ವಾಡಿ : ಪಟ್ಟಣದಲ್ಲಿ ಸುಮಾರು ಐದು ಕೋಟಿ ರೂ. ವೆಚ್ಚದಲ್ಲಿ ಭವ್ಯ ಒಳಾಂಗಣ ಕ್ರೀಡಾಂಗಣದ ಸೌಲಭ್ಯ ಕಲ್ಪಿಸಿರುವುದಕ್ಕೆ ಸ್ಥಳೀಯ ವಾಕಿಂಗ್ ಟೀಂ ‘ಬೆಳಗಿನ ಬಳಗ’ದ ಸದಸ್ಯರು ಸಾಹಿತ್ಯ ಕೃತಿಗಳನ್ನು ನೀಡಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಅಭಿನಂದಿಸಿದರು.

ಬಸವ ಭವನ ಉದ್ಘಾಟನೆಗಾಗಿ ಶನಿವಾರ ಚಿತ್ತಾಪುರಕ್ಕೆ ಆಗಮಿಸಿದ್ದ ಕ್ಷೇತ್ರದ ಶಾಸಕ ಹಾಗೂ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಭೇಟಿ ಮಾಡಿದ ಬೆಳಗಿನ ಬಳಗದ ಸದಸ್ಯರು, ವಾಡಿ ಪಟ್ಟಣಕ್ಕೆ ಒಳಾಂಗಣ ಮತ್ತು ಹೊರಾಂಗಣ ಕ್ರೀಡಾಂಗಣ ಹಾಗೂ ಸರ್ಕಾರಿ ಪದವಿಪೂರ್ವ ಕಾಲೇಜಿನ ಅಗತ್ಯವಿತ್ತು. ಈ ಬೇಡಿಕೆಗಳ ಈಡೇರಿಕೆಗಾಗಿ ಕಳೆದ ಹಲವು ವರ್ಷಗಳಿಂದ ಮನವಿ ಪತ್ರಗಳನ್ನು ಸಲ್ಲಿಸಲಾಗುತ್ತಿತ್ತು. ಸ್ಥಳೀಯರ ಬೇಡಿಕೆಗಳಿಗೆ ಸ್ಪಂದಿಸಿ, ಯುವಕರು ಮತ್ತು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಬೃಹತ್ ಒಳಾಂಗಣ ಹಾಗೂ ಹೊರಾಂಗಣ ಕ್ರೀಡಾಂಗಣದ ಸೌಲಭ್ಯ ಕಲ್ಪಿಸಿರುವುದು ಉತ್ತಮ ಕಾರ್ಯವಾಗಿದೆ ಎಂದು ಸಂತಸ ವ್ಯಕ್ತಪಡಿಸಿ ಅಭಿನಂದಿಸಿದರು.

ಸಿಮೆಂಟ್ ಧೂಳಿನಿಂದ ಕೂಡಿರುವ ವಾಡಿ ಪಟ್ಟಣದಲ್ಲಿ ಸ್ವಚ್ಛ ಪರಿಸರ ನಿರ್ಮಾಣ ಗಗನಕುಸುಮವಾಗಿದೆ. ಜನರು ವಿವಿಧ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ವಿದ್ಯಾರ್ಥಿಗಳು, ಯುವಕರು ಹಾಗೂ ಹಿರಿಯರು ಯೋಗ ಮತ್ತು ವ್ಯಾಯಾಮಕ್ಕಾಗಿ ರಸ್ತೆಗಳನ್ನು ಅವಲಂಬಿಸುವಂತಾಗಿತ್ತು. ಹೀಗಾಗಿ ಕ್ರೀಡಾಂಗಣದ ಸೌಲಭ್ಯ ಪಟ್ಟಣಕ್ಕೆ ಅತ್ಯಂತ ಅವಶ್ಯಕವಾಗಿತ್ತು ಎಂದು ಸದಸ್ಯರು ತಿಳಿಸಿದರು.

ಸ್ಥಳೀಯರ ಭಾವನೆಗಳಿಗೆ ಸ್ಪಂದಿಸುವುದರ ಜೊತೆಗೆ ನಿರೀಕ್ಷೆಗೂ ಮೀರಿ ಅತ್ಯಂತ ಗುಣಮಟ್ಟದ, ಜಿಲ್ಲಾ ಮಟ್ಟದ ಕ್ರೀಡಾಂಗಣವನ್ನೂ ಮೀರಿಸುವಂತಹ ಒಳಾಂಗಣ ಕ್ರೀಡಾಂಗಣದ ಸೌಲಭ್ಯ ಕಲ್ಪಿಸಿರುವುದು ಜನರ ಆರೋಗ್ಯದ ಕಾಳಜಿಯನ್ನು ತೋರಿಸುತ್ತದೆ. ಆದಷ್ಟು ಬೇಗ ಕ್ರೀಡಾಂಗಣದ ಉದ್ಘಾಟನೆ ನೆರವೇರಿಸಿ ಸಾರ್ವಜನಿಕರ ಬಳಕೆಗೆ ಅವಕಾಶ ಕಲ್ಪಿಸಬೇಕು ಎಂದು ವಾಕಿಂಗ್ ಟೀಂ ಸದಸ್ಯರು ಸಚಿವರಿಗೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಬೆಳಗಿನ ಬಳಗದ ಯೋಗ ಶಿಕ್ಷಕ ಮಲ್ಲಯ್ಯ ಸ್ವಾಮಿ ಮಠಪತಿ, ದೈಹಿಕ ಶಿಕ್ಷಕ ಶ್ರೀನಾಥ ಇರಗೊಂಡ, ಮಡಿವಾಳಪ್ಪ ಹೇರೂರು, ಶರಣಗೌಡ ಪಾಟೀಲ ಚಾಮನೂರ, ಬಸವರಾಜ ಕೇಶ್ವಾರ, ಅಮೃತಪ್ಪ ದಿಗ್ಗಾಂವ, ಗುಂಡುಗೌಡ ಪಾಟೀಲ್, ಚಂದ್ರಶೇಖರ ಬೆಣ್ಣೂರ ಸೇರಿದಂತೆ ಇತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಸಾಜಿದ್‌ ಅಲಿ/ವಾರ್ತಾಭಾರತಿ

ಕಲಬುರಗಿ ಜಿಲ್ಲಾ ವರದಿಗಾರರು

ಸಾಜಿದ್ ಅಲಿ ಅವರು 12 ವರ್ಷಗಳ ಪತ್ರಿಕೋದ್ಯಮ ಅನುಭವ ಹೊಂದಿದ್ದಾರೆ. ವಾರ್ತಾಭಾರತಿ ಮಂಗಳೂರು ಡೆಸ್ಕ್ ಸೇರಿದಂತೆ ವಿವಿಧ ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸಿರುವ ಇವರು, ಕಳೆದ ಏಳು ವರ್ಷಗಳಿಂದ ವಾರ್ತಾಭಾರತಿ ಡಿಜಿಟಲ್ ವೆಬ್‌ಸೈಟ್‌ನ ಕಲಬುರಗಿ ಜಿಲ್ಲಾ ವರದಿಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ವಾರ್ತಾಭಾರತಿ ಪತ್ರಿಕೆಯ ಜಿಲ್ಲಾ ವರದಿಗಾರರಾಗಿ ಹಾಗೂ ಕಲ್ಯಾಣ ಕರ್ನಾಟಕ ವಿಭಾಗದ ಕೋಆರ್ಡಿನೇಟರ್ ಆಗಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ