ಒಂದು ವೇಳೆ ರೈತರು ಕಬ್ಬು ಬೆಳೆಯುವುದನ್ನೇ ನಿಲ್ಲಿಸಿದರೆ ಆಗ ಸಕ್ಕರೆ ಕಾರ್ಖಾನೆಗಳು ಹೇಗೆ ಲಾಭ ಮಾಡಿಕೊಳ್ಳುತ್ತವೆ? ಕಬ್ಬು ಸಾಂಪ್ರದಾಯಿಕ ವಾಣಿಜ್ಯ ಬೆಳೆ. ವಾಣಿಜ್ಯ ಬೆಳೆಗಳು ಇನ್ನೂ ಸಾಕಷ್ಟಿವೆ. ರೈತರು ಮನಸ್ಸು ಬದಲಾಯಿಸಿ ಧೈರ್ಯ ಮಾಡಿ ಪರ್ಯಾಯ ವಾಣಿಜ್ಯ ಬೆಳೆಗಳತ್ತ ಮುಖ ಮಾಡಿದರೆ ಸಕ್ಕರೆ ಕಾರ್ಖಾನೆಗಳು ಮುಚ್ಚಬೇಕಾಗುತ್ತದೆ. ಕೇಂದ್ರ ಸರಕಾರದ ಸಕ್ಕರೆ ನೀತಿ ಸಕ್ಕರೆ ಕಾರ್ಖಾನೆಗಳಿಗೆ ಅನುಕೂಲಕರವಾಗಿಲ್ಲವೆಂದರೆ ಕೇಂದ್ರದ ವಿರುದ್ಧ ಹೋರಾಡಲಿ. ಅದು ಬಿಟ್ಟು ಕೇಂದ್ರದತ್ತ ಬೆರಳು ತೋರಿಸಿ ಕಬ್ಬು ಬೆಳೆಗಾರರ ಕತ್ತು ಕುಯ್ಯುವುದು ಎಷ್ಟು ಸರಿ?

ಒಂದಾನೊಂದು ಕಾಲದಲ್ಲಿ ಕಬ್ಬು ಬೆಳೆಗಾರರನ್ನು ಶ್ರೀಮಂತರೆಂದು ಪರಿಗಣಿಸಲಾಗುತ್ತಿತ್ತು. ಕಬ್ಬು ಬೆಳೆಯುವ ಜಿಲ್ಲೆಗಳನ್ನು ಸಮೃದ್ಧಿ-ಸಂಪತ್ತಿನ ಪ್ರದೇಶಗಳೆಂದು ಭಾವಿಸಲಾಗಿತ್ತು. ಆಗ ಸಕ್ಕರೆ ಕಾರ್ಖಾನೆಗಳ ಸಂಖ್ಯೆ ಕಡಿಮೆ ಇದ್ದವು. ಸಹಕಾರಿ ಹಾಗೂ ಸಾರ್ವಜನಿಕ ಒಡೆತನದಲ್ಲಿದ್ದ ಆ ಕಾರ್ಖಾನೆಗಳನ್ನು ಅತ್ಯಂತ ದಕ್ಷವಾಗಿ, ಆರ್ಥಿಕ ಶಿಸ್ತಿನಿಂದ ನಿರ್ವಹಿಸಲಾಗುತ್ತಿತ್ತು. ಸಹಕಾರಿ ರಂಗದ ಧುರೀಣರು ಅತ್ಯಂತ ಪ್ರಾಮಾಣಿಕರು, ಕ್ರಿಯಾಶೀಲರೂ ಆಗಿದ್ದರು. ಸಹಕಾರಿ ರಂಗದಲ್ಲಿ ಅಷ್ಟಾಗಿ ಅಧಿಕಾರ ರಾಜಕಾರಣ ಪ್ರವೇಶ ಮಾಡಿರಲಿಲ್ಲ.

ಕಾಲ ಕಳೆದಂತೆ, ಸಹಕಾರಿ ಸಕ್ಕರೆ ಕಾರ್ಖಾನೆಗಳು, ಸಹಕಾರಿ ಬ್ಯಾಂಕುಗಳು ಭ್ರಷ್ಟಾಚಾರದ ಕೂಪಗಳಾದವು. ಆ ಸಂಸ್ಥೆಗಳನ್ನು ರಾಜಕಾರಣಿಗಳು ತಮ್ಮ ಸ್ವಾರ್ಥ ಸಾಧನೆಗೆ ಬಳಸಿಕೊಳ್ಳತೊಡಗಿದರು. ಆರ್ಥಿಕ ಶಿಸ್ತು ಕಣ್ಮರೆಯಾಗತೊಡಗಿತ್ತು. ಎಲ್ಲಕ್ಕೂ ಮಿಗಿಲಾಗಿ ಸಹಕಾರಿ ತತ್ವಗಳನ್ನು ಗಾಳಿಗೆ ತೂರಲಾಯಿತು. ಸಹಕಾರಿ ಬ್ಯಾಂಕುಗಳು, ಸಹಕಾರಿ ಸಕ್ಕರೆ ಕಾರ್ಖಾನೆಗಳು ಆರ್ಥಿಕ ನಷ್ಟ ಅನುಭವಿಸತೊಡಗಿದವು. ಸರಕಾರ ಆರ್ಥಿಕ ನೆರವು ನೀಡಿ ಸುಸ್ತಾಯಿತು. ಮಹಾರಾಷ್ಟ್ರ ರಾಜ್ಯದಲ್ಲಿ ಈ ಹೊತ್ತಿಗೂ ಸಹಕಾರಿ ರಂಗವನ್ನು ಅಲ್ಲಿಯ ಸಹಕಾರಿ ಧುರೀಣರು ಅತ್ಯಂತ ಲಾಭದಾಯಕವಾಗಿ ಮುನ್ನಡೆಸುತ್ತಿದ್ದಾರೆ. ಅವರ ರಾಜಕೀಯ ಅಸ್ತಿತ್ವವೇ ಸಹಕಾರಿ ರಂಗದ ಯಶಸ್ಸನ್ನು ಅವಲಂಬಿಸಿದೆ. ಕರ್ನಾಟಕದಲ್ಲಿ ಬೆರಳೆಣಿಕೆಯ ಸಕ್ಕರೆ ಕಾರ್ಖಾನೆಗಳು ಸಹಕಾರಿ ರಂಗ- ಸಾರ್ವಜನಿಕ ವಲಯದಲ್ಲಿವೆ. ಬಹುತೇಕ ಸಕ್ಕರೆ ಕಾರ್ಖಾನೆಗಳು ಖಾಸಗಿಯವರ ಒಡೆತನದಲ್ಲಿವೆ. ವೃತ್ತಿಪರ ಉದ್ಯಮಿಗಳು ಕೆಲವೊಂದು ಸಕ್ಕರೆ ಕಾರ್ಖಾನೆಗಳು ನಡೆಸುತ್ತಿದ್ದಾರೆ. ಎಲ್ಲ ಪಕ್ಷಗಳ ರಾಜಕೀಯ ಮುಖಂಡರು ಸಕ್ಕರೆ ಕಾರ್ಖಾನೆಗಳ ಮಾಲಕರಾಗಿದ್ದಾರೆ. ಕಬ್ಬು ಬೆಳೆಗಾರರ ಸಮಸ್ಯೆಯ ಮೂಲ ಇರುವುದು ಇಲ್ಲೇ.

ಒಂದಾನೊಂದು ಕಾಲದ ಸಕ್ಕರೆ ಕಾರ್ಖಾನೆಗಳು ಆರ್ಥಿಕ ಶಿಸ್ತು, ಪ್ರಾಮಾಣಿಕತೆ ಮತ್ತು ಕ್ರಿಯಾಶೀಲತೆಯ ಕಾರಣಕ್ಕೆ ಲಾಭದಲ್ಲಿ ಇದ್ದವು. ಸಾಧ್ಯವಾದಷ್ಟು ಕಬ್ಬು ಬೆಳೆಗಾರರ ಹಿತ ಕಾಪಾಡಲು ಬದ್ಧವಾಗಿದ್ದವು. ಆಗ ಕಬ್ಬನ್ನು ಕೇವಲ ಸಕ್ಕರೆ ಉತ್ಪಾದನೆಗೆ ಮಾತ್ರ ಬಳಸುತ್ತಿದ್ದರು. ಕೆಲವರು ಬೆಲ್ಲ ತಯಾರಿಕೆಗೆ ಬಳಕೆ ಮಾಡುತ್ತಿದ್ದರು. ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳದೆ ಇರುವುದು, ಕಬ್ಬಿನ ಉಪ ಉತ್ಪನ್ನಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳದಿರುವುದು ಈ ಹಿಂದಿನ ಸಕ್ಕರೆ ಕಾರ್ಖಾನೆಗಳ ಬಹುದೊಡ್ಡ ಮಿತಿಯಾಗಿತ್ತು. ಹಾಗಾಗಿ ಎಷ್ಟೇ ದಕ್ಷತೆ, ಆರ್ಥಿಕ ಶಿಸ್ತು ರೂಢಿಸಿಕೊಂಡರೂ ಸಕ್ಕರೆ ಕಾರ್ಖಾನೆಗಳು ಬಹುದೊಡ್ಡ ಮಟ್ಟದಲ್ಲಿ ಲಾಭ ಮಾಡಲು ಸಾಧ್ಯವಾಗುತ್ತಿರಲಿಲ್ಲ.

ಈಗ ಕಾಲ ಬದಲಾಗಿದೆ. ಸಕ್ಕರೆ ಕಾರ್ಖಾನೆಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗಿದೆ. ಸಕ್ಕರೆ ಉತ್ಪಾದನೆಯೊಂದಿಗೆ, ಉಪ ಉತ್ಪಾದನೆಗಳು ಹೆಚ್ಚು ಲಾಭ ತಂದುಕೊಡುತ್ತಿವೆ. ಒಂದು ಕಾಲದಲ್ಲಿ ಮೊಲೈಸೆಸ್‌ಗೆ ಬೇಡಿಕೆ ಇರಲಿಲ್ಲ. ಉಪ ಉತ್ಪಾದನೆಗಳನ್ನು ಬಹು ವಿಧದಲ್ಲಿ ಬಳಸಿಕೊಳ್ಳುವ ತಂತ್ರಜ್ಞಾನ ಇರಲಿಲ್ಲ. ಈಗ ಎಲ್ಲವೂ ದೊರಕಿದೆ. ಆದರೆ ಸಕ್ಕರೆ ಕಾರ್ಖಾನೆಗಳ ಮಾಲಕರ ದುರಾಸೆಯಿಂದ ಕಬ್ಬು ಬೆಳೆಗಾರರು ಸಂಕಷ್ಟ ಅನುಭವಿಸುತ್ತಿದ್ದಾರೆ. ಕೇಂದ್ರ ಸರಕಾರದ ತಪ್ಪು ಸಕ್ಕರೆ ನೀತಿಯೂ ಕಬ್ಬು ಬೆಳೆಗಾರರ ಸಂಕಷ್ಟಕ್ಕೆ ಕಾರಣವಾಗಿದೆ.

ಭಾರತದ ಸರಾಸರಿ ಕಬ್ಬು ಇಳುವರಿ ಪ್ರತೀ ಹೆಕ್ಟೇರ್‌ಗೆ 81.48 ಟನ್ ಇದೆ. ವಾರ್ಷಿಕ ಅಂದಾಜು 500ಮಿಲಿಯನ್ ಟನ್ ಕಬ್ಬು ಬೆಳೆಯಲಾಗುತ್ತಿದೆ. ಭಾರತದ ಒಟ್ಟು ಕಬ್ಬು ಇಳುವರಿಯಲ್ಲಿ ಉತ್ತರ ಪ್ರದೇಶದ ಪಾಲು ಪ್ರತಿಶತ 45ರಷ್ಟಿದೆ. ಮಹಾರಾಷ್ಟ್ರ ಎರಡನೇ ಸ್ಥಾನದಲ್ಲಿದ್ದರೆ, ಕರ್ನಾಟಕ ಮೂರನೇ ಸ್ಥಾನದಲ್ಲಿದೆ. ತಮಿಳುನಾಡು ಮತ್ತು ಇತರ ರಾಜ್ಯಗಳು ನಂತರದ ಸ್ಥಾನದಲ್ಲಿವೆ. ಕರ್ನಾಟಕದ ಪಾಲು ಪ್ರತಿಶತ 16ರಷ್ಟಿದೆ. ವಾರ್ಷಿಕ ಅಂದಾಜು 61.15 ಮಿಲಿಯನ್ ಟನ್ ಕಬ್ಬು ಬೆಳೆಯಲಾಗುತ್ತಿದೆ. ಮಳೆಯ ಪ್ರಮಾಣ ಕಡಿಮೆಯಾದರೆ. ಕಬ್ಬಿನ ಇಳುವರಿಯೂ ಸಹಜವಾಗಿಯೇ ಕುಸಿಯುತ್ತದೆ. ಭಾರತದ ಕಬ್ಬು ಬೆಳೆಗಾರರಿಗೆ ಅತ್ಯುತ್ತಮ ಬೆಲೆ ಮತ್ತು ಇನ್ನಿತರ ಸವಲತ್ತು ನೀಡಿದರೆ ಇಳುವರಿಯ ಪ್ರಮಾಣ ಮತ್ತಷ್ಟು ಹೆಚ್ಚಿಸಬಹುದಾಗಿದೆ. ಸಕ್ಕರೆ ಉತ್ಪಾದನೆಯಲ್ಲಿ ಭಾರತ ಸ್ವಾವಲಂಬನೆ ಸಾಧಿಸಬಹುದಾಗಿದೆ. ಸಕ್ಕರೆಯ ರಫ್ತು ಪ್ರಮಾಣ ಗಣನೀಯವಾಗಿ ವೃದ್ಧಿಸಬಹುದಾಗಿದೆ. ದುರಂತವೆಂದರೆ, ವಾರ್ಷಿಕ ಹತ್ತು ಲಕ್ಷ ಟನ್ ಸಕ್ಕರೆಯನ್ನು ತೆರಿಗೆ ಮುಕ್ತವಾಗಿ ಆಮದು ಮಾಡಿಕೊಳ್ಳಲು ಭಾರತ ಸರಕಾರ ಅನುಮತಿ ನೀಡಿದೆ. ಸಕ್ಕರೆ ಬಳಕೆದಾರ ಗ್ರಾಹಕರ ಹಿತ ಕಾಪಾಡುವುದು ಅಗತ್ಯವೇ. ಅದನ್ನು ಭಾರತದ ಸಕ್ಕರೆ ಕಾರ್ಖಾನೆಗಳು ಮತ್ತು ಕಬ್ಬು ಬೆಳೆಗಾರರಿಗೆ ಹೆಚ್ಚು ಸವಲತ್ತು ನೀಡಿ ಸಾಧಿಸಬಹುದಲ್ಲ.

ಭಾರತಕ್ಕೆ ಬ್ರೆಝಿಲ್ ದೇಶದಿಂದ ಅತಿ ಹೆಚ್ಚು ಕಚ್ಚಾ ಸಕ್ಕರೆಯನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಬ್ರೆಝಿಲ್ ಮಾತ್ರವಲ್ಲ, ಫ್ರಾನ್ಸ್, ಜರ್ಮನಿ, ಪೋಲ್ಯಾಂಡ್ ಮತ್ತು ಅಮೆರಿಕದಂತಹ ದೇಶಗಳಿಂದಲೂ ಸಕ್ಕರೆ ಆಮದು ಮಾಡಿಕೊಳ್ಳಲಾಗುತ್ತಿದೆ. ಆತ್ಮನಿರ್ಭರ ಮತ್ತು ವಿಕಸಿತ ಭಾರತಕ್ಕೆ ಹೆಚ್ಚು ಸಕ್ಕರೆ ಉತ್ಪಾದಿಸುವ ಸಾಮರ್ಥ್ಯ ಇಲ್ಲವೇ? ಸಕ್ಕರೆ ಉಧ್ಯಮ ಮೊದಲಿನಂತಿಲ್ಲ. ಸಕ್ಕರೆ ಉತ್ಪಾದನೆಯೊಂದಿಗೆ ಎಥೆನಾಲ್, ವಿದ್ಯುತ್ ಮತ್ತು ಆಲ್ಕೋಹಾಲ್‌ನಂಥ ಬೆಲೆ ಬಾಳುವ ಸರಕುಗಳನ್ನು ಉತ್ಪಾದಿಸಿ ಹೆಚ್ಚು ಲಾಭ ಮಾಡಿಕೊಳ್ಳಬಹುದಾಗಿದೆ.

ಕರ್ನಾಟಕ ರಾಜ್ಯದ ಕಬ್ಬು ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗೂ ಕೇಂದ್ರ ಸರಕಾರದ ತಪ್ಪು ಸಕ್ಕರೆ ನೀತಿಗೂ ಅವಿನಾಭಾವ ಸಂಬಂಧ ಇದೆ. ಕಬ್ಬು ಬೆಳೆಗಾರರು ಮಾತ್ರವಲ್ಲ, ಬಹುಪಾಲು ಸಕ್ಕರೆ ಕಾರ್ಖಾನೆಗಳ ಮಾಲಕರಿಗೂ ಕೇಂದ್ರದ ನೀತಿ ಸರಿಯಿಲ್ಲ ಎಂಬ ಕಟು ವಾಸ್ತವ ಗೊತ್ತಿದೆ. ಆದರೆ ಮೋದಿ -ಅಮಿತ್ ಶಾ ಅವರ ಸ್ವಾರ್ಥ ರಾಜಕಾರಣದ ಎದುರು ಯಾರಿಗೂ ಧ್ವನಿ ಇಲ್ಲದಂತಾಗಿದೆ.

ಕೇಂದ್ರ ಸರಕಾರದ ತಪ್ಪು ಸಕ್ಕರೆ ನೀತಿಯಿಂದ ಕರ್ನಾಟಕದ ಕಬ್ಬು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅನಿವಾರ್ಯವಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಕಬ್ಬು ಇಳುವರಿಯಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ. ರಾಜ್ಯದ ಹದಿನಾರು ಜಿಲ್ಲೆಗಳಲ್ಲಿ ಕಬ್ಬು ಬೆಳೆಯಲಾಗುತ್ತಿದೆ. ಮಂಡ್ಯ ಮತ್ತು ಬೆಳಗಾವಿ ಜಿಲ್ಲೆಗಳು ಮೊದಲಿಂದಲೂ ಮುಂಚೂಣಿಯಲ್ಲಿವೆ. ಮಂಡ್ಯ ಜಿಲ್ಲೆಯನ್ನು ಸಕ್ಕರೆ ನಾಡು ಎಂದು ಕರೆಯುತ್ತಾರೆ. ಬಾಗಲಕೋಟೆ, ವಿಜಯಪುರ, ಬೀದರ್, ಕಲಬುರಗಿ, ಮೈಸೂರು, ಚಾಮರಾಜನಗರ, ಹಾಸನ, ಹಾವೇರಿ, ದಾವಣಗೆರೆ, ಬಳ್ಳಾರಿ, ಗದಗ, ಯಾದಗಿರಿ, ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕಬ್ಬನ್ನು ಬೆಳೆಯುತ್ತಾರೆ. ಕರ್ನಾಟಕದಲ್ಲಿ 81 ಸಕ್ಕರೆ ಕಾರ್ಖಾನೆಗಳು ನೋಂದಾಯಿಸಿಕೊಂಡಿವೆ. ಅವುಗಳಲ್ಲಿ 71 ಸಕ್ಕರೆ ಕಾರ್ಖಾನೆಗಳು ಕಾರ್ಯ ನಿರ್ವಹಿಸುತ್ತಿವೆ. 71 ಸಕ್ಕರೆ ಕಾರ್ಖಾನೆಗಳ ಪೈಕಿ 49 ಖಾಸಗಿ ಒಡೆತನದಲ್ಲಿವೆ. ಏಳು ಸಹಕಾರಿ ರಂಗದ ಸಕ್ಕರೆ ಕಾರ್ಖಾನೆಗಳನ್ನು ಖಾಸಗಿಯವರು ಲೀಸ್ ಮೇಲೆ ನಡೆಸುತ್ತಿದ್ದಾರೆ. ಎರಡು ಮಾತ್ರ ಸಾರ್ವಜನಿಕ ಒಡೆತನದಲ್ಲಿವೆ. ಒಟ್ಟು ಹದಿಮೂರು ಸಕ್ಕರೆ ಕಾರ್ಖಾನೆಗಳು ಸಹಕಾರಿ ರಂಗದ ಒಡೆತನದಲ್ಲಿವೆ. ಹೆಸರಿಗೆ ಮಾತ್ರ ಸಹಕಾರಿ ರಂಗ, ಅವುಗಳನ್ನು ರಾಜಕಾರಣಿಗಳೇ ನಿಯಂತ್ರಿಸುತ್ತಾರೆ.

ಅತಿ ಹೆಚ್ಚು ಅಂದರೆ, 24 ಸಕ್ಕರೆ ಕಾರ್ಖಾನೆಗಳು ಬೆಳಗಾವಿ ಜಿಲ್ಲೆಯಲ್ಲಿವೆ. ಸಕ್ಕರೆ ಕಾರ್ಖಾನೆಗಳ ಮಾಲಕರೇ ಕ್ರಿಯಾಶೀಲ ರಾಜಕಾರಣಿಗಳು ಆಗಿದ್ದಾರೆ. ಬಾಗಲಕೋಟೆ ಜಿಲ್ಲೆಯಲ್ಲಿ ಹನ್ನೊಂದು, ವಿಜಯಪುರ ಜಿಲ್ಲೆಯಲ್ಲಿ ಒಂಭತ್ತು, ಬೀದರ್ ಜಿಲ್ಲೆಯಲ್ಲಿ ಆರು, ಮಂಡ್ಯ ಜಿಲ್ಲೆಯಲ್ಲಿ ಐದು, ಕಲಬುರಗಿ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ತಲಾ ಮೂರು, ಮೈಸೂರು-ದಾವಣಗೆರೆ ಜಿಲ್ಲೆಗಳಲ್ಲಿ ತಲಾ ಎರಡು, ಚಾಮರಾಜನಗರ, ಗದಗ, ಹಾವೇರಿ, ಹಾಸನ, ಶಿವಮೊಗ್ಗ, ಯಾದಗಿರಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ತಲಾ ಒಂದು ಸಕ್ಕರೆ ಕಾರ್ಖಾನೆ ಕಾರ್ಯ ನಿರ್ವಹಿಸುತ್ತಿವೆ. ವೃತ್ತಿಪರ ಉದ್ಯಮಿಗಳು ಬೆರಳೆಣಿಕೆಯ ಸಕ್ಕರೆ ಕಾರ್ಖಾನೆಗಳನ್ನು ನಡೆಸುತ್ತಿದ್ದಾರೆ. ಬಹುಪಾಲು ಸಕ್ಕರೆ ಕಾರ್ಖಾನೆಗಳು ವೃತ್ತಿಪರ ರಾಜಕಾರಣಿಗಳ ಕಪಿ ಮುಷ್ಟಿಯಲ್ಲಿವೆ. ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳಿಗೆ ಸೇರಿದ ರಾಜಕಾರಣಿಗಳು ಸಕ್ಕರೆ ಕಾರ್ಖಾನೆಗಳನ್ನು ಲಾಭದಲ್ಲಿ ನಡೆಸುತ್ತಿದ್ದಾರೆ. ಆದರೆ ಕಬ್ಬು ಬೆಳೆಯುವ ರೈತರಿಗೆ ನಿತ್ಯ ಗೋಳು ತಪ್ಪಿಲ್ಲ. ಸಕ್ಕರೆ ಕಾರ್ಖಾನೆಗಳ ಮಾಲಕತ್ವ ಹೊಂದಿರುವ ರಾಜಕಾರಣಿಗಳಲ್ಲಿ ಸತೀಶ್ ಜಾರಕಿಹೊಳಿ, ಮುರುಗೇಶ್ ನಿರಾಣಿ, ಕತ್ತಿ ಫ್ಯಾಮಿಲಿ, ಪ್ರಭಾಕರ್ ಕೋರೆ, ಎಸ್.ಆರ್. ಪಾಟೀಲ್, ಶಾಮನೂರು ಶಿವಶಂಕರಪ್ಪ, ಈಶ್ವರ್ ಖಂಡ್ರೆ, ಲಕ್ಷ್ಮಣ್ ಸವದಿ, ಶ್ರೀಮಂತ ಪಾಟೀಲ್, ಬಸನಗೌಡ ಪಾಟೀಲ್ ಯತ್ನಾಳ್, ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಯಶವಂತರಾಯ ಗೌಡ ಪಾಟೀಲ್ ಪ್ರಮುಖರು. ಪ್ರತಿಶತ 90ರಷ್ಟು ಸಕ್ಕರೆ ಕಾರ್ಖಾನೆಗಳಿಗೆ ರಾಜಕಾರಣಿಗಳೇ ಮಾಲಕರು. ರಾಜಕಾರಣಿಗಳು ನಡೆಸುತ್ತಿರುವ ಎಲ್ಲ ಸಕ್ಕರೆ ಕಾರ್ಖಾನೆಗಳು ಲಾಭದಲ್ಲಿವೆ.

ಕೇಂದ್ರ ಸರಕಾರ ಸಕ್ಕರೆಯ ಕನಿಷ್ಠ ಮಾರಾಟ ದರ ಪರಿಷ್ಕರಣೆ ಮಾಡಿಲ್ಲ ಎಂಬ ನೆಪ ಮುಂದು ಮಾಡಿ ಸಕ್ಕರೆ ಕಾರ್ಖಾನೆ ಮಾಲಕರು ಕಬ್ಬಿನ ದರ ಹೆಚ್ಚಿಸಲು ನಿರಾಕರಿಸುತ್ತಿದ್ದಾರೆ. ಕೇಂದ್ರ ಸರಕಾರ ಸಕ್ಕರೆಯ ಕನಿಷ್ಠ ಮಾರಾಟ ದರವನ್ನು ಪ್ರತೀ ಕೆ.ಜಿ.ಗೆ ರೂ. 31 ನಿಗದಿಪಡಿಸಿದೆ. ದುರಂತವೆಂದರೆ, ಚಿಲ್ಲರೆ ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆ ಪ್ರತೀ ಕೆ.ಜಿ.ಗೆ ರೂ. 65ರಷ್ಟಿದೆ. ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆ ನಿಯಂತ್ರಿಸಲು ಸರಕಾರದಿಂದಲೂ ಸಾಧ್ಯವಾಗಿಲ್ಲ. ಹಬ್ಬ-ಹರಿದಿನಗಳಲ್ಲಿ, ಸಕ್ಕರೆಯ ಕೃತಕ ಅಭಾವ ಸೃಷ್ಟಿಯಾದಾಗ ಬೆಲೆ ಮತ್ತಷ್ಟು ದುಬಾರಿಯಾಗುತ್ತದೆ. ಸಕ್ಕರೆ ಕಾರ್ಖಾನೆಗಳ ಮಾಲಕರು ಕೇವಲ ಸಕ್ಕರೆ ಮಾರಾಟವನ್ನು ಮಾತ್ರ ಅವಲಂಬಿಸಿಲ್ಲ. ಕಬ್ಬು ಬೆಳೆಯುವ ರೈತ ಒಮ್ಮೆ ಕಬ್ಬು ಮಾರಾಟ ಮಾಡಿದರೆ ಮುಗಿದು ಹೋಯಿತು. ಮತ್ತೆ ಯಾವ ಲಾಭವನ್ನೂ ನಿರೀಕ್ಷೆ ಮಾಡುವಂತಿಲ್ಲ. ಆದರೆ ಸಕ್ಕರೆ ಕಾರ್ಖಾನೆಗಳ ಮಾಲಕರಿಗೆ ಸಕ್ಕರೆ ಮಾರಾಟದ ಜೊತೆಗೆ ಬೇರೆ ಲಾಭಗಳು ಇವೆ. ಹಾಗಂತ ಕೇಂದ್ರ ನಿಗದಿಪಡಿಸಿರುವ ಸಕ್ಕರೆಯ ಕನಿಷ್ಠ ಮಾರಾಟ ದರ (2019ರಲ್ಲಿ ನಿಗದಿಯಾಗಿದೆ) ವೈಜ್ಞಾನಿಕವಾಗಿದೆ ಎಂದು ಹೇಳಲಾಗದು. ಆದರೆ ಸಕ್ಕರೆ ಕಾರ್ಖಾನೆಗಳ ಮಾಲಕರಿಗೆ ಸಕ್ಕರೆ ಜೊತೆಗೆ ಹೆಚ್ಚುವರಿಯಾಗಿ ಬಗಾಸ್, ಮೊಲೈಸೆಸ್, ಎಥೆನಾಲ್, ಆಲ್ಕೋಹಾಲ್ ಉಪ ಉತ್ಪಾದನೆಗಳಾಗಿ ಲಾಭ ತಂದು ಕೊಡುತ್ತವೆ. ಬಗಾಸ್ ಬಳಸಿ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ. ಮೊಲೈಸೆಸ್ ಬಳಸಿ ಎಥೆನಾಲ್ ಉತ್ಪಾದನೆ ಮಾಡಲಾಗುತ್ತದೆ. ಎಥೆನಾಲ್‌ನ್ನು ಪೆಟ್ರೋಲ್‌ನೊಂದಿಗೆ ಬೆರೆಸಿ ಮಾರಾಟ ಮಾಡುತ್ತಾರೆ. ಮೊಲೈಸೆಸ್ ಬಳಸಿ ಸ್ಪಿರಿಟ್ ತಯಾರಿಸಲಾಗುತ್ತದೆ. ಅದು ಆಲ್ಕೋಹಾಲ್ ಉತ್ಪಾದನೆಯಲ್ಲಿ ಬಳಕೆಗೆ ಬರುತ್ತದೆ. ಅಷ್ಟು ಮಾತ್ರವಲ್ಲ, ಮೊಲೈಸೆಸ್ ಮೂಲಕ ಈಸ್ಟ್ ಮತ್ತು ಇನ್ನಿತರ ರಾಸಾಯನಿಕ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುತ್ತಾರೆ. ಸಕ್ಕರೆ ತಯಾರಿಸಿದ ಮೇಲೆ ಉಳಿಯುವ ಉಪ ಉತ್ಪಾದನೆ ಬಹು ಉಪಯೋಗಿ ಲಾಭ ತಂದು ಕೊಡುವ ವಸ್ತುವಾಗಿದೆ. ಉಪ ಉತ್ಪಾದನೆಯಲ್ಲಿ ಬರುವ ಲಾಭ ನೂರಕ್ಕೆ ನೂರು ಕಾರ್ಖಾನೆಗಳ ಮಾಲಕರಿಗೆ ಸೇರುತ್ತದೆ.

ಒಂದು ಅಂದಾಜಿನ ಪ್ರಕಾರ ಕರ್ನಾಟಕದಲ್ಲಿ ಸಕ್ಕರೆ ಕಾರ್ಖಾನೆಗಳಿಂದ ವಾರ್ಷಿಕ 225 ಕೋಟಿ ಲೀಟರ್ ಎಥೆನಾಲ್ ಉತ್ಪಾದನೆಯಾಗುತ್ತದೆ. ಇನ್ನೂ ಸ್ಪಿರಿಟ್, ವಿದ್ಯುತ್ ಮತ್ತು ಇನ್ನಿತರ ರಾಸಾಯನಿಕಗಳಿಂದ ಬರುವ ಲಾಭದ ಲೆಕ್ಕ ಮಾಲಕರಿಗೆ ಗೊತ್ತು.

ರಾಜ್ಯದ ಕಬ್ಬು ಬೆಳೆಗಾರರು ಕಳೆದ ಮೂರ್ನಾಲ್ಕು ತಿಂಗಳಿನಿಂದ ಸಕ್ಕರೆಯ ಕನಿಷ್ಠ ಮಾರಾಟ ದರ ಹೆಚ್ಚಿಸಲು ಕೇಂದ್ರ ಸರಕಾರಕ್ಕೆ, ಕಬ್ಬಿನ ಬೆಲೆ ಹೆಚ್ಚಿಸಲು ಕಾರ್ಖಾನೆ ಮಾಲಕರಿಗೆ, ಕಬ್ಬಿನ ಬೆಂಬಲ ಬೆಲೆ ನೀಡಲು ರಾಜ್ಯ ಸರಕಾರಕ್ಕೆ ಮನವಿ ಮಾಡುತ್ತಲೇ ಇದ್ದಾರೆ. ಕಬ್ಬು ಬೆಳೆಗಾರರ ಮನವಿಗೆ ಯಾರೂ ಸ್ಪಂದಿಸದೆ ಇದ್ದಾಗ ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಲಕ್ಷ ಲಕ್ಷ ಕಬ್ಬು ಬೆಳೆಗಾರರು ರಸ್ತೆಯಲ್ಲೇ ವಾಸ್ತವ್ಯ ಹೂಡಿ ತಮ್ಮ ಹಕ್ಕುಗಳಿಗಾಗಿ ನಿರಂತರ ಚಳವಳಿ ನಡೆಸುತ್ತಿದ್ದಾರೆ. ರೈತ ಮುಖಂಡರಾದ ಚೂನಪ್ಪ ಪೂಜೇರಿ, ಶಶಿಕಾಂತ್ ಗುರೂಜಿ, ಚುಕ್ಕಿ ನಂಜುಂಡ ಸ್ವಾಮಿ ಮುಂತಾದವರು ಇಲ್ಲಿಯವರೆಗೆ ಕಬ್ಬು ಬೆಳೆಗಾರರ ಹೋರಾಟವನ್ನು ಪಕ್ಷಾತೀತವಾಗಿ ಮತ್ತು ಶಾಂತಿಯುತವಾಗಿ ಮುನ್ನಡೆಸುತ್ತಿದ್ದಾರೆ.

ಕಬ್ಬು ಬೆಳೆಗಾರರು ಪ್ರತೀ ಟನ್‌ಗೆ ರೂ.5,500 ನೀಡುವಂತೆ ಬೇಡಿಕೆ ಇಟ್ಟು ಹೋರಾಟ ಮಾಡುತ್ತಿದ್ದಾರೆ. ಸಕ್ಕರೆ ಕಾರ್ಖಾನೆಯ ಮಾಲಕರೂ ಆಗಿರುವ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿಯವರು ರೂ. 3,600 ಪ್ರತೀ ಟನ್‌ಗೆ ಕೊಡಿಸುವುದಾಗಿ ಕಾರ್ಖಾನೆ ಮಾಲಕರ ಪರವಾಗಿ ಹೇಳಿಕೆ ನೀಡಿದ್ದಾರೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ದಿನಗಟ್ಟಲೆ ಸಭೆ ಮಾಡಿಯೂ ಕಬ್ಬು ಬೆಳೆಗಾರರಿಗೆ ಸಮಾಧಾನವಾಗುವ ನಿರ್ಧಾರ ಕೈಗೊಳ್ಳಲು ಸಾಧ್ಯವಾಗಿಲ್ಲ. ಸಕ್ಕರೆಯ ಕನಿಷ್ಠ ಮಾರಾಟ ದರ ಹೆಚ್ಚಿಸಲು ಪ್ರಧಾನಮಂತ್ರಿಗಳಿಗೆ ಪತ್ರ ಬರೆದು ಮನವಿ ಮಾಡಿ ಕೈ ತೊಳೆದುಕೊಂಡಿದ್ದಾರೆ. ಅಷ್ಟು ಮಾತ್ರವಲ್ಲ ಸರಕಾರಿ ಖಜಾನೆ ಖಾಲಿಯಾಗಿದೆ, ಬಸ್‌ಗಳಿಗೆ ಡೀಸೆಲ್ ಹಾಕಲು ಹಣವಿಲ್ಲ, ಕಬ್ಬಿಗೆ ಬೆಂಬಲ ಬೆಲೆ ನೀಡಲು ಸಾಧ್ಯವಿಲ್ಲ ಎಂದು ಕೈ ಎತ್ತಿದ್ದಾರೆ.

ಕಬ್ಬು ಕಟಾವಿಗೆ ಬಂದು ಹಲವು ದಿನಗಳೇ ಕಳೆದಿವೆ. ಈ ಬಾರಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಿಲ್ಲ. ಕೇಂದ್ರ ಮತ್ತು ರಾಜ್ಯ ಸರಕಾರದಲ್ಲಿ ಜವಾಬ್ದಾರಿ ಸ್ಥಾನದಲ್ಲಿ ಇರುವವರು ಕಬ್ಬು ಬೆಳೆಗಾರರಿಗೆ ಅತ್ಯುತ್ತಮ ಪರಿಹಾರ ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರಧಾನಮಂತ್ರಿ ನರೇಂದ್ರ ಮೋದಿಯರೊಂದಿಗೆ ಚರ್ಚಿಸಿ ಸಕ್ಕರೆಯ ಕನಿಷ್ಠ ಮಾರಾಟ ದರ ಹೆಚ್ಚಿಸಲು ಮುಂದಾಗಬೇಕು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಖಜಾನೆ ಖಾಲಿಯಾಗಿದೆ ಎಂದು ಹೇಳಿ ನುಣುಚಿಕೊಳ್ಳಲು ಯತ್ನಿಸಬಾರದು. ಸಕ್ಕರೆ ಕಾರ್ಖಾನೆಗಳ ಮಾಲಕರು ಎಷ್ಟು ಲಾಭ ಮಾಡಿಕೊಳ್ಳುತ್ತಿದ್ದಾರೆ ಎಂಬುದನ್ನು ಮನವರಿಕೆ ಮಾಡಿಕೊಟ್ಟು, ಆ ಲಾಭದಲ್ಲಿ ಕಬ್ಬು ಬೆಳೆಗಾರರಿಗೆ ನೀಡಲು ಬುದ್ಧಿ ಹೇಳಬೇಕು.

ಕಬ್ಬು ಬೆಳೆಗಾರರಿಗೆ ಕಾರ್ಖಾನೆಗಳ ಮಾಲಕರಿಂದ ತೂಕದಲ್ಲಿ ಮೋಸ ಆಗುತ್ತಿದೆ ಎಂಬ ಆರೋಪದಲ್ಲಿ ಸತ್ಯವಿದೆ. ಎಲ್ಲ ಲಾಭ ಸಕ್ಕರೆ ಕಾರ್ಖಾನೆಗಳ ಮಾಲಕರಿಗೆ ಸೇರಬೇಕು ಎಂಬುದು ನ್ಯಾಯೋಚಿತ ನಿಲುವು ಎನಿಸಿಕೊಳ್ಳಲಾರದು. ಬಹುರಾಷ್ಟ್ರೀಯ ಕಂಪೆನಿಗಳು ಉತ್ಪಾದಿಸುವ ಗ್ರಾಹಕ ವಸ್ತುಗಳ ಬೆಲೆ ನಿಗದಿಯನ್ನು ಯಾರು ಮಾಡುತ್ತಾರೆ? ಉತ್ಪಾದನೆ ವೆಚ್ಚ, ತನ್ನ ಲಾಭ ಮತ್ತು ಪ್ರಚಾರಕ್ಕಾಗಿ ಖರ್ಚು ಮಾಡಿದ್ದನ್ನು ಸೇರಿಸಿ ಬೆಲೆ ನಿಗದಿಪಡಿಸುತ್ತಾರೆ. ಆದರೆ ರೈತ ಬೆಳೆದ ಬೆಳೆಗಳಿಗೆ ಬೆಲೆ ನಿರ್ಧರಿಸುವ ಅಧಿಕಾರ ಮಾತ್ರ ರೈತ ಸಮುದಾಯಕ್ಕೆ ಇಲ್ಲ. ರೈತರ ಶ್ರಮ ಹೊರತು ಪಡಿಸಿ ಎಲ್ಲರೂ ಲಾಭ ಮಾಡಿಕೊಳ್ಳುತ್ತಾರೆ. ಕಬ್ಬು ಬೆಳೆಯುವ ರೈತ ಹಗಲಿರುಳು ದುಡಿದರೂ ಶ್ರಮಕ್ಕೆ ತಕ್ಕ ಬೆಲೆ ನೀಡಲು ಕಾರ್ಖಾನೆ ಮಾಲಕರು ಸತಾಯಿಸುತ್ತಾರೆ. ಆದರೆ ಕಬ್ಬು ಬೆಳಗಾರರಿಂದ ಗೊಬ್ಬರದ ಅಂಗಡಿ ಮಾಲಕರು ತಾವು ನಿಗದಿಪಡಿಸಿದ ಬೆಲೆಯ ಮೊತ್ತ ವಸೂಲಿ ಮಾಡುತ್ತಾರೆ. ರೈತರು ಬೆಳೆದ ಬೆಳೆಗೆ ಎರಡು ಪಟ್ಟು ಲಾಭ ಬರುವ ಹಾಗೆ ಮಾಡುತ್ತೇವೆ ಎಂದು ಮೋದಿ ಅಮಿತ್ ಶಾ ಜೋಡಿ ಕಳೆದ ಮೂರು ಚುನಾವಣೆಗಳಲ್ಲಿ ಭರವಸೆ ನೀಡುತ್ತಲೇ ಇದ್ದಾರೆ. ಆದರೆ ರೈತರಿಗೆ ಮಾತ್ರ ಲಾಭ ಗಗನಕುಸುಮವಾಗಿದೆ.

ಕಬ್ಬು ಬೆಳೆಗಾರರು ಹೋರಾಟ ತೀವ್ರಗೊಳಿಸಿ ಬಿಗಿಪಟ್ಟು ಹಿಡಿದಾಗ ಸಕ್ಕರೆ ಕಾರ್ಖಾನೆಗಳ ಮಾಲಕರು ಪ್ರತೀ ಬಾರಿ ಬ್ಲ್ಯಾಕ್‌ಮೇಲ್ ತಂತ್ರ ಅನುಸರಿಸುತ್ತಿರುತ್ತಾರೆ. ನಮ್ಮಿಂದ ಕಾರ್ಖಾನೆಗಳನ್ನು ನಡೆಸಲು ಆಗುವುದಿಲ್ಲ. ಬೇಕಾದರೆ ಸರಕಾರವೇ ನಡೆಸಲಿ ಎಂದು ಧಮಕಿ ಹಾಕುತ್ತಾರೆ. ಯಾರೊಬ್ಬರೂ ಸಕ್ಕರೆ ಕಾರ್ಖಾನೆಗಳನ್ನು ನಷ್ಟದಲ್ಲಿ ನಡೆಸುತ್ತಿಲ್ಲ. ಹೆಚ್ಚಿನ ಲಾಭಕ್ಕಾಗಿ ದುರಾಸೆ ಇಟ್ಟುಕೊಂಡಿದ್ದಾರೆ. ಒಂದು ವೇಳೆ ರೈತರು ಕಬ್ಬು ಬೆಳೆಯುವುದನ್ನೇ ನಿಲ್ಲಿಸಿದರೆ ಆಗ ಸಕ್ಕರೆ ಕಾರ್ಖಾನೆಗಳು ಹೇಗೆ ಲಾಭ ಮಾಡಿಕೊಳ್ಳುತ್ತವೆ? ಕಬ್ಬು ಸಾಂಪ್ರದಾಯಿಕ ವಾಣಿಜ್ಯ ಬೆಳೆ. ವಾಣಿಜ್ಯ ಬೆಳೆಗಳು ಇನ್ನೂ ಸಾಕಷ್ಟಿವೆ. ರೈತರು ಮನಸ್ಸು ಬದಲಾಯಿಸಿ ಧೈರ್ಯ ಮಾಡಿ ಪರ್ಯಾಯ ವಾಣಿಜ್ಯ ಬೆಳೆಗಳತ್ತ ಮುಖ ಮಾಡಿದರೆ ಸಕ್ಕರೆ ಕಾರ್ಖಾನೆಗಳು ಮುಚ್ಚಬೇಕಾಗುತ್ತದೆ. ಕೇಂದ್ರ ಸರಕಾರದ ಸಕ್ಕರೆ ನೀತಿ ಸಕ್ಕರೆ ಕಾರ್ಖಾನೆಗಳಿಗೆ ಅನುಕೂಲಕರವಾಗಿಲ್ಲವೆಂದರೆ ಕೇಂದ್ರದ ವಿರುದ್ಧ ಹೋರಾಡಲಿ. ಅದು ಬಿಟ್ಟು ಕೇಂದ್ರದತ್ತ ಬೆರಳು ತೋರಿಸಿ ಕಬ್ಬು ಬೆಳೆಗಾರರ ಕತ್ತು ಕುಯ್ಯುವುದು ಎಷ್ಟು ಸರಿ? ಕಬ್ಬು ಬೆಳೆಯುವ ರೈತರು, ಕಾರ್ಖಾನೆಗಳಲ್ಲಿ ದುಡಿಯುವ ಕಾರ್ಮಿಕರು ಶ್ರಮ ಹಾಕಿದ್ದರಿಂದಲೇ ಕಾರ್ಖಾನೆ ಮಾಲಕರು ಹಣ ಮಾಡಲು ಸಾಧ್ಯವಾಗಿದ್ದು. ಕೇಂದ್ರ ಸರಕಾರದ ವಿರುದ್ಧ, ರಾಜ್ಯ ಸರಕಾರದ ವಿರುದ್ಧ ಹಾಗೂ ಕಾರ್ಖಾನೆಗಳ ಮಾಲಕರ ಸ್ವಾರ್ಥದ ವಿರುದ್ಧ ಕಬ್ಬು ಬೆಳೆಗಾರರು ಹೋರಾಡುತ್ತಿದ್ದಾರೆ. ಲಾಭ ಮಾತ್ರ ಕೇಂದ್ರ-ರಾಜ್ಯ ಮತ್ತು ಕಾರ್ಖಾನೆಗಳ ಮಾಲಕರ ಪಾಲಾಗುತ್ತಿದೆ. ಅಂತಿಮವಾಗಿ ಸಕ್ಕರೆಯ ಸವಿಗೆ ಹಾತೊರೆಯುವ ಗ್ರಾಹಕನು ದುಬಾರಿ ಬೆಲೆಯ ಸಕ್ಕರೆ ಖರೀದಿಸಬೇಕಾಗುತ್ತದೆ. ಕಬ್ಬು ಬೆಳೆಗಾರರ ಆಕ್ರೋಶ ಭುಗಿಲೆದ್ದರೆ ಯಾವ ಸರಕಾರಗಳು ಉಳಿಯುವುದಿಲ್ಲ. ಸರಕಾರಗಳು ಮತ್ತು ಸಕ್ಕರೆ ಕಾರ್ಖಾನೆಗಳ ಮಾಲಕರು ಎಚ್ಚೆತ್ತುಕೊಳ್ಳಬೇಕು

(ಅಂಕಣಕಾರರು ಹಿರಿಯ ಲೇಖಕರು, ಪತ್ರಕರ್ತರು)

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಡಾ. ರಾಜಶೇಖರ ಹತಗುಂದಿ

contributor