ್ತ ಜನತಾದಳ ಮತ್ತು ನಿತೀಶ್ ಕುಮಾರ್ ಸರ್ವನಾಶವಾಗಲೆಂದೇ ಹರಕೆ ಹೊತ್ತಿದ್ದರು. ಆದರೆ ಪಳಗಿದ ರಾಜಕಾರಣಿ ನಿತೀಶ್ ಕುಮಾರ್ ಬಿಹಾರ ಮತದಾರರ ನಾಡಿ ಮಿಡಿತ ಅರಿತು ಭಿಕ್ಷೆ ಹಾಕಿದರು. ಚುನಾವಣೆಯಲ್ಲಿ ಗೆಲುವು ತಮ್ಮದಾಗಿಸಿಕೊಂಡಿದ್ದಾರೆ.
ಬಿಹಾರ ರಾಜಕಾರಣದ ಬಹುದೊಡ್ಡ ದುರಂತವೆಂದರೆ, ಅಲ್ಲಿ ಹೀರೋ ಮತ್ತು ವಿಲನ್ ವೇಷಧಾರಿಗಳು ಒಂದೇ ಗರಡಿಯಿಂದ ಪಟ್ಟು ಕಲಿತು ಬಂದವರು. ಒಬ್ಬರ ದೌರ್ಬಲ್ಯ ಇನ್ನೊಬ್ಬರಿಗೆ ಚೆನ್ನಾಗಿ ಗೊತ್ತು. ಯಾದವ್ ಸಮುದಾಯದ ಲಾಲು ಪ್ರಸಾದ್ ಯಾದವ್, ಕುರ್ಮಿ ಸಮುದಾಯದ ನಿತೀಶ್ ಕುಮಾರ್, ದಲಿತ ಸಮುದಾಯದ ರಾಮ್ ವಿಲಾಸ್ ಪಾಸ್ವಾನ್ ಜಯಪ್ರಕಾಶ್ ನಾರಾಯಣ್ ಅವರ ಸಂಪೂರ್ಣ ಕ್ರಾಂತಿಯ ಕರೆಯಲ್ಲಿ ಉದ್ಭವಿಸಿದವರು. ರಾಮಮನೋಹರ್ ಲೋಹಿಯಾ, ಕರ್ಪೂರಿ ಠಾಕೂರ್, ಜಾರ್ಜ್ ಫೆರ್ನಾಂಡಿಸ್ ಅವರ ಸಾಮಾಜಿಕ ನ್ಯಾಯ, ಸಮಾಜವಾದದ ಚಿಂತನೆಯ ಮೂಸೆಯಲ್ಲಿ ರೂಪುಗೊಂಡವರು. ಬಿಹಾರ ರಾಜ್ಯದಲ್ಲಿನ ಇಂದಿನ ಬಿಜೆಪಿ ಪೀಳಿಗೆಯ ಪೂರ್ವಿಕರು ಜಯಪ್ರಕಾಶ್ ನಾರಾಯಣ್‌ಅವರ ಅಭಿಮಾನಿಗಳು. ಜಾರ್ಜ್ ಫೆರ್ನಾಂಡಿಸ್ ಅವರು ಜನತಾ ಪರಿವಾರ ಹರಿದು ಹಂಚಿ ಹೋದ ಮೇಲೆ ದಶಕಗಳ ಕಾಲ ಬಿಜೆಪಿಯ ಸಖ್ಯದಲ್ಲಿ ರಾಜಕಾರಣ ಮಾಡಿದವರು. ಲಾಲು ಪ್ರಸಾದ್ ಯಾದವ್, ನಿತೀಶ್ ಕುಮಾರ್, ರಾಮ್ ವಿಲಾಸ್ ಪಾಸ್ವಾನ್ ಆರಂಭದ ವರ್ಷಗಳಲ್ಲಿ ಒಟ್ಟಿಗೆ ರಾಜಕೀಯ ಯಾನ ಆರಂಭಿಸಿದವರು. ರಾಜಕೀಯ ಮಹತ್ವಕಾಂಕ್ಷೆ ಹೆಚ್ಚುತ್ತಾ ಹೋದಂತೆ, ಮುಖ್ಯಮಂತ್ರಿಯ ಹುದ್ದೆಯ ಕನಸು ಬಲಗೊಂಡ ಹಾಗೆ ಪರಸ್ಪರ ಅಪನಂಬಿಕೆ, ಭಿನ್ನಾಭಿಪ್ರಾಯಗಳು ಹೆಚ್ಚಾದವು.
ಹಾಗೆ ನೋಡಿದರೆ ಲಾಲು ಪ್ರಸಾದ್ ಯಾದವ್ ಬಿಹಾರ ರಾಜ್ಯದಲ್ಲಿ ಹಿಂದುಳಿದ ಮತ್ತು ದಲಿತ ಸಮುದಾಯಗಳ ಆಶಾಕಿರಣವಾಗಿದ್ದರು. ನಿಜವಾದ ಜನನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ನಿತೀಶ್ ಕುಮಾರ್, ಶರದ್ ಯಾದವ್, ಜಾರ್ಜ್ ಫೆರ್ನಾಂಡಿಸ್, ರಾಮ್ ವಿಲಾಸ್ ಪಾಸ್ವಾನ್ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ರಾಜಕಾರಣ ಮಾಡಿದ್ದರೆ ಬಿಜೆಪಿ ಪ್ರವೇಶ ಪಡೆಯುತ್ತಿರಲಿಲ್ಲ. ಬಿಹಾರ ರಾಜಕಾರಣ ಈ ಮಟ್ಟದಲ್ಲಿ ಅಧೋಗತಿಗೆ ಇಳಿಯುತ್ತಿರಲಿಲ್ಲ. ಲಾಲು ಪ್ರಸಾದ್ ಯಾದವ್ ಈ ಹೊತ್ತಿಗೂ ಸೈದ್ಧಾಂತಿಕ ಸ್ಪಷ್ಟತೆ ಉಳಿಸಿಕೊಂಡಿರುವ ರಾಜಕಾರಣಿ. ಆದರೆ ಅಧಿಕಾರ ಸಿಕ್ಕಾಗ ಬಿಹಾರದ ಅಭಿವೃದ್ಧಿ ಬಗ್ಗೆ ಹೆಚ್ಚು ನಿಗಾ ವಹಿಸಲಿಲ್ಲ. ಜಂಗಲ್ ರಾಜ್ ಅಪಖ್ಯಾತಿಯನ್ನು ಈಗಲೂ ಹೊತ್ತು ತಿರುಗಾಡುತ್ತಿದ್ದಾರೆ. ಲಾಲು ಪ್ರಸಾದ್ ಯಾದವ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿಯೇ ಮೇವು ಹಗರಣ ಸದ್ದು ಮಾಡಿತು. ಮೇವು ಹಗರಣದಲ್ಲಿ ಲಾಲು ಜೈಲು ಪಾಲಾಗಲು ಮತ್ತು ವ್ಯವಸ್ಥಿತ ವ್ಯೆಹ ರಚಿಸಿದವರೇ ನಿತೀಶ್ ಕುಮಾರ್. ಲಾಲು ಪ್ರಸಾದ್ ಯಾದವ್ ಜಾಣ ರಾಜಕಾರಣ ಮಾಡಿದ್ದರೆ ಜೈಲು ಪಾಲಾಗುತ್ತಿರಲಿಲ್ಲ ಮತ್ತು ಬಿಹಾರ ಜಂಗಲ್ ರಾಜ್ ಅಪಖ್ಯಾತಿಗೆ ಒಳಗಾಗುತ್ತಿರಲಿಲ್ಲ.
ಲಾಲು ಜೈಲು ಪಾಲಾದ ಮೇಲೆ ಧರ್ಮ ಪತ್ನಿ ರಾಬ್ಡಿ ದೇವಿಯವರನ್ನು ಮುಖ್ಯಮಂತ್ರಿ ಹುದ್ದೆಯಲ್ಲಿ ಪ್ರತಿಷ್ಠಾಪನೆ ಮಾಡಿದ್ದರು. ಅವರ ಕುಟುಂಬ ರಾಜಕಾರಣದಿಂದ ಬೇಸತ್ತ ಶರದ್ ಯಾದವ್, ಪಾಸ್ವಾನ್, ಜಾರ್ಜ್ ಮತ್ತು ನಿತೀಶ್ ಕುಮಾರ್ ಒಂದೊಂದು ದಿಕ್ಕಿನಲ್ಲಿ ಪಯಣಿಸಿ ರಾಜಕೀಯ ಅಸ್ತಿತ್ವ ಉಳಿಸಿಕೊಂಡರು. ಪಾಸ್ವಾನ್ ಲೋಕ ಜನಶಕ್ತಿ ಪಕ್ಷ ಸ್ಥಾಪಿಸಿ ಒಮ್ಮೆ ಎನ್‌ಡಿಎ, ಮತ್ತೊಮ್ಮೆ ಯುಪಿಎ ಸ್ನೇಹ ಬೆಳೆಸಿ ಕೇಂದ್ರದಲ್ಲಿ ಮಂತ್ರಿಯಾಗಿದ್ದರು. ನಿತೀಶ್ ಕುಮಾರ್ ಕೂಡಾ ವಾಜಪೇಯಿ ಸಂಪುಟದಲ್ಲಿ ಮಂತ್ರಿಯಾಗಿದ್ದರು. ನರೇಂದ್ರ ಮೋದಿ ಎನ್‌ಡಿಎ ಪ್ರಧಾನಿ ಅಭ್ಯರ್ಥಿ ಎಂದು ಘೋಷಣೆಯಾದಾಗ ನಿತೀಶ್ ಕುಮಾರ್ ಬಲವಾಗಿ ವಿರೋಧಿಸಿ ಹೊರ ಬಂದಿದ್ದರು. ಲಾಲು ಮತ್ತು ನಿತೀಶ್ ಕುಮಾರ್ ಒಂದೇ ವೇದಿಕೆಯಲ್ಲಿ ಹೆಚ್ಚು ಕಾಲ ರಾಜಕೀಯ ಮಾಡಲಾರರು ಎಂಬುದು ಸಾಬೀತಾದ ಸತ್ಯ. ನಿತೀಶ್ ಕುಮಾರ್ ಒಮ್ಮೆ ಮಹಾಘಟಬಂಧನದ ಭಾಗವಾಗಿದ್ದರು. ಮೋದಿ ನಾಯಕತ್ವ ಬಲಗೊಳ್ಳುತ್ತಲೇ ಪಲ್ಟಿ ಹೊಡೆದು ಎನ್‌ಡಿಎ ತೆಕ್ಕೆಗೆ ಬಂದು ಬಿದ್ದಿದ್ದಾರೆ.
ಇಪ್ಪತ್ತು ವರ್ಷಗಳ ಹಿಂದೆ ಬಿಹಾರ ಅಕ್ಷರಶಃ ಜಂಗಲ್ ರಾಜ್ ಆಗಿತ್ತು. ಮಾಧ್ಯಮಗಳ ಅತಿರಂಜಿತ ಕತೆಗಳು ಅದರಲ್ಲಿ ಸೇರಿಕೊಂಡಿದ್ದರೂ ಲಾಲು ಅವಧಿಯಲ್ಲಿ ಬಿಹಾರ ಅಭಿವೃದ್ಧಿ ಹೊಂದಿದ ರಾಜ್ಯವೇನೂ ಆಗಿರಲಿಲ್ಲ.
2005ರಲ್ಲಿ ನಿತೀಶ್ ಕುಮಾರ್ ಮೊದಲ ಬಾರಿಗೆ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ ಮೇಲೆ ಬಿಹಾರ ರಾಜ್ಯದಲ್ಲಿ ಹೊಸ ಗಾಳಿ ಬೀಸತೊಡಗಿತು. ನಿತೀಶ್ ಕುಮಾರ್ ಬಿಹಾರ ರಾಜ್ಯವನ್ನು ಸ್ವರ್ಗವನ್ನಾಗಿ ಮಾಡಲಿಲ್ಲವಾದರೂ ಬದುಕಲು ಸಹ್ಯ ಎನಿಸುವ ವಾತಾವರಣ ನಿರ್ಮಿಸಿದರು. ಸುದೀರ್ಘ ರಾಜಕಾರಣದಲ್ಲಿದ್ದು ಹಗರಣಗಳನ್ನು ಅಂಟಿಸಿಕೊಳ್ಳಲಿಲ್ಲ. ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗಿಂತಲೂ ಹೆಚ್ಚು ಜಾಣ. ಆದರೆ ಸಿದ್ದರಾಮಯ್ಯ ಅವರ ಹಾಗೆ ಸೈದ್ಧಾಂತಿಕ ಬದ್ಧತೆ ಉಳಿಸಿಕೊಳ್ಳಲಿಲ್ಲ. ಅವಕಾಶವಾದಿ ರಾಜಕಾರಣವೇ ಅವರ ಉಸಿರಾಯಿತು. ಮುಖ್ಯಮಂತ್ರಿ ಹುದ್ದೆ ಉಳಿಸಿಕೊಳ್ಳಲು ಯಾರೊಂದಿಗೂ ಕೈ ಜೋಡಿಸಲು ಮುಂದಾದರು. ನರೇಂದ್ರ ಮೋದಿಯವರ ರಾಜಕೀಯ ನಿಲುವುಗಳ ವಿರುದ್ಧ ಗುಡುಗಿದ್ದ ನಿತೀಶ್ ಕುಮಾರ್ ಈಗ ಅವರ ಸಮರ್ಥಕರಾಗುವಷ್ಟು ಬದಲಾದರು. ಬಿಹಾರ ಬಿಜೆಪಿಗರ ಆಟಾಟೋಪವನ್ನು ಸಹಿಸಿಕೊಂಡು ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರಿದರು.
ಇಪ್ಪತ್ತು ವರ್ಷ ಆಡಳಿತ ನಡೆಸಿ ಮತ್ತೆ ಐದು ವರ್ಷಕ್ಕೆ ಜನಾದೇಶ ಪಡೆದುಕೊಳ್ಳುವುದು ಕಷ್ಟ ಸಾಧ್ಯ. ಅದನ್ನು ಸಾಧಿಸಲು ನಿತೀಶ್ ಕುಮಾರ್ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಮಹಿಳೆಯರ ಖಾತೆಗೆ ಹತ್ತು ಸಾವಿರ ರೂ. ಜಮಾ ಮಾಡಿದರು. ಅದೂ ಚುನಾವಣೆ ಘೋಷಣೆಯಾದ ಮೇಲೆ. ಲಾಲು ಪ್ರಸಾದ್ ಯಾದವ್ ಅವರ ಜಂಗಲ್‌ರಾಜ್‌ಗೆ ವಿರುದ್ಧವಾಗಿ ನಿತೀಶ್‌ಕುಮಾರ್ ಒಂದಷ್ಟು ಒಳ್ಳೆಯ ಆಡಳಿತ ನೀಡಿದ್ದು ನಿಜ. ಸಾರಾಯಿ ನಿಷೇಧ ನಿರ್ಧಾರ ಮಹಿಳಾ ಮತದಾರರ ಪ್ರೀತಿ ವಿಶ್ವಾಸ ಗಳಿಸಿತ್ತು. ಬಿಹಾರ ರಾಜ್ಯದಲ್ಲಿ ಪುರುಷರು ದುಡಿಯಲು ಬೇರೆ ರಾಜ್ಯಗಳಿಗೆ ವಲಸೆ ಹೋಗಿರುತ್ತಾರೆ. ಮಹಿಳಾ ಮತದಾರರು ಹೆಚ್ಚು ಪ್ರಮಾಣದಲ್ಲಿ ಮತದಾನ ಮಾಡುವ ಮೂಲಕ ನಿರ್ಣಾಯಕ ಪಾತ್ರ ವಹಿಸುತ್ತಿದ್ದಾರೆ. ಮಹಿಳಾ ಮತದಾರರ ಖಾತೆಗೆ ಹತ್ತು ಸಾವಿರ ರೂ. ಜಮಾ ಆಗಿದ್ದು, ಮುಂದೆಯೂ ಹಣ ಸಿಗುತ್ತದೆ ಎಂದು ನಿತೀಶ್ ಕುಮಾರ್ ವ್ಯಾಪಕವಾಗಿ ಪ್ರಚಾರ ಮಾಡಿದ್ದು ಚುನಾವಣೆಯ ಫಲಿತಾಂಶದ ಮೇಲೆ ಪ್ರಭಾವ ಬೀರಿದೆ. ಜನ ಸುರಾಜ್ ಪಕ್ಷದ ಪ್ರಶಾಂತ್ ಕಿಶೋರ್ ಅವರಿಗೂ ಈ ಯೋಚನೆ ಹೊಳೆಯಲಿಲ್ಲ. ತೇಜಸ್ವಿ ಯಾದವ್ ವಿಶ್ವಾಸ ಗಳಿಸುವ ತಂತ್ರಗಾರಿಕೆ ರೂಪಿಸಲಿಲ್ಲ. ನಿತೀಶ್ ಸರಕಾರದ ಆಡಳಿತ ವಿರೋಧಿ ಅಲೆಯನ್ನು ಸಮರ್ಪಕವಾಗಿ ಪ್ರಚಾರ ಮಾಡಲಿಲ್ಲ. ಬಿಹಾರದಲ್ಲಿ ಚುನಾವಣೆಗಳು ಬಲು ಅಗ್ಗ. ಹಾಗಾಗಿ ಪ್ರಶಾಂತ್ ಕಿಶೋರ್ ಏನೆಲ್ಲಾ ಕಸರತ್ತು ಮಾಡಿ ವಿಫಲರಾದರು. ಮುಸ್ಲಿಮ್, ಯಾದವ ಸಮೀಕರಣವೂ ಸಮರ್ಪಕವಾಗಿ ಕೆಲಸ ಮಾಡಿಲ್ಲ. ಆರ್‌ಜೆಡಿ ಈ ಬಾರಿ ಹಿನ್ನಡೆ ಅನುಭವಿಸಿದೆ. ಮಹಾಘಟಬಂಧನದ ಹಿನ್ನಡೆಗೆ ಅಸದುದ್ದಿನ್ ಉವೈಸಿ ಪಾತ್ರವೂ ಕಾರಣವಾಗಿರಬಹುದು. ಪ್ರಶಾಂತ್ ಕಿಶೋರ್ ಪಡೆದ ಅಲ್ಪ ಪ್ರಮಾಣದ ಮತಗಳು ನಿತೀಶ್ ಕುಮಾರ್ ಗೆಲುವಿಗೆ ಸಹಕರಿಸಿದಂತೆ ತೋರುವುದಿಲ್ಲ. ವೋಟ್ ಚೋರಿ ಪ್ರಕರಣವನ್ನು ಚುನಾವಣೆಗೆ ಮಾತ್ರ ಸೀಮಿತಗೊಳಿಸದೆ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ದರೆ ಜನತಂತ್ರದ ಅಪನಂಬಿಕೆ ದೂರವಾಗುತ್ತದೆ. ನಿತೀಶ್ ಕುಮಾರ್ ಜಾಣ ಮಾತ್ರವಲ್ಲ ಬಹು ದೊಡ್ಡ ಸಮಯಸಾಧಕ ಎನ್ನುವುದನ್ನು ಮತ್ತೊಮ್ಮೆ ರುಜುವಾತುಪಡಿಸಿದ್ದಾರೆ. ಮಹಾಘಟಬಂಧನದ ಭಾಗವಾಗಿದ್ದ ಮತ್ತು ‘ಇಂಡಿಯಾ’ ಕೂಟದಲ್ಲಿ ಸಕ್ರಿಯವಾಗಿರುವ ಎಲ್ಲ ಪಕ್ಷಗಳ ನಾಯಕರು ಈ ಚುನಾವಣೆಯ ಸೋಲನ್ನು ಗಂಭೀರವಾಗಿ ಪರಿಗಣಿಸಬೇಕು. ಮಾತು ಮತ್ತು ಕ್ರಿಯೆಯ ನಡುವಿನ ಅಂತರವನ್ನು ಚೆನ್ನಾಗಿ ಗ್ರಹಿಸಬೇಕು.