Kalaburagi | ಹಿಟ್ ಆ್ಯಂಡ್ ರನ್ : ಪಾದಚಾರಿ ಸ್ಥಳದಲ್ಲೇ ಮೃತ್ಯು
ಸಾಂದರ್ಭಿಕ ಚಿತ್ರ
ಕಲಬುರಗಿ: ನಗರದ ಹೊರವಲಯದ ಸೇಡಂ ರಿಂಗ್ ರಸ್ತೆಯಿಂದ ಸುಮಾರು ಐದು ಕಿಲೋಮೀಟರ್ ದೂರದಲ್ಲಿರುವ ಧಾಬಾ ಮುಂಭಾಗ ಗುರುವಾರ ರಾತ್ರಿ ಸಂಭವಿಸಿದ ಹಿಟ್ ಆ್ಯಂಡ್ ರನ್ ಅಪಘಾತದಲ್ಲಿ ಪಾದಚಾರಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತರನ್ನು ಹೀರಾಪುರ ಗ್ರಾಮದ ನಿವಾಸಿ ಬಾಬುಷಾ (32) ಎಂದು ಗುರುತಿಸಲಾಗಿದೆ. ಅವರು ರಾತ್ರಿ ಸ್ನೇಹಿತರೊಂದಿಗೆ ಧಾಬಾಕ್ಕೆ ಊಟಕ್ಕೆ ತೆರಳಿದ್ದರು. ಊಟ ಮುಗಿಸಿ ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ ಅತಿವೇಗ ಹಾಗೂ ಅಜಾಗರೂಕತೆಯಿಂದ ಬಂದ ಅಪರಿಚಿತ ವಾಹನ ಅವರಿಗೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಢಿಕ್ಕಿಯ ರಭಸಕ್ಕೆ ಗಂಭೀರವಾಗಿ ಗಾಯಗೊಂಡ ಬಾಬುಷಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ರಾತ್ರಿಯ ಕತ್ತಲೆಯಲ್ಲಿ ಘಟನೆ ನಡೆದಿರುವುದರಿಂದ ಢಿಕ್ಕಿ ಹೊಡೆದ ವಾಹನ ಯಾವುದೆಂಬುದು ಇನ್ನೂ ಖಚಿತವಾಗಿಲ್ಲ. ಅದು ನಾಲ್ಕು ಚಕ್ರಗಳ ವಾಹನವಾಗಿರಬಹುದು ಎಂದು ಶಂಕಿಸಲಾಗಿದೆ. ಈ ಕುರಿತು ಸಂಚಾರಿ ಪೊಲೀಸ್ ಠಾಣೆ-2ರಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.