ಪ್ರಶ್ನೆ ಪತ್ರಿಕೆ ಸೋರಿಕೆ: ಬಹುಕೋಟಿ ಹಗರಣ
ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆ ಒಂದು ಝಲಕ್ ಅಷ್ಟೇ. ಭಾರತದ ಯುವ ಸಮುದಾಯ ಪರೀಕ್ಷಾ ವ್ಯವಸ್ಥೆ, ನಿರುದ್ಯೋಗ ಸಮಸ್ಯೆ ಮತ್ತು ಸರಕಾರಿ ಆಡಳಿತ ಯಂತ್ರದ ಬಗ್ಗೆಯೇ ಅಪಾರ ಅಸಮಾಧಾನ ಹೊಂದಿದೆ. ಕಾಕ್ರೋಚ್ ಜನತಾ ಪಾರ್ಟಿ ಒಂದು ವೇದಿಕೆ ಒದಗಿಸಿದ್ದರಿಂದ ಸಣ್ಣ ಪ್ರಮಾಣದ ಆಕ್ರೋಶ ಹೊರಬಂದಿದೆ. ಭಾರತದ ಯುವ ಸಮುದಾಯದ ಒಟ್ಟು ಆಕ್ರೋಶ ಸ್ಫೋಟಿಸುವ ಮುನ್ನ ಕೇಂದ್ರ ಸರಕಾರ ಎಚ್ಚೆತ್ತು ಕೊಳ್ಳಬೇಕು. ಮಂದಿರ-ಮಸೀದಿ, ಹಿಂದೂ-ಮುಸ್ಲಿಮ್ ರಾಜಕಾರಣ ಬಿಟ್ಟು ಯುವ ಸಮುದಾಯದ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸಬೇಕಿದೆ. ಮೋದಿ-ಅಮಿತ್ ಶಾ ಜೋಡಿ ಭಾರತವನ್ನು, ಭಾರತದ ಯುವ ಸಮುದಾಯವನ್ನು ಹೆಚ್ಚು ಕಾಲ ಮೂರ್ಖರನ್ನಾಗಿಸಲು ಸಾಧ್ಯವಿಲ್ಲ.
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಈ ವರ್ಷ ಭಾರೀ ಸದ್ದು ಮಾಡಿತು. ಯುವಜನರ ಹೆಪ್ಪುಗಟ್ಟಿದ ಆಕ್ರೋಶ ಜಂತರ್ ಮಂತರ್ ಪ್ರತಿಭಟನಾ ವೇದಿಕೆಯಲ್ಲಿ ಬಹಿರಂಗವಾಗಿಯೇ ವ್ಯಕ್ತವಾಯಿತು. ಸಾಮಾಜಿಕ ಜಾಲತಾಣಗಳಲ್ಲಿ ಯುವ ಸಮುದಾಯ ಮೋದಿ ನೇತೃತ್ವದ ಕೇಂದ್ರ ಸರಕಾರದ ವಿರುದ್ಧ ರಣ ಕಹಳೆಯೇ ಮೊಳಗಿಸಿತು.
ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದು ಹನ್ನೆರಡು ವರ್ಷ ಕಳೆದರೂ ಒಬ್ಬ ಮಂತ್ರಿಯೂ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿರಲಿಲ್ಲ. ಕಳೆದ ಹನ್ನೆರಡು ವರ್ಷಗಳಲ್ಲಿ ಕೇಂದ್ರ ಸರಕಾರದ ಮಂತ್ರಿಗಳ ವಿರುದ್ಧ ಹಲವು ಬಾರಿ ಆರೋಪಗಳು ಕೇಳಿ ಬಂದಿದ್ದವು. ಮಂತ್ರಿಗಳ ರಾಜೀನಾಮೆಗೆ ಒತ್ತಾಯಿಸಲಾಗಿತ್ತು. ರೋಹಿತ್ ವೇಮುಲಾ ಪ್ರಕರಣದಲ್ಲಿ ಆಗಿನ ಶಿಕ್ಷಣ ಮಂತ್ರಿ ಸ್ಮತಿ ಇರಾನಿಯವರ ಸಚಿವ ಖಾತೆ ಬದಲಾಯಿಸಲಾಗಿತ್ತು. ಶಿಕ್ಷಣ ಖಾತೆ ನಿರ್ವಹಿಸುತ್ತಿದ್ದ ಸ್ಮತಿ ಇರಾನಿಯವರನ್ನು ಜವಳಿ ಖಾತೆಗೆ ಬದಲಾಯಿಸಲಾಗಿತ್ತು. ಸಚಿವ ಪದವಿಗೆ ರಾಜೀನಾಮೆ ನೀಡಿದ್ದು, ಧರ್ಮೇಂದ್ರ ಪ್ರಧಾನ್ ಮೊದಲಿಗರು. ಹಾಗೆ ನೋಡಿದರೆ 2024ರ ನೀಟ್ ಪರೀಕ್ಷೆಯಲ್ಲೂ ಪ್ರಶ್ನೆ ಪತ್ರಿಕೆ ಲೀಕ್ ಆಗಿತ್ತು. ಅಲ್ಲಲ್ಲಿ ಸ್ಥಳೀಯವಾಗಿ ಪ್ರತಿಭಟನೆಗಳು ನಡೆದಿದ್ದವು. ಆದರೆ ದೇಶಾದ್ಯಂತ ಸುದ್ದಿಯಾಗಿರಲಿಲ್ಲ. ಆಗ ಒಂದು ಲಕ್ಷ ಎಂಬಿಬಿಎಸ್ ಸೀಟುಗಳಿಗೆ ನೀಟ್ ಪ್ರವೇಶ ಪರೀಕ್ಷೆ ನಡೆದಿತ್ತು. ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯ ಸಿಬ್ಬಂದಿ ಮತ್ತು ಭ್ರಷ್ಟರ ಪಡೆ ಭಂಡತನದ ಪರಾಕಾಷ್ಠೆ ತಲುಪಿತ್ತು. ತನ್ನ ಭ್ರಷ್ಟಾಚಾರದ ಜಾಲವನ್ನು ಯಾರೂ ಭೇದಿಸಲಾರರು ಎಂದೇ ಭಾವಿಸಿತ್ತು. ಪ್ರಶ್ನೆ ಪತ್ರಿಕೆ ಸೋರಿಕೆಯ ಸುದ್ದಿ ಬಹಿರಂಗವಾದಾಗ ಸಾರ್ವಜನಿಕ ವಲಯದಲ್ಲಿ ಸಂಚಲನ ಸೃಷ್ಟಿಯಾಗುತ್ತದೆ. ಆದರೆ ಎಷ್ಟೋ ಬಾರಿ ಪ್ರಶ್ನೆ ಪತ್ರಿಕೆ ಸೋರಿಕೆ ಸುದ್ದಿ ಬಹಿರಂಗವಾಗದಂತೆ ನಿಗಾ ವಹಿಸಿರುತ್ತಾರೆ. ಆಗ ಯಾರಿಗೂ ಗೊತ್ತಾಗುವುದಿಲ್ಲ. ಪ್ರಶ್ನೆ ಪತ್ರಿಕೆ ಲೀಕ್ ಮಾಡುವುದು ಮತ್ತು ಆ ಮೂಲಕ ಪ್ರತೀ ವರ್ಷ ಸಾವಿರಾರು ಕೋಟಿ ಹಣ ಮಾಡುವುದು ಹಲವು ವರ್ಷಗಳಿಂದ ನಡೆಯುತ್ತಲೇ ಬಂದಿದೆ. ಪರೀಕ್ಷಾ ಅಕ್ರಮ ತಡೆ ಕಾಯ್ದೆ 2024ರಿಂದಲೇ ದೇಶದಲ್ಲಿ ಜಾರಿಯಿದೆ. ಆ ಕಾನೂನು ಅಸ್ತಿತ್ವದಲ್ಲಿ ಇದ್ದಾಗಲೂ 2026ರ ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆಯೆಂದರೆ, ಭ್ರಷ್ಟರಿಗೆ ಕಾಯ್ದೆ ಕಾನೂನಿನ ಭಯ ಇಲ್ಲ ಎಂಬುದು ಮನದಟ್ಟಾಗುತ್ತದೆ.
ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣ ಮುಂದಿಟ್ಟುಕೊಂಡು ಪರಸ್ಪರ ಆರೋಪ ಪ್ರತ್ಯಾರೋಪದಲ್ಲಿ ನಿರತವಾಗಿವೆ. ಭ್ರಷ್ಟಾಚಾರದಲ್ಲಿ ಭಾಗಿಯಾದವರು ಮುಸಿ ಮುಸಿ ನಗುತ್ತಿರುತ್ತಾರೆ. ‘‘ನಾನು ತಿನ್ನುವುದಿಲ್ಲ ಬೇರೆಯವರಿಗೂ ತಿನ್ನಲು ಬಿಡುವುದಿಲ್ಲ’’ ಎಂದು ಘಂಟಾಘೋಷವಾಗಿ ಹೇಳಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕಳೆದ ಹನ್ನೆರಡು ವರ್ಷಗಳ ಅಧಿಕಾರಾವಧಿಯಲ್ಲಿ ಪ್ರತೀ ವರ್ಷ ಒಂದಲ್ಲ ಒಂದು ಪ್ರಶ್ನೆ ಪತ್ರಿಕೆ ಸೋರಿಕೆಯಾದ ಪ್ರಕರಣಗಳು ಸುದ್ದಿಯಾಗಿವೆ. ಯುಪಿಎ ಸರಕಾರ ಇದ್ದಾಗ ಕಾಂಗ್ರೆಸ್ ಮುಖಂಡರ ಕೃಪೆಯಲ್ಲಿ ಪ್ರಶ್ನೆ ಪತ್ರಿಕೆ ಲೀಕ್ ಆಗುತ್ತಿತ್ತು. ಬಿಜೆಪಿ ಸರಕಾರ ಬಂದ ಮೇಲೆ ಪಾತ್ರಗಳು ಬದಲಾಗಿವೆ. ಇಲ್ಲಿಯವರೆಗೆ ಭಾರತದಲ್ಲಿ 150ಕ್ಕೂ ಹೆಚ್ಚು ಬಾರಿ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಪ್ರಕರಣಗಳು ಬೆಳಕಿಗೆ ಬಂದಿವೆ. ಬೆಳಕಿಗೆ ಬಾರದ ಅದೆಷ್ಟೋ ಪ್ರಕರಣಗಳು ಕಾಲಗರ್ಭದಲ್ಲಿ ಹೂತುಹೋಗಿವೆ.
ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳು ಕೇಂದ್ರ ಮತ್ತು ರಾಜ್ಯ ಸರಕಾರದ ವ್ಯಾಪ್ತಿಯ ಹಲವು ಸಂಸ್ಥೆಗಳು ನಡೆಸಿವೆ. ಒಂದು ಕಾಲದಲ್ಲಿ ಕೇಂದ್ರ ಸರಕಾರದ ವ್ಯಾಪ್ತಿಯ ಸಂಸ್ಥೆಗಳು ನಡೆಸುವ ಪ್ರವೇಶ ಪರೀಕ್ಷೆಗಳನ್ನು ಶ್ರೇಷ್ಠ ಮತ್ತು ಪಾರದರ್ಶಕ ಎಂದು ಭಾವಿಸಲಾಗಿತ್ತು. ಈಗ ಆ ನಂಬಿಕೆ ಹುಸಿಯಾಗಿದೆ. ರಾಜ್ಯ ಸರಕಾರಗಳು ನಡೆಸುವ ಪ್ರವೇಶ ಪರೀಕ್ಷೆಗಿಂತಲೂ ಹೆಚ್ಚು ಕೇಂದ್ರ ಸರಕಾರದ ಸಂಸ್ಥೆಗಳ ಪರೀಕ್ಷೆಗಳು ಭ್ರಷ್ಟಗೊಂಡಿವೆ. ಅಖಿಲ ಭಾರತ ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆ ಸೇರಿದಂತೆ ಬಹುತೇಕ ಎಲ್ಲ ಪ್ರವೇಶ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಲೀಕ್ ಆದ ಪ್ರಕರಣಗಳು ಬೆಳಕಿಗೆ ಬಂದಿವೆ. ಆದರೆ ಭ್ರಷ್ಟಾಚಾರದಲ್ಲಿ ಶಾಮೀಲಾಗಿರುವ ಯಾರೊಬ್ಬರಿಗೂ ಕಠಿಣ ಶಿಕ್ಷೆಯಾದ ನಿದರ್ಶನಗಳಿಲ್ಲ.
ಎಪ್ರಿಲ್ ಹನ್ನೊಂದು 2004ರಲ್ಲಿ ಸಿಬಿಎಸ್‌ಇ ನಡೆಸಿದ ಆಲ್ ಇಂಡಿಯಾ ಪ್ರಿ ಮೆಡಿಕಲ್ ಟೆಸ್ಟ್ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಪ್ರಕರಣ ಅಧಿಕೃತವಾಗಿ ಬೆಳಕಿಗೆ ಬಂತು. ಪ್ರವೇಶ ಪರೀಕ್ಷೆ ನಡೆಯುವ ಹದಿನಾಲ್ಕು ತಾಸುಗಳ ಮುಂಚೆ ಭೌತಶಾಸ್ತ್ರ ಮತ್ತು ರಸಾಯನ ಶಾಸ್ತ್ರ ಪ್ರವೇಶ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾದ ಪ್ರಕರಣ ಹೊರ ಬಂತು. ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್‌ಇ)ಪ್ರಕರಣ ಹೊರ ಬರುತ್ತಿದ್ದಂತೆ ತೇಪೆ ಹಚ್ಚುವ ಕೆಲಸ ಮಾಡಿತೇ ಹೊರತು ಭ್ರಷ್ಟರನ್ನು ಕಠಿಣ ಶಿಕ್ಷೆಗೆ ಗುರಿಪಡಿಸುವ ಗೋಜಿಗೆ ಹೋಗಲಿಲ್ಲ. ಅದಕ್ಕೂ ಮೊದಲು ಕೇಂದ್ರ ಮತ್ತು ರಾಜ್ಯ ಸರಕಾರದ ಹಲವು ಸಂಸ್ಥೆಗಳು ನಡೆಸುವ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸೋರಿಕೆಯಾಗುತ್ತಿದ್ದವು. ಆದರೆ ಬೆಳಕಿಗೆ ಬಂದಿರಲಿಲ್ಲ. ಇಲ್ಲಿಯವರೆಗೆ ಕೇಂದ್ರ ಮತ್ತು ರಾಜ್ಯ ಸರಕಾರ ನೆಡೆಸುವ ನೇಮಕಾತಿ ಪ್ರವೇಶ ಪರೀಕ್ಷೆಗಳು, ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸುವ ಬೋರ್ಡ್ ಪರೀಕ್ಷೆಗಳು, ಇಂಜಿನಿಯರಿಂಗ್ ಮತ್ತು ಮೆಡಿಕಲ್ ವೃತ್ತಿಪರ ಕೋರ್ಸ್‌ಗಳ ಪ್ರವೇಶ ಪರೀಕ್ಷೆಗಳು, ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಗಳು, ಸ್ಟಾಫ್ ಸೆಲೆಕ್ಷನ್ ಕಮಿಷನ್ ನಡೆಸುವ ನೇಮಕಾತಿ ಪ್ರವೇಶ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾದ ಪ್ರಕರಣಗಳು ಬೆಳಕಿಗೆ ಬಂದಿವೆ. ಕೆಲವೊಂದು ಪ್ರಕರಣಗಳನ್ನು ಸಿಬಿಐ ತನಿಖೆ ನಡೆಸಿ ಆರೋಪ ಪಟ್ಟಿ ಸಲ್ಲಿಸಿದೆ. ನ್ಯಾಯಾಲಯದ ವಿಚಾರಣೆ ಹಂತದಲ್ಲೇ ಪ್ರಕರಣಗಳು ಜೋತಾಡುತ್ತಿವೆ. ಭ್ರಷ್ಟರಿಗೆ ಕಠಿಣ ಶಿಕ್ಷೆಯಾಗಿ ಇಂತಹ ಅಪರಾಧದಲ್ಲಿ ಭಾಗಿಯಾಗಲೇಬಾರದು ಎಂಬ ಭಾವನೆಯಂತೂ ಮೂಡಿಸಿಲ್ಲ.
ವಿವಿಧ ಪ್ರವೇಶ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳ ಸೋರಿಕೆ ಪ್ರಕರಣಗಳು ದಿಲ್ಲಿ ಕೇಂದ್ರವಾಗಿರಿಸಿಕೊಂಡು ಉತ್ತರ ಭಾರತದಲ್ಲಿ ಅತಿ ಹೆಚ್ಚು ಘಟಿಸಿವೆ. ಕರ್ನಾಟಕದಲ್ಲೂ ಹಲವು ಬಾರಿ ಪ್ರವೇಶ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಪ್ರಕರಣಗಳು ಬೆಳಕಿಗೆ ಬಂದಿವೆ. 2004ರಿಂದ ಇಲ್ಲಿಯವರೆಗೆ ಹೆಚ್ಚು ಕಡಿಮೆ ಪ್ರತೀ ವರ್ಷ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇರುತ್ತವೆ. ಪ್ರಕರಣ ಬೆಳಕಿಗೆ ಬಂದ ಮೇಲೆ ಮರು ಪರೀಕ್ಷೆ ನಡೆಸಲಾಗುತ್ತದೆ. ಕೆಲವರ ಮೇಲೆ ಎಫ್‌ಐಆರ್ ದಾಖಲಿಸಿ ಮುಂದೆ ಸಾಗುತ್ತಾರೆ. ಯಾವ ಪ್ರಕರಣವೂ ತಾರ್ಕಿಕ ಅಂತ್ಯ ಕಾಣುವುದಿಲ್ಲ. ನಾಲ್ಕು ದಿನ ಸುದ್ದಿಯಾಗುತ್ತದೆ. ರಾಜಕಾರಣಿಗಳು ಆರೋಪ ಪ್ರತ್ಯಾರೋಪ ಮಾಡುತ್ತಾರೆ. ಒಂದು ತನಿಖಾ ಸಂಸ್ಥೆಗೆ ಪ್ರಕರಣವನ್ನು ಒಪ್ಪಿಸಿ ಕೈ ತೊಳೆದುಕೊಳ್ಳುತ್ತಾರೆ. ಅಲ್ಲಿಗೆ ಆ ಪ್ರಕರಣವನ್ನು ಎಲ್ಲರೂ ಮರೆತು ಬಿಡುತ್ತಾರೆ. ಮತ್ತೆ ಹೊಸ ಪ್ರಕರಣ ಬಂದಾಗ ಎಲ್ಲವೂ ಪುನರಾವರ್ತನೆಯಾಗುತ್ತದೆ.
ಜೂನ್, 2006ರಲ್ಲಿ ಹಿಮಾಚಲ ಪ್ರದೇಶದಲ್ಲಿ, ಹಿಮಾಚಲ ವಿಶ್ವವಿದ್ಯಾನಿಲಯ ನಡೆಸಿದ ಮೆಡಿಕಲ್ ಪ್ರವೇಶ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗುತ್ತದೆ. ವಾಡಿಕೆಯಂತೆ ಒಂದಷ್ಟು ದಿನ ಭಾರೀ ಸುದ್ದಿಯಾಗಿ ಹಿನ್ನೆಲೆಗೆ ಸರಿಯುತ್ತದೆ. ಭ್ರಷ್ಟಾಚಾರ ನಡೆಸಿದವರು ರಾಜಾರೋಷವಾಗಿ ಮತ್ತದೇ ದಂಧೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಆಗಸ್ಟ್ 5,2007ರಲ್ಲಿ ಇಂಡಿಯನ್ ಚಾರ್ಟೆಡ್ ಅಕೌಂಟ್ ಇನ್‌ಸ್ಟಿಟ್ಯೂಟ್ ನಡೆಸುವ ಚಾರ್ಟೆಡ್ ಅಕೌಂಟ್ ಸಾಮಾನ್ಯ ಪ್ರವೇಶ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗುತ್ತದೆ. ಯಥಾ ಪ್ರಕಾರ ಕೆಲವರ ಮೇಲೆ ಪ್ರಕರಣ ದಾಖಲೆಯಾಗುತ್ತದೆ. ಸೆಪ್ಟಂಬರ್ 7,2008ರಂದು ಮಧ್ಯಪ್ರದೇಶ ನೇಮಕಾತಿ ಪ್ರವೇಶ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಕೋಲಾಹಲ ಸೃಷ್ಟಿಸುತ್ತದೆ. ಸಚಿವರ ರಾಜೀನಾಮೆಗೆ ಒತ್ತಾಯಿಸಲಾಗುತ್ತದೆ. ಕೆಲವೇ ದಿನಗಳಲ್ಲಿ ಆ ಪ್ರಕರಣವನ್ನು ಜನ ಮರೆತು ಬಿಡುತ್ತಾರೆ. 2008 ಮತ್ತು 2009ರಲ್ಲಿ ರೈಲ್ವೆ ನೇಮಕಾತಿ ಮಂಡಳಿ (ಆರ್‌ಆರ್‌ಬಿ)ನಡೆಸಿದ ನೇಮಕಾತಿ ಪ್ರವೇಶ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗುತ್ತದೆ. ಕೋಟಿ ಕೋಟಿ ಹಣದ ವಹಿವಾಟು ನಡೆದಿರುತ್ತದೆ. ರೈಲ್ವೆ ಮಂತ್ರಿಯ ರಾಜೀನಾಮೆಗೂ ಒತ್ತಾಯಿಸಲಾಗುತ್ತದೆ. ತನಿಖೆಯ ನೆಪದಲ್ಲಿ ಪ್ರಕರಣದ ಸದ್ದು ಅಡಗುತ್ತದೆ.
ಉತ್ತರ ಪ್ರದೇಶ, ಬಿಹಾರ, ಗುಜರಾತ್, ಮಹಾರಾಷ್ಟ್ರ, ಛತ್ತೀಸ್‌ಗಡ, ಮಧ್ಯಪ್ರದೇಶ, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳ ಲೋಕಸೇವಾ ಆಯೋಗಗಳ ನೇಮಕಾತಿ ಹಗರಣ ಬೆಳಕಿಗೆ ಬಂದಾಗ ಭಾರೀ ಕೋಲಾಹಲ ಸೃಷ್ಟಿಯಾಗುತ್ತದೆ. ಕೆಲವರನ್ನು ಜೈಲಿಗೂ ಕಳುಹಿಸುತ್ತಾರೆ. ಒಂದೆರಡು ವರ್ಷ ಕಳೆದ ಮೇಲೆ ಭ್ರಷ್ಟರು ತಲೆ ಎತ್ತಿ ನಡೆಯಲು ಆರಂಭಿಸುತ್ತಾರೆ. ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ ಎಚ್.ಎನ್. ಕೃಷ್ಣ ಜೈಲಿಗೆ ಹೋಗಿ ಬಂದಿದ್ದು ಈಗ ಎಲ್ಲರೂ ಮರೆತಿದ್ದಾರೆ. ಯಾಕೆಂದರೆ, ಈಗ ಹೊಸ ಪ್ರಕರಣ ಬೆಳಕಿಗೆ ಬಂದಿದೆ.
ಪ್ರವೇಶ ಪರೀಕ್ಷೆಗಳ ಸಂಖ್ಯೆ ಹೆಚ್ಚುತ್ತಿದ್ದಂತೆ ಕೋಚಿಂಗ್ ಸೆಂಟರ್‌ಗಳ ಸಂಖ್ಯೆಯೂ ಹೆಚ್ಚುತ್ತದೆ. ಕೋಚಿಂಗ್ ಸೆಂಟರ್‌ಗಳು ಶ್ರೇಷ್ಠ ಎಂದು ಗುರುತಿಸಿಕೊಳ್ಳಲು ಯಶಸ್ವಿಯಾದವರ ಹೆಚ್ಚು ಸಂಖ್ಯೆ ತೋರಿಸುವ ಧಾವಂತದಲ್ಲಿ ಭ್ರಷ್ಟ ಹಾದಿ ಹಿಡಿಯುತ್ತವೆ. ಪ್ರಶ್ನೆ ಪತ್ರಿಕೆ ಸಿದ್ಧಪಡಿಸುವ ಕೇಂದ್ರದ ಸಿಬ್ಬಂದಿಗೆ ಹೆಚ್ಚು ಹಣದ ಆಮಿಷ ತೋರಿಸಲಾಗುತ್ತದೆ. ಕಡಿಮೆ ಸಂಬಳದ ಸರಕಾರಿ ನೌಕರಿಗಿಂತ ದಿಢೀರ್ ಶ್ರೀಮಂತನಾಗುವ ಪೇಪರ್ ಲೀಕ್ ದಂಧೆಗೆ ಆಕರ್ಷಿತರಾಗುತ್ತಾರೆ. ಈಗ ಭಾರತದ ಉದ್ದಗಲಕ್ಕೂ ಪ್ರವೇಶ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಲೀಕ್ ಮಾಡುವ ವ್ಯವಸ್ಥಿತ ಜಾಲವೇ ಕಾರ್ಯ ನಿರ್ವಹಿಸುತ್ತಿದೆ. ಕೇಂದ್ರ ಲೋಕಸೇವಾ ಆಯೋಗದ ಮುಖ್ಯ ಪರೀಕ್ಷೆ ಹೊರತು ಪಡಿಸಿ ಉಳಿದೆಲ್ಲ ಪರೀಕ್ಷೆಗಳನ್ನು ಹಣ ಕೊಟ್ಟು ಮ್ಯಾನೇಜ್ ಮಾಡಬಹುದು ಎಂಬಂತಾಗಿದೆ.
ಬಡವರ ಮಕ್ಕಳು ಕಷ್ಟ ಪಟ್ಟು ಓದುತ್ತಾರೆ. ಶ್ರದ್ಧೆಯಿಂದ ಪರೀಕ್ಷೆ ಬರೆಯುತ್ತಾರೆ. ಹಣ ಉಳ್ಳವರು ಕೋಚಿಂಗ್ ಸೆಂಟರ್‌ನ ಏಜೆಂಟರ ಮೂಲಕ ಪ್ರಶ್ನೆ ಪತ್ರಿಕೆ ಮತ್ತು ಕೀ ಆನ್ಸರ್ ಪಡೆದುಕೊಂಡು ಶ್ರಮ ಇಲ್ಲದೆ ಎಲ್ಲ ಕಡೆ ಯಶಸ್ಸು ತಮ್ಮದಾಗಿಸಿಕೊಳ್ಳುತ್ತಾರೆ.
ಒಎಂಆರ್ ಶೀಟ್ ಪ್ರವೇಶ ಪರೀಕ್ಷೆಯ ಸಾಧನವಾದ ಮೇಲಂತೂ ಅಕ್ರಮ ಎಸಗುವುದು ಸುಲಭವಾಗಿದೆ. ಪ್ರಶ್ನೆ ಪತ್ರಿಕೆ ಮತ್ತು ಕೀ ಅನ್ಸರ್ ಸೋರಿಕೆ ಮಾಡುವುದು ಒಂದು ವಿಧಾನವಾದರೆ, ಒಎಂಆರ್ ಶೀಟ್ ಟ್ಯಾಂಪರ್ ಮಾಡುವುದು ಇನ್ನೊಂದು ವಿಧಾನ. ಪ್ರವೇಶ ಪರೀಕ್ಷೆ ಬರೆಯುವ ವಿದ್ಯಾರ್ಥಿ ತನಗೆ ಗೊತ್ತಿದ್ದಷ್ಟು ಉತ್ತರಿಸಿ, ಉಳಿದ ಪ್ರಶ್ನೆಗಳನ್ನು ಖಾಲಿ ಬಿಡುತ್ತಾನೆ. ಹಣ ಪಡೆದವರು ಒಎಂಆರ್ ಶೀಟ್‌ನ್ನು ಟ್ಯಾಂಪರ್ ಮಾಡಿ ಹೆಚ್ಚು ಅಂಕ ಬರುವಂತೆ ಮಾಡುತ್ತಾರೆ. ಕರ್ನಾಟಕದಲ್ಲಿ 2021ರಲ್ಲಿ ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಒಎಂಆರ್ ಶೀಟ್‌ಗಳನ್ನು ವ್ಯಾಪಕವಾಗಿ ಟ್ಯಾಂಪರ್ ಮಾಡಲಾಗಿತ್ತು. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಈ ದಂಧೆಯಲ್ಲಿ ಪರಿಣಿತಿ ಪಡೆದಿದೆ.
ನ್ಯಾಷನಲ್ ಟೆಸ್ಟಿಂಗ್ ಎಜೆನ್ಸಿ ನಡೆಸುವ ನೀಟ್, ನೆಟ್ ಮತ್ತು ಜೆ.ಆರ್.ಎಫ್. ಪರೀಕ್ಷೆಯ ಫಲಿತಾಂಶಗಳನ್ನು ಅತ್ಯಂತ ಶ್ರೇಷ್ಠ ಮತ್ತು ಪ್ರತಿಷ್ಠೆಯ ಪ್ರತೀಕ ಎಂದು ಭಾವಿಸಲಾಗುತ್ತಿತ್ತು. ನೀಟ್, ನೆಟ್ ಮತ್ತು ಜೆ.ಆರ್.ಎಫ್. ಪರೀಕ್ಷೆಗಳಲ್ಲಿ ಕರ್ನಾಟಕದ ಅದರಲ್ಲೂ ದಕ್ಷಿಣ ಭಾರತದ ಅಭ್ಯರ್ಥಿಗಳು ಕಷ್ಟ ಪಟ್ಟು ಯಶಸ್ಸು ಪಡೆಯು ತ್ತಿದ್ದರು. ಆದರೆ ಉತ್ತರ ಭಾರತದ ಅದರಲ್ಲೂ ದಿಲ್ಲಿ ಸಮೀಪದ ರಾಜ್ಯಗಳ ಸಾಧಾರಣ ವಿದ್ಯಾರ್ಥಿಯೂ ನೆಟ್, ಜೆ.ಆರ್.ಎಫ್ ಪ್ರಮಾಣ ಪತ್ರಗಳನ್ನು ಹೊಂದಿ ಉನ್ನತ ಹುದ್ದೆಗೆ ಹೋಗುತ್ತಿದ್ದರು.
ಮಾರ್ಚ್ 2012ರಲ್ಲಿ ಕರ್ನಾಟಕ ಸರಕಾರದ, ಪದವಿ ಪೂರ್ವ ಶಿಕ್ಷಣ ಇಲಾಖೆ ನಡೆಸುವ ಪಿಯುಸಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿತ್ತು. ಭೌತ ಶಾಸ್ತ್ರ, ಗಣಿತ ಮತ್ತು ಜೀವಶಾಸ್ತ್ರದ ವಿಷಯಗಳ ಪ್ರಶ್ನೆ ಪತ್ರಿಕೆಗಳು ಚಿಕ್ಕಮಗಳೂರು ನಗರದಲ್ಲಿ ಲೀಕ್ ಆದ ಸುದ್ದಿ ಸದ್ದು ಮಾಡಿತು. ಪದವಿ ಪೂರ್ವ ಶಿಕ್ಷಣ ಮಂಡಳಿಯ ಕೆಲವರ ಮೇಲೆ ಪ್ರಕರಣ ದಾಖಲೆಯಾಯಿತೇ ಹೊರತು ನಿಜವಾದ ಅಪರಾಧಿಗಳನ್ನು ಕಠಿಣ ಶಿಕ್ಷೆಗೆ ಗುರಿಪಡಿಸಲಿಲ್ಲ.
ಪ್ರವೇಶ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗುವುದು ಒಂದು ಇಲಾಖೆ, ಒಂದು ರಾಜ್ಯಕ್ಕೆ ಸೀಮಿತವಾಗಿಲ್ಲ. ವೈದ್ಯಕೀಯ, ಆರ್ಮಿ, ನೇವಿ, ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಕಂದಾಯ ಸೇರಿದಂತೆ ಎಲ್ಲ ಕಡೆ ಅಕ್ರಮ ಹಸ್ತ ಚಾಚಿದೆ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳು ಬೆಳಕಿಗೆ ಬಂದಿವೆ.
ಇತ್ತೀಚೆಗೆ ಮಹಾರಾಷ್ಟ್ರ ರಾಜ್ಯದಲ್ಲಿ ಶಿಕ್ಷಕರ ಅರ್ಹತಾ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಯಿತು. ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಇದರ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ. ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳು ಎಲ್ಲ ರಾಜ್ಯಗಳಲ್ಲಿ ಮತ್ತು ಎಲ್ಲ ಪಕ್ಷಗಳ ಸರಕಾರಗಳಲ್ಲಿ ಘಟಿಸಿವೆ. ಕೇಂದ್ರದಲ್ಲಿ ಬಿಜೆಪಿ ಸರಕಾರ ಬಂದ ಮೇಲಂತೂ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳು ಜಾಸ್ತಿಯಾಗಿವೆ. ಪ್ರಶ್ನೆ ಪತ್ರಿಕೆ ಸೋರಿಕೆ ರೋಗ ಇಂದು ನಿನ್ನೆಯದಲ್ಲ. ಇದು ಎರಡು ದಶಕಗಳ ಹಳೆಯ ರೋಗ. ಉತ್ತರ ಭಾರತದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳು ಸರಕಾರಗಳ ಅಸ್ತಿತ್ವಕ್ಕೆ ಕುತ್ತು ತಂದಿವೆ. ಬಿಜೆಪಿ ನಾಯಕರಂತೂ ಹಲವು ರಾಜ್ಯಗಳಲ್ಲಿ ಪೇಪರ್ ಲೀಕ್ ಪ್ರಕರಣಗಳನ್ನು ಮುಂದು ಮಾಡಿ ಅಧಿಕಾರ ಗಿಟ್ಟಿಸಿಕೊಂಡಿದ್ದಾರೆ. ಕರ್ನಾಟಕ ಲೋಕಸೇವಾ ಆಯೋಗದ ಪದಚ್ಯುತಿ ಹೊಂದಿದ ಅಧ್ಯಕ್ಷರ ಹಗರಣಗಳು ಒಂದೊಂದಾಗಿ ಬಯಲಿಗೆ ಬರುತ್ತಿವೆ. ಕೋಟಿ ಕೋಟಿ ಹಣ ಪಡೆದುಕೊಂಡು ಆ ವ್ಯಕ್ತಿಯನ್ನು ಲೋಕಸೇವಾ ಆಯೋಗದ ಅಧ್ಯಕ್ಷ ಸ್ಥಾನದಲ್ಲಿ ಕೂರಿಸಿದ್ದೇ ಯಡಿಯೂರಪ್ಪ ಮತ್ತವರ ಮಗ ವಿಜಯೇಂದ್ರ. ಈಗ ಬಿಜೆಪಿಯವರು ಕರ್ನಾಟಕ ಲೋಕಸೇವಾ ಆಯೋಗದ ವಿರುದ್ಧ ಹೋರಾಟದ ನಾಟಕವಾಡುತ್ತಿದ್ದಾರೆ. ಎಲ್ಲ ಪಕ್ಷಗಳ, ಅದರಲ್ಲೂ ಬಿಜೆಪಿಯವರ ಎಡಬಿಡಂಗಿ ನೀತಿಯಿಂದಲೇ ಪ್ರಶ್ನೆ ಪತ್ರಿಕೆ ಸೋರಿಕೆಯಂತಹ ಗಂಭೀರ ಭ್ರಷ್ಟಾಚಾರ ಪ್ರಕರಣಗಳು ತಾರ್ಕಿಕ ಅಂತ್ಯ ಕಾಣುತ್ತಿಲ್ಲ. ಭ್ರಷ್ಟರಿಗೆ ಕಠಿಣ ಶಿಕ್ಷೆಯಾಗುತ್ತಿಲ್ಲ.
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಪರೀಕ್ಷಾ ಅಕ್ರಮ ತಡೆ ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸಿ ಅಂಗೀಕಾರ ಪಡೆದಿದೆ. 2024ರ ಪರೀಕ್ಷಾ ಅಕ್ರಮ ತಡೆ ಕಾಯ್ದೆ ಅಲ್ಪ ಸ್ವಲ್ಪ ತಿದ್ದುಪಡಿ ಮಾಡಿದೆ. ಅಕ್ರಮಗಳಲ್ಲಿ ಭಾಗಿಯಾಗುವ ಅಪರಾಧಿಗಳಿಗೆ ವಿಧಿಸುವ ಶಿಕ್ಷೆ ಮತ್ತು ದಂಡದ ಪ್ರಮಾಣವನ್ನು ಹೆಚ್ಚಿಸಲಾಗಿದೆ. ತನಿಖಾ ಸಂಸ್ಥೆ ಸಿಬಿಐ ಇರಲಿ ಅಥವಾ ವಿಶೇಷ ತನಿಖಾ ದಳವೇ ಇರಲಿ. ತನಿಖಾ ಸಂಸ್ಥೆಯ ವರದಿ ಬಂದ ಮೇಲೆ ಹೆಚ್ಚೆಂದರೆ ಅಪರಾಧಿಗಳ ಮೇಲೆ ಚಾರ್ಜ್ ಶೀಟ್ ಸಲ್ಲಿಸಿ ಪ್ರಕರಣವನ್ನು ನ್ಯಾಯಾಲಯದ ಸುಪರ್ದಿಗೆ ಒಪ್ಪಿಸಬಹುದು. ನ್ಯಾಯ ವ್ಯವಸ್ಥೆಯಲ್ಲಿನ ವಿಳಂಬ ನೀತಿಯಿಂದ ನಿಜವಾದ ಅಪರಾಧಿಗಳಿಗೆ ಬೇಗ ಶಿಕ್ಷೆಯಾಗುವುದಿಲ್ಲ. ಕಾನೂನು ಎಷ್ಟೇ ಕಠಿಣವಾಗಿದ್ದರೂ ಶಿಕ್ಷೆ ಪ್ರಕಟಿಸದಿದ್ದರೆ ಅಪರಾಧಿ ರಾಜಾರೋಷವಾಗಿ ಬದುಕು ಸಾಗಿಸುತ್ತಾನೆ. ಆತನಿಗೆ ಕಾನೂನು ಮತ್ತು ಶಿಕ್ಷೆಯ ಭಯ ಇರುವುದಿಲ್ಲ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ತ್ವರಿತ ನ್ಯಾಯಾಲಯಗಳ ಸ್ಥಾಪನೆಯ ಅಗತ್ಯ ಈಗ ಮನವರಿಕೆಯಾಗಿದೆ. ಶಿಕ್ಷಣ ಇಲಾಖೆಯ ಎಲ್ಲ ಪರೀಕ್ಷೆಗಳನ್ನು ಯಾವುದೇ ಅಕ್ರಮವಿಲ್ಲದೆ ನಡೆಸಿ ಉಳಿದೆಲ್ಲ ಪ್ರವೇಶ ಪರೀಕ್ಷೆಗಳನ್ನು ರದ್ದು ಪಡಿಸಬೇಕು. ವೃತ್ತಿಪರ ಪ್ರವೇಶ ಪರೀಕ್ಷೆ, ನೇಮಕಾತಿ ಪರೀಕ್ಷೆ, ವಿವಿಧ ಅರ್ಹತಾ ಪರೀಕ್ಷೆಗಳು ಹಗರಣದ ಮೂಲ ಬೇರುಗಳಾಗಿವೆ. ಅಷ್ಟು ಮಾತ್ರವಲ್ಲ ಎಲ್ಲ ಪ್ರವೇಶ ಪರೀಕ್ಷೆಗಳು ಕೋಚಿಂಗ್ ಸೆಂಟರ್‌ಗಳ ಮಾಫಿಯಾದ ನಿಯಂತ್ರಣಕ್ಕೆ ಒಳಪಟ್ಟಿವೆ. ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯಲ್ಲಿ ಪಾರದರ್ಶಕತೆ ತಂದು ಅನಗತ್ಯ ಪ್ರವೇಶ ಪರೀಕ್ಷೆಗಳ ಹೊರೆ ತಗ್ಗಿಸಬೇಕು. ಆಗ ಪ್ರಶ್ನೆ ಪತ್ರಿಕೆ ಸೋರಿಕೆಯ ಪ್ರಕರಣಗಳೇ ಇರುವುದಿಲ್ಲ.
ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆ ಒಂದು ಝಲಕ್ ಅಷ್ಟೇ. ಭಾರತದ ಯುವ ಸಮುದಾಯ ಪರೀಕ್ಷಾ ವ್ಯವಸ್ಥೆ, ನಿರುದ್ಯೋಗ ಸಮಸ್ಯೆ ಮತ್ತು ಸರಕಾರಿ ಆಡಳಿತ ಯಂತ್ರದ ಬಗ್ಗೆಯೇ ಅಪಾರ ಅಸಮಾಧಾನ ಹೊಂದಿದೆ. ಕಾಕ್ರೋಚ್ ಜನತಾ ಪಾರ್ಟಿ ಒಂದು ವೇದಿಕೆ ಒದಗಿಸಿದ್ದರಿಂದ ಸಣ್ಣ ಪ್ರಮಾಣದ ಆಕ್ರೋಶ ಹೊರಬಂದಿದೆ. ಭಾರತದ ಯುವ ಸಮುದಾಯದ ಒಟ್ಟು ಆಕ್ರೋಶ ಸ್ಫೋಟಿಸುವ ಮುನ್ನ ಕೇಂದ್ರ ಸರಕಾರ ಎಚ್ಚೆತ್ತು ಕೊಳ್ಳಬೇಕು. ಮಂದಿರ-ಮಸೀದಿ, ಹಿಂದೂ-ಮುಸ್ಲಿಮ್‌ರಾಜಕಾರಣ ಬಿಟ್ಟು ಯುವ ಸಮುದಾಯದ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸಬೇಕಿದೆ. ಮೋದಿ-ಅಮಿತ್ ಶಾ ಜೋಡಿ ಭಾರತವನ್ನು, ಭಾರತದ ಯುವ ಸಮುದಾಯವನ್ನು ಹೆಚ್ಚು ಕಾಲ ಮೂರ್ಖರನ್ನಾಗಿಸಲು ಸಾಧ್ಯವಿಲ್ಲ. ಭಾರತದ ಯುವ ಸಮುದಾಯದ ಭಾವನೆಗಳಿಗೆ ನೈಜ ನೆಲೆಯಲ್ಲಿ ಸ್ಪಂದಿಸುವ ಕಾರ್ಯದಲ್ಲಿ ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ಪಕ್ಷ ಮತ್ತಷ್ಟು ಕ್ರಿಯಾಶೀಲವಾಗಬೇಕಿದೆ.