ನರೇಂದ್ರ ಮೋದಿಯವರಿಗೆ ಬಣ್ಣದ ಮಾತುಗಳನ್ನು ಆಡುವುದು ರೂಢಿಯಾಗಿ ಬಿಟ್ಟಿದೆ. ವಿಕಸಿತ ಭಾರತದ ಬಗ್ಗೆ ಮಾತನಾಡಿದ್ದೇ ಮಾತನಾಡಿದ್ದು. ಗ್ರಾಮೀಣ ಭಾರತದಲ್ಲಿ ಶೌಚಾಲಯ, ಕುಡಿಯುವ ನೀರು ಲಭ್ಯ ಇಲ್ಲ. ಸುಳ್ಳು ಅಂಕಿ ಅಂಶಗಳನ್ನು ನೀಡುತ್ತಲೇ ಇರುತ್ತಾರೆ. ಮೋದಿಯವರ ಅವಧಿಯಲ್ಲಿ ಅದಾನಿ, ಅಂಬಾನಿಯಂಥ ಕಾರ್ಪೊರೇಟ್ ಕುಳಗಳು ದುಂಡಗಾಗಿದ್ದಾರೆ. ಪಶ್ಚಿಮದ ದೇಶಗಳಿಗೆ ಹೋಲಿಸಿದರೆ ಭಾರತ ನಿಂತಲ್ಲೇ ನಿಂತಿದೆ. ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆಯವರು ಭಾಷಣ ಮಾಡಿದ ಸ್ಥಳ ಅಪವಿತ್ರವಾಯಿತು ಎಂದು ಶುದ್ಧೀಕರಣ ಮಾಡುವ ಜಾತಿವಾದಿ ಶಕ್ತಿಗಳು ಜೀವಂತವಾಗಿರುವ ವಿಕಸಿತ ಭಾರತದ ಸ್ಲೋಗನ್‌ಗೆ ಯಾವ ಅರ್ಥವಿದೆ?

ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮಾತುಗಳನ್ನೇ ಬಂಡವಾಳ ಮಾಡಿಕೊಂಡು ಅಧಿಕಾರ ರಾಜಕಾರಣದ ಇಪ್ಪತ್ತೈದು ವರ್ಷಗಳನ್ನು ಪೂರೈಸಲಿದ್ದಾರೆ. ತಮ್ಮನ್ನು ಪ್ರಧಾನ ಸೇವಕ ಎಂದು ಕರೆದುಕೊಂಡ ಮೋದಿಯವರು ಎಪ್ಪತ್ತೈದರ ಗಡಿ ದಾಟಿ ನಿಂತಿದ್ದಾರೆ. ಭಾರತದ ಪ್ರಧಾನ ಮಂತ್ರಿಯಾಗಿ ದಾಖಲೆ ಸೃಷ್ಟಿಸುವ ಹವಣಿಕೆಯಲ್ಲಿದ್ದಾರೆ ಹೊರತು ಈ ದೇಶವನ್ನು ಉಳಿದ ಅಭಿವೃದ್ಧಿಶೀಲ ರಾಷ್ಟ್ರಗಳ ಮಟ್ಟಕ್ಕೆ ಎತ್ತಿ ನಿಲ್ಲಿಸುವ ಇರಾದೆಯೇ ಹೊಂದಿಲ್ಲ.

ನರೇಂದ್ರ ಮೋದಿಯವರು ಭಾರತದ ಪ್ರಧಾನಿಯಾಗಿ ಬರುವ ಮುಂಚೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಅಸ್ತಿತ್ವದಲ್ಲಿ ಇತ್ತು. ಮೂಲತಃ ಆರ್ಥಿಕ ತಜ್ಞರಾಗಿದ್ದ ಡಾ. ಮನಮೋಹನ್ ಸಿಂಗ್ ಅವರು ಹತ್ತು ವರ್ಷಗಳ ಪ್ರಧಾನಿಯಾಗಿದ್ದರೂ ಹುಸಿ ಭರವಸೆ ನೀಡುವ ರಾಜಕಾರಣಿಯಾಗಲೇ ಇಲ್ಲ. ಅನಗತ್ಯವಾಗಿ ಮಾತನಾಡದ ಅವರು ಮೌನಕ್ರಾಂತಿ ಮಾಡಿದ್ದನ್ನು ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳು ಚುನಾವಣಾ ಪ್ರಚಾರದ ಬಂಡವಾಳವನ್ನಾಗಿ ಮಾಡಿಕೊಳ್ಳಲಿಲ್ಲ. ಡಿಎಂಕೆ ಮುಂತಾದ ಮಿತ್ರ ಪಕ್ಷಗಳ ನಾಯಕರ ಹಗರಣಗಳು ಮುನ್ನೆಲೆಗೆ ಬಂದು ಡಾ. ಮನಮೋಹನ್ ಸಿಂಗ್ ಸರಕಾರದ ಸಾಧನೆಗಳು ನೇಪಥ್ಯಕ್ಕೆ ಸರಿದವು. ಬದಲಿಗೆ ಅವರ ಮೌನವನ್ನೇ ಗೇಲಿ ಮಾಡಲಾಯಿತು. ಯುಪಿಎ ಮತ್ತು ಕಾಂಗ್ರೆಸ್ ಪಕ್ಷ ಒಂದು ಟೀಮ್ ಆಗಿ ಡಾ. ಮನಮೋಹನ್ ಸಿಂಗ್ ಅವರ ಸಾಧನೆಯನ್ನು ಬಲವಾಗಿ ಸಮರ್ಥಿಸಿಕೊಂಡಿದ್ದರೆ, ನರೇಂದ್ರ ಮೋದಿಯವರು ಭಾರತದ ಯುವ ಜನತೆಗೆ ಮಾತಿನ ಮೋಡಿ ಮಾಡಲು ಸಾಧ್ಯವಿರಲಿಲ್ಲ. ಡಾ. ಮನಮೋಹನ್ ಸಿಂಗ್ ಆರ್ಥಿಕ ಸುಧಾರಣೆಯ ಕಾರ್ಯಕ್ರಮಗಳು ದೂರದೃಷ್ಟಿಯಿಂದ ಕೂಡಿದ್ದವು. ಭಾರತದಲ್ಲಿ ಐಟಿ, ಬಿಟಿ ಕ್ಷೇತ್ರ ಪ್ರವರ್ಧಮಾನಕ್ಕೆ ಬರಲು ಮತ್ತು ಆರ್ಥಿಕವಾಗಿ ತಲೆ ಎತ್ತಿ ನಿಲ್ಲಲು ‘ಮೌನಿ ಬಾಬಾ’ ಅವರ ಅತ್ಯುತ್ತಮ ಆಡಳಿತ ಕಾರಣವಾಗಿತ್ತು. ಡಾ. ಮನಮೋಹನ್ ಸಿಂಗ್ ಅವರ ಎಲ್ಲ ನೀತಿ ನಿರೂಪಣೆಗಳನ್ನು ಸಾರಾಸಗಟಾಗಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಆದರೆ ಅವರು ಕಾರ್ಪೊರೇಟ್ ಕುಳಗಳ ಕೈಗೊಂಬೆಯಂತೆ ನಡೆದುಕೊಂಡ ನಿದರ್ಶನ ದೊರೆಯುವುದಿಲ್ಲ. ಮಹಾತ್ಮಾಗಾಂಧಿ ಉದ್ಯೋಗ ಖಾತರಿ ಯೋಜನೆ ಬಡವರ ಪಾಲಿನ ಆಶಾ ಕಿರಣವಾಗಿತ್ತು. ರೈತ ಸಮುದಾಯಕ್ಕೆ ಅನುಕೂಲವಾಗುವ ಅದೆಷ್ಟೋ ಕ್ರಾಂತಿಕಾರಿ ಯೋಜನೆಗಳನ್ನು ಅವರು ಜಾರಿಗೆ ತಂದಿದ್ದರು.

ಅರ್ಜುನ್ ಸಿಂಗ್, ಕಪಿಲ್ ಸಿಬಲ್‌ರಂಥ ಹಿರಿಯರನ್ನು ಮಾನವ ಸಂಪನ್ಮೂಲ ಅಭಿವೃದ್ಧಿ (ಶಿಕ್ಷಣ)ಇಲಾಖೆಯ ಸಚಿವರಾನ್ನಾಗಿಸಿದ್ದರು. ಹಲವಾರು ಹೊಸ ಐಐಟಿ, ಕೇಂದ್ರೀಯ ವಿಶ್ವವಿದ್ಯಾನಿಲಯಗಳು ಜನ್ಮ ತಾಳಿದ್ದು ಆಗಲೇ. ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಮುಖ್ಯಸ್ಥರನ್ನು ನೇಮಕ ಮಾಡುವಾಗ ಶೈಕ್ಷಣಿಕ ಹಿನ್ನೆಲೆ, ಆಡಳಿತದ ಅನುಭವ ಮತ್ತು ಪ್ರಾಮಾಣಿಕ ನಡೆ ಮಾತ್ರ ಪರಿಗಣಿಸುತ್ತಿದ್ದರು. ಕೇಂದ್ರೀಯ ವಿಶ್ವವಿದ್ಯಾನಿಲಯಗಳ ಕುಲಪತಿಗಳ ನೇಮಕದಲ್ಲಿ ಭ್ರಷ್ಟಾಚಾರಕ್ಕೆ ಆಸ್ಪದ ಇರಲಿಲ್ಲ. ಆಗಲೂ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಪ್ರವೇಶ ಪರೀಕ್ಷೆಗಳನ್ನು ನಡೆಸುತ್ತಿತ್ತು. ಭಾರತದ ರೈಲು ಸಂಚಾರ ವ್ಯಾಪಕವಾಗಿದ್ದು ಮತ್ತು ಜನಸ್ನೇಹಿಯಾಗಿದ್ದು ಕಾಂಗ್ರೆಸ್ ಸರಕಾರಗಳ ಕಾಲದಲ್ಲಿ. ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನ ಮಂತ್ರಿಯಾಗಿದ್ದಾಗ ಎಲ್.ಕೆ. ಅಡ್ವಾಣಿಯವರು ಗೃಹ ಸಚಿವರಾಗಿದ್ದರು. ಕರ್ನಾಟಕದಲ್ಲಿ ಎಸ್.ಎಂ. ಕೃಷ್ಣ ಸರಕಾರವಿತ್ತು. ಹೈದರಾಬಾದ್ ಕರ್ನಾಟಕದ ಜಿಲ್ಲೆಗಳಿಗೆ ವಿಶೇಷ ಸ್ಥಾನಮಾನ ಕಲ್ಪಿಸುವ 371ನೇ ಕಲಂಗೆ ತಿದ್ದುಪಡಿ ತರುವ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆಗ ಕರ್ನಾಟಕದಲ್ಲಿ ಮಲ್ಲಿಕಾರ್ಜುನ ಖರ್ಗೆಯವರು ಗೃಹ ಸಚಿವರಾಗಿದ್ದರು. ಕೇಂದ್ರ ಸರಕಾರ ಆ ಪ್ರಸ್ತಾವನೆಯನ್ನು ತಿರಸ್ಕರಿಸಿತ್ತು. ಮುಂದೆ ಡಾ. ಮನಮೋಹನ್ ಸಿಂಗ್ ಅವರು ಪ್ರಧಾನ ಮಂತ್ರಿಯಾದಾಗ ಅವರ ಸಚಿವ ಸಂಪುಟದಲ್ಲಿ ಮಲ್ಲಿಕಾರ್ಜುನ ಖರ್ಗೆಯವರು ಕಾರ್ಮಿಕ ಮಂತ್ರಿಯಾಗಿದ್ದರು. ಕರ್ನಾಟಕದಲ್ಲಿ ಬಿಜೆಪಿ ಸರಕಾರ ಅಸ್ತಿತ್ವದಲ್ಲಿತ್ತು. ಕರ್ನಾಟಕದ ಉಭಯ ಸದನಗಳು 371ನೇ ಕಲಂ ತಿದ್ದುಪಡಿಯ ಪ್ರಸ್ತಾವನೆಯನ್ನು ಸರ್ವಾನುಮತದಿಂದ ಅಂಗೀಕರಿಸಿ ಕಳುಹಿಸಿದ್ದವು. ಸಂವಿಧಾನ ತಿದ್ದುಪಡಿ ಮಾಡಿ ಹೈದರಾಬಾದ್ ಕರ್ನಾಟಕದ ಜಿಲ್ಲೆಗಳಿಗೆ ವಿಶೇಷ ಸ್ಥಾನಮಾನ ಕಲ್ಪಿಸುವುದು ಸರಳ ಸಂಗತಿಯಾಗಿರಲಿಲ್ಲ. ಆಗ ವೀರಪ್ಪ ಮೊಯ್ಲಿಯವರು ಕಾನೂನು ಸಚಿವರಾಗಿದ್ದರು. ವಿಶೇಷವಾಗಿ ಮಲ್ಲಿಕಾರ್ಜುನ ಖರ್ಗೆ ಮತ್ತು ಮಾಜಿ ಮುಖ್ಯಮಂತ್ರಿ ಎನ್. ಧರಂಸಿಂಗ್ ಅವರು ಮುತುವರ್ಜಿ ವಹಿಸಿ ಅದರ ಅನಿವಾರ್ಯತೆಯನ್ನು ಮನವರಿಕೆ ಮಾಡಿಕೊಟ್ಟರು. ಡಾ. ಮನಮೋಹನ್ ಸಿಂಗ್ ಅವರು ಸಂಪೂರ್ಣ ಸಹಕಾರ ನೀಡಿ 371ನೇ ಕಲಂಗೆ ತಿದ್ದುಪಡಿ ಮಾಡಿ ವಿಶೇಷ ಸ್ಥಾನಮಾನ ಕಲ್ಪಿಸಿದ್ದರು. ಈ ಹೊತ್ತು ಕಲ್ಯಾಣ ಕರ್ನಾಟಕದ ಅಸಂಖ್ಯಾತ ಜನರು ಅದರ ಲಾಭ ಪಡೆದುಕೊಂಡಿದ್ದಾರೆ. ವಿಶಾಲ ಆಂಧ್ರ ಪ್ರದೇಶ ವಿಭಜನೆಯ ಕೂಗು ಮೊದಲಿಂದಲೂ ಕೇಳಿ ಬರುತ್ತಿತ್ತು. ಆದರೆ ಡಾ. ಮನಮೋಹನ್ ಸಿಂಗ್ ಸರಕಾರ ತೆಲಂಗಾಣ ಹುಟ್ಟಿಗೆ ಅವಕಾಶ ಮಾಡಿಕೊಟ್ಟಿತು.

ಡಾ. ಮನಮೋಹನ್ ಸಿಂಗ್ ಸರಕಾರದಲ್ಲಿ ಅತ್ಯಂತ ಹಿರಿಯರು ಅನುಭವಿಗಳು ಸಚಿವರಾಗಿದ್ದರು. ಬಹುಪಾಲು ಜನ ಮಾತು ಕಡಿಮೆ ಕೆಲಸ ಜಾಸ್ತಿ ಎಂಬ ತತ್ವದಲ್ಲಿ ನಂಬಿಕೆ ಇಟ್ಟುಕೊಂಡವರಾಗಿದ್ದರು. ಮೊದಲ ಬಾರಿಗೆ ಕೇಂದ್ರ ಸಚಿವ ಸಂಪುಟದಲ್ಲಿ ಕಾರ್ಮಿಕ ಖಾತೆಯ ಹೊಣೆಗಾರಿಕೆ ವಹಿಸಿಕೊಂಡ ಮಲ್ಲಿಕಾರ್ಜುನ ಖರ್ಗೆಯವರು ಕ್ರಾಂತಿಕಾರಕ ಬದಲಾವಣೆ ತಂದರು. ಶಿಕ್ಷಣ, ಆರೋಗ್ಯ, ಗ್ರಾಮೀಣಾಭಿವೃದ್ಧಿ, ನಗರಾಭಿವೃದ್ಧಿ, ಕೃಷಿ, ಸಾರಿಗೆ, ರೈಲ್ವೆ ಮತ್ತು ವಿಮಾನ ಯಾನ ಸಚಿವರು ಅತ್ಯುತ್ತಮ ಕೆಲಸ ಮಾಡಿದ್ದರಿಂದಲೇ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಾಯಿತು.

ಡಾ. ಮನಮೋಹನ್ ಸಿಂಗ್ ಅವರು ಪಿ.ವಿ. ನರಸಿಂಹರಾವ್ ಸಚಿವ ಸಂಪುಟದಲ್ಲಿ ಹಣಕಾಸು ಸಚಿವರಾಗಿ ಬಹುದೊಡ್ಡ ಆರ್ಥಿಕ ಸ್ಥಿತ್ಯಂತರಕ್ಕೆ ಕಾರಣರಾಗಿದ್ದರು. 1992 ಭಾರತದ ಆರ್ಥಿಕ ಕ್ಷೇತ್ರದಲ್ಲಿ ಗಣನೀಯ ಪ್ರಮಾಣದಲ್ಲಿ ಬದಲಾವಣೆ ತಂದ ವರ್ಷ. ಹೊಸ ಯುಗವೇ ಶುರುವಾದ ಕಾಲ. ಅದಕ್ಕೂ ಮುಂಚೆ ರಾಜೀವ್ ಗಾಂಧಿ ಪ್ರಧಾನಿಯಾಗಿದ್ದ ಅವಧಿಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸಲಾಗಿತ್ತು. ಅವರ ಕನಸಿನ ಕೂಸಾಗಿ ಹುಟ್ಟಿಕೊಂಡ ಜವಾಹರ್ ನವೋದಯ ವಿದ್ಯಾನಿಲಯಗಳು ಈ ಹೊತ್ತಿಗೂ ಮಾದರಿ ಶಾಲೆಗಳಾಗಿ ಅತ್ಯುತ್ತಮ ಶಿಕ್ಷಣ ನೀಡುತ್ತಿವೆ. ಕರ್ನಾಟಕದ ಸಿ.ಕೆ. ಜಾಫರ್ ಶರೀಫ್ ಅವರು ಕೇಂದ್ರದಲ್ಲಿ ರೈಲ್ವೆ ಮಂತ್ರಿಯಾಗಿ ಅಭೂತಪೂರ್ವ ಸಾಧನೆ ಮಾಡಿದ್ದರು. ಆಗಿನ ಕಾಲದ ಬಹುಪಾಲು ರಾಜಕಾರಣಿಗಳು ಅನಗತ್ಯ ಮಾತನಾಡುತ್ತಿರಲಿಲ್ಲ. ಬಡಾಯಿ ಕೊಚ್ಚಿಕೊಳ್ಳುತ್ತಿರಲಿಲ್ಲ. ಆದರೆ ತಮಗೆ ವಹಿಸಿದ ಇಲಾಖೆಯಲ್ಲಿ ಅತ್ಯುತ್ತಮ ಕೆಲಸ ಮಾಡುತ್ತಿದ್ದರು. ಈ ಹೊತ್ತಿಗೂ ಅವರ ಕೆಲಸಗಳೇ ಮಾತನಾಡುತ್ತಿವೆ. ಕಾಂಗ್ರೆಸ್ ಪಕ್ಷದ ಬಹುಪಾಲು ನಾಯಕರು ಸಾಮರಸ್ಯದ, ಸೌಹಾರ್ದ ಬದುಕನ್ನು ಹಂಬಲಿಸುತ್ತಿದ್ದರು. ಮತೀಯ ರಾಜಕಾರಣಕ್ಕೆ ಅವಕಾಶ ಕೊಡುತ್ತಿರಲಿಲ್ಲ.

ಮಂದಿರ-ಮಸೀದಿ ರಾಜಕಾರಣ ಆರಂಭಿಸಿದವರೇ ಭಾರತೀಯ ಜನತಾ ಪಕ್ಷದ ಮುಖಂಡರು. ವಾಜಪೇಯಿ, ಅಡ್ವಾಣಿಯವರನ್ನೂ ಮೀರಿಸುವಂತೆ ಕೋಮುವಾದಿ ರಾಜಕಾರಣ ಮಾಡಿದವರು ಈಗಿನ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು. ವಾಜಪೇಯಿ, ಅಡ್ವಾಣಿ ಕಾಲದ ಬಿಜೆಪಿ ಮುಖಂಡರು ಮತಗಳ ಧ್ರುವೀಕರಣಕ್ಕಾಗಿ ಮತೀಯ ರಾಜಕಾರಣವನ್ನು ಅವಲಂಬಿಸಿದ್ದರು. ಚುನಾವಣೆ ಮುಗಿದು ಅಧಿಕಾರ ಹಿಡಿದ ಮೇಲೆ ಸಾಧ್ಯವಾದಷ್ಟು ಅಭಿವೃದ್ಧಿ ಕೆಲಸಗಳತ್ತ ಗಮನ ಹರಿಸುತ್ತಿದ್ದರು. ಡಾ. ಮುರಳಿ ಮನೋಹರ್ ಜೋಶಿ, ಅನಂತ ಕುಮಾರ್, ಪ್ರಮೋದ್ ಮಹಾಜನ್ ಸೇರಿದಂತೆ ಬಿಜೆಪಿಯ ಹಲವಾರು ನಾಯಕರು ಅತ್ಯುತ್ತಮ ಕೆಲಸ ಮಾಡಿ ಸೈ ಎನಿಸಿಕೊಳ್ಳಲು ಹವಣಿಸುತ್ತಿದ್ದರು. ಡಾ. ಮುರಳಿ ಮನೋಹರ್ ಜೋಶಿ ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯ ಮಂತ್ರಿಯಾಗಿದ್ದಾಗ ಕೇಸರೀಕರಣಕ್ಕೆ ಪ್ರಯತ್ನಿಸಿದ್ದರು. ಆದರೆ ಇಲಾಖೆಯನ್ನು ಸಂಪೂರ್ಣ ಭ್ರಷ್ಟಗೊಳಿಸಿರಲಿಲ್ಲ. ನರೇಂದ್ರ ಮೋದಿ ಸರಕಾರದ ಶಿಕ್ಷಣ ಕ್ಷೇತ್ರದ ಭ್ರಷ್ಟಾಚಾರದ ಬಗ್ಗೆ ಸ್ವಯಂ ಡಾ. ಮುರಳಿ ಮನೋಹರ್ ಜೋಶಿಯವರೇ ಕಟು ಟೀಕೆ ಮಾಡುವಂತಾಗಿದೆಯೆಂದರೆ ವ್ಯವಸ್ಥೆ ಯಾವ ಪ್ರಮಾಣದಲ್ಲಿ ಹದಗೆಟ್ಟಿರಬೇಕು?

ವಾಜಪೇಯಿ ಸಚಿವ ಸಂಪುಟದಲ್ಲಿ ಸಚಿವರಾಗಿದ್ದ ಜಸ್ವಂತ್ ಸಿಂಗ್ ಅವರೂ ಮೋದಿ ಆಡಳಿತದ ಬಗ್ಗೆ ಕಟುವಾಗಿ ಟೀಕಿಸಿದ್ದರು. ಹೀಗಾಗಲು ಕಾರಣ ಮೋದಿ ವ್ಯಕ್ತಿತ್ವ. ನರೇಂದ್ರ ಮೋದಿಯವರು ಅಧಿಕಾರ ರಾಜಕಾರಣದ ಭಾಗವಾದ ದಿನದಿಂದಲೂ ಮಾತು ಜಾಸ್ತಿ, ವಿಧಾಯಕ ಕಾರ್ಯಗಳು ಕಮ್ಮಿ. ಒಂದು ರೀತಿ ಬಂಡವಾಳ ಇಲ್ಲದ ಬಡಾಯಿ.

2001ರಲ್ಲಿ ಕೇಶುಭಾಯಿ ಪಟೇಲರು ಗುಜರಾತ್ ಮುಖ್ಯಮಂತ್ರಿಯಾಗಿದ್ದರು. ಆಗ ಬಿಜೆಪಿ ಹೆಚ್ಚಿನ ರಾಜ್ಯಗಳಲ್ಲಿ ಅಧಿಕಾರ ಹಿಡಿದಿರಲಿಲ್ಲ. ಅವರ ಆರೋಗ್ಯ ಕೆಟ್ಟಿದ್ದು, ಭುಜ್ ಭೂಕಂಪ ನಿರ್ವಹಣೆಯಲ್ಲಿ ಅವರು ಎಡವಿದ್ದು, ಅಷ್ಟೊತ್ತಿಗೆ ಗುಜರಾತ್ ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದಿತ್ತು. ಡಿಸೆಂಬರ್ 2002ರಲ್ಲಿ ಸಾರ್ವತ್ರಿಕ ಚುನಾವಣೆ ಬೇರೆ ಎದುರಿಸಬೇಕಿತ್ತು. ಆಗ ಅಟಲ್ ಬಿಹಾರಿ ವಾಜಪೇಯಿ ಮತ್ತು ಎಲ್.ಕೆ. ಅಡ್ವಾಣಿಯವರಿಗೆ ಆಪತ್ಬಾಂಧವರಂತೆ ಕಂಡವರು ಪಕ್ಷದ ಕೆಲಸ ಕಾರ್ಯ ಮಾಡುತ್ತಾ ನೇಪಥ್ಯದಲ್ಲಿದ್ದ ನರೇಂದ್ರ ದಾಮೋದರ್ ದಾಸ್ ಮೋದಿ. ಅಲ್ಲಿಯವರೆಗೆ ನರೇಂದ್ರ ಮೋದಿಯವರು ಹೆಚ್ಚು ಮಾತನಾಡಿದ್ದು ಯಾರೂ ಗಮನಿಸಿರಲಿಲ್ಲ. ಅಟಲ್ ಬಿಹಾರಿ ವಾಜಪೇಯಿ ಮತ್ತು ಅಡ್ವಾಣಿಯವರ ಆಶೀರ್ವಾದ ಬಲದಿಂದ ಅಕ್ಟೋಬರ್ 7, 2001ರಂದು ಗುಜರಾತ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನರೇಂದ್ರ ದಾಮೋದರ್ ದಾಸ್ ಮೋದಿ ಅಧಿಕಾರ ರಾಜಕಾರಣದ ಮುನ್ನೆಲೆಗೆ ಬಂದರು.

ಅಂದಿನಿಂದ ಮಾತುಗಳನ್ನೇ ಬಂಡವಾಳ ಮಾಡಿಕೊಂಡರು. ಆರೆಸ್ಸೆಸ್ ಸಂಘಟನೆಯಲ್ಲಿ ಕಲಿತ ಒಂದೆರಡು ಒಳ್ಳೆಯ ಅಂಶಗಳನ್ನು ಅಳಿಸಿ ಹಾಕಿ ಅವಕಾಶವಾದಿ ರಾಜಕಾರಣದ ಪ್ರವರ್ತಕರಾದರು. ಮೋದಿಯವರು ಗುಜರಾತ್ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ ಕೆಲವು ತಿಂಗಳುಗಳಲ್ಲೇ ಗೋಧ್ರಾ ಹತ್ಯೆ ಪ್ರಕರಣ ನಡೆಯಿತು. ಕರಸೇವಕರಿದ್ದ ರೈಲು ಬೆಂಕಿಗೆ ಆಹುತಿಯಾಯಿತು. ಆ ಘಟನೆಗೆ ಕಾರಣರಾದ ದುಷ್ಟ ಶಕ್ತಿಗಳನ್ನು ಪತ್ತೆ ಹಚ್ಚಿ ಶಿಕ್ಷಿಸುವುದು ಮೋದಿಯವರ ಮೊದಲ ಆದ್ಯತೆಯಾಗಿರಲಿಲ್ಲ. ಕರಸೇವಕರ ಸಾವನ್ನು ರಾಜಕೀಯಕ್ಕೆ ಬಳಸತೊಡಗಿದರು. ಗುಜರಾತ್ ರಾಜ್ಯದ ಮುಸ್ಲಿಮ್ ಸಮುದಾಯದ ವಿರುದ್ಧ ಬೆಂಕಿ ಕಾರಿದರು. ಕೋಮು ಗಲಭೆ ರಾಜ್ಯದ ತುಂಬಾ ವ್ಯಾಪಿಸಿತು. ಗೋಧ್ರಾ ಹತ್ಯೆಗೂ, ಗುಜರಾತ್‌ನ ಅಮಾಯಕ ಮುಸ್ಲಿಮ್ ಸಮುದಾಯಕ್ಕೂ ಸಂಬಂಧವೇ ಇರಲಿಲ್ಲ. ಗೋಧ್ರಾ ದುರ್ಘಟನೆಗೆ ನೇರ ಹೊಣೆಗಾರರಾದವರನ್ನು ಪತ್ತೆ ಹಚ್ಚಿ ಶಿಕ್ಷೆ ನೀಡಿದ್ದರೆ ಅಮಾಯಕ ಮುಸ್ಲಿಮರು ನರಕ ಯಾತನೆ ಅನುಭವಿಸುತ್ತಿರಲಿಲ್ಲ. ಗುಜರಾತ್ ನರಮೇಧದ ತೀವ್ರತೆ ಗಮನಿಸಿ ಬಿಜೆಪಿಯ ಹಿರಿಯ ಮುಖಂಡ ಅಟಲ್ ಬಿಹಾರಿ ವಾಜಪೇಯಿ ಅವರು ರಾಜ ಧರ್ಮ ಪಾಲನೆಯ ಅನಿವಾರ್ಯತೆಯನ್ನು ಒತ್ತಿ ಹೇಳಿದರು. ವಾಜಪೇಯಿ ಮಾತಿಗೂ ಮನ್ನಣೆ ನೀಡಲಿಲ್ಲ. ಮಾತುಗಳನ್ನು ಹೇಗೆ ಬೇಕೋ ಹಾಗೆ ಬದಲಿಸುವ ಸಾಮರ್ಥ್ಯದ ನರೇಂದ್ರ ಮೋದಿಯವರು ಅಹಿತಕರ ಘಟನೆಗಳನ್ನು ಸಮರ್ಥಿಸಿಕೊಂಡರು. ಕೋಮು ಗಲಭೆಗಳನ್ನೇ ಅಸ್ತ್ರವನ್ನಾಗಿಸಿಕೊಂಡ ಮೋದಿಯವರು 2002ರಲ್ಲಿ ನಡೆದ ಗುಜರಾತ್ ವಿಧಾನ ಸಭಾ ಚುನಾವಣೆಯಲ್ಲಿ 182 ಸ್ಥಾನಗಳ ಪೈಕಿ 127ಸ್ಥಾನಗಳಲ್ಲಿ ಗೆದ್ದು ಬೀಗಿದರು. ಮೊದಲ ಚುನಾವಣೆಯಲ್ಲಿ ಕೋಮುವಾದಿ ಅಸ್ತ್ರ ಬಳಸಿದ ಮೋದಿಯವರು ನಂತರ ತಮ್ಮನ್ನು ಅಭಿವೃದ್ಧಿಯ ಹರಿಕಾರ ಎಂಬಂತೆ ಬಿಂಬಿಸಿಕೊಂಡರು. ಗುಜರಾತ್ ಮಾಡೆಲ್ ಅಭಿವೃದ್ಧಿ ಕಥಾನಕ ಸೃಷ್ಟಿಸಿ ವ್ಯಾಪಕ ಪ್ರಚಾರ ಪಡೆದುಕೊಂಡರು. ಕಡಿಮೆ ಅಭಿವೃದ್ಧಿ ಹೆಚ್ಚು ಪ್ರಚಾರ ನರೇಂದ್ರ ಮೋದಿಯವರ ಮೂಲ ಮಂತ್ರವಾಯಿತು. ವ್ಯಕ್ತಿಗತ ನೆಲೆಯ ಪ್ರಾಮಾಣಿಕತೆಯನ್ನು ಹೆಚ್ಚು ಪ್ರಚಾರ ಮಾಡಿಕೊಂಡು ಕಾರ್ಪೊರೇಟ್ ವಲಯದ ಸ್ನೇಹ ಗಟ್ಟಿ ಮಾಡಿಕೊಂಡರು. ಚುನಾವಣೆಯ ವೆಚ್ಚ, ಪ್ರಚಾರದ ವೆಚ್ಚವನ್ನು ಕಾರ್ಪೊರೇಟ್ ವಲಯದವರ ತಲೆಗೆ ಕಟ್ಟಿ ಭ್ರಷ್ಟಾಚಾರ ಮುಕ್ತ ಗುಜರಾತ್ ಸ್ಲೋಗನ್ ಚಾಲ್ತಿಗೆ ತಂದರು. ಅಷ್ಟಕ್ಕೂ ಗುಜರಾತ್ ಮಾಡೆಲ್ ಸ್ವರೂಪ ಯಾರಿಗೂ ಗೊತ್ತಿರಲಿಲ್ಲ. ಹಾಗೆ ನೋಡಿದರೆ ಗುಜರಾತ್ ಈ ಹೊತ್ತಿಗೂ ಕರ್ನಾಟಕ, ಕೇರಳ ರಾಜ್ಯಗಳಷ್ಟು ಅಭಿವೃದ್ಧಿ ಹೊಂದಿಲ್ಲ. ಕಳೆದ ಹನ್ನೆರಡು ವರ್ಷಗಳಿಂದ ಭಾರತ ದೇಶ ಗುಜರಾತ್ ಅಭಿವೃದ್ಧಿ ಮಾಡೆಲ್ ನೋಡುತ್ತಿದೆ. ಕೆಲಸ ಕಮ್ಮಿ ಪ್ರಚಾರ ಜಾಸ್ತಿ. ಅಭಿವೃದ್ಧಿ ಸೊನ್ನೆ ಮಾತು, ಬಡಾಯಿ ಜಾಸ್ತಿ. ಹೇಳಿ ಕೇಳಿ ಗುಜರಾತ್ ವ್ಯಾಪಾರಿಗಳ ಅದರಲ್ಲೂ ವಜ್ರದ ವ್ಯಾಪಾರಿಗಳ ನಾಡು. ವ್ಯಾಪಾರಿಗಳ ಶ್ರೀಮಂತಿಕೆ ನೋಡಿ ಗುಜರಾತ್ ಅಭಿವೃದ್ಧಿಯಾಗಿದೆ ಎಂದು ಹೇಳಲು ಸಾಧ್ಯವೇ? ಬಣ್ಣದ ಮಾತುಗಳು, ಜಾತಿ ಧರ್ಮಗಳ ಆಧಾರಿತ ಮತ ದ್ರುವೀಕರಣ ಮಾಡುತ್ತಾ 2007, 2012ರ ಗುಜರಾತ್ ವಿಧಾನ ಸಭಾ ಚುನಾವಣೆಗಳನ್ನು ಗೆಲ್ಲುತ್ತಾ ಹೋದರು. ಎದುರಾಳಿ ಕಾಂಗ್ರೆಸ್ ಪಕ್ಷದ ದೌರ್ಬಲ್ಯಗಳನ್ನು ಸಮರ್ಥವಾಗಿ ಬಳಸಿಕೊಳ್ಳುವುದರಲ್ಲಿ ಮೋದಿಯವರು ನಿಸ್ಸೀಮರು. ‘ಭಾಯಿಯೋ ಔರ್ ಬೆಹನೋ’-ತರಹದ ಬಣ್ಣದ ಮಾತುಗಳು ಗುಜರಾತ್ ಮಾತ್ರವಲ್ಲ ಇಡೀ ದೇಶವನ್ನೇ ಮರುಳು ಮಾಡಿದ್ದವು.

2009ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷವು ಎಲ್.ಕೆ. ಅಡ್ವಾಣಿಯವರನ್ನು ಪ್ರಧಾನ ಮಂತ್ರಿ ಅಭ್ಯರ್ಥಿಯಾಗಿ ಘೋಷಿಸಿತು. ಕೋಮುವಾದಿ ಇಮೇಜ್ ಹೊತ್ತಿದ್ದ ಅಡ್ವಾಣಿಯವರನ್ನು ಭಾರತದ ಯುವ ಜನತೆ ಒಪ್ಪಿಕೊಳ್ಳಲಿಲ್ಲ. ಅಷ್ಟಕ್ಕೂ ಬಿಜೆಪಿಯ ಕಿರಿಯ ತಲೆಮಾರಿನ ಮುಖಂಡರ ಇಂಡಿಯಾ ಶೈನಿಂಗ್ ಸ್ಲೋಗನ್ ಹಸಿ ಸುಳ್ಳಿನಂತೆ ಕಂಡಿತು. ಅಡ್ವಾಣಿ ಪ್ರಧಾನಿಯಾಗಲೆಂದು ಕರ್ನಾಟಕದ ಯಡಿಯೂರಪ್ಪ ಹತ್ತೊಂಭತ್ತು ಲೋಕಸಭಾ ಸದಸ್ಯರನ್ನು ಗೆಲ್ಲಿಸಿಕೊಟ್ಟಿದ್ದರು. ಆದರೆ, ಅಡ್ವಾಣಿಯವರ ನೇರ ಫಲಾನುಭವಿ ನರೇಂದ್ರ ಮೋದಿಯವರು ಗುಜರಾತ್ ರಾಜ್ಯದಿಂದ ಕೇವಲ ಹನ್ನೆರಡು ಸಂಸದರನ್ನು ಕಳುಹಿಸಿ ತಾನು ಪ್ರಧಾನಿ ಹುದ್ದೆಯ ಅಪೇಕ್ಷಿತ ಎಂಬುದರ ಮುನ್ಸೂಚನೆ ನೀಡಿದ್ದರು.

ಹತ್ತು ವರ್ಷಗಳ ಸತತ ಆಡಳಿತ ಯುಪಿಎ ಸರಕಾರದ ಸಣ್ಣ ಪುಟ್ಟ ವೈಫಲ್ಯಗಳನ್ನೇ ಅಸ್ತ್ರ ಮಾಡಿಕೊಂಡು ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳನ್ನು ಕಟಕಟೆಯಲ್ಲಿ ನಿಲ್ಲಿಸುವಲ್ಲಿ ಮೋದಿ ತಂತ್ರಗಾರಿಕೆ ಯಶಸ್ವಿಯಾಗಿತ್ತು. ಆರಂಭದಲ್ಲಿ ಯುಪಿಎ ಸರಕಾರದ ವೈಫಲ್ಯಗಳನ್ನು ಅಣ್ಣಾ ಹಝಾರೆ, ಅರವಿಂದ ಕೇಜ್ರಿವಾಲ್, ಪ್ರಶಾಂತ್ ಭೂಷಣ್ ಅವರಂತಹ ಸಾಮಾಜಿಕ ಹೋರಾಟಗಾರರ ಮೂಲಕ ಎತ್ತಿ ತೋರಿಸಿದರು.

ಅಡ್ವಾಣಿ ನಾಯಕತ್ವದ ವೈಫಲ್ಯ ಗಮನಿಸಿದ ಆರೆಸ್ಸೆಸ್ ಮುಖಂಡರಿಗೆ ಗೆಲ್ಲುವ ಕುದುರೆಯ ಅಗತ್ಯವಿತ್ತು. ಹಿಂದೆ ಮುಂದೆ ನೋಡದೆ ನರೇಂದ್ರ ಮೋದಿ ಯವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿಸಲು ತೆರೆಮರೆ ಕಸರತ್ತು ಮಾಡಿತು. ದುರ್ಬಲ ಬಿಜೆಪಿ ನಾಯಕತ್ವ ಗುಜರಾತ್ ಮಾಡೆಲ್‌ಗೆ ಮಾರು ಹೋಗಿ ಮೋದಿಯವರನ್ನು ತೆಲೆ ಮೇಲೆ ಹೊತ್ತಿಕೊಂಡಿತು. ಯುಪಿಎ ಸರಕಾರದ ಭ್ರಷ್ಟಾಚಾರದ ಸುದ್ದಿಗಳು ಯುವ ಜನತೆಯನ್ನು ಆಕ್ರೋಶಭರಿತರನ್ನಾಗಿಸಿದ್ದವು. ವಾಜಪೇಯಿ, ಅಡ್ವಾಣಿ ರೀತಿ ಮೋದಿಯವರು ಕೋಮುವಾದದ ಅಸ್ತ್ರ ಮುಂದು ಮಾಡಲಿಲ್ಲ. ಅಭಿವೃದ್ಧಿ, ಭ್ರಷ್ಟಾಚಾರ, ಕಪ್ಪು ಹಣ, ಯುವ ಜನತೆಯ ಬದುಕು ಇತ್ಯಾದಿ ಸಂಗತಿಗಳನ್ನು ಭಾಷಣದ ವಸ್ತು ಮಾಡಿಕೊಂಡರು. ಕೋಮುವಾದ ಹಿಡನ್ ಅಜೆಂಡಾ ಆಗಿ ಉಳಿಯಿತು. ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಯುವ ಜನತೆಯನ್ನು ಆಕರ್ಷಿಸಿತು. ಹೆಂಡತಿ ಮಕ್ಕಳಿಲ್ಲದ, ದೇಶಕ್ಕಾಗಿಯೇ ಸಮರ್ಪಿಸಿಕೊಂಡ ವ್ಯಕ್ತಿ ತಾನು ಎಂಬುದನ್ನು ಹೆಚ್ಚು ಪ್ರಚಾರ ಮಾಡಿಕೊಂಡರು.

2014ರ ಲೋಕಸಭಾ ಚುನಾವಣೆಯಲ್ಲಿ ಯುವಜನತೆ ನರೇಂದ್ರ ಮೋದಿಯವರ ಬಣ್ಣದ ಮಾತುಗಳಿಗೆ ಮರುಳಾದರು. ಹಲವು ವರ್ಷಗಳ ನಂತರ ಭಾರತದ ಮತದಾರ ಒಂದು ಪಕ್ಷಕ್ಕೆ ಸರಳ ಬಹುಮತ ನೀಡಿ ಐತಿಹಾಸಿಕ ನಿರ್ಧಾರ ಕೈಗೊಂಡಿದ್ದರು. ಮೋದಿ ವಿದೇಶದಿಂದ ಕಪ್ಪು ಹಣ ವಾಪಸ್ ತಂದು ಎಲ್ಲರಿಗೂ ತಲಾ ರೂ.15 ಲಕ್ಷ ಹಂಚುತ್ತಾರೆಂದೇ ಬಲವಾಗಿ ನಂಬಿದ್ದರು. ಬಿಜೆಪಿಗೆ 282 ಲೋಕಸಭಾ ಸದಸ್ಯರ ಬಲ ದೊರಕಿತು. ಐದು ವರ್ಷದ ನಿರಂತರ ಹುಸಿ ಭರವಸೆಗಳು, ಬಣ್ಣದ ಮಾತುಗಳು ಮತದಾರರಲ್ಲಿ ಮೋದಿಯವರ ಬಗ್ಗೆ ಅನುಮಾನ ಹುಟ್ಟಿಕೊಂಡಿದ್ದವು. ಆದರೆ ಕಾಂಗ್ರೆಸ್ ಪಕ್ಷ ಮೋದಿ ಸರಕಾರದ ಹುಸಿತನ ಅನಾವರಣ ಮಾಡುವಲ್ಲಿ ವಿಫಲವಾಯಿತು. ನೋಟ್ ಬಂದಿಯೊಂದೇ ಮೋದಿ ಸರಕಾರವನ್ನು ಮನೆಗೆ ಕಳಿಸಲು ಸಾಕಿತ್ತು.

ನರೇಂದ್ರ ಮೋದಿಯವರು ಮೇಲ್ನೋಟಕ್ಕೆ ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಮಂತ್ರ ಜಪಿಸಿದರೂ ಆಳದಲ್ಲಿ ಕೋಮುವಾದಿ ರಾಜಕಾರಣ ಮಾಡುತ್ತಲೇ ಇರುತ್ತಾರೆ. ಸಂಕಟ ಬಂದಾಗ ಮತ ಧ್ರುವೀಕರಣಕ್ಕಾಗಿ ಮತೀಯ ರಾಜಕಾರಣದ ಮೊರೆ ಹೋಗುತ್ತಾರೆ. 2024ರ ಚುನಾವಣೆಯಲ್ಲಿ ಅಯೋಧ್ಯೆಯ ಶ್ರೀರಾಮನನ್ನು ಅತಿಯಾಗಿ ಅವಲಂಬಿಸಿದ್ದರು. ಶ್ರೀರಾಮಚಂದ್ರ ಕೈ ಹಿಡಿಯಲಿಲ್ಲ. 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸಂಖ್ಯಾ ಬಲ 240ಕ್ಕೆ ಕುಸಿಯಿತು. ಮತದಾರ ತನ್ನ ವಿರುದ್ಧ ಇದ್ದಾರೆಂಬುದು ಗೊತ್ತಾದ ಮೇಲಾದರೂ ಕಾರ್ಯ ವೈಖರಿ ಬದಲಾಯಿಸಿಕೊಳ್ಳಬೇಕಿತ್ತು. ಆದರೆ ನರೇಂದ್ರ ಮೋದಿಯವರಿಗೆ ಬಣ್ಣದ ಮಾತುಗಳನ್ನು ಆಡುವುದು ರೂಢಿಯಾಗಿ ಬಿಟ್ಟಿದೆ. ವಿಕಸಿತ ಭಾರತದ ಬಗ್ಗೆ ಮಾತನಾಡಿದ್ದೇ ಮಾತನಾಡಿದ್ದು. ಗ್ರಾಮೀಣ ಭಾರತದಲ್ಲಿ ಶೌಚಾಲಯ, ಕುಡಿಯುವ ನೀರು ಲಭ್ಯ ಇಲ್ಲ. ಸುಳ್ಳು ಅಂಕಿ ಅಂಶಗಳನ್ನು ನೀಡುತ್ತಲೇ ಇರುತ್ತಾರೆ. ಮೋದಿಯವರ ಅವಧಿಯಲ್ಲಿ ಅದಾನಿ, ಅಂಬಾನಿಯಂಥ ಕಾರ್ಪೊರೇಟ್ ಕುಳಗಳು ದುಂಡಗಾಗಿದ್ದಾರೆ. ಪಶ್ಚಿಮದ ದೇಶಗಳಿಗೆ ಹೋಲಿಸಿದರೆ ಭಾರತ ನಿಂತಲ್ಲೇ ನಿಂತಿದೆ. ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆಯವರು ಭಾಷಣ ಮಾಡಿದ ಸ್ಥಳ ಅಪವಿತ್ರವಾಯಿತು ಎಂದು ಶುದ್ಧೀಕರಣ ಮಾಡುವ ಜಾತಿವಾದಿ ಶಕ್ತಿಗಳು ಜೀವಂತವಾಗಿರುವ ವಿಕಸಿತ ಭಾರತದ ಸ್ಲೋಗನ್‌ಗೆ ಯಾವ ಅರ್ಥವಿದೆ? ಇಡೀ ಬಿಜೆಪಿ ಸಂಘಟನೆ, ಮೋದಿ ಅಧಿಕಾರ ರಾಜಕಾರಣಕ್ಕೆ ಬಂದು ಇಪ್ಪತ್ತೈದು ವರ್ಷಗಳಾಯಿತು ಎಂದು ಸುಳ್ಳಿನ ಅಭಿಯಾನ ಶುರು ಮಾಡಲಿದೆ. ಭಾರತದ ಯುವ ಜನತೆ 25 ವರ್ಷಗಳ ಲೆಕ್ಕ ಕೇಳಲು ಮುಂದಾಗಬೇಕು. ಮಾತಿನಲ್ಲೇ ಮರುಳು ಮಾಡುವ ಅಂಟು ರೋಗ ಈಗ ಉಳಿದ ಪಕ್ಷಗಳ ಯುವ ಮುಖಂಡರಿಗೂ ತಗಲುತ್ತಿದೆ. ಪ್ರತಿಪಕ್ಷವಾದ ಕಾಂಗ್ರೆಸ್ ನರೇಂದ್ರ ಮೋದಿ ಸರಕಾರದ ವೈಫಲ್ಯಗಳಿಗೆ ಕನ್ನಡಿ ಹಿಡಿಯುವ ಕೆಲಸವನ್ನು ಪರಿಣಾಮಕಾರಿಯಾಗಿ ಮಾಡಬೇಕು. ಸುಳ್ಳಿನ ಮೆರವಣಿಗೆ ಮತ್ತು ಉರವಣಿಗೆ ಇಲ್ಲಿಗೆ ನಿಲ್ಲುವಂತಾಗಬೇಕು.

(ಅಂಕಣಗಾರರು ಹಿರಿಯ ಲೇಖಕರು, ಪತ್ರಕರ್ತರು)

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಡಾ. ರಾಜಶೇಖರ ಹತಗುಂದಿ

contributor