×
Ad

ಅರ್ಧ ದಾರಿ ಕ್ರಮಿಸಿದ ‘ಸಿದ್ದರಾಮಯ್ಯ’ ಸರಕಾರ

Update: 2025-11-22 09:57 IST

ಕಲ್ಯಾಣ ಕಾರ್ಯಕ್ರಮಗಳ ಮೂಲ ಉದ್ದೇಶವೇ ನಿಜವಾದ ಬಡವರಿಗೆ ಆಸರೆ ನೀಡುವುದಾಗಿದೆ. ಕಾಯಕ ಮತ್ತು ದಾಸೋಹ ಪರಿಕಲ್ಪನೆಯೂ ಉಳ್ಳವರಿಂದ ಪಡೆದು ಇಲ್ಲದವರ ನಡುವೆ ಹಂಚಬೇಕು ಎಂದೇ ಪ್ರತಿಪಾದಿಸುತ್ತದೆ. ೨೦೨೩ರ ಚುನಾವಣಾ ಸಂದರ್ಭದಲ್ಲಿ ಘೋಷಿಸಿದ ಗ್ಯಾರಂಟಿ ಯೋಜನೆಗಳು ಈ ಹಿಂದಿನ ಕಲ್ಯಾಣ ಕಾರ್ಯಕ್ರಮಗಳಿಗೆ ಹೋಲುತ್ತಿದ್ದರೆ ಪುನರಾವರ್ತನೆ ತಪ್ಪಿಸಬೇಕು. ವಿಧವಾ ವೇತನ, ವೃದ್ಧಾಪ್ಯ ವೇತನ, ಭಾಗ್ಯ ಜ್ಯೋತಿ ಸೇರಿದಂತೆ ಇನ್ನಿತರ ಕಲ್ಯಾಣ ಯೋಜನೆಗಳಡಿ ಫಲಾನುಭವಿಗಳಾಗಿದ್ದವರ ಪಟ್ಟಿ ಸಿದ್ಧಪಡಿಸಿ ಪುನರಾವರ್ತನೆಯಾಗದಂತೆ ಮರು ರೂಪಿಸಿದರೆ ಗ್ಯಾರಂಟಿ ಯೋಜನೆಗಳು ಹೆಚ್ಚು ನಿಖರ ಎನಿಸಿಕೊಳ್ಳುತ್ತವೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ ಇದೇ ನವೆಂಬರ್ ಇಪ್ಪತ್ತಕ್ಕೆ ಎರಡೂವರೆ ವರ್ಷ ಪೂರೈಸಿದೆ. ಅಂದರೆ ಅರ್ಧ ದಾರಿ ಕ್ರಮಿಸಿ ಮುಂದೆ ಸಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರಕಾರದ ಸಾಧನೆ ಮತ್ತು ವೈಫಲ್ಯಗಳನ್ನು ಹಲವರು ಮೊದಲ ಅವಧಿಯೊಂದಿಗೆ ಹೋಲಿಸಿ ಷರಾ ಬರೆಯುತ್ತಿದ್ದಾರೆ. ಸಿದ್ದರಾಮಯ್ಯ ಅವರು ಮಂಕಾಗಿದ್ದಾರೆ, ದುರ್ಬಲರಾಗಿದ್ದಾರೆ, ಮೊದಲಿನ ಹಾಗೆ ಈ ಬಾರಿ ಕಾರ್ಯ ನಿರ್ವಹಸುತ್ತಿಲ್ಲ ಎಂದು ವಾದಿಸುವವರ ಮಾತಿನಲ್ಲಿ ಅರ್ಧ ಸತ್ಯ ಇರಬಹುದು. ಆದರೆ ಸಿದ್ದರಾಮಯ್ಯ ಅವರ ಒಟ್ಟು ತಾತ್ವಿಕತೆ, ಸೈದ್ಧಾಂತಿಕ ಬದ್ಧತೆ ಮತ್ತು ಜೀವನೋತ್ಸಾಹ ಕುಗ್ಗಿಲ್ಲ. ವಯಸ್ಸಾದಂತೆ ಮನುಷ್ಯ ವೇದಾಂತಿಯಾಗುತ್ತಾನೆ. ತನ್ನೆಲ್ಲ ವೈಫಲ್ಯಗಳನ್ನು ದೈವಿಕತೆಯ ಇಚ್ಛೆ ಎಂದು ಬಿಂಬಿಸಲು ಯತ್ನಿಸುತ್ತಾನೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಮಾಜಿಕ ಬದ್ಧತೆ ಮತ್ತು ಮೌಢ್ಯದ ಕುರಿತ ಅವರ ನಡೆ ನುಡಿಯಲ್ಲಿ ಕಿಂಚಿತ್ ಬದಲಾವಣೆಯಾಗಿಲ್ಲ. ಸಾಮಾಜಿಕ ನ್ಯಾಯದ ಬಗ್ಗೆ ಮತ್ತಷ್ಟು ಪ್ರಖರವಾಗಿ ಮಾತನಾಡುತ್ತಿದ್ದಾರೆ. ಸಾಮಾಜಿಕ ನ್ಯಾಯ ಪರಿಪಾಲನೆಯಲ್ಲಿನ ಲೋಪಗಳನ್ನು ಎತ್ತಿ ತೋರಿದರೆ ತಕ್ಷಣವೇ ಸ್ಪಂದಿಸುತ್ತಾರೆ ಮಾತ್ರವಲ್ಲ, ವಂಚಿತ ಸಮುದಾಯಗಳ ಪರ ನಿರ್ಧಾರ ಕೈಗೊಳ್ಳುತ್ತಾರೆ. ಸಾಮಾಜಿಕ ನ್ಯಾಯದ ಮೇಲಿನ ಅವರ ನಂಬಿಕೆ ಅಚಲವಾದದ್ದು. ಸಾಮಾಜಿಕ ನ್ಯಾಯ ಪರಿಕಲ್ಪನೆ ಸಿದ್ದರಾಮಯ್ಯ ಅವರ ವ್ಯಕ್ತಿತ್ವದ ಬಹುದೊಡ್ಡ ಶಕ್ತಿ. ಸಾಮಾಜಿಕ ನ್ಯಾಯ ಕುರಿತಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬದ್ಧತೆಯನ್ನು ಮೀರಿಸುವ ಇನ್ನೊಬ್ಬ ನಾಯಕ ಕರ್ನಾಟಕ ಕಾಂಗ್ರೆಸ್ ಪಕ್ಷದಲ್ಲಿ ಇಲ್ಲ.

ಸಿದ್ದರಾಮಯ್ಯ ಅವರ ಸಾಮಾಜಿಕ ನ್ಯಾಯದ ಆಳದ ಕಾಳಜಿಯನ್ನು ಕೆಲವರು ತಮ್ಮ ಅನುಕೂಲಕ್ಕೆ ತಕ್ಕಂತೆ ದುರುಪಯೋಗಪಡಿಸಿಕೊಂಡ ಹಲವು ನಿದರ್ಶನಗಳಿವೆ. ಮೊದಲ ಬಾರಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಸಲಹೆ ನೀಡುವ ಒಳ್ಳೆಯ ತಂಡ ಸುತ್ತುವರಿದಿತ್ತು. ಹಾಗಂತ ಸುತ್ತಲಿನವರ ಸಲಹೆಗಳನ್ನು ಮಾತ್ರ ನಂಬಿ ಆಡಳಿತ ನಡೆಸುವಷ್ಟು ದುರ್ಬಲರೂ ಅಲ್ಲ. ಸಿದ್ದರಾಮಯ್ಯ ಅವರ ಕಾಮನ್‌ಸೆನ್ಸ್ ಬಹಳ ಸ್ಟ್ರಾಂಗ್ ಇದೆ. ಯಾರು ಏನೇ ಹಾದಿ ತಪ್ಪಿಸುವ ಸಲಹೆ ಕೊಟ್ಟರೂ ಅವರ ಅಂತರ್‌ದೃಷ್ಟಿಗೆ ಸರಿ ಎನಿಸಿದರೆ ಮಾತ್ರ ಒಪ್ಪಿಗೆ ಸೂಚಿಸುತ್ತಾರೆ. ಎಪ್ಪತ್ತೆಂಟರ ಈ ವಯಸ್ಸಿನಲ್ಲೂ ಸಿದ್ದರಾಮಯ್ಯ ಅವರು ‘ಚಾಮರಾಜನಗರಕ್ಕೆ ಹೋದರೆ ಅಧಿಕಾರ ಕಳೆದುಕೊಳ್ಳುತ್ತಾರೆ’ ಎಂಬ ಮೂಢ ನಂಬಿಕೆಗೆ ಸವಾಲಾಗಿ ಮತ್ತೆ ಮತ್ತೆ ಅಲ್ಲಿಗೆ ಭೇಟಿ ನೀಡುತ್ತಾರೆ. ಮೌಢ್ಯವನ್ನು ಧಿಕ್ಕರಿಸಿ ನಿಲ್ಲುವ ಮನೋಬಲ ಅವರಲ್ಲಿ ತುಸು ಹೆಚ್ಚೇ ಇದೇ ಎನ್ನುವುದು ಹಲವು ಘಟನೆಗಳಿಂದ ರುಜುವಾತು ಪಡಿಸಿದ್ದಾರೆ.

ಸಿದ್ದರಾಮಯ್ಯ ಅವರು ಮೊದಲಿನ ಹಾಗೆ ಇಲ್ಲ ಎಂದು ತಕರಾರು ತೆಗೆಯುವ ಬಹುಪಾಲು ಶಾಸಕರು ಹೆಚ್ಚು ಭರವಸೆ ಇಟ್ಟಿದ್ದು ಅವರ ಮೇಲೆಯೇ. ಮೊದಲ ಬಾರಿಗೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಗ್ಯಾರಂಟಿಗಳ ಭಾರ ಹೊತ್ತಿರಲಿಲ್ಲ. ಹಾಗಾಗಿ ಶಾಸಕರಿಗೆ ಕೇಳಿದಷ್ಟು ಅನುದಾನ ನೀಡಲು ಸಾಧ್ಯವಾಗಿತ್ತು.

ವಿಧಾನಸಭಾ ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಗಳಲ್ಲಿ ಐದು ಗ್ಯಾರಂಟಿಗಳು ಪ್ರಮುಖವಾದವು. ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಡುವ ಕಲ್ಯಾಣ ಯೋಜನೆಗಳು ಅನಿವಾರ್ಯವೇ. ಆದರೆ ಯೋಜನೆಗಳನ್ನು ರೂಪಿಸುವಾಗ ಅಥವಾ ಭರವಸೆ ನೀಡುವಾಗ ತುಸು ತರ್ಕಬದ್ಧವಾಗಿ ಆಲೋಚಿಸಿ ನಿರ್ಧಾರ ಕೈಗೊಂಡರೆ ಜನತೆಗೂ ಒಳ್ಳೆಯದು. ಸರಕಾರದ ಬೊಕ್ಕಸವೂ ಸಮೃದ್ಧಿಯಾಗಿ ಇರುತ್ತದೆ. ಆಡಳಿತ ನಡೆಸುವವರಿಗೂ ಹೆಚ್ಚು ತೊಂದರೆಯಾಗುವುದಿಲ್ಲ. ಚುನಾವಣಾ ಪೂರ್ವದ ಐದು ಗ್ಯಾರಂಟಿಗಳ ಅನುಷ್ಠಾನ ಕಾರ್ಯದಲ್ಲಿ ಸಿದ್ದರಾಮಯ್ಯ ಸರಕಾರ ಹಿಂದೆ ಬಿದ್ದಿಲ್ಲ.

ಅನ್ನ ಭಾಗ್ಯ, ಗೃಹಜ್ಯೋತಿ, ಗೃಹಲಕ್ಷ್ಮಿ, ಶಕ್ತಿ ಯೋಜನೆ ಮತ್ತು ಯುವನಿಧಿಯಂಥ ಗ್ಯಾರಂಟಿಗಳ ಸಮರ್ಪಕ ಅನುಷ್ಠಾನಕ್ಕೆ ಪ್ರತೀ ವರ್ಷ ಐವತ್ತೆಂಟು ಸಾವಿರ ಕೋಟಿ ರೂ. ವ್ಯಯವಾಗುತ್ತಿದೆ. ಇದು ಒಟ್ಟು ರಾಜಸ್ವದ ಪ್ರತಿಶತ ಹದಿನೈದರಷ್ಟಾಗುತ್ತದೆ. ಈ ಐದೂ ಗ್ಯಾರಂಟಿ ಯೋಜನೆಗಳನ್ನು ಹೆಚ್ಚು ಸುಸಂಬದ್ಧ ಮತ್ತು ತರ್ಕಬದ್ಧವಾಗಿ ಪುನರ್ ರೂಪಿಸಿದರೆ ಅರ್ಹರಿಗೆ ಸವಲತ್ತು ಸಿಕ್ಕಂತಾಗುತ್ತದೆ. ಸರಕಾರದ ಬೊಕ್ಕಸದ ಮೇಲಿನ ಹೊರೆಯೂ ಕಮ್ಮಿಯಾಗುತ್ತದೆ.

ಹದಿನಾರು ಬಜೆಟ್‌ಗಳನ್ನು ಮಂಡಿಸಿ ಅತ್ಯುತ್ತಮ ಹಣಕಾಸು ಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಸಿದ್ದರಾಮಯ್ಯ ಅವರಿಗೆ ಈ ಐದೂ ಗ್ಯಾರಂಟಿಗಳ ಶಕ್ತಿ ಮತ್ತು ಮಿತಿ ಗೊತ್ತಿಲ್ಲವೆಂದಲ್ಲ. ಎಲ್ಲವೂ ಗೊತ್ತಿದ್ದೂ ಅನಿವಾರ್ಯವಾಗಿ ಐವತ್ತೆಂಟು ಸಾವಿರ ಕೋಟಿಯ ಹೊರೆ ಹೊತ್ತು ನಡೆಯುತ್ತಿದ್ದಾರೆ. ಸರಕಾರಿ ಸಂಬಳ ಪಡೆಯುವ ಮಹಿಳೆಯರು ಬಸ್ ಪಾಸ್ ಹಣವನ್ನು ಪಾವತಿಸುವಷ್ಟು ಆರ್ಥಿಕ ಬಲ ಹೊಂದಿರುತ್ತಾರೆ. ಗಂಡ-ಹೆಂಡತಿ ಸರಕಾರಿ ಪಿಂಚಣಿ ಪಡೆಯುವವರಾಗಿದ್ದರೆ ಅಥವಾ ಸರಕಾರಿ ನೌಕರಿ ಮಾಡುತ್ತಿದ್ದರೆ ಅವರ ತಿಂಗಳ ವಿದ್ಯುತ್ ಬಿಲ್ ಇನ್ನೂರು ಯೂನಿಟ್‌ಗಿಂತಲೂ ಕಡಿಮೆಯೇ ಇರುತ್ತದೆ. ಇನ್ನೂರು ಯೂನಿಟ್‌ನ ಮಾನದಂಡ ರೂಪಿಸಿದ್ದರಿಂದ ಪಾವತಿ ಮಾಡುವ ಆರ್ಥಿಕ ಶಕ್ತಿ ಪಡೆದವರೂ ಗೃಹಜ್ಯೋತಿ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಗೃಹ ಜ್ಯೋತಿ ಮತ್ತು ಶಕ್ತಿ ಯೋಜನೆಯ ಫಲಗಳು ನಿಜವಾದ ಅರ್ಹರಿಗೆ ಮಾತ್ರ ನೀಡಿದರೆ ಸರಕಾರದ ಬೊಕ್ಕಸಕ್ಕೆ ಸಾವಿರಾರು ಕೋಟಿಯಷ್ಟು ಹಣ ಉಳಿತಾಯವಾಗುತ್ತದೆ. ಕಲ್ಯಾಣ ಕಾರ್ಯಕ್ರಮಗಳ ಮೂಲ ಉದ್ದೇಶವೇ ನಿಜವಾದ ಬಡವರಿಗೆ ಆಸರೆ ನೀಡುವುದಾಗಿದೆ. ಕಾಯಕ ಮತ್ತು ದಾಸೋಹ ಪರಿಕಲ್ಪನೆಯೂ ಉಳ್ಳವರಿಂದ ಪಡೆದು ಇಲ್ಲದವರ ನಡುವೆ ಹಂಚಬೇಕು ಎಂದೇ ಪ್ರತಿಪಾದಿಸುತ್ತದೆ. ೨೦೨೩ರ ಚುನಾವಣಾ ಸಂದರ್ಭದಲ್ಲಿ ಘೋಷಿಸಿದ ಗ್ಯಾರಂಟಿ ಯೋಜನೆಗಳು ಈ ಹಿಂದಿನ ಕಲ್ಯಾಣ ಕಾರ್ಯಕ್ರಮಗಳಿಗೆ ಹೋಲುತ್ತಿದ್ದರೆ ಪುನರಾವರ್ತನೆ ತಪ್ಪಿಸಬೇಕು. ವಿಧವಾ ವೇತನ, ವೃದ್ಧಾಪ್ಯ ವೇತನ, ಭಾಗ್ಯ ಜ್ಯೋತಿ ಸೇರಿದಂತೆ ಇನ್ನಿತರ ಕಲ್ಯಾಣ ಯೋಜನೆಗಳಡಿ ಫಲಾನುಭವಿಗಳಾಗಿದ್ದವರ ಪಟ್ಟಿ ಸಿದ್ಧಪಡಿಸಿ ಪುನರಾವರ್ತನೆಯಾಗದಂತೆ ಮರು ರೂಪಿಸಿದರೆ ಗ್ಯಾರಂಟಿ ಯೋಜನೆಗಳು ಹೆಚ್ಚು ನಿಖರ ಎನಿಸಿಕೊಳ್ಳುತ್ತವೆ.

ಉತ್ತರ ಭಾರತದ ಮತ್ತು ಈಶಾನ್ಯ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಬಡತನ ಕಡಿಮೆ. ಹಾಗಾಗಿ ಕರ್ನಾಟಕವನ್ನು ಭಿನ್ನ ನೆಲೆಯಲ್ಲಿ ಮುನ್ನಡೆಸಬೇಕಾಗುತ್ತದೆ. ಕರ್ನಾಟಕದ ಶೈಕ್ಷಣಿಕ ವ್ಯವಸ್ಥೆ ಉಳಿದೆಲ್ಲ ರಾಜ್ಯಗಳಿಗೆ ಹೋಲಿಸಿದರೆ ಉತ್ತಮವಾಗಿದೆ. ಶೈಕ್ಷಣಿಕ ವ್ಯವಸ್ಥೆ ಮತ್ತಷ್ಟು ಗಟ್ಟಿಗೊಳಿಸಲು ಯೋಜನೆಗಳನ್ನು ರೂಪಿಸಬೇಕು. ಭಾರತದ ಉಳಿದ ಬಡ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಉದ್ಯೋಗಕ್ಕಾಗಿ ಹೊರ ರಾಜ್ಯಗಳಿಗೆ ವಲಸೆ ಹೋಗುವವರ ಪ್ರಮಾಣ ಕಡಿಮೆಯಿದೆ. ಆದರೆ ಕರ್ನಾಟಕದ ಗ್ರಾಮೀಣ ಪ್ರದೇಶದಲ್ಲಿ ಕೃಷಿ ತೀವ್ರ ಬಿಕ್ಕಟ್ಟು ಎದುರಿಸುತ್ತಿರುವುದರಿಂದ ನಗರಗಳಿಗೆ ವಲಸೆ ಹೋಗುವವರ ಸಂಖ್ಯೆ ಹೆಚ್ಚುತ್ತಿದೆ. ಕರ್ನಾಟಕದಲ್ಲಿ ದಿನೇ ದಿನೇ ನಗರ -ಗ್ರಾಮೀಣ ಪ್ರದೇಶಗಳ ನಡುವಿನ ಅಂತರ ಹೆಚ್ಚಾಗುತ್ತಿದೆ. ಕರ್ನಾಟಕದಲ್ಲಿ ಬಡತನ, ನಿರುದ್ಯೋಗ ಉಳಿದ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಕಡಿಮೆ ಇದೆ ಎನಿಸಬಹುದು. ಆದರೆ ಕರ್ನಾಟಕ ಎದುರಿಸುತ್ತಿರುವ ಕೆಲ ಸಮಸ್ಯೆಗಳಿಗೆ ಈಗಲೇ ಪರಿಹಾರ ಕಂಡುಕೊಳ್ಳದಿದ್ದರೆ ಮುಂದೊಂದು ದಿನ ಇಲ್ಲಿಯೂ ಬಡತನ, ನಿರುದ್ಯೋಗ ತಾಂಡವವಾಡಬಹುದು.

ಕರ್ನಾಟಕದಲ್ಲಿ ಶೈಕ್ಷಣಿಕ ಗುಣ ಮಟ್ಟ ಚೆನ್ನಾಗಿ ಇರುವುದರಿಂದ ಹೆಚ್ಚು ಜನ ಉತ್ತಮ ಅವಕಾಶ ಅರಸಿ ಪರದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಕರ್ನಾಟಕದ ಶಿಕ್ಷಣ ವ್ಯವಸ್ಥೆಯಲ್ಲಿ ಸರಕಾರಿ ಮತ್ತು ಖಾಸಗಿಯಲ್ಲಿನ ಅಂತರ ಹೆಚ್ಚುತ್ತಿರುವುದರಿಂದ ಮುಂದೊಂದು ದಿನ ದಲಿತರು, ಹಿಂದುಳಿದವರು ಮತ್ತು ಎಲ್ಲ ಜಾತಿಯ ಬಡವರು ಅತ್ಯುತ್ತಮ ಶಿಕ್ಷಣದಿಂದ ವಂಚಿತರಾಗುವ ಸಾಧ್ಯತೆ ಇದೆ. ಅದನ್ನು ಈ ಗಳಿಗೆಯಿಂದಲೇ ಸುಧಾರಿಸುವ ಅಗತ್ಯವಿದೆ.

ಬಡವರ ಮಕ್ಕಳು ಅನಿವಾರ್ಯವಾಗಿ ಅವಲಂಬಿಸಿರುವ ಸರಕಾರಿ ಶಾಲಾ ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳು ದಿನೇ ದಿನೇ ಸೊರಗುತ್ತಿವೆ. ಪ್ರಾಥಮಿಕ ಹಂತದಿಂದ ವಿಶ್ವವಿದ್ಯಾನಿಲಯ ಮಟ್ಟದವರೆಗಿನ ಸರಕಾರಿ ಶಿಕ್ಷಣ ವ್ಯವಸ್ಥೆ ಪಾತಾಳ ಕಂಡಿದೆ. ಮೂಲಭೂತ ಸೌಕರ್ಯ ಮತ್ತು ಶಿಕ್ಷಕರ ಕೊರತೆಯಿಂದ ಸರಕಾರಿ ಶಾಲಾ ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ಶಿಕ್ಷಣದ ಗುಣಮಟ್ಟ ಕುಸಿಯುತ್ತಿದೆ. ವಿಶೇಷವಾಗಿ ಹಳ್ಳಿಗಾಡಿನ ಶಾಲಾ ಕಾಲೇಜುಗಳು ಅತ್ಯುತ್ತಮ ಕಟ್ಟಡ, ಆಟದ ಮೈದಾನ, ಪ್ರಯೋಗಾಲಯ ಮತ್ತು ಅಗತ್ಯ ಪ್ರಮಾಣದ ಶಿಕ್ಷಕರು ಇಲ್ಲದೆ ಬಡವಾಗಿವೆ. ಸರಕಾರಿ ಶಾಲಾ ಕಾಲೇಜುಗಳು ಶುದ್ಧ ಕುಡಿಯುವ ನೀರು ಮತ್ತು ಸ್ವಚ್ಛ ಶೌಚಾಲಯ ವ್ಯವಸ್ಥೆ ಕಲ್ಪಿಸುವಲ್ಲಿ ವಿಫಲವಾಗಿವೆ. ಪರಿಣಾಮವಾಗಿ ಕಳಪೆ ಫಲಿತಾಂಶ ನೋಡುವಂತಾಗಿದೆ. ಹಳ್ಳಿಗಾಡಿನ ಸರಕಾರಿ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಕುಸಿಯುತ್ತಿದೆ. ವಿದ್ಯಾರ್ಥಿಗಳು ಇಲ್ಲ ಎಂಬ ಕಾರಣ ಮುಂದು ಮಾಡಿ ಶಾಲೆಗಳನ್ನು ಮುಚ್ಚುವ ಇಲ್ಲಾ ವಿಲೀನಗೊಳಿಸುವ ಪ್ರಕ್ರಿಯೆ ನಿರಂತರ ಜಾರಿಯಲ್ಲಿದೆ. ಇನ್ನೊಂದೆಡೆ ಖಾಸಗಿ ಶಿಕ್ಷಣ ಸಂಸ್ಥೆಗಳು ದಿನೇ ದಿನೇ ಬಲಶಾಲಿಯಾಗುತ್ತಲಿವೆ.

ಇಂಗ್ಲಿಷ್ ಮಾಧ್ಯಮ ಶಿಕ್ಷಣದ ಕಾರಣಕ್ಕೆ ಸರಕಾರಿ ಶಾಲೆಗಳ ಹಾಜರಾತಿ ಕುಸಿಯುತ್ತಿದೆ ಎಂದು ಭಾವಿಸಲಾಗಿತ್ತು. ಸರಕಾರಿ ಶಾಲೆಗಳಲ್ಲೂ ಆಂಗ್ಲ ಮಾಧ್ಯಮ ಶಿಕ್ಷಣ ಆರಂಭಿಸಲಾಗಿದೆ. ಆದರೆ ಹಾಜರಾತಿ ಕುಸಿತ ನಿರಂತರ ಮುಂದುವರಿದಿದೆ. ಪ್ರವೇಶಾತಿ ಪ್ರಮಾಣವು ಸರಕಾರಿ ಶಾಲಾ ಕಾಲೇಜುಗಳಲ್ಲಿ ಕಡಿಮೆಯಾಗುತ್ತಿದೆ. ಅತ್ಯಂತ ದುಬಾರಿ ವೆಚ್ಚದಲ್ಲಿ ಶಿಕ್ಷಣ ನೀಡುತ್ತಿರುವ ಖಾಸಗಿ ಶಾಲಾ ಕಾಲೇಜುಗಳು ತುಂಬಿ ತುಳುಕುತ್ತಿವೆ. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಮಾಡಲು ಉಳಿದೆಲ್ಲ ಕಲ್ಯಾಣ ಯೋಜನೆಗಳು ಹಿನ್ನಡೆ ಅನುಭವಿಸಬಾರದು. ಆದರೆ ಶಿಕ್ಷಣ, ಆರೋಗ್ಯ ಮತ್ತು ಮೂಲಭೂತ ಸೌಕರ್ಯ ಕ್ಷೇತ್ರಗಳು ಬಲ ಹೀನವಾಗುತ್ತಿವೆ.

ಸರಕಾರಿ ಶಾಲಾ ಶಿಕ್ಷಣ ವ್ಯವಸ್ಥೆ ಬಲಗೊಳಿಸಲು ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ತೆರೆಯಲಾಗುತ್ತಿದೆ. ಆದರೆ ಗುಣಮಟ್ಟ ಕಾಯ್ದುಕೊಳ್ಳದೆ ಇರು ವುದರಿಂದ ಪಬ್ಲಿಕ್ ಶಾಲೆಗಳು ಮಾದರಿ ಶಿಕ್ಷಣ ಸಂಸ್ಥೆಗಳಾಗಿ ರೂಪುಗೊಳ್ಳುತ್ತಿಲ್ಲ. ದಿ. ರಾಜೀವ್ ಗಾಂಧಿಯವರ ಕನಸಿನ ಕೂಸಾದ ನವೋದಯ ವಿದ್ಯಾನಿಲಯಗಳು ಈ ಹೊತ್ತಿಗೂ ಗುಣ ಮಟ್ಟದ ಶಿಕ್ಷಣಕ್ಕಾಗಿಯೇ ಹೆಸರು ಮಾಡುತ್ತಿವೆ. ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ನವೋದಯ ವಿದ್ಯಾಲಯಗಳ ಮಾದರಿಯಲ್ಲಿ ರೂಪಿಸುವ ಇಚ್ಛಾಶಕ್ತಿ ಪ್ರದರ್ಶಿಸಿದರೆ ಮಾತ್ರ ಸರಕಾರಿ ಶಾಲಾ ವ್ಯವಸ್ಥೆ ಗುಣಮಟ್ಟ ಗಳಿಸಲು ಸಾಧ್ಯ. ಒಂದು ಕಾಲದ ಸರಕಾರಿ ಶಾಲಾ ಕಾಲೇಜುಗಳಲ್ಲಿ ಉಳ್ಳವರ ಮಕ್ಕಳು ಓದುತ್ತಿದ್ದರು. ಕರ್ನಾಟಕದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಭರ್ಜರಿ ವ್ಯಾಪಾರಕ್ಕೆ ಇಳಿಯುತ್ತಿದ್ದಂತೆ ಇಡೀ ಸರಕಾರಿ ಶಾಲಾ ವ್ಯವಸ್ಥೆಯೇ ಕುಸಿತ ಕಂಡಿದೆ. ಖಾಸಗಿ ಶಾಲಾ ಕಾಲೇಜುಗಳು ಅತ್ಯುತ್ತಮ ಗುಣಮಟ್ಟದ ಮೂಲಭೂತ ಸೌಕರ್ಯ ಮತ್ತು ಗುಣಮಟ್ಟದ ಶಿಕ್ಷಣ ನೀಡಿ ಹೆಚ್ಚು ಲಾಭ ಮಾಡಿಕೊಳ್ಳುತ್ತಿವೆ. ಸರಕಾರಿ ಶಾಲಾ ಕಾಲೇಜುಗಳು ಲಾಭ ಮಾಡುವುದು ಒತ್ತಟ್ಟಿಗಿರಲಿ ಅತ್ಯುತ್ತಮ ಗುಣಮಟ್ಟದ ಶಿಕ್ಷಣ ನೀಡಿ ಬಡ ಮಕ್ಕಳಿಗೆ ಆಸರೆಯಾದರೆ ಸಾಕು ಎನ್ನುವಂತಾಗಿದೆ.

ಇನ್ನು ಸರಕಾರಿ ವಿಶ್ವವಿದ್ಯಾನಿಲಯಗಳು ಎರಡು ದಶಕಗಳಿಂದ ಖಾಯಂ ಬೋಧಕ ಸಿಬ್ಬಂದಿಯಿಲ್ಲದೆ ಗುಣಮಟ್ಟದ ಬೋಧನೆ, ಸಂಶೋಧನೆ ಇಲ್ಲದೆ ಬಡವಾಗಿವೆ. ಅತಿಥಿ ಉಪನ್ಯಾಸಕರನ್ನು ಅವಲಂಬಿಸಿ ಇಡೀ ಉನ್ನತ ಶಿಕ್ಷಣ ವ್ಯವಸ್ಥೆ ನಗೆಪಾಟಲೀಗೀಡಾಗಿದೆ. ವಿಶ್ವವಿದ್ಯಾನಿಲಯ ಧನ ಸಹಾಯ ಆಯೋಗ ಹಲವು ಬಾರಿ ರಾಜ್ಯ ಸರಕಾರಕ್ಕೆ ಎಚ್ಚರಿಕೆ ನೀಡಿದೆ. ವಿಶ್ವವಿದ್ಯಾನಿಲಯಗಳಲ್ಲಿ ಖಾಯಂ ಬೋಧಕರ ಪ್ರಮಾಣ ಪ್ರತಿಶತ ನಲವತ್ತಕ್ಕೆ ಕುಸಿದರೆ ಮಾನ್ಯತೆ ರದ್ದು ಪಡಿಸುವುದಾಗಿ ಹೇಳಿ ವರ್ಷಗಳೇ ಕಳೆದಿವೆ. ಒಂದು ಕಾಲದಲ್ಲಿ ವಿದೇಶಿ ವಿಶ್ವವಿದ್ಯಾನಿಲಯಗಳಿಗೂ ಕಮ್ಮಿ ಇಲ್ಲದ ಹಾಗೆ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದ ಕರ್ನಾಟಕ ಸರಕಾರದ ವ್ಯಾಪ್ತಿಯ ವಿಶ್ವವಿದ್ಯಾನಿಲಯಗಳು ನಿವೃತ್ತರಿಗೆ ಪಿಂಚಣಿ ನೀಡಲು ಪರದಾಡುತ್ತಿವೆ. ಸರಕಾರಿ ವಿಶ್ವವಿದ್ಯಾನಿಲಯಗಳಲ್ಲೂ ವಿದ್ಯಾರ್ಥಿಗಳ ಸಂಖ್ಯೆ ಕುಸಿಯುತ್ತಿದೆ. ಶ್ರೀಮಂತ ಮತ್ತು ಮಧ್ಯಮ ವರ್ಗದ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ವಿಶ್ವವಿದ್ಯಾನಿಲಯಗಳಿಗೆ ಸೇರಿಸುತ್ತಿದ್ದಾರೆ. ದುಬಾರಿ ಫೀಸು ನೀಡಿ ಖಾಸಗಿ ವಿಶ್ವವಿದ್ಯಾನಿಲಯಗಳಲ್ಲಿ ಪ್ರವೇಶ ಪಡೆಯುವಷ್ಟು ಆರ್ಥಿಕ ಬಲವಿಲ್ಲದವರು ಮಾತ್ರ ಸರಕಾರಿ ವಿಶ್ವವಿದ್ಯಾನಿಲಯಗಳನ್ನು ಅವಲಂಬಿಸಿದ್ದಾರೆ. ಒಗಟು ಬಿಡಿಸಿ ಹೇಳಬೇಕೆಂದರೆ ಸಿದ್ದರಾಮಯ್ಯ ಅವರು ಮತ್ತೆ ಮತ್ತೆ ಕಾಳಜಿ ಪೂರ್ವಕವಾಗಿ ಪ್ರಸ್ತಾಪಿಸುವ ಅಹಿಂದ ವರ್ಗ ಮಾತ್ರ ಸರಕಾರಿ ವಿಶ್ವವಿದ್ಯಾನಿಲಯಗಳನ್ನು ಅವಲಂಬಿಸಿದೆ. ಸ್ಥಳೀಯ ಖಾಸಗಿ ಶಿಕ್ಷಣ ಸಂಸ್ಥೆಗಳ ಪೈಪೋಟಿ ಎದುರಿಸದೆ ಸೊರಗುತ್ತಿರುವ ಸರಕಾರಿ ಶಾಲಾ ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳು ವಿದೇಶಿ ವಿಶ್ವವಿದ್ಯಾನಿಲಯಗಳ ಆಗಮನದ ನಂತರ ಏನಾಗಬಹುದು..? ಈಗಲೇ ಮುಚ್ಚುವ ಸ್ಥಿತಿಯಲ್ಲಿರುವ ಸರಕಾರಿ ವಿಶ್ವವಿದ್ಯಾನಿಲಯಗಳಿಗೆ ಶಕ್ತಿ ನೀಡದಿದ್ದರೆ ಅಸ್ತಿತ್ವ ಕಳೆದುಕೊಳ್ಳುತ್ತವೆ. ಸಾಮಾಜಿಕ ನ್ಯಾಯ ಪಾಲಿಸಲು ಅವಕಾಶ ಇರುವುದು ಸರಕಾರಿ ಶಾಲಾ ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳು ಮಾತ್ರ. ಖಾಸಗಿ ಶಾಲಾ ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳ ಮೇಲೆ ಸರಕಾರ ಸಂಪೂರ್ಣ ಹಿಡಿತ ಕಳೆದುಕೊಂಡಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಸಾಮಾಜಿಕ ನ್ಯಾಯ ಪಾಲನೆ ಗಗನ ಕುಸುಮವಾಗಿದೆ.

ಸ್ವಾತಂತ್ರ್ಯ ಲಭಿಸಿ ಎಪ್ಪತ್ತೈದು ವರ್ಷ ಗತಿಸಿದರೂ ಕರ್ನಾಟಕ ಸರಕಾರದ ವ್ಯಾಪ್ತಿಯ ವಿಶ್ವವಿದ್ಯಾನಿಲಯಗಳಲ್ಲಿ ಕಬ್ಬಲಿಗ, ಕಾಡುಗೊಲ್ಲ ಸಮುದಾಯ ಗಳ ಪ್ರಾಧ್ಯಾಪಕರು ಕುಲಪತಿ ಹುದ್ದೆ ಅಲಂಕರಿಸುವ ಅವಕಾಶದಿಂದ ವಂಚಿತರಾಗಿದ್ದಾರೆ. ಕೆಲವೊಂದು ಅಲೆಮಾರಿ ಸಮುದಾಯಗಳು ಮುಖ್ಯವಾಹಿನಿಯ ಭಾಗವೇ ಆಗಿಲ್ಲ. ಅಂಥವರನ್ನು ಮುಖ್ಯವಾಹಿನಿಗೆ ತರುವ ಕೆಲಸ ಸಿದ್ದರಾಮಯ್ಯನವರ ಸರಕಾರದ ಮೊದಲ ಆದ್ಯತೆಯಾಗಬೇಕು. ಸರಕಾರಿ ಬಸ್‌ಗಳಲ್ಲಿ ಟಿಕೆಟ್ ಖರೀದಿಸಿ ಪ್ರಯಾಣಿಸಲು ಸಾಧ್ಯವಾಗದ ಜನರಿಗೆ ಮಾತ್ರ ಶಕ್ತಿ ಯೋಜನೆ ಮೀಸಲಿಡಬೇಕು. ಅನರ್ಹರ ಪಾಲಾಗುತ್ತಿರುವ ಗ್ಯಾರಂಟಿ ಯೋಜನೆಗಳನ್ನು ಪರಿಷ್ಕರಣೆ ಮಾಡಿ ಅಲ್ಲಿ ಮಿಗುತಾಯವಾಗುವ ಹಣವನ್ನು ಶಿಕ್ಷಣ, ಆರೋಗ್ಯ ಮತ್ತು ಮೂಲಭೂತ ಸೌಕರ್ಯ ಒದಗಿಸಲು ಖರ್ಚು ಮಾಡಬಹುದು.

ಗುಣಮಟ್ಟದ ಶಿಕ್ಷಣ ಬಡವರಿಗೆ ಹೇಗೆ ಮರೀಚಿಕೆಯಾಗಿದೆಯೋ ಗುಣಮಟ್ಟದ ವೈದ್ಯಕೀಯ ಚಿಕಿತ್ಸೆಯೂ ಕೈಗೆ ಎಟಕುತ್ತಿಲ್ಲ. ಕರ್ನಾಟಕದ ಗ್ರಾಮೀಣ ಪ್ರದೇಶದಲ್ಲಿ ವೈದ್ಯಕೀಯ ವ್ಯವಸ್ಥೆಯೇ ಇಲ್ಲ ಎನ್ನುವಷ್ಟು ಕೊರತೆ ಎದ್ದು ಕಾಣುತ್ತಿದೆ. ನಗರ ಪ್ರದೇಶಗಳಲ್ಲಿ ಶ್ರೀಮಂತರು ಹೊರತು ಪಡಿಸಿ ಅತ್ಯುತ್ತಮ ವೈದ್ಯಕೀಯ ಚಿಕಿತ್ಸೆ ಬೇರೆ ಯಾರಿಗೂ ಸಿಗುತ್ತಿಲ್ಲ. ಬಡವರು, ಮಧ್ಯಮವರ್ಗದವರು ಅತ್ಯುತ್ತಮ ವೈದ್ಯಕೀಯ ಚಿಕಿತ್ಸೆಯಿಂದ ವಂಚಿತರಾಗಿದ್ದಾರೆ. ಆಸ್ಪತ್ರೆಗಳ ನಿರ್ಮಾಣಕ್ಕೆ ಸರಕಾರ ಹೆಚ್ಚು ಹಣ ವ್ಯಯಸುತ್ತಿದೆ. ಆದರೆ ಗುಣಮಟ್ಟದ ವೈದ್ಯಕೀಯ ಚಿಕಿತ್ಸೆ ದೊರೆಯುವ ವ್ಯವಸ್ಥೆ ನಿರ್ಮಿಸಲು ಸಾಧ್ಯವಾಗುತ್ತಿಲ್ಲ. ಪಕ್ಕದ ಕೇರಳ ರಾಜ್ಯದಲ್ಲಿ ಅತ್ಯುತ್ತಮ ಗುಣಮಟ್ಟದ ಶಿಕ್ಷಣ, ಸರಕಾರಿ ಆಸ್ಪತ್ರೆಗಳಲ್ಲೇ ಗುಣಮಟ್ಟದ ವೈದ್ಯಕೀಯ ಚಿಕಿತ್ಸೆ ಮತ್ತು ಅತ್ಯುತ್ತಮ ರಸ್ತೆ ಸಂಪರ್ಕ ವ್ಯವಸ್ಥೆ ಕಲ್ಪಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎರಡೂವರೆ ವರ್ಷಗಳ ಕಾಲ ಶಕ್ತಿ ಮೀರಿ ಶ್ರಮಿಸಿದ್ದಾರೆ. ಆದರೆ ಅವರೊಂದಿಗಿನ ತಂಡ ಬದ್ಧತೆಯಿಂದ ಕಾರ್ಯ ನಿರ್ವಹಿಸದೆ ಇರುವುದರಿಂದ ನಿರೀಕ್ಷಿತ ಪ್ರಮಾಣದ ಸಾಧನೆಯಾಗಿಲ್ಲ. ಸಮಾಜ ಕಲ್ಯಾಣ ಇಲಾಖೆಗೆ ಸರಕಾರ ಕೋಟಿ ಕೋಟಿ ಹಣ ವ್ಯಯಿಸಿದೆ. ಹಿಂದುಳಿದ ವರ್ಗಗಳ ಮತ್ತು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ವಸತಿ ನಿಲಯಗಳ ಪರಿಸ್ಥಿತಿಯನ್ನು ಒಮ್ಮೆ ಗಮನಿಸಿದರೆ ವೈಫಲ್ಯ ಕಣ್ಣಿಗೆ ರಾಚುತ್ತದೆ. ಅದೇ ಖಾಸಗಿ ಶಿಕ್ಷಣ ಸಂಸ್ಥೆಗಳ ವಸತಿ ನಿಲಯಗಳಿಗೆ ಒಮ್ಮೆ ಮುಖ್ಯಮಂತ್ರಿಗಳು ಭೇಟಿ ನೀಡಿ ಪರಾಮರ್ಶನೆ ಮಾಡಬೇಕು. ಸಾಮಾಜಿಕ ನ್ಯಾಯವೆಂದರೆ ಅವಕಾಶ ವಂಚಿತ ಸಮುದಾಯಗಳಿಗೂ ಸಮಾನ ಸವಲತ್ತು ಕಲ್ಪಿಸುವುದು. ಉಳ್ಳವರ ಮನೆಯಲ್ಲಿ ಹುಟ್ಟಿದ ಮಗು ಹಣವಿದೆ ಎಂಬ ಕಾರಣಕ್ಕೆ ಉತ್ತಮ ವಸತಿ ನಿಲಯದಲ್ಲಿದ್ದು ವಿದ್ಯಾಭ್ಯಾಸ ಪೂರೈಸುತ್ತಾನೆ. ಬಡವರ ಮಕ್ಕಳಿಗೆ ಸರಕಾರ ಪೋಷಕ ಸ್ಥಾನದಲ್ಲಿ ನಿಂತು ಕೋಟಿ ಕೋಟಿ ಹಣ ವ್ಯಯಿಸುತ್ತದೆ. ಆದರೆ ವಸತಿ ನಿಲಯಗಳು ವಾಸ ಯೋಗ್ಯವಾಗಿರುವುದಿಲ್ಲ.ಗ್ಯಾರಂಟಿ ಕಾರಣಕ್ಕೆ ಹಣ ಇಲ್ಲ ಅಂತ ಸಿದ್ದರಾಮಯ್ಯ ಅವರು ಅಹಿಂದ ವರ್ಗದ ಕಲ್ಯಾಣ ಯೋಜನೆಗಳಿಗೆ ಹಣದ ಕೊರತೆ ಮಾಡಿಲ್ಲ. ಆದರೆ ಆ ಹಣದ ಸಮರ್ಪಕ ಬಳಕೆಯನ್ನು ಸಂಬಂಧ ಪಟ್ಟ ಇಲಾಖಾ ಮಂತ್ರಿಗಳು ಮಾಡ ಬೇಕು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಹಣದ ಕೊರತೆಯೇನೂ ಇಲ್ಲ. ಆದರೆ ಬಹುಪಾಲು ಹಳ್ಳಿಗಳಲ್ಲಿ ಈ ಹೊತ್ತಿಗೂ ಮಹಿಳೆಯರು ಬಯಲು ಶೌಚಾಲಯವನ್ನು ಅವಲಂಬಿಸಿದ್ದಾರೆ. ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ತೋರಿದ ವಿಶೇಷ ಕಾಳಜಿ ಉಳಿದ ಇಲಾಖೆಗಳ ಅಭಿವೃದ್ಧಿ ಯೋಜನೆಗಳ ಅನುಷ್ಠಾನದಲ್ಲಿ ನಿಗಾ ವಹಿಸಿದರೆ ಸಮೃದ್ಧ ಕರ್ನಾಟಕದ ಕನಸು ಸಾಕಾರಗೊಳ್ಳುತ್ತದೆ. ಕರ್ನಾಟಕದ ಶ್ರೀಮಂತರು ಮತ್ತು ಮೇಲು ಮಧ್ಯಮವರ್ಗದ ಪಾಲಿಗೆ ಅತ್ಯುತ್ತಮ ಗುಣಮಟ್ಟದ ಶಿಕ್ಷಣ ಮತ್ತು ಆರೋಗ್ಯ ವ್ಯವಸ್ಥೆ ಲಭ್ಯವಿದೆ. ಅವರು ಹೆಚ್ಚೆಂದರೆ ಅತ್ಯುತ್ತಮ ರಸ್ತೆಗಳು ಇಲ್ಲ ಎಂದು ಗೊಣಗಬಹುದು. ಆದರೆ ಸರಕಾರ ಬಡವರ ಒಳಿತಿಗೆ ರೂಪಿಸಿರುವ ಯೋಜನೆಗಳ ಅನುಷ್ಠಾನದಲ್ಲಿ ವಿಶೇಷ ಮುತುವರ್ಜಿ ವಹಿಸಬೇಕು. ಸರಕಾರಿ ಯೋಜನೆಗಳ ಸಮರ್ಪಕ ಅನುಷ್ಠಾನದ ಕೊರತೆ ಎರಡೂವರೆ ವರ್ಷಗಳ ಅಧಿಕಾರದ ಅವಧಿಯಲ್ಲಿ ಎದ್ದು ಕಾಣುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಿಕ್ಷಣ, ಆರೋಗ್ಯ ಮತ್ತು ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಶ್ರಮಿಸಿದರೆ ಅದು ಸಾಮಾಜಿಕ ನ್ಯಾಯದ ಪಾಲನೆಯೇ ಎನಿಸಿಕೊಳ್ಳುತ್ತದೆ. ಕೈಗಾರಿಕಾ ಇಲಾಖೆ ಸೇರಿದಂತೆ ಇನ್ನಿತರ ಇಲಾಖೆಗಳು ಹಮ್ಮಿಕೊಳ್ಳುವ ಶೃಂಗ ಸಭೆಗಳು ಅಂತಿಮವಾಗಿ ಫಲ ಕೊಡಬೇಕೇ ಹೊರತು ಅದ್ದೂರಿ ಇವೆಂಟ್‌ಗಳಾಗಬಾರದು. ಬಂಡವಾಳ ಹೂಡಿಕೆದಾರರ ಸಮಾವೇಶ ಪ್ರತಿವರ್ಷ ನಡೆಯುತ್ತದೆ, ಸಾಕಷ್ಟು ಸದ್ದು ಮಾಡುತ್ತದೆ. ಆದರೆ ಎಷ್ಟು ಜನ ನಿರುದ್ಯೋಗಿಗಳ ಬದುಕಿಗೆ ಆಸರೆಯಾಯಿತು ಎನ್ನುವುದನ್ನು ಯಾರೂ ಖಾತ್ರಿ ಪಡಿಸುವುದಿಲ್ಲ. ಕೌಶಲ್ಯ ತರಬೇತಿಯ ಸಮಾವೇಶಗಳು ವಿಧಿಕ್ರಿಯೆಯಂತೆ ನಡೆಯುತ್ತಲೇ ಇರುತ್ತವೆ. ಫಲಗಳು ಮಾತ್ರ ಕಣ್ಣಿಗೆ ಗೋಚರವಾಗುವುದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಶ್ರಮವನ್ನು ಗೌರವಿಸುತ್ತಲೇ ಆಗಬೇಕಾದ ಕೆಲಸಗಳು ಸಾಕಷ್ಟಿವೆ ಎನ್ನುವುದನ್ನು ಹೇಳಲೇಬೇಕು. ಮೊದಲ ಬಾರಿಗೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಅಭಿವೃದ್ಧಿ ಕಾರ್ಯಗಳ ಜೊತೆಗೆ ಬೇರೆ ಸಮಸ್ಯೆ ಎದುರಿಸಬೇಕಾಗಿತ್ತು. ಆದರೆ ಈ ಬಾರಿ ನಾಯಕತ್ವ ಬದಲಾವಣೆ ವಿಷಯ ಹೆಚ್ಚು ಸುದ್ದಿಯಾಗಿದೆ. ಅಭಿವೃದ್ಧಿಯಲ್ಲಿನ ಹಿನ್ನಡೆಗೆ ಅದೂ ಕಾರಣವಾಗಿರಬಹುದು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಡಾ. ರಾಜಶೇಖರ ಹತಗುಂದಿ

contributor

Similar News