ಆರೋಗ್ಯ ಇಲಾಖೆ: ಆಶಾ ಕಾರ್ಯಕತೆರ್ಯರೇ ಆಸ್ತಿ
ಆಶಾ ಕಾರ್ಯಕರ್ತೆಯರು, ಸ್ಥಳೀಯ ಸಮುದಾಯ ಮತ್ತು ಅರೋಗ್ಯ ವ್ಯವಸ್ಥೆಯ ನಡುವೆ ಸೇತುವೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆರೋಗ್ಯ ಇಲಾಖೆಯ ಹಲವಾರು ಸೇವೆಗಳು ಗ್ರಾಮೀಣ ಭಾಗದ ಜನತೆಗೆ ತಲುಪುತ್ತಿರುವುದೇ ಆಶಾ ಕಾರ್ಯಕರ್ತೆಯರ ನಿಸ್ವಾರ್ಥ ಸೇವೆಯಿಂದ. ತಾಯಿ ಮತ್ತು ಶಿಶು ಆರೋಗ್ಯದ ಬಗ್ಗೆ ಹಳ್ಳಿಗಳಲ್ಲಿ ಅಭಿಯಾನದ ರೀತಿ ಜಾಗೃತಿ ಮೂಡಿಸಿದವರೇ ಆಶಾ ಕಾರ್ಯಕರ್ತೆಯರು. ಆರೋಗ್ಯ ಜಾಗೃತಿ ಮತ್ತು ದಾಖಲೆ ನಿರ್ವಹಣೆಯಲ್ಲಿ ಆಶಾ ಕಾರ್ಯಕರ್ತೆಯರು ಪ್ರಧಾನ ಪಾತ್ರ ವಹಿಸುತ್ತಿದ್ದಾರೆ. ಗ್ರಾಮೀಣ ಭಾಗದ ಗರ್ಭಿಣಿಯರಿಗೆ ಸುರಕ್ಷಿತ ಹೆರಿಗೆಯ ಗ್ಯಾರಂಟಿ ನೀಡಿದವರೇ ಈ ತಾಯಂದಿರು.
ಕರ್ನಾಟಕದ ಆಶಾ ಕಾರ್ಯಕರ್ತೆಯರು ಕಳೆದ ಹನ್ನೆರಡು ದಿನಗಳಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಗೌರವ ಧನ ಹೆಚ್ಚಿಸಲು ಒತ್ತಾಯಿಸಿ ಹೋರಾಟ ನಡೆಸುತ್ತಿದ್ದಾರೆ. ಆಶಾ ಕಾರ್ಯಕರ್ತೆಯರ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುವುದು ಒತ್ತಟ್ಟಿಗಿರಲಿ, ಅವರನ್ನು ಗೌರವದಿಂದ ನಡೆಸಿಕೊಳ್ಳುವ ಸೌಜನ್ಯ ರಾಜ್ಯ ಸರಕಾರ ತೋರುತ್ತಿಲ್ಲ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಯಥಾ ಪ್ರಕಾರ ಬಾಯಿ ಮಾತಿನ ಗೌರವ ತೋರಿ ಜಪಾನಿಗೆ ಹಾರಿ ಹೋದರು. ಆಶಾ ಕಾರ್ಯಕರ್ತೆಯರೊಂದಿಗೆ ತಾಳ್ಮೆಯಿಂದ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಬೇಕಾದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಅವರು ‘‘ಆರೋಗ್ಯ ಇಲಾಖೆಗೆ ಆಶಾ ಕಾರ್ಯಕರ್ತೆಯರ ಅಗತ್ಯವೇ ಇಲ್ಲ. ಆಶಾ ಕಾರ್ಯಕರ್ತೆಯರು ಇಲ್ಲದಿದ್ದರೂ ಇಲಾಖೆ ಕಾರ್ಯ ನಿರ್ವಹಿಸುತ್ತಿದೆ’’ ಎಂದು ಉಡಾಫೆಯ ಮಾತುಗಳನ್ನು ಆಡಿದ್ದಾರೆ.
ಹಾಗೆ ನೋಡಿದರೆ ಈ ಹೊತ್ತು ಕರ್ನಾಟಕದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಲ್ಪಪ್ರಮಾಣದಲ್ಲಾದರೂ ಗ್ರಾಮೀಣ ಭಾಗದ ಜನತೆಗೆ ಹತ್ತಿರವಾಗಿದೆಯೆಂದರೆ, ಅದು ಆಶಾ ಕಾರ್ಯಕರ್ತೆ ಯರಿಂದಾಗಿ. ಆಶಾ ಕಾರ್ಯಕರ್ತೆಯರು ಗೌರವ ಧನ ಹೆಚ್ಚಿಸಲು ಕೋರಿ ಹೋರಾಟ ನಡೆಸುತ್ತಿರುವುದರಿಂದ ಗ್ರಾಮೀಣ ಭಾಗದ ಜನತೆ ತೀವ್ರ ಸಂಕಟ ಅನುಭವಿಸುತ್ತಿದ್ದಾರೆ. ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಆಶಾ ಕಾರ್ಯಕರ್ತೆಯರ ಗೌರವ ಧನ ಹೆಚ್ಚಿಸುವ ಭರವಸೆ ನೀಡಿತ್ತು. ಆ ಭರವಸೆ ಈಡೇರಿಸುವ ಕನಿಷ್ಠ ಸೌಜನ್ಯ ರಾಜ್ಯ ಸರಕಾರಕ್ಕೆ ಇಲ್ಲವೆಂದರೆ, ಸೂಕ್ಷ್ಮತೆ ಕಳೆದುಕೊಂಡಿದೆ ಎಂದೇ ಭಾವಿಸಬೇಕಾಗುತ್ತದೆ.
ಪಕ್ಕದ ಕೇರಳಂ ರಾಜ್ಯದಲ್ಲಿ, ಕಾಂಗ್ರೆಸ್ ಪಕ್ಷದ ಸರಕಾರ ಇದೆ. ಚುನಾವಣೆಗೂ ಮುಂಚೆ ಅವರೂ ಆಶಾ ಕಾರ್ಯಕರ್ತೆಯರ ಗೌರವ ಧನ ಹೆಚ್ಚಿಸುವ ಭರವಸೆ ನೀಡಿದ್ದರು. ಕೇರಳಂ ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರು ತಮ್ಮ ಮೊದಲ ಸಚಿವ ಸಂಪುಟ ಸಭೆಯಲ್ಲೇ ಆಶಾ ಕಾರ್ಯಕರ್ತೆಯರ ಗೌರವ ಧನ ಹೆಚ್ಚಿಸುವ ನಿರ್ಧಾರ ಕೈಗೊಂಡರು. ಅಲ್ಲಿ ಈ ಹಿಂದಿನ ಕಮ್ಯುನಿಸ್ಟ್ ಸರಕಾರ ಆಶಾ ಕಾರ್ಯಕರ್ತೆಯರಿಗೆ ರೂ. 9,000 ಗೌರವ ಧನ ನೀಡುತ್ತಿತ್ತು. ಸತೀಶನ್ ಅವರು ಗೌರವ ಧನವನ್ನು ಮೂರು ಸಾವಿರ ಹೆಚ್ಚಿಸಿ ಆದೇಶ ಹೊರಡಿಸಿದ್ದಾರೆ. ಕರ್ನಾಟಕ ಸರಕಾರಕ್ಕೆ ಚುನಾವಣಾ ಭರವಸೆಗಳು ಸಂಪೂರ್ಣ ಮರೆತೇ ಹೋಗಿವೆ. ಕಾಂಗ್ರೆಸ್ ಪಕ್ಷದ ಬಹುಮುಖ್ಯ ವೋಟ್ ಬ್ಯಾಂಕ್ ಆಗಿರುವ ಮುಸ್ಲಿಮ್ ಸಮುದಾಯಕ್ಕೆ ಮೂರು ಪ್ರಮುಖ ಭರವಸೆಗಳನ್ನು ನೀಡಲಾಗಿತ್ತು. ಮತಾಂತರ ನಿಷೇಧ ಕಾಯ್ದೆ, ಗೋ ಹತ್ಯೆ ನಿಷೇಧ ಕಾಯ್ದೆ ರದ್ದುಪಡಿಸುವುದು ಮತ್ತು ಮುಸ್ಲಿಮ್ ಸಮುದಾಯಕ್ಕೆ ಆಸರೆಯಾಗಿರುವ 2ಬಿ ಮೀಸಲಾತಿಯನ್ನು ಮರು ಸ್ಥಾಪಿಸುವುದು. ಕಾಂಗ್ರೆಸ್ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿದು ಮೂರು ವರ್ಷಗಳೇ ಕಳೆದಿವೆ. ಇಲ್ಲಿಯವರೆಗೆ ಆ ಮೂರು ಬೇಡಿಕೆಗಳನ್ನು ಈಡೇರಿಸಿಲ್ಲ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಪ್ರಮುಖ ಪಾತ್ರ ವಹಿಸಿರುವ ಬಹುದೊಡ್ಡ ಸಮುದಾಯವನ್ನು ಕಡೆಗಣಿಸುತ್ತಿರುವ ಈ ಸರಕಾರಕ್ಕೆ ಆಶಾ ಕಾರ್ಯಕರ್ತೆಯರು ಯಾವ ಲೆಕ್ಕ? ಚುನಾವಣಾ ಭರವಸೆಗಳನ್ನು ಸಂಪೂರ್ಣ ಮರೆತಿರುವ ರಾಜ್ಯ ಸರಕಾರ ಉಡಾಫೆ ಮಾತುಗಳಿಗೆ ಬೆಲೆ ತೆರಬೇಕಾಗುತ್ತದೆ.
ಕೇರಳಂ ಪುಟ್ಟ ರಾಜ್ಯ. ಅಲ್ಲಿಯ ಆರೋಗ್ಯ ಇಲಾಖೆಯ ಕಾರ್ಯ ವೈಖರಿ ಇಡೀ ದೇಶಕ್ಕೆ ಮಾದರಿ. ತಜ್ಞ ವೈದ್ಯರ ಸಂಖ್ಯೆ ಕಡಿಮೆ ಇದ್ದರೂ ಅತ್ಯುತ್ತಮ ಅರೋಗ್ಯ ಸೌಲಭ್ಯ ಒದಗಿಸಬಹುದೆಂಬುದನ್ನು ಕೇರಳಂನ ಆಶಾ ಕಾರ್ಯಕರ್ತೆಯರು ರುಜುವಾತುಪಡಿಸಿದ್ದಾರೆ. ಕೇರಳಂ ರಾಜ್ಯದ ಜನಸಂಖ್ಯೆಗೆ ಅನುಗುಣವಾಗಿ ಆಶಾ ಕಾರ್ಯಕರ್ತೆಯರಿದ್ದಾರೆ. 26,448 ಜನ ಆಶಾ ಕಾರ್ಯಕರ್ತೆಯರು ಕೇರಳದ ಆರೋಗ್ಯ ವ್ಯವಸ್ಥೆಯಲ್ಲಿ ಕ್ರಾಂತಿ ಸೃಷ್ಟಿಸಿದ್ದಾರೆ. ಆಶಾ ಕಾರ್ಯಕರ್ತೆಯರ ಮಹತ್ವ ಗೊತ್ತಿರುವ ಕೇರಳಂ ಸರಕಾರ ಅವರಿಗೆ ಹೆಚ್ಚು ಗೌರವ ಧನ ನೀಡಿ ಅತ್ಯಂತ ಗೌರವದಿಂದ ನಡೆಸಿಕೊಳ್ಳುತ್ತಿದೆ.
ಅಷ್ಟಕ್ಕೂ ಆಶಾ ಕಾರ್ಯಕರ್ತೆಯರ ಪರಿಕಲ್ಪನೆಗೆ ಆಕಾರ ಮೂಡಿಸಿದವರೇ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ಮುಖಂಡರು. 2005ರಲ್ಲಿ ಡಾ. ಮನಮೋಹನ್ ಸಿಂಗ್ ಅವರು ದೇಶದ ಪ್ರಧಾನ ಮಂತ್ರಿಯಾಗಿದ್ದರು. ಭಾರತದಂತಹ ಹಳ್ಳಿಗಳ ದೇಶಕ್ಕೆ ಹೆಚ್ಚು ವೈದ್ಯರಿಗಿಂತಲೂ ಆರೋಗ್ಯ ಶಿಕ್ಷಣದ ಅಗತ್ಯ ಇದೆ ಎಂಬುದನ್ನು ಮನಗಂಡು ಆಶಾ ಕಾರ್ಯಕರ್ತೆಯರ ಪಡೆ ಹುಟ್ಟು ಹಾಕಿದರು.
ಕೇಂದ್ರ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯ ವ್ಯಾಪ್ತಿಯ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್ ಅಡಿ 2005ರಲ್ಲಿ ಆಶಾ ಕಾರ್ಯಕರ್ತೆಯರನ್ನು ಸೇವೆಗೆ ನಿಯೋಜಿಸಲಾಯಿತು. ಆರಂಭದಲ್ಲಿ ಆಶಾ ಕಾರ್ಯಕರ್ತೆಯರ ಈ ಸೇವೆಯನ್ನು ಆದಿವಾಸಿಗಳು ವಾಸಿಸುವ ಪ್ರದೇಶ ಮತ್ತು ಆಯ್ದ ಕೆಲ ರಾಜ್ಯಗಳಿಗೆ ಸೀಮಿತಗೊಳಿಸಿ ಶುರು ಮಾಡಲಾಗಿತ್ತು. 2008-2009ರ ಅವಧಿಯಲ್ಲಿ ಆಶಾ ಕಾರ್ಯಕರ್ತೆಯರ ಈ ಸೇವೆಯನ್ನು ಭಾರತದಾದ್ಯಂತ ವಿಸ್ತರಿಸಲಾಯಿತು. 2013-2014ರ ಹೊತ್ತಿಗೆ ನಗರಗಳ ಹಿಂದುಳಿದ ಪ್ರದೇಶಗಳಲ್ಲೂ ಆಶಾ ಕಾರ್ಯಕರ್ತೆಯರ ಸೇವೆಯನ್ನು ವಿಸ್ತರಿಸಲಾಯಿತು. ಈಗ ಭಾರತದಲ್ಲಿ ಹತ್ತು ಲಕ್ಷಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರು ಸೇವೆ ಸಲ್ಲಿಸುತ್ತಿದ್ದಾರೆ. ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್ ಆಶಯದಂತೆ ಗ್ರಾಮೀಣ ಭಾಗದಲ್ಲಿ ಪ್ರತೀ ಸಾವಿರ ಜನಸಂಖ್ಯೆಗೆ ಒಬ್ಬ ಆಶಾ ಕಾರ್ಯಕರ್ತೆಯರನ್ನು ನೇಮಿಸಿಕೊಳ್ಳಬೇಕು. ನಗರ ಪ್ರದೇಶಗಳಲ್ಲಿ ಪ್ರತೀ 2,500 ಜನಸಂಖ್ಯೆಗೆ ಒಬ್ಬರಂತೆ ಆಶಾ ಕಾರ್ಯಕರ್ತೆಯರನ್ನು ನಿಯೋಜಿಸಬೇಕು. ಮೂಲ ಆಶಯ ಇನ್ನೂ ಈಡೇರಿಲ್ಲ. ಆದರೆ ಆಶಾ ಕಾರ್ಯಕರ್ತೆಯರು ದೇಶಾದ್ಯಂತ ತಾಯ್ತನದ ಪ್ರೀತಿ ಹಂಚಿ ಅಕ್ಷರಶಃ ಪವಾಡ ಸೃಷ್ಟಿಸಿದ್ದಾರೆ.
ASHA (accredited social health activist)-ಆಶಾ-ಮಾನ್ಯತೆ ಪಡೆದ ಸಾಮಾಜಿಕ ಆರೋಗ್ಯ ಕಾರ್ಯಕರ್ತೆಯರು. ಮಹಿಳಾ ಅಭ್ಯರ್ಥಿಗಳನ್ನು ಮಾತ್ರ ನೇಮಕ ಮಾಡಿಕೊಳ್ಳಲಾಗಿದೆ. ಕರ್ನಾಟಕದಲ್ಲಿ ಒಟ್ಟು 41,785 ಆಶಾ ಕಾರ್ಯಕರ್ತೆಯರು ಸೇವೆ ಸಲ್ಲಿಸುತ್ತಿದ್ದಾರೆ. ಆಶಾ ಕಾರ್ಯಕರ್ತೆಯರು ಕ್ರಿಯಾಶೀಲವಾಗಿ ತೊಡಗಿಸಿಕೊಂಡಿರುವುದರಿಂದ ಖಾಯಂ ನೌಕರಿಯಲ್ಲಿರುವ ವೈದ್ಯರು, ನರ್ಸ್ಗಳು ಮತ್ತು ಇನ್ನಿತರರ ಸೇವಾ ಲೋಪ ಮುಚ್ಚಿ ಹೋಗುತ್ತಿದೆ.
ಆಶಾ ಕಾರ್ಯಕರ್ತೆಯರು, ಸ್ಥಳೀಯ ಸಮುದಾಯ ಮತ್ತು ಅರೋಗ್ಯ ವ್ಯವಸ್ಥೆಯ ನಡುವೆ ಸೇತುವೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆರೋಗ್ಯ ಇಲಾಖೆಯ ಹಲವಾರು ಸೇವೆಗಳು ಗ್ರಾಮೀಣ ಭಾಗದ ಜನತೆಗೆ ತಲುಪುತ್ತಿರುವುದೇ ಆಶಾ ಕಾರ್ಯಕರ್ತೆಯರ ನಿಸ್ವಾರ್ಥ ಸೇವೆಯಿಂದ. ತಾಯಿ ಮತ್ತು ಶಿಶು ಆರೋಗ್ಯದ ಬಗ್ಗೆ ಹಳ್ಳಿಗಳಲ್ಲಿ ಅಭಿಯಾನದ ರೀತಿ ಜಾಗೃತಿ ಮೂಡಿಸಿದವರೇ ಆಶಾ ಕಾರ್ಯಕರ್ತೆಯರು. ಆರೋಗ್ಯ ಜಾಗೃತಿ ಮತ್ತು ದಾಖಲೆ ನಿರ್ವಹಣೆಯಲ್ಲಿ ಆಶಾ ಕಾರ್ಯಕರ್ತೆಯರು ಪ್ರಧಾನ ಪಾತ್ರ ವಹಿಸುತ್ತಿದ್ದಾರೆ. ಗ್ರಾಮೀಣ ಭಾಗದ ಗರ್ಭಿಣಿಯರಿಗೆ ಸುರಕ್ಷಿತ ಹೆರಿಗೆಯ ಗ್ಯಾರಂಟಿ ನೀಡಿದವರೇ ಈ ತಾಯಂದಿರು. ಮನೆಗಳಿಗೆ ಭೇಟಿ ನೀಡಿ, ನವಜಾತ ಶಿಶು ಮತ್ತು ಬಾಣಂತಿ ತಾಯಿಯ ಆರೋಗ್ಯ ತಪಾಸಣೆಗೆ ನೆರವು ನೀಡುವ ಆಶಾ ಕಾರ್ಯಕರ್ತೆಯರು ಆಸ್ಪತ್ರೆ ವ್ಯವಸ್ಥೆ ಗ್ರಾಮೀಣ ಜನತೆಗೆ ಹತ್ತಿರ ತಂದಿದ್ದಾರೆ.
ಗ್ರಾಮೀಣ ಭಾಗದಲ್ಲಿ ಸಣ್ಣ ಪುಟ್ಟ ಕಾಯಿಲೆಗಳಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ದೊರೆಯುವಂತೆ ಮಾಡಿದ್ದೇ ಇವರು. ಪ್ರಥಮ ಚಿಕಿತ್ಸೆ ನೀಡುವುದು, ನಿರ್ಜಲೀಕರಣದಂತಹ ಸಾಮಾನ್ಯ ಅರೋಗ್ಯ ಬಾಧೆಗೆ ಸಕಾಲಕ್ಕೆ ಒಆರ್ಎಸ್ ಒದಗಿಸುವುದು, ಅಗತ್ಯ ಔಷಧಗಳನ್ನು ಪೂರೈಸುವುದು, ಮಕ್ಕಳು, ಗರ್ಭಿಣಿ ಮಹಿಳೆಯರು ಹಾಗೂ ಹಿರಿಯ ನಾಗರಿಕರನ್ನು ಸಕಾಲಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಕರೆದೊಯ್ದು ಜೀವ ಉಳಿಸುವ ಪವಿತ್ರ ಕೆಲಸ ಇವರದು.
ಆಶಾ ಕಾರ್ಯಕರ್ತೆಯರನ್ನು ಸರಕಾರ ಹತ್ತು ಹಲವು ಕೆಲಸಗಳಿಗೆ ಬಳಸಿಕೊಳ್ಳುತ್ತಿದೆ. ಸ್ಥಳೀಯ ಜನಸಂಖ್ಯೆ ಮತ್ತು ಗ್ರಾಮೀಣ ಭಾಗದವರ ಅರೋಗ್ಯ ಸಂಬಂಧಿತ ಸಮಸ್ತ ಮಾಹಿತಿಯ ದಾಖಲೆಗಳನ್ನು ಇವರೇ ನಿರ್ವಹಿಸುತ್ತಾರೆ. ಆಶಾ ಕಾರ್ಯಕರ್ತೆಯರ ಮೊಬೈಲ್ ಈ ದಾಖಲೆಗಳನ್ನು ನವೀಕರಿಸುವುದರಲ್ಲೇ ಬ್ಯುಸಿಯಾಗಿರುತ್ತದೆ.
ರೋಗಗಳ ನಿಗಾ ಮತ್ತು ತಪಾಸಣೆ, ಅದರಲ್ಲೂ ಸಾಂಕ್ರಾಮಿಕ ರೋಗಗಳು ಹರಡದಂತೆ ನಿಗಾ ವಹಿಸುವುದು, ಜಾಗೃತಿ ಮೂಡಿಸುವುದು, ಕ್ಷಯ ರೋಗ, ಕುಷ್ಠ ರೋಗಗಳ ಆರಂಭಿಕ ತಪಾಸಣೆ ಆಶಾ ಕಾರ್ಯಕರ್ತೆಯರೇ ನಿಭಾಯಿಸುತ್ತಾರೆ. ಕೋವಿಡ್ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರು ಜೀವದ ಹಂಗು ತೊರೆದು ಅಸಂಖ್ಯಾತ ಕೊರೋನ ಬಾಧಿತರ ಜೀವ ಉಳಿಸಿದ್ದಾರೆ. ಕೋವಿಡ್ ಸಂದರ್ಭದಲ್ಲಿನ ಅವರ ಸೇವೆಗೆ ಇಡೀ ನಾಗರಿಕ ಸಮಾಜ ಮೆಚ್ಚುಗೆ ವ್ಯಕ್ತಪಡಿಸಿದೆ. ವೈದ್ಯರು, ನರ್ಸ್ಗಳು, ಇನ್ನಿತರ ಸಿಬ್ಬಂದಿ ತಲುಪಲಾಗದ ಜಾಗದಲ್ಲಿ ಆಶಾ ಕಾರ್ಯಕರ್ತೆಯರು ತಲುಪಿ ಸೇವೆ ಸಲ್ಲಿಸಿದ್ದಾರೆ.
ಈ ಹೊತ್ತು ಗ್ರಾಮೀಣ ಭಾಗದಲ್ಲಿ ಪೌಷ್ಟಿಕತೆ, ಮೂಲಭೂತ ನೈರ್ಮಲ್ಯ, ಆರೋಗ್ಯಕರ ಜೀವನದ ಬಗ್ಗೆ ಅರಿವು ಮೂಡಿಸಿದ್ದು ಆಶಾ ತಾಯಂದಿರು. ಸುರಕ್ಷಿತ ಹೆರಿಗೆಯ ಪ್ರಾಮುಖ್ಯವನ್ನು ಮನವರಿಕೆ ಮಾಡಿಕೊಟ್ಟು, ಹೆರಿಗೆ ಸಿದ್ಧತೆ ಮಾಡುವ ಆಶಾ ಕಾರ್ಯಕರ್ತೆಯರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಸ್ತಿಭಾರದಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ.
ಆಂಬುಲೆನ್ಸ್ ಸೇವೆ ಸಕಾಲಕ್ಕೆ ದೊರೆಯದಿರಬಹುದು, ಆದರೆ ಆಶಾ ಕಾರ್ಯಕರ್ತೆಯರ ಸೇವೆ ಸದಾ ಸಿದ್ಧವಾಗಿರುತ್ತದೆ. ಹಗಲಿರುಳು ದುಡಿಯುವ ಆಶಾ ಕಾರ್ಯಕರ್ತೆಯರಿಗೆ ಕರ್ನಾಟಕದಲ್ಲಿ ದೊರೆಯುವ ಗೌರವ ಧನದ ಮೊತ್ತ ನಗಣ್ಯವಾಗಿದೆ. ಕರ್ನಾಟಕ ಸರಕಾರ ಕೇವಲ ರೂ. ಐದು ಸಾವಿರ ನೀಡಿದರೆ, ಕೇಂದ್ರ ಸರಕಾರ ರೂ. ಮೂರು ಸಾವಿರ ನೀಡುತ್ತದೆ. ಒಟ್ಟು ರೂ. ಎಂಟು ಸಾವಿರದಲ್ಲಿ ಆಶಾ ಕಾರ್ಯಕರ್ತೆಯರ ಜೀವನ ನಿರ್ವಹಣೆಯಾಗಬೇಕು. ದೇಶದ ಬೇರೆ ರಾಜ್ಯಗಳ ಆಶಾ ಕಾರ್ಯಕರ್ತೆಯರ ಗೌರವ ಧನಕ್ಕೆ ಹೋಲಿಸಿದರೆ ಇದು ಬಹಳ ಕಮ್ಮಿ. ದಕ್ಷಿಣದ ರಾಜ್ಯಗಳಲ್ಲಿ ಕರ್ನಾಟಕ ಶ್ರೀಮಂತ ರಾಜ್ಯ. ಹಗಲಿರುಳು ಆರೋಗ್ಯ ಸೇವೆಯಲ್ಲಿ ತೊಡಗಿರುವ ಅವರಿಗೆ ಕಡಿಮೆ ಗೌರವ ಧನ ನೀಡಿ ದುಡಿಸಿಕೊಳ್ಳುವುದು ಕರ್ನಾಟಕದ ಘನತೆಗೆ ಕುಂದು ತಂದಂತೆ. ಪಕ್ಕದ ಆಂಧ್ರ ರಾಜ್ಯದಲ್ಲಿ ಕಾಂಗ್ರೆಸ್ ಮುಖ್ಯಮಂತ್ರಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ಅಲ್ಲಿ ಆಶಾ ಕಾರ್ಯಕರ್ತೆಯರಿಗೆ ರೂ. 10 ಸಾವಿರ ಗೌರವ ಧನ ನೀಡಲಾಗುತ್ತಿದೆ. ಕೇರಳಂ ರಾಜ್ಯದಲ್ಲಿ ರೂ. 12 ಸಾವಿರ ಗೌರವ ಧನ ನಿಗದಿಯಾಗಿದೆ. ‘ಇಂಡಿಯಾ’ ಒಕ್ಕೂಟದ ಭಾಗವಾಗಿದ್ದ ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳದಲ್ಲಿ ಆಶಾ ಕಾರ್ಯಕರ್ತೆಯರಿಗೆ ರೂ. 11,250 ನೀಡುತ್ತಿದ್ದರು. ಅದರಲ್ಲಿ ಕೇಂದ್ರದ ಪಾಲು ಇರಲಿಲ್ಲ. ಹರ್ಯಾಣ ರಾಜ್ಯದಲ್ಲಿ ಆಶಾ ಕಾರ್ಯಕರ್ತೆಯರಿಗೆ, ಕೇಂದ್ರ ಮತ್ತು ರಾಜ್ಯ ಒಟ್ಟು ರೂ. 15 ಸಾವಿರ ಗೌರವ ಧನ ದೊರೆಯುತ್ತಿದೆ. ಆದರೆ ಅತ್ಯಂತ ಪ್ರಗತಿಪರ ಮತ್ತು ಅಭಿವೃದ್ಧಿ ಹೊಂದಿದ ಕರ್ನಾಟಕದಲ್ಲಿ ಆಶಾ ಕಾರ್ಯಕರ್ತೆಯರಿಗೆ ಅತ್ಯಂತ ಕನಿಷ್ಠ ಗೌರವ ಧನ ನೀಡಲಾಗುತ್ತಿದೆ.
ಕಳೆದ ಹದಿನೇಳು ವರ್ಷಗಳಿಂದ ಕರ್ನಾಟಕದಲ್ಲಿ ಆಶಾ ಕಾರ್ಯಕರ್ತೆಯರು ಕಡಿಮೆ ಗೌರವ ಧನ ಪಡೆದುಕೊಂಡು ಹೆಚ್ಚು ಕೆಲಸ ನಿಭಾಯಿಸಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮರ್ಯಾದೆ ಕಾಪಾಡುತ್ತಿರುವವರೇ ಈ ಆಶಾ ಕಾರ್ಯಕರ್ತೆಯರು. ಕರ್ನಾಟಕ ಸರಕಾರದ ಆರೋಗ್ಯ ಭಾಗ್ಯ ನಗರಗಳಿಗೆ ಮಾತ್ರ ಸೀಮಿತವಾಗಿದೆ. ಅದರಲ್ಲೂ ಖಾಸಗಿ ಆಸ್ಪತ್ರೆಗಳ ಸುಲಿಗೆ ಮಿತಿ ಮೀರಿದೆ. ನಗರ ಪ್ರದೇಶಗಳ ಸರಕಾರಿ ಆಸ್ಪತ್ರೆಗಳಲ್ಲಿ ಎಲ್ಲ ಸವಲತ್ತು ಇದ್ದರೂ ವೈದ್ಯರ ಸೇವೆ ಮಾತ್ರ ಸಕಾಲಕ್ಕೆ ದೊರೆಯುವುದಿಲ್ಲ. ನಗರ ಮಾತ್ರವಲ್ಲ, ಹಳ್ಳಿಗಳಲ್ಲಿ ಸೇವೆ ಸಲ್ಲಿಸುವ ಸರಕಾರಿ ವೈದ್ಯರು ನಿಯತ್ತಿನಿಂದ ಕೆಲಸ ಮಾಡುವುದಿಲ್ಲ. ಸರಕಾರಿ ಸಂಬಳ, ಖಾಸಗಿ ಪ್ರಾಕ್ಟೀಸ್ ಅವರ ಮಂತ್ರವಾಗಿದೆ. ನಗರ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸರಕಾರಿ ವೈದ್ಯರು ತಮ್ಮ ಕ್ಲಿನಿಕ್ಗೆ ಬರುವ ರೋಗಿಗಳಿಗೆ ಹಾಸಿಗೆ ಒದಗಿಸಲಾದರೂ ಆಸ್ಪತ್ರೆಗೆ ಬರುತ್ತಾರೆ. ಅಷ್ಟಾಗಿಯೂ ಅವರ ಗಮನ ಖಾಸಗಿ ಪ್ರಾಕ್ಟೀಸ್ ಮೇಲೆಯೇ ಇರುತ್ತದೆ. ಆದರೆ ಗ್ರಾಮೀಣ ಪ್ರದೇಶದ ಆಸ್ಪತ್ರೆಗಳಿಗೆ ವೈದ್ಯರು ಹೋಗುವುದೇ ಇಲ್ಲ. ಅವರ ಕ್ಲಿನಿಕ್ ನಗರ ಅಥವಾ ಪಟ್ಟಣ ಪ್ರದೇಶದಲ್ಲಿ ಇರುವುದರಿಂದ ವಾಸ್ತವ್ಯ ಕೂಡ ಅಲ್ಲೇ ಇರುತ್ತದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ದರ್ಶನ ಭಾಗ್ಯ ಸಾಧ್ಯವಾಗುವುದಿಲ್ಲ. ಸಮುದಾಯ ಆರೋಗ್ಯ ಅಧಿಕಾರಿಗಳು, ನರ್ಸ್ ಗಳು ಖಾಯಂ ಸರಕಾರಿ ಸೇವೆಯಲ್ಲಿ ಇದ್ದರೆ ಅವರು ಸಮರ್ಪಕವಾಗಿ ಕಾರ್ಯ ನಿರ್ವಹಿಸುವುದಿಲ್ಲ. ವೈದ್ಯರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತಿಂಗಳಿಗೊಮ್ಮೆ ಬಂದರೆ ಹೆಚ್ಚು. ಹಾಗಾಗಿ ಉಳಿದ ಸಿಬ್ಬಂದಿ ಕೇಂದ್ರ ಸ್ಥಾನದಲ್ಲಿ ಇರುವುದಿಲ್ಲ. ಪ್ರಾಥಮಿಕ ಅರೋಗ್ಯ ಕೇಂದ್ರಗಳಲ್ಲಿ ಲಭ್ಯ ಇರುವ ಔಷಧ ದುರ್ಬಳಕೆ ಮಾಡಿಕೊಳ್ಳುತ್ತಿರುತ್ತಾರೆ. ಅಂಥ ಸಂದರ್ಭದಲ್ಲಿ ಆಪತ್ ಬಾಂಧವರಂತೆ ಸೇವೆ ಸಲ್ಲಿಸುವವರೇ ಈ ಆಶಾ ಕಾರ್ಯಕರ್ತೆಯರು.
ಅಷ್ಟಕ್ಕೂ ಕರ್ನಾಟಕದ ಆಶಾ ಕಾರ್ಯಕರ್ತೆಯರು ಕೇಳುತ್ತಿರುವುದು ಕೇವಲ ರೂ. ಹದಿನೈದು ಸಾವಿರ. ಕೇರಳದಲ್ಲಿ ಅಲ್ಲಿಯ ಕಾರ್ಮಿಕ ಸಂಘಟನೆಗಳು ರೂ. ಇಪ್ಪತ್ತೈದು ಸಾವಿರ ಬೇಡಿಕೆ ಇಟ್ಟು ಹೋರಾಟ ನಡೆಸುತ್ತಿವೆ. ದುರಂತವೆಂದರೆ, ಕೇರಳದಲ್ಲಿ ಕಮ್ಯುನಿಸ್ಟ್ ಸರಕಾರ ಆಡಳಿತ ನಡೆಸುತ್ತಿದ್ದಾಗ ಇದೇ ಕಾಂಗ್ರೆಸ್ ನಾಯಕರು ಹೆಚ್ಚು ಗೌರವ ಧನದ ಹೋರಾಟಕ್ಕೆ ಬೆಂಬಲಿಸಿ ಪಿಣರಾಯಿ ಅವರನ್ನು ಕಟುವಾಗಿ ಟೀಕಿಸಿದ್ದರು. ಆದರೆ ಸೂಕ್ಷ್ಮ ಮನಸ್ಸಿನ ಕೇರಳ ಮುಖ್ಯಮಂತ್ರಿ ಸಕಾಲಕ್ಕೆ ಸ್ಪಂದಿಸಿ ಆಶಾ ಕಾರ್ಯಕರ್ತೆಯರ ಮನಸ್ಸು ಗೆದ್ದಿದ್ದಾರೆ.
ಕರ್ನಾಟಕದಲ್ಲಿ, ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಹೋರಾಟಕ್ಕೆ ಸಾಹಿತಿ-ಕಲಾವಿದರು, ಕನ್ನಡಪರ ಹೋರಾಟಗಾರರು, ಚಿತ್ರರಂಗದ ಮಂದಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಎಲ್ಲ ವಲಯದ ಪ್ರಜ್ಞಾವಂತರು ಬೆಂಬಲ ವ್ಯಕ್ತಪಡಿಸಿದ್ದಾರೆಂದರೆ ಆಶಾ ಕಾರ್ಯಕರ್ತೆಯರ ಬೇಡಿಕೆ ನ್ಯಾಯತವಾಗಿದೆ ಎಂದೇ ಭಾವಿಸಬೇಕಾಗುತ್ತದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಂತ್ರಿ ಯು.ಟಿ. ಖಾದರ್ ಅವರು ತಮ್ಮದೇ ಪಕ್ಷದ ಪ್ರಧಾನಮಂತ್ರಿ ಡಾ. ಮನಮೋಹನ್ ಸಿಂಗ್ ಅವರನ್ನು ಗೌರವಿಸಲಾದರೂ ಆಶಾ ಕಾರ್ಯಕರ್ತೆಯರ ಬೇಡಿಕೆಯನ್ನು ಸಹಾನುಭೂತಿಯಿಂದ ಪರಿಶೀಲಿಸಬೇಕು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕೇಲಸಗಳ್ಳ ಸಿಬ್ಬಂದಿಯ ವಿರುದ್ಧ ಕ್ರಮ ಜರುಗಿಸಲು ಸಚಿವರಿಂದ ಸಾಧ್ಯವಾಗಿಲ್ಲ. ಆದರೆ ಗುಬ್ಬಿ ಮೇಲೆ ಬ್ರಾಹ್ಮಸ್ತ್ರ ಎಂಬಂತೆ ಆಶಾ ಕಾರ್ಯಕರ್ತೆಯರ ವಿರುದ್ಧ ಉಡಾಫೆ ಬಾಣಗಳು ಬಿಡುತ್ತಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿ. ಎಲ್ಲದಕ್ಕೂ ಕೇಂದ್ರ-ರಾಜ್ಯಗಳ ಹಗ್ಗ ಜಗ್ಗಾಟ ಮಾಡಿ ನಿಜವಾದ ಕೆಲಸಗಾರರ ಬೇಡಿಕೆ ಹತ್ತಿಕ್ಕುವುದು ಜಾಣ ನಡೆ ಎನಿಸಿಕೊಳ್ಳುವುದಿಲ್ಲ. ಕೇಂದ್ರ ಸರಕಾರದ ಪಾಲು ಪಡೆಯಲು ರಾಜ್ಯ ಸರಕಾರ ನಿರಂತರ ಹೋರಾಟ ನಡೆಸಬೇಕು. ಹಾಗಂತ ಆಶಾ ಕಾರ್ಯಕರ್ತೆಯರ ಗೌರವ ಧನ ಹೆಚ್ಚಿಸಲು ಕೇಂದ್ರ ಸರಕಾರದ ವಿರುದ್ಧ ಹೋರಾಡಿ ಎಂದು ಹೇಳುವುದು ಉತ್ತಮ ನಡೆಯಲ್ಲ. ಈ ಮಹಾನ್ ಐಡಿಯಾ ಕೇರಳಂ ರಾಜ್ಯದ ಮುಖ್ಯಮಂತ್ರಿ ಸತೀಶನ್ ಅವರಿಗೇಕೆ ಹೊಳೆಯಲಿಲ್ಲ? ಆಶಾ ಕಾರ್ಯಕರ್ತೆಯರ ಬೇಡಿಕೆಗೆ ರಾಜ್ಯ ಸರಕಾರ ಪೂರಕವಾಗಿ ಸ್ಪಂದಿಸಿದರೆ, ಕೇಂದ್ರದ ಜನವಿರೋಧಿ ನೀತಿ ತನ್ನಷ್ಟಕ್ಕೆ ಬಯಲಾಗುತ್ತದೆ. ಕಬ್ಬು ಬೆಳೆಗಾರರಿರಲಿ, ಆಶಾ ಕಾರ್ಯಕರ್ತೆಯರಿರಲಿ ಕರ್ನಾಟಕ ಸರಕಾರ ತನ್ನ ಹೊಣೆಗಾರಿಕೆಯನ್ನು ಮೊದಲು ಜವಾಬ್ದಾರಿಯುತವಾಗಿ ನಿಭಾಯಿಸಬೇಕು. ಆ ಮೇಲೆ ಕೇಂದ್ರ ಸರಕಾರವನ್ನು ನಿಂದಿಸುವ, ವಿಲನ್ ಮಾಡುವ ತಂತ್ರಗಾರಿಕೆ ಪ್ರಯೋಗ ಮಾಡಬಹುದು. ಆಶಾ ಕಾರ್ಯಕರ್ತೆಯರ ತಾಯ್ತನದ ಸೇವೆ ಈ ಹೊತ್ತು ಗ್ರಾಮೀಣ ಕರ್ನಾಟಕದ ಆರೋಗ್ಯ ಕಾಪಾಡಿದೆ. ಸಮಸ್ತ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವೈಫಲ್ಯವನ್ನು ಮರೆ ಮಾಚುವಂತೆ ಮಾಡಿದೆ. ಕರ್ನಾಟಕದಲ್ಲಿ ಆಶಾ ಕಾರ್ಯಕರ್ತೆಯರು ಬದ್ಧತೆಯಿಂದ ಕಾರ್ಯ ನಿರ್ವಹಿಸದೆ ಹೋಗಿದ್ದರೆ ಆರೋಗ್ಯ ಇಲಾಖೆಯ ಬಂಡವಾಳ ಬೀದಿಗೆ ಬರುತ್ತಿತ್ತು. ಸಚಿವ ಯು. ಟಿ. ಖಾದರ್ ಅವರು ಆರೋಗ್ಯ ಇಲಾಖೆಯ ಹುತ್ತವನ್ನು ಮೇಲ್ಮೈಯಲ್ಲಿ ಬಡಿಯುತ್ತಿದ್ದಾರೆ. ಒಳಗಿನ ಹಾವುಗಳ ವಿರಾಟ್ರೂಪ ಅರ್ಥವಾಗಿಲ್ಲ. ಆಶಾ ಕಾರ್ಯಕರ್ತೆಯರ ಬೇಡಿಕೆಗೆ ಈ ಕೂಡಲೇ ಸರಕಾರ ಪೂರಕವಾಗಿ ಸ್ಪಂದಿಸಬೇಕು. ಉಳಿದೆಲ್ಲ ರಾಜ್ಯಗಳಿಗಿಂತಲೂ ಕರ್ನಾಟಕ ಹೆಚ್ಚು ಸೂಕ್ಷ್ಮ ಸಂವೇದನಾಶೀಲವಾಗಿದೆ ಎಂಬುದನ್ನು ನಿರೂಪಿಸಬೇಕು. ಉಡಾಫೆ ಉತ್ತರ ಕರ್ನಾಟಕದ ಘನತೆಗೆ ಮಾರಕ.
(ಅಂಕಣಕಾರರು ಹಿರಿಯ ಲೇಖಕರು, ಪತ್ರಕರ್ತರು)