×
Ad

ಮಕ್ಕಳ ವ್ಯಾಮೋಹಕ್ಕೆ ಪಕ್ಷಗಳು ಸರ್ವನಾಶ

Update: 2025-11-29 12:07 IST

ಮಲ್ಲಿಕಾರ್ಜುನ ಖರ್ಗೆಯವರು ಪುತ್ರ ವ್ಯಾಮೋಹದಿಂದ ಹೊಸ ಸಮೀಕರಣದ ಪರವಾಗಿದ್ದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅವಸಾನದತ್ತ ಸಾಗಿದಂತೆ. ಸದ್ಯ ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರಕ್ಕೆ ಸಮರ್ಥ ಮತ್ತು ಸಾಮಾಜಿಕ, ರಾಜಕೀಯ ಬದ್ಧತೆ ಇರುವ ನಾಯಕತ್ವದ ಅಗತ್ಯವಿದೆ. ಸಿದ್ದರಾಮಯ್ಯ ಮತ್ತು ಮಲ್ಲಿಕಾರ್ಜುನ ಖರ್ಗೆಯವರು ಮಕ್ಕಳ ವ್ಯಾಮೋಹ ಬದಿಗಿಟ್ಟು ಕರ್ನಾಟಕದ ಹಿತಕ್ಕಾಗಿ ನಿರ್ಧಾರ ಕೈಗೊಳ್ಳುವ ಸಂದಿಗ್ಧ ಸಂದರ್ಭ ಇದಾಗಿದೆ.

ಕಾಂಗ್ರೆಸ್ ಪಕ್ಷವನ್ನು, ಅದರ ಕುಟುಂಬ ರಾಜಕಾರಣವನ್ನು ವಿರೋಧಿಸಿ ಅಸ್ತಿತ್ವಕ್ಕೆ ಬಂದ ಬಹುಪಾಲು ರಾಜಕೀಯ ಪಕ್ಷಗಳು ನಾಯಕರ ಮಕ್ಕಳ ವ್ಯಾಮೋಹದಿಂದಾಗಿ ಇಂದು ವಿನಾಶದ ಅಂಚಿಗೆ ಬಂದು ತಲುಪಿವೆ. ಒಂದು ಕಾಲದಲ್ಲಿ ಜನತಾ ಪರಿವಾರದ ಭಾಗವಾಗಿದ್ದ ಭಾರತೀಯ ಜನತಾ ಪಕ್ಷ ಇಂದು ದೇಶ ವ್ಯಾಪಿ ಬಲಿಷ್ಠವಾಗುತ್ತಿದೆ. ಎಲ್ಲೆಲ್ಲಿ ಬಿಜೆಪಿಗೂ ಮಕ್ಕಳ ವ್ಯಾಮೋಹದ ಸೋಂಕು ತಗಲಿದೆಯೋ ಅಲ್ಲಿ ಆ ಪಕ್ಷವೂ ಹಿನ್ನಡೆ ಅನುಭವಿಸುತ್ತಿದೆ. ಮಕ್ಕಳು, ಮೊಮ್ಮಕ್ಕಳನ್ನು ರಾಜಕಾರಣದಲ್ಲಿ ಪ್ರವರ್ಧಮಾನಕ್ಕೆ ತರಬೇಕೆಂಬ ನಾಯಕರ ಅಭೀಪ್ಸೆ ಪಕ್ಷಗಳ ತತ್ವ ಸಿದ್ಧಾಂತಗಳಿಗೆ ಮಾರಕವಾಗಿ ಪರಿಣಮಿಸಿದೆ.

ಕಾಂಗ್ರೆಸ್ ಪಕ್ಷದ ಕುಟುಂಬ ರಾಜಕಾರಣವನ್ನು ಆತ್ಯಂತಿಕವಾಗಿ ವಿರೋಧಿಸಿದ ಹಲವಾರು ಪ್ರಾದೇಶಿಕ ಪಕ್ಷಗಳು ಮಕ್ಕಳ ವ್ಯಾಮೋಹದಿಂದ ಹೆಚ್ಚು ಅಪಾಯಕಾರಿ ಹಂತ ತಲುಪಿವೆ. ಹಾಗೆ ನೋಡಿದರೆ ಕಾಂಗ್ರೆಸ್ ಪಕ್ಷವೇ ಮೇಲು ಎಂಬ ಭಾವನೆ ಮೂಡುವಂತಾಗಿದೆ. ಈಗಿನ ಕಾಂಗ್ರೆಸ್ ಪಕ್ಷ ನೆಹರೂ-ಇಂದಿರಾ ಗಾಂಧಿ ಕುಟುಂಬವನ್ನು, ಅವರ ನಾಮಬಲವನ್ನು ಆಶ್ರಯಿಸಿ ಮುಂದುವರಿದರೂ ಬೇರೆಯವರ ನಾಯಕತ್ವಕ್ಕೆ ಇಂಬಾಗಿ ನಿಂತಿದೆ. ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡಿದೆ. ದಲಿತ, ಹಿಂದುಳಿದ, ಅಲ್ಪಸಂಖ್ಯಾತರ ನಾಯಕತ್ವವನ್ನು ನೀರೆರೆದು ಪೋಷಿಸುತ್ತಿದೆ. ಅಷ್ಟಕ್ಕೂ ನೆಹರೂ-ಇಂದಿರಾ ಗಾಂಧಿ ಕುಟುಂಬದ ಕುಡಿಯನ್ನು ಅಧಿಕಾರ ಸ್ಥಾನದಲ್ಲಿ ಕೂರಿಸಲು ಆತುರ ತೋರುತ್ತಿಲ್ಲ. ಜನತೆಯ ಒಪ್ಪಿಗೆಗಾಗಿ ತಾಳ್ಮೆಯಿಂದ ಕಾಯುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ನಾಯಕತ್ವಕ್ಕಿರುವ ತಾಳ್ಮೆ ಸಹನೆ ಪ್ರಾದೇಶಿಕ ಪಕ್ಷದ ಯಾವ ನಾಯಕರಿಗೂ ಇಲ್ಲದಿರುವುದರಿಂದ ದಿನೇ ದಿನೇ ನೆಲೆ ಕಳೆದುಕೊಳ್ಳುತ್ತಿವೆ.

ಇಂದಿರಾ ಗಾಂಧಿಯವರ ಸರ್ವಾಧಿಕಾರಿ ಧೋರಣೆ, ನೆಹರೂ ಕುಟುಂಬದ ರಾಜಕೀಯ ಪ್ರಾಬಲ್ಯ ಮತ್ತು ತುರ್ತು ಪರಿಸ್ಥಿತಿ ಹೇರಿಕೆ ವಿರೋಧಿಸಿ ಜಯಪ್ರಕಾಶ್ ನಾರಾಯಣ ನೇತೃತ್ವದಲ್ಲಿ ಭಾರತದಾದ್ಯಂತ ಬಹುದೊಡ್ಡ ಜನಾಂದೋಲನ ಶುರುವಾಗಿತ್ತು. ಆ ಜನಾಂದೋಲನದಲ್ಲಿ ಕಾಂಗ್ರೆಸ್ ಪಕ್ಷದ ಕೆಲವು ಮುಖಂಡರು ಸೇರಿದ್ದರು. ಕಾಂಗ್ರೆಸ್, ಲೋಕದಳ, ಸಮಾಜವಾದಿ ಮತ್ತು ಭಾರತೀಯ ಜನಸಂಘದ ಮುಖಂಡರೆಲ್ಲ ಸೇರಿ ರೂಪಿಸಿದ್ದ ಜೆಪಿ ಚಳವಳಿಗೆ ವ್ಯಾಪಕ ಜನಬೆಂಬಲ ದೊರೆಯಿತು. ಕಾಂಗ್ರೆಸ್ ಹೊರತು ಪಡಿಸಿದ ಇನ್ನಿತರ ಪಕ್ಷಗಳ ಒಕ್ಕೂಟದ ಪ್ರತಿನಿಧಿಯಾಗಿ ಜನತಾ ಪಕ್ಷ ಹುಟ್ಟು ಪಡೆಯಿತು. ಈಗಿನ ಬಿಜೆಪಿಯೂ ಜನತಾ ಪಕ್ಷದ ಭಾಗವಾಗಿತ್ತು. ಹಳೆಯ ಕಾಂಗ್ರೆಸಿಗರು, ಸಮಾಜವಾದಿಗಳು ಮತ್ತು ಜನಸಂಘದ ನಾಯಕರು ಕುಟುಂಬ ರಾಜಕಾರಣವನ್ನು ವಿರೋಧಿಸಲೆಂದೇ ಜನತಾ ಪಕ್ಷವನ್ನು ಕಟ್ಟಿಕೊಂಡಿದ್ದರು. ಸೈದ್ಧಾಂತಿಕ ಏಕತೆ ಇಲ್ಲದ ಜನತಾ ಪಕ್ಷಕ್ಕೆ ಜನತೆ ಬೆಂಬಲಿಸಿ 1977ರಲ್ಲಿ ಅಧಿಕಾರವೂ ನೀಡಿದರು. ಕೇಂದ್ರದಲ್ಲಿ ಮೊರಾರ್ಜಿ ದೇಸಾಯಿ ನೇತೃತ್ವದ ಜನತಾ ಸರಕಾರ ಅಧಿಕಾರಕ್ಕೆ ಬಂತು. ಸೈದ್ಧಾಂತಿಕ ಭಿನ್ನಾಭಿಪ್ರಾಯ ಮತ್ತು ಒಗ್ಗಟ್ಟಿನ ಕೊರತೆಯಿಂದ ಜನತಾ ಪಾರ್ಟಿಯ ಸರಕಾರ ಹೆಚ್ಚು ಕಾಲ ಬಾಳಲಿಲ್ಲ. 1980ರ ಹೊತ್ತಿಗೆ ಭಾರತೀಯ ಜನತಾ ಪಕ್ಷ ಪ್ರತ್ಯೇಕ ಗುಂಪಾಗಿ ಹೊರ ಬಂದಿತು. ಬಿಜೆಪಿಗೆ ಉಗ್ರ ಹಿಂದುತ್ವವೇ ಮೂಲಮಂತ್ರವಾಯಿತು. ಮತೀಯ ಗಲಭೆಗಳೇ ಅಧಿಕಾರಕ್ಕೆ ಬರಲು ಸಾಧನಗಳಾದವು. ಮಕ್ಕಳ ವ್ಯಾಮೋಹ, ಕುಟುಂಬ ರಾಜಕಾರಣದ ಒಲವು ಇಲ್ಲದಿರುವುದರಿಂದ ಬಿಜೆಪಿ ದೇಶದಲ್ಲಿ ವ್ಯಾಪಕವಾಗಿ ಬೆಳೆಯಿತು. ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ. ಅಡ್ವಾಣಿ ಕಡಿಮೆ ಅವಧಿಯಲ್ಲಿ ಪಕ್ಷದ ಕಾರ್ಯಕರ್ತರ ಕ್ರಿಯಾಶೀಲತೆ ಗುರುತಿಸಿ ಅಪಾರ ಪ್ರಮಾಣದ ಎರಡನೆಯ ಹಂತದ ನಾಯಕರನ್ನು ಮುನ್ನೆಲೆಗೆ ತಂದರು. ಯಡಿಯೂರಪ್ಪ, ಅನಂತಕುಮಾರ್, ಪ್ರಮೋದ್ ಮಹಾಜನ್, ನಿತೀನ್ ಗಡ್ಕರಿ, ನರೇಂದ್ರ ಮೋದಿ, ಅರುಣ್ ಜೇಟ್ಲಿ, ಮನೋಹರ್ ಪರಿಕ್ಕರ್, ಗೋಪಿನಾಥ್ ಮುಂಢೆೆ, ರಾಜನಾಥ್ ಸಿಂಗ್, ಸುಷ್ಮಾ ಸ್ವರಾಜ್, ಶಿವರಾಜ್ ಸಿಂಗ್ ಚವ್ಹಾಣ್, ವಸುಂಧರಾ ರಾಜೇ, ರಮಣಸಿಂಗ್ ಅವರನ್ನು ಬೆಳೆಸಿದರು. ಪ್ರಸ್ತುತ ಬಿಜೆಪಿಯಲ್ಲಿ ಮೂರು ಮತ್ತು ನಾಲ್ಕನೆಯ ಪೀಳಿಗೆ ಪಕ್ಷವನ್ನು, ಸರಕಾರಗಳನ್ನು ಮುನ್ನಡೆಸಲು ಸಜ್ಜಾಗಿದ್ದಾರೆ. ಕಾಂಗ್ರೆಸ್ ಪಕ್ಷ ಕೂಡಾ ಎರಡನೇ, ಮೂರನೇ ಪೀಳಿಗೆಯ ನಾಯಕರನ್ನು ಬೆಳೆಸಿತು. ನಂತರ ಪ್ರಾದೇಶಿಕ ಮಟ್ಟದಲ್ಲಿ ಮಕ್ಕಳ ವ್ಯಾಮೋಹಕ್ಕೆ ಪಕ್ಷ ಹಿನ್ನಡೆ ಅನುಭವಿಸಬೇಕಾಗಿ ಬಂದಿದೆ.

ಕಾಂಗ್ರೆಸ್ ಕುಟುಂಬ ರಾಜಕಾರಣವನ್ನು ಸೈದ್ಧಾಂತಿಕ ನೆಲೆಯಲ್ಲಿ ವಿರೋಧಿಸಿದ ಜನತಾ ಪರಿವಾರದ ಛಿದ್ರಗೊಂಡ ಪ್ರಾದೇಶಿಕ ಪಕ್ಷಗಳು ಕೆಲವೇ ಕುಟುಂಬದವರ ಕೈಯಲ್ಲಿ ಸಿಲುಕಿ ನಲುಗುತ್ತಿವೆ. ಕೆಲವು ಅಳಿವಿನ ಅಂಚಿಗೆ ಬಂದು ನಿಂತಿವೆ. ಹರ್ಯಾಣದ ದೇವಿಲಾಲ್ ಬಹುದೊಡ್ಡ ಜನನಾಯಕ. ಉಪಪ್ರಧಾನಿ ಸ್ಥಾನ ಅಲಂಕರಿಸಿದವರು. ಪಕ್ಷದ ಕಾರ್ಯಕರ್ತರ ಪಡೆಯನ್ನೇ ಬೆಂಬಲಿಸಿ ಅಯೋಗ್ಯ ಮಕ್ಕಳನ್ನು ರಾಜಕೀಯದಿಂದ ದೂರ ಇಟ್ಟಿದ್ದರೆ ದೇವಿಲಾಲ್ ಯಾವಾಗಲೂ ದೊಡ್ಡ ಶಕ್ತಿಯಾಗಿ ಉಳಿಯುತ್ತಿದ್ದರು. ದೇವಿಲಾಲ್ ಪುತ್ರ ಓಂ ಪ್ರಕಾಶ ಚೌಟಾಲ ಅಪ್ಪನ ಹೆಸರಿಗೆ ಕಳಂಕ ಅಂಟಿಸಿದರು. ಜನತಾ ಪರಿವಾರದ ಭಾಗವಾಗಿದ್ದ ದೇವಿಲಾಲ್ ಅವರ ಹೆಸರು ಹೇಳುವವರು ಇಲ್ಲದಂತಾಗಿದೆ. ಬಿಹಾರ ರಾಜ್ಯದಲ್ಲಿ ಡಾ. ರಾಮಮನೋಹರ್ ಲೋಹಿಯಾ ಮತ್ತು ಕರ್ಪೂರಿ ಠಾಕೂರ್ ಅನುಯಾಯಿಗಳಾಗಿದ್ದ ಲಾಲು ಪ್ರಸಾದ್ ಯಾದವ್, ಜಾರ್ಜ್ ಫೆರ್ನಾಂಡಿಸ್, ನಿತೀಶ್ ಕುಮಾರ್, ಶರದ್ ಯಾದವ್, ರಾಮ್ ವಿಲಾಸ್ ಪಾಸ್ವಾನ್ ಮೂಲತಃ ಕಾಂಗ್ರೆಸ್ ವಿರೋಧಿ ರಾಜಕಾರಣದಿಂದ ಬಂದವರು. ಸಮಾಜವಾದಿ ಚಿಂತನೆಗಳಿಂದ ಪ್ರೇರಿತರಾಗಿ ರಾಜಕೀಯಕ್ಕೆ ಬಂದ ಅವರೆಲ್ಲ ಜಯಪ್ರಕಾಶ್ ನಾರಾಯಣ ಅವರ ಸಂಪೂರ್ಣ ಕ್ರಾಂತಿಯಲ್ಲಿ ಒಂದಾಗಿದ್ದರು. ಜನತಾ ಪಾರ್ಟಿಯನ್ನು ಆಶ್ರಯಿಸಿದ್ದರು. ಕೇವಲ ಸ್ವಾರ್ಥ ರಾಜಕೀಯ ಮತ್ತು ಅತಿಯಾದ ಕುಟುಂಬ ಪ್ರೀತಿಯಿಂದ ಪ್ರತ್ಯೇಕ ಗುಂಪುಗಳಾಗಿ ಅಸ್ತಿತ್ವ ಉಳಿಸಿಕೊಂಡರು. ಜನತಾ ಪಾರ್ಟಿಯಿಂದ ಭಾರತೀಯ ಜನಸಂಘ ಪ್ರತ್ಯೇಕಗೊಂಡು ಭಾರತೀಯ ಜನತಾ ಪಕ್ಷ ಅಸ್ತಿತ್ವಕ್ಕೆ ಬಂದಿದ್ದು ಸೈದ್ಧಾಂತಿಕ ಕಾರಣಕ್ಕೆ. ಮೂಲತಃ ಸಮಾಜವಾದಿಗಳಾಗಿದ್ದ ಚಂದ್ರಶೇಖರ್, ಮುಲಾಯಂ ಸಿಂಗ್ ಯಾದವ್, ಚೌಧರಿ ಚರಣಸಿಂಗ್, ದೇವಿಲಾಲ್, ಲಾಲು ಪ್ರಸಾದ್ ಯಾದವ್, ಜಾರ್ಜ್ ಫೆರ್ನಾಂಡಿಸ್, ಶರದ್ ಯಾದವ್, ನಿತೀಶ್ ಕುಮಾರ್, ರಾಮ್ ವಿಲಾಸ್ ಪಾಸ್ವಾನ್ ಮುಂತಾದವರು ಪ್ರತ್ಯೇಕ ಪಕ್ಷಗಳನ್ನು ಕಟ್ಟಿಕೊಂಡಿದ್ದು ಸ್ವಾರ್ಥ ಮತ್ತು ಕುಟುಂಬ ಪ್ರೀತಿಯಿಂದ. ಈಗ ಮಕ್ಕಳ ವ್ಯಾಮೋಹದಿಂದ ಆ ಎಲ್ಲ ಪ್ರಾದೇಶಿಕ ಪಕ್ಷಗಳು ಸರ್ವ ನಾಶವಾಗುತ್ತಿವೆ. ದೇವಿಲಾಲ್ ಕಟ್ಟಿದ ಪಕ್ಷ ಮಕ್ಕಳು ಮೊಮ್ಮಕ್ಕಳ ಕೈಯಲ್ಲಿ ನಲುಗಿ ಹೋಯಿತು. ಚಂದ್ರಶೇಖರ್ ಮಕ್ಕಳಿಗಾಗಿ ಪಕ್ಷ ಒತ್ತೆ ಇಡಲಿಲ್ಲ. ಆದರೆ ಅವರ ಒಡನಾಡಿ ಮುಲಾಯಂ ಸಿಂಗ್ ಯಾದವ್ ಸಮಾಜವಾದಿ ಪಕ್ಷವನ್ನು ಮಗನ ವ್ಯಾಮೋಹಕ್ಕೆ ಒಳಗಾಗಿ ವಿನಾಶದತ್ತ ಹೋಗುವುದನ್ನು ನೋಡಬೇಕಾಯಿತು. ಮುಲಾಯಂ ಸಿಂಗ್ ಯಾದವ್ ಉತ್ತರ ಪ್ರದೇಶದ ಮಟ್ಟಿಗೆ ಬಹುದೊಡ್ಡ ಶಕ್ತಿಯಾಗಿದ್ದರು. ಅವರಿಗೆ ಅತಿಯಾದ ಪುತ್ರ ವ್ಯಾಮೋಹ ಇರದೇ ಹೋಗಿದ್ದರೆ ಸಮಾಜವಾದಿ ಪಕ್ಷ ಮತ್ತಷ್ಟು ಬಲಶಾಲಿಯಾಗಿರುತ್ತಿತ್ತು. ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಈ ಮಟ್ಟದ ಜನ ಬೆಂಬಲ ಸಿಗುತ್ತಿರಲಿಲ್ಲ. ಮುಲಾಯಂ ಸಿಂಗ್ ಪುತ್ರ ಅಖಿಲೇಶ್ ಯಾದವ್ ಕೂಡಾ ಸಮಾಜವಾದಿ ಪಕ್ಷವನ್ನು ಕಾರ್ಯಕರ್ತರ ಪಕ್ಷವಾಗಿ ಮರು ರೂಪಿಸುವಲ್ಲಿ ವಿಫಲರಾದರು. ಅದರ ಪರಿಣಾಮ ಉತ್ತರ ಪ್ರದೇಶ ಅನುಭವಿಸುತ್ತಿದೆ. ಚೌಧರಿ ಚರಣ್ ಸಿಂಗ್ ಅವರ ಮೊಮ್ಮಗ ಬಿಜೆಪಿಯ ಅಡಿಯಾಳಾಗಿ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಬೇಕಾಗಿ ಬಂದಿದೆ.

ಬಿಹಾರ ರಾಜ್ಯದಲ್ಲಿ ಜನತಾ ಪರಿವಾರದ ನಾಯಕರಾದ ಲಾಲು ಪ್ರಸಾದ್ ಯಾದವ್, ಜಾರ್ಜ್ ಫೆರ್ನಾಂಡಿಸ್, ನಿತೀಶ್ ಕುಮಾರ್, ರಾಮ್ ವಿಲಾಸ್ ಪಾಸ್ವಾನ್, ಶರದ್ ಯಾದವ್ ಮುಂತಾದವರು ಒಗ್ಗಟ್ಟಾಗಿದ್ದು ರಾಜಕೀಯ ಮಾಡಿದ್ದರೆ ಬಿಜೆಪಿ ಈ ಮಟ್ಟದಲ್ಲಿ ಬೆಳೆದು ನಿಲ್ಲುತ್ತಿರಲಿಲ್ಲ. ಅಧಿಕಾರ ರಾಜಕಾರಣದ ಭಾಗವಾಗುತ್ತಿರಲಿಲ್ಲ. ಲಾಲು ಪ್ರಸಾದ್ ಯಾದವ್ ಅವರ ಸ್ವಾರ್ಥ, ಅತಿಯಾದ ಕುಟುಂಬ ಪ್ರೀತಿ ಮತ್ತು ಮಕ್ಕಳ ವ್ಯಾಮೋಹಕ್ಕೆ ಜನತಾ ಪರಿವಾರ ಛಿದ್ರ ಛಿದ್ರವಾಯಿತು. ಮೊದಲು ಲಾಲು ಪ್ರಸಾದ್ ಯಾದವ್ ಜನತಾ ದಳ ಒಡೆದು ರಾಷ್ಟ್ರೀಯ ಜನತಾ ದಳ ಕಟ್ಟಿಕೊಂಡರು. ಲಾಲು ಸರ್ವಧಿಕಾರಕ್ಕೆ ಬೇಸತ್ತು ಜಾರ್ಜ್, ಶರದ್ ಯಾದವ್, ನಿತೀಶ್ ಕುಮಾರ್, ರಾಮ್ ವಿಲಾಸ್ ಪಾಸ್ವಾನ್ ಪ್ರತ್ಯೇಕ ಪಕ್ಷ ಕಟ್ಟಿಕೊಂಡರು. ನಂತರ ಸಮತಾ ಪಕ್ಷ, ಸಂಯುಕ್ತ ಜನತಾ ದಳ ಪ್ರತ್ಯೇಕಗೊಂಡವು. ಜನತಾ ಪರಿವಾರದ ಒಡಕನ್ನೇ ಬಿಜೆಪಿ ಎಲ್ಲ ರಾಜ್ಯಗಳಲ್ಲಿ ಬಳಸಿಕೊಂಡು ತನ್ನ ರಾಜಕೀಯ ನೆಲೆ ವಿಸ್ತರಿಸಿಕೊಳ್ಳುತ್ತಿದೆ. ಲಾಲು ಪ್ರಸಾದ್ ಯಾದವ್ ಮೇವು ಹಗರಣದಲ್ಲಿ ಜೈಲು ಪಾಲಾದರು. ಆಗ ಮುಖ್ಯಮಂತ್ರಿ ಹುದ್ದೆಯನ್ನು ತನ್ನ ಹೆಂಡತಿ ರಾಬ್ಡಿ ದೇವಿಯವರಿಗೆ ವಹಿಸದೆ ನಿತೀಶ್ ಕುಮಾರ್ ಅಥವಾ ರಾಮ್ ವಿಲಾಸ್ ಪಾಸ್ವಾನ್ ಅವರಿಗೆ ನೀಡಿದ್ದರೆ ಪಕ್ಷ ಹೋಳಾಗುತ್ತಿರಲಿಲ್ಲ. ರಾಷ್ಟ್ರೀಯ ಜನತಾ ದಳ ಅಸ್ತಿತ್ವಕ್ಕೆ ಬಂದ ಮೇಲೂ ಅದರ ಚುಕ್ಕಾಣಿಯನ್ನು ಪಕ್ಷದ ಕ್ರಿಯಾಶೀಲ ನಾಯಕರ ಕೈಗೆ ಕೊಟ್ಟಿದ್ದರೂ ಶಕ್ತಿ ಈ ಮಟ್ಟದಲ್ಲಿ ಕುಂದುತ್ತಿರಲಿಲ್ಲ. ಲಾಲು ಪ್ರಸಾದ್ ಯಾದವ್ ಆರ್‌ಜೆಡಿಯನ್ನು ಮಗ ತೇಜಸ್ವಿ ಯಾದವ್ ಕೈಗೆ ಒಪ್ಪಿಸಿ ಸರ್ವ ನಾಶ ಮಾಡಿದರು. ಮಕ್ಕಳ ಮೇಲಿನ ವ್ಯಾಮೋಹ ರಾಷ್ಟ್ರೀಯ ಜನತಾದಳವನ್ನು ಈ ಪರಿಸ್ಥಿತಿಗೆ ತಂದು ನಿಲ್ಲಿಸಿದೆ.

ಸಂಯುಕ್ತ ಜನತಾ ದಳದ ನಾಯಕ ನಿತೀಶ್ ಕುಮಾರ್ ಮತ್ತು ಜಾರ್ಜ್ ಫೆರ್ನಾಂಡಿಸ್ ಪ್ರತ್ಯೇಕ ಪಕ್ಷ ಮಾಡಿಕೊಂಡಿದ್ದೇ ಲಾಲು ಸರ್ವಾಧಿಕಾರ ಮತ್ತು ಕುಟುಂಬ ಪ್ರೀತಿಯ ಕಾರಣಕ್ಕೆ. ಜಾರ್ಜ್ ಫೆರ್ನಾಂಡಿಸ್ ಜಯಾ ಜೇಟ್ಲಿ ಕಾರಣಕ್ಕೆ ನಿತೀಶ್ ಕುಮಾರ್ ಅವರನ್ನು ದೂರ ಮಾಡಿಕೊಳ್ಳಬೇಕಾಯಿತು. ನಿತೀಶ್ ಕುಮಾರ್ ಅವರ ಸಂಯುಕ್ತ ಜನತಾದಳ ಕಾರ್ಯಕರ್ತರ ಪಕ್ಷವಾಗಿದ್ದರಿಂದ ಮತ್ತೆ ವ್ಯಾಪಕ ಜನ ಬೆಂಬಲ ಗಳಿಸಿದೆ. ನಿತೀಶ್ ಕುಮಾರ್ ಮಗನನ್ನು ರಾಜಕೀಯಕ್ಕೆ ತರುವ ದುಸ್ಸಾಹಸ ಮಾಡಲಿಲ್ಲ. ಆ ಕಾರಣಕ್ಕೆ ಪಕ್ಷ ಈ ಹೊತ್ತಿಗೂ ಅಸ್ತಿತ್ವ ಉಳಿಸಿಕೊಳ್ಳುವಂತಾಗಿದೆ. ದುರಂತವೆಂದರೆ ಬಿಜೆಪಿಗೆ ಅಧಿಕಾರ ಅನುಭವಿಸಲು ಅವಕಾಶ ಮಾಡಿಕೊಟ್ಟಿದೆ. ರಾಮವಿಲಾಸ್ ಪಾಸ್ವಾನ್ ಪಕ್ಷವಾಗಲಿ, ಮಾಂಜಿ ನೇತೃತ್ವದ ಪಕ್ಷವಾಗಲಿ ಕಾರ್ಯಕರ್ತರ ಪಕ್ಷವಾಗಿ ಉಳಿದರೆ ಮಾತ್ರ ಬಲ ಉಳಿಸಿಕೊಳ್ಳುತ್ತವೆ. ಮಕ್ಕಳ ಮೊಮ್ಮಕ್ಕಳ ವ್ಯಾಮೋಹಕ್ಕೆ ಅವರ ತೆಕ್ಕೆಗೆ ಹೋದರೆ ಸರ್ವನಾಶ ಖಚಿತ. ಕಾನ್ಶೀರಾಮ್ ಅವರು ಬಹುಜನ ಸಮಾಜ ಪಕ್ಷವನ್ನು ಅತ್ಯಂತ ವೈಜ್ಞಾನಿಕ ನೆಲೆಯಲ್ಲಿ ರೂಪಿಸಿದ್ದರು. ಉತ್ತರ ಪ್ರದೇಶದಂತಹ ರಾಜ್ಯದಲ್ಲಿ ಅಧಿಕಾರಕ್ಕೆ ತಂದಿದ್ದರು. ಅವರೇ ಬದುಕಿದ್ದರೆ ಬಿಎಸ್‌ಪಿ ಭಾರತದ ರಾಜಕಾರಣದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿತ್ತು. ಕಾನ್ಶೀರಾಮ್ ಅವರ ಉತ್ತರಾಧಿಕಾರಿ ಬಿಎಸ್‌ಪಿಯನ್ನು ಕಾರ್ಯಕರ್ತರ ಪಕ್ಷವನ್ನಾಗಿ ಉಳಿಸುವಲ್ಲಿ ವಿಫಲರಾದರು. ಬಿಎಸ್‌ಪಿ ಬಹು ಜನರ ಪಕ್ಷವಾಗದೆ ಕುಟುಂಬ ಸದಸ್ಯರ ನಿಯಂತ್ರಣಕ್ಕೆ, ಸರ್ವಾಧಿಕಾರಿ ಧೋರಣೆಗೆ ಒಳಗಾದಾಗಲೇ ವಿನಾಶದತ್ತ ಮುಖ ಮಾಡಿತು. ಪಂಜಾಬಿನ ಶಿರೋಮಣಿ ಆಕಾಲಿದಳ ಅತ್ಯಂತ ಹಳೆಯ ಪ್ರಾದೇಶಿಕ ಪಕ್ಷ. ಈ ಹೊತ್ತು ಮಕ್ಕಳು ಮೊಮ್ಮಕ್ಕಳ ಕೈಯಲ್ಲಿ ಸಿಕ್ಕು ವಿನಾಶದ ಅಂಚಿಗೆ ಬಂದು ನಿಂತಿದೆ.

ಮಹಾರಾಷ್ಟ್ರದಲ್ಲಿ ಬಾಳಾಸಾಹೇಬ್ ಠಾಕ್ರೆ ಕಟ್ಟಿ ಬೆಳೆಸಿದ ಶಿವಸೇನೆ ಪಕ್ಷ ಕಾರ್ಯಕರ್ತರ ಬೆಂಬಲದಿಂದ ಬಹುದೊಡ್ಡ ರಾಜಕೀಯ ಶಕ್ತಿಯಾಗಿ ಹೊರಹೊಮ್ಮಿತ್ತು. ಬಾಳಾಸಾಹೇಬ್ ಅವರು ಪಕ್ಷದ ಹಿರಿಯ ಕಾರ್ಯಕರ್ತ ಮನೋಹರ್ ಜೋಶಿಯವರನ್ನು ಮುಖ್ಯಮಂತ್ರಿಯನ್ನಾಗಿಸಿದ್ದರು. ಯಾವಾಗ ಶಿವಸೇನೆ ಮಕ್ಕಳ ವ್ಯಾಮೋಹಕ್ಕೆ ಕೈ ಸೆರೆಯಾಯಿತೋ ಅಂದಿನಿಂದ ಅದರ ಅವಸಾನ ಶುರುವಾಯಿತು. ರಾಜ್ ಠಾಕ್ರೆ, ಉದ್ಧವ್ ಠಾಕ್ರೆ ದಾಯಾದಿ ಕಲಹದಲ್ಲಿ ಅರ್ಧ ಸೊರಗಿದ ಶಿವಸೇನೆ ನಂತರ ಪಕ್ಷದ ಹಿರಿಯ ಸೇನಾನಿ ಏಕನಾಥ ಶಿಂದೆ ಆಕ್ರೋಶಕ್ಕೆ ಅವಸಾನ ಕಾಣಬೇಕಾಯಿತು. ಮಹಾರಾಷ್ಟ್ರದ ಇನ್ನೊಂದು ಪಕ್ಷ ಎನ್‌ಸಿಪಿ ಮೂಲತಃ ಕಾಂಗ್ರೆಸ್ ಪಕ್ಷದಿಂದ ಹೋಳಾಗಿ ಹೊರ ಬಂದಿತ್ತು. ಅದರ ನಾಯಕ ಶರದ್ ಪವಾರ್ ಅವರು ಎನ್‌ಸಿಪಿ ಯನ್ನು ಎಲ್ಲ ಸಮುದಾಯದ ಕಾರ್ಯಕರ್ತರ ಪಕ್ಷವಾಗಿ ದಶಕಗಳ ಕಾಲ ಮುನ್ನಡೆಸಿದ್ದರು. ಯಾವಾಗ ಎನ್‌ಸಿಪಿ ಅಣ್ಣನ ಮಗ ಅಜಿತ್ ಪವಾರ್ ಮತ್ತು ಸ್ವಂತ ಮಗಳು ಸುಪ್ರಿಯಾ ಸುಳೆಯ ಸುಪರ್ದಿಗೆ ಹೋಯಿತೋ ಅದರ ಅವಸಾನ ಶುರುವಾಯಿತು. ಈಗ ಎನ್‌ಸಿಪಿ ಎರಡು ಹೋಳಾಗಿ ಒಂದು ಬಣ ಬಿಜೆಪಿಯ ಕಾಲಾಳಾಗಿ ಕಾರ್ಯ ನಿರ್ವಹಿಸುತ್ತಿದೆ. ಒಡಿಶಾದ ಬಿಜು ಜನತಾ ದಳ ಕಾರ್ಯಕರ್ತರ ಪಕ್ಷವಾಗಿ ಮುಂದುವರಿದಿದ್ದರೆ ಭವಿಷ್ಯದಲ್ಲಿ ಒಂದು ರಾಜಕೀಯ ಪಕ್ಷವಾಗಿ ನಿರ್ಣಾಯಕ ಶಕ್ತಿ ಪಡೆಯುತ್ತಿತ್ತು. ಅವರ ಪುತ್ರ ನವೀನ್ ಪಟ್ನಾಯಕ್ ಕೈಯಲ್ಲಿ ಅವಸಾನ ಹೊಂದಿತು.

ತಮಿಳುನಾಡು ರಾಜ್ಯದ ಅತ್ಯಂತ ಹಳೆಯ ಪಕ್ಷವಾದ ಡಿಎಂಕೆ ಸಮಾನತೆ ಮತ್ತು ದ್ರಾವಿಡ್ ಅಸ್ಮಿತೆಯ ಕನಸಿನ ಫಲವಾಗಿ ಹುಟ್ಟಿಕೊಂಡಿತ್ತು. 1949ರಲ್ಲಿ ಸಿ.ಎನ್. ಅಣ್ಣಾ ದೊರೈ ನೇತೃತ್ವದಲ್ಲಿ ಹುಟ್ಟಿಕೊಂಡ ಡಿಎಂಕೆ ಮುಂದೊಂದು ದಿನ ಎಂ. ಕರುಣಾನಿಧಿಯವರ ಕುಟುಂಬದ ಪಕ್ಷವಾಗುತ್ತದೆ ಎಂದು ಯಾರೂ ಭಾವಿಸಿರಲಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಪರ್ಯಾವಾಗಿ ಹುಟ್ಟಿಕೊಂಡ ಡಿಎಂಕೆ ಪಕ್ಷ, ಕರುಣಾನಿಧಿ ಮತ್ತು ಎಂ.ಜಿ. ರಾಮಚಂದ್ರನ್ ಅವರ ಸ್ವಾರ್ಥಕ್ಕೆ ಎರಡು ಹೋಳಾಯಿತು. ಡಿಎಂಕೆ ವಿರುದ್ಧ ಎಂ.ಜಿ. ರಾಮಚಂದ್ರನ್ ಎಐಡಿಎಂಕೆ ಪಕ್ಷ ಸ್ಥಾಪಿಸಿ ಯಶಸ್ವಿಯಾದರು. ದುರಂತವೆಂದರೆ ಆ ಎರಡೂ ಪಕ್ಷಗಳು ಎರಡು ಕುಟುಂಬದ ಆಸ್ತಿಯಾದವು. ಡಿಎಂಕೆ ಪಕ್ಷವಂತೂ ಈಗ ಎಂ. ಕರುಣಾನಿಧಿಯವರ ಮಕ್ಕಳ ಮೊಮ್ಮಕ್ಕಳ ಕೈಯಲ್ಲಿ ಸಿಲುಕಿ ಪಕ್ಷದ ಕ್ರಿಯಾಶೀಲ ನಾಯಕರನ್ನು ದೂರ ಸರಿಸಿದೆ. ಇದೇ ಸಂದರ್ಭಕ್ಕಾಗಿ ಬಿಜೆಪಿ ಬಕ ಪಕ್ಷಿಯಂತೆ ಕಾಯುತ್ತಿದೆ. ಡಿಎಂಕೆ ಪಕ್ಷದ ಮೇಲೆ ಕರುಣಾನಿಧಿ ಕುಟುಂಬದ ಹಿಡಿತ ಅತಿಯಾಗಿದೆ. ಡಿಎಂಕೆ ಸರಕಾರದ ಆಡಳಿತ ವಿರೋಧಿ ಅಲೆ ಹೆಚ್ಚಾದರೆ ಅದರ ಲಾಭ ಪಡೆದುಕೊಳ್ಳಲು ಬಿಜೆಪಿ ಎಐಡಿಎಂಕೆ ಪಕ್ಷವನ್ನು ಆಶ್ರಯಿಸಿದೆ.

ಕರ್ನಾಟಕದಲ್ಲಿ ಜನತಾ ಪಕ್ಷ ಕಾಂಗ್ರೆಸ್ ಪಕ್ಷಕ್ಕೆ ಪ್ರಬಲ ಪರ್ಯಾಯ ಶಕ್ತಿಯಾಗಿ ಹೊರ ಹೊಮ್ಮಿತ್ತು. ರಾಷ್ಟ್ರ ಮಟ್ಟದಲ್ಲಿ ತೃತೀಯ ರಂಗದ ಕನಸು ಬಿತ್ತಿದವರೇ ಕರ್ನಾಟಕದ ಜನತಾ ಪರಿವಾರದ ಹಿರಿಯ ನಾಯಕರು. ಜನತಾ ದಳ ರಾಷ್ಟ್ರ ಮಟ್ಟದಲ್ಲಿ ಒಂದು ಪ್ರಬಲ ರಾಜಕೀಯ ಶಕ್ತಿಯಾಗಿ ಹೊರಹೊಮ್ಮಲು ಕರ್ನಾಟಕ ಭೂಮಿಕೆ ಒದಗಿಸಿತ್ತು. ರಾಮಕೃಷ್ಣ ಹೆಗಡೆ, ಎಸ್.ಆರ್. ಬೊಮ್ಮಾಯಿ ಜನತಾ ದಳದ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಜನತಾ ಪರಿವಾರದ ಭಾಗವಾಗಿ, ಕಾಂಗ್ರೆಸ್ ವಿರೋಧಿ ನೆಲೆಯಲ್ಲಿ ರಾಜಕಾರಣ ಆರಂಭಿಸಿದ ಎಚ್.ಡಿ. ದೇವೇಗೌಡರು ದೇಶದ ಪ್ರಧಾನಿಯಾದದ್ದು ಜನತಾ ದಳದ ಬಲದ ಮೇಲೆಯೇ. ಜನತಾ ಪಕ್ಷವನ್ನು ರಾಜ್ಯದಲ್ಲಿ ಎರಡು ಹೋಳಾಗಿ ಮಾಡಿದ್ದು ಸನ್ಮಾನ್ಯ ದೇವೇಗೌಡರು. ರಾಮಕೃಷ್ಣ ಹೆಗಡೆ, ಎಸ್.ಆರ್. ಬೊಮ್ಮಾಯಿ, ಜೆ. ಎಚ್. ಪಟೇಲ್, ಬಿ. ರಾಚಯ್ಯ, ನಝೀರ್‌ಸಾಬ್ ಅವರಿಗೆ ಮಕ್ಕಳನ್ನು ರಾಜಕೀಯಕ್ಕೆ ತರಲೇಬೇಕೆಂಬ ಹಂಬಲ ಕಡಿಮೆ ಇತ್ತು. ರಾಮಕೃಷ್ಣ ಹೆಗಡೆಯವರಂತೂ ಮಕ್ಕಳನ್ನು ರಾಜಕೀಯದಿಂದ ಸಂಪೂರ್ಣ ದೂರ ಇಟ್ಟಿದ್ದರು. ಜನತಾ ಪರಿವಾರ ಕರ್ನಾಟಕದಲ್ಲಿ ಒಗ್ಗಟ್ಟಾಗಿದ್ದರೆ ಬಿಜೆಪಿಗೆ ನೆಲೆಯೇ ಇರುತ್ತಿರಲಿಲ್ಲ. ಕರ್ನಾಟಕದಲ್ಲಿ ಬಿಜೆಪಿ ಈ ಮಟ್ಟದಲ್ಲಿ ಬೆಳೆದು ನಿಲ್ಲಲು ಎಚ್.ಡಿ. ದೇವೇಗೌಡ ಅವರ ಮಕ್ಕಳ ವ್ಯಾಮೋಹ ಪ್ರಮುಖ ಕಾರಣವಾಗಿದೆ. ತೃತೀಯ ರಂಗದ ಕನಸು ಬಿತ್ತಿದ ದೇವೇಗೌಡರು ಇಂದು ಬಿಜೆಪಿಯ ಅಡಿಯಾಳು ಆಗುವ ಪ್ರಮೇಯವೇ ಬರುತ್ತಿರಲಿಲ್ಲ. ಕರ್ನಾಟಕದ ಜನತಾ ಪರಿವಾರದಲ್ಲಿ ಒಡಕಿಗೆ ಕಾರಣವಾಗಿದ್ದೇ ದೇವೇಗೌಡರು. ಜಾತ್ಯತೀತ ಜನತಾ ದಳ ರಚಿಸಿದ್ದನ್ನು ಸೈದ್ಧಾಂತಿಕ ನೆಲೆಯಲ್ಲಿ ಸಮರ್ಥಿಸಿಕೊಳ್ಳಬಹುದು. ಆದರೆ 2004ರಲ್ಲಿ ಜೆಡಿಎಸ್ 58 ಶಾಸಕರನ್ನು ಗೆಲ್ಲಿಸಿಕೊಂಡು ಸರಕಾರ ರಚಿಸುವಾಗ ನಿರ್ಣಾಯಕವಾಗಿತ್ತು. ಆಗ ದೇವೇಗೌಡರು ದೂರದೃಷ್ಟಿಯುಳ್ಳ ರಾಜಕಾರಣ ಮಾಡಿದ್ದರೆ ಅವರಿಗೆ ಈ ಗತಿ ಒದಗಿ ಬರುತ್ತಿರಲಿಲ್ಲ. ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಸರಕಾರ ರಚನೆಯ ಸಂದರ್ಭದಲ್ಲಿ ದೇವೇಗೌಡರು ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಿದ್ದರೆ ಜನತಾ ಪರಿವಾರ ವಿಘಟನೆಯತ್ತ ಸಾಗುತ್ತಿರಲಿಲ್ಲ. ದೇವೇಗೌಡರ ಮಕ್ಕಳ ಮೇಲಿನ ವ್ಯಾಮೋಹ ತೃತೀಯ ರಂಗದ ಕನಸನ್ನೇ ನುಚ್ಚು ನೂರು ಮಾಡಿತು. ದೇವೇಗೌಡರು ಮಕ್ಕಳನ್ನು ರಾಜಕೀಯದಿಂದ ದೂರ ಇಟ್ಟು ಪಕ್ಷದ ಕಾರ್ಯಕರ್ತರನ್ನು ಮತ್ತು ಎರಡನೇ ಪೀಳಿಗೆಯ ನಾಯಕರನ್ನು ಬೆನ್ನು ತಟ್ಟಿ ಬೆಳೆಸಿದ್ದರೆ ಜೆಡಿಎಸ್ ಪ್ರಬಲ ರಾಜಕೀಯ ಶಕ್ತಿಯಾಗಿ ಉಳಿಯುತ್ತಿತ್ತು. ಸಿದ್ದರಾಮಯ್ಯ, ಎಂ.ಪಿ. ಪ್ರಕಾಶ್, ವೈಜನಾಥ್ ಪಾಟೀಲ್, ಬಿ.ಆರ್. ಪಾಟೀಲ್, ಉದಾಸಿ ಮುಂತಾದ ಜನತಾ ಪರಿವಾರದ ಹಿರಿಯ ನಾಯಕರು ಎಚ್.ಡಿ. ದೇವೇಗೌಡರ ಮಕ್ಕಳ ವ್ಯಾಮೋಹಕ್ಕೆ ಬೇಸತ್ತು ಕಾಂಗ್ರೆಸ್, ಬಿಜೆಪಿ ಪಾಲಾದರು. ಜನತಾ ಪರಿವಾರದ ಎಲ್ಲ ಹಿರಿಯ ನಾಯಕರ ಕೈಯಲ್ಲೇ ಜೆಡಿಎಸ್ ಚುಕ್ಕಾಣಿ ಇದ್ದು ದೇವೇಗೌಡರ ಮಾರ್ಗದರ್ಶನ ದೊರಕಿದ್ದರೆ ಪಕ್ಷ ಶಕ್ತಿಶಾಲಿಯಾಗಿ ಬೆಳೆಯುತ್ತಿತ್ತು. ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿ ಹುದ್ದೆ ತಪ್ಪಿಸಿ, ಪಕ್ಷದಿಂದ ಹೊರ ಹಾಕಿ, ಮಗ ಕುಮಾರ್ ಸ್ವಾಮಿ ಬಿಜೆಪಿ ಯೊಂದಿಗೆ ಕೂಡಿಕೆಯ ಸರಕಾರ ರಚಿಸಲು ಅನುವು ಮಾಡಿಕೊಟ್ಟಿದ್ದು ಎಲ್ಲ ಅವಘಡಗಳಿಗೆ ಹಾದಿ ಮಾಡಿ ಕೊಟ್ಟಿತು. ಮಕ್ಕಳ ವ್ಯಾಮೋಹದಿಂದ ದೇವೇಗೌಡರು ಜೆಡಿಎಸ್ ಪಕ್ಷವನ್ನು ನಿಕೃಷ್ಟ ಸ್ಥಿತಿಗೆ ತಂದು ನಿಲ್ಲಿಸಿದ್ದಾರೆ. ಮುಂದೊಂದು ದಿನ ಜೆಡಿಎಸ್ ಪಕ್ಷವನ್ನು ಬಿಜೆಪಿ ನುಂಗಿ ಹಾಕಿದರೂ ಆಶ್ಚರ್ಯ ಪಡಬೇಕಾಗಿಲ್ಲ.

ಕರ್ನಾಟಕದ ಕಾಂಗ್ರೆಸ್ ಪಕ್ಷ ಬಿಜೆಪಿಯಲ್ಲಿನ ಒಡಕು ಮತ್ತು ವಿಶೇಷವಾಗಿ ಯಡಿಯೂರಪ್ಪ ಅವರ ಮಕ್ಕಳ ವ್ಯಾಮೋಹದಿಂದ ಅನಾಯಾಸವಾಗಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಯಡಿಯೂರಪ್ಪ ಮಗ ವಿಜಯೇಂದ್ರನ ಮೇಲೆ ಅಪಾರ ವ್ಯಾಮೋಹ ಹೊಂದಿರದಿದ್ದರೆ ಬೇರೆಯವರ ನಾಯಕತ್ವದಲ್ಲಿ ಬಿಜೆಪಿ ಶಕ್ತಿಶಾಲಿಯಾಗಿ ಬೆಳೆದು ನಿಲ್ಲುತ್ತಿತ್ತು. ಕರ್ನಾಟಕದ ಬಿಜೆಪಿಗೆ ಯಡಿಯೂರಪ್ಪ ಪುತ್ರ ವ್ಯಾಮೋಹವೇ ಅಡ್ಡಿಯಾಗಿದೆ.

2023ರ ವಿಧಾನಸಭಾ ಚುನಾವಣೆಯಲ್ಲಿ ಅತ್ಯಧಿಕ ಸ್ಥಾನ ಪಡೆದು ಸಿದ್ದರಾಮಯ್ಯ ನೇತೃತ್ವದಲ್ಲಿ ಸರಕಾರ ರಚಿಸಿರುವ ಕಾಂಗ್ರೆಸ್ ಪಕ್ಷಕ್ಕೆ ಮಕ್ಕಳ ವ್ಯಾಮೋಹ ಬಹು ದೊಡ್ಡ ತೊಡಕಾಗಿ ಪರಿಣಮಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಗ ಯತೀಂದ್ರ ಮೇಲಿನ ವ್ಯಾಮೋಹ ಕಡಿಮೆ ಮಾಡಿಕೊಂಡಿದ್ದರೆ ಇನ್ನೂ ಉತ್ತಮ ಆಡಳಿತ ನೀಡಲು ಸಾಧ್ಯವಾಗುತ್ತಿತ್ತು. ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು, ಅಖಿಲ ಭಾರತ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಆಗಿರುವ ಮಲ್ಲಿಕಾರ್ಜುನ ಖರ್ಗೆಯವರಿಗೂ ಪುತ್ರ ವ್ಯಾಮೋಹ ಸಮಸ್ಯೆಯಾಗಿದೆ. 2024ರ ಲೋಕಸಭಾ ಚುನಾವಣೆಗೂ ಮೊದಲು ಡಿ.ಕೆ. ಶಿವಕುಮಾರ್ ಜೊತೆಗೆ ಇನ್ನೂ ಮೂರು ಜನರಿಗೆ ಉಪಮುಖ್ಯಮಂತ್ರಿ ಹುದ್ದೆ ನೀಡಿದ್ದರೆ ಕಾಂಗ್ರೆಸ್ ಪಕ್ಷ ನಾಲ್ಕೈದು ಕಡೆಗೆ ಹೆಚ್ಚುವರಿಯಾಗಿ ಗೆಲುವು ಸಾಧಿಸುತ್ತಿತ್ತು. ಸಿದ್ದರಾಮಯ್ಯ ಅವರ ಬೇಡಿಕೆಗೆ ಕಾಂಗ್ರೆಸ್ ಹೈ ಕಮಾಂಡ್ ವಿಶೇಷವಾಗಿ ಮಲ್ಲಿಕಾರ್ಜುನ ಖರ್ಗೆಯವರು ಸಮ್ಮತಿ ನೀಡಲಿಲ್ಲ. ಮಗ ಪ್ರಿಯಾಂಕ್ ಖರ್ಗೆಯವರನ್ನು ಉಪ ಮುಖ್ಯಮಂತ್ರಿ ಮಾಡುವ ಇರಾದೆ ಇದ್ದಂತಿದೆ. ಈಗಲೂ ಅಷ್ಟೇ ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಕೂಗು ಜೋರಾಗಿದೆ. ಸಿದ್ದರಾಮಯ್ಯ ಅವರನ್ನು ಬದಲಾಯಿಸಿ ಆ ಜಾಗಕ್ಕೆ ಡಿ.ಕೆ ಶಿವಕುಮಾರ್ ಅವರನ್ನು ತರಬೇಕೆಂಬ ವಾದಕ್ಕೆ ಬಲವಾದ ಸಮರ್ಥನೆಯಿಲ್ಲ. ಸಿದ್ದರಾಮಯ್ಯ ಅವರು ಒಟ್ಟು ಏಳೂವರೆ ವರ್ಷ ಮುಖ್ಯಮಂತ್ರಿಯಾಗಿ ಅಧಿಕಾರ ಅನುಭವಿಸಿದ್ದಾರೆ. ಅವರನ್ನು ಬದಲಾಯಿಸಲೇಬೇಕು ಎಂಬ ನಿರ್ಧಾರಕ್ಕೆ ಕಾಂಗ್ರೆಸ್ ಹೈಕಮಾಂಡ್ ಬಂದಿದ್ದರೆ, ಮೊದಲ ಆಯ್ಕೆ ಮಲ್ಲಿಕಾರ್ಜುನ ಖರ್ಗೆಯವರು ಆಗುತ್ತಾರೆ. ಸಿದ್ದರಾಮಯ್ಯ ಅವರ ಸ್ಥಾನ ತುಂಬುವ ಅನುಭವ, ಹಿರಿತನ, ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವ ಜಾಣ್ಮೆ ಇರುವುದು ಮಲ್ಲಿಕಾರ್ಜುನ ಖರ್ಗೆಯವರಿಗೆ. ಅವರು ಬೇಡ ಎಂದಾದರೆ, ಸಹಜವಾಗಿ ಡಾ. ಜಿ ಪರಮೇಶ್ವರ್ ಅವರನ್ನು ಆ ಸ್ಥಾನಕ್ಕೆ ಆಯ್ಕೆ ಮಾಡಬೇಕು. ಎಂಟು ವರ್ಷ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ಉಪಮುಖ್ಯಮಂತ್ರಿ ಸ್ಥಾನದಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಹಿರಿತನವೂ ಅವರಿಗಿದೆ. ಪರಮೇಶ್ವರ್ ಅವರಿಗೆ ಸಿದ್ದರಾಮಯ್ಯ ಅವರ ಬೆಂಬಲವೂ ಸಿಗುವ ಸಾಧ್ಯತೆ ಇದೆ. ಆದರೆ ಡಿ.ಕೆ. ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡಬೇಕೆಂಬ ವಾದದಲ್ಲಿ ಪುತ್ರ ವ್ಯಾಮೋಹದ ನೆರಳು ಕಾಣಿಸುತ್ತಿದೆ. ಡಿ.ಕೆ. ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡಿ, ಪ್ರಿಯಾಂಕ್ ಖರ್ಗೆಯವರನ್ನು ಉಪಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸುವ ಸ್ವಾರ್ಥ ಇದ್ದಂತಿದೆ. ಮಲ್ಲಿಕಾರ್ಜುನ ಖರ್ಗೆಯವರು ಪುತ್ರ ವ್ಯಾಮೋಹದಿಂದ ಹೊಸ ಸಮೀಕರಣದ ಪರವಾಗಿದ್ದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅವಸಾನದತ್ತ ಸಾಗಿದಂತೆ. ಸದ್ಯ ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರಕ್ಕೆ ಸಮರ್ಥ ಮತ್ತು ಸಾಮಾಜಿಕ, ರಾಜಕೀಯ ಬದ್ಧತೆ ಇರುವ ನಾಯಕತ್ವದ ಅಗತ್ಯವಿದೆ. ಸಿದ್ದರಾಮಯ್ಯ ಮತ್ತು ಮಲ್ಲಿಕಾರ್ಜುನ ಖರ್ಗೆಯವರು ಮಕ್ಕಳ ವ್ಯಾಮೋಹ ಬದಿಗಿಟ್ಟು ಕರ್ನಾಟಕದ ಹಿತಕ್ಕಾಗಿ ನಿರ್ಧಾರ ಕೈಗೊಳ್ಳುವ ಸಂದಿಗ್ಧ ಸಂದರ್ಭ ಇದಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಡಾ. ರಾಜಶೇಖರ ಹತಗುಂದಿ

contributor

Similar News