Aland | ಕನ್ನಡ–ಮರಾಠಿ ಭಾಷಾ ಬಾಂಧವ್ಯಕ್ಕೆ ಮರಾಠಿ ಸಾಹಿತ್ಯ ಪರಿಷತ್ತು ಬದ್ಧ: ಗುರುಯ್ಯ ಆರ್. ಸ್ವಾಮಿ

ವಿದ್ಯಾರ್ಥಿಗಳಿಗೆ ಸಾಮಗ್ರಿ ವಿತರಣೆ: ನಿವೃತ್ತ ಶಿಕ್ಷಕರಿಗೆ ಸನ್ಮಾನ

Update: 2026-08-18 19:18 IST

ಆಳಂದ: ಕಳೆದ 45 ವರ್ಷಗಳಿಂದ ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಮರಾಠಿ ಸಾಹಿತ್ಯ ಪರಿಷತ್ತು ಕನ್ನಡ ಮತ್ತು ಮರಾಠಿ ಭಾಷೆಗಳ ಕೃತಿಗಳನ್ನು ಪರಸ್ಪರ ಅನುವಾದಿಸುವ ಮೂಲಕ ಎರಡೂ ಭಾಷೆಗಳ ನಡುವಿನ ಬಾಂಧವ್ಯವನ್ನು ಬಲಪಡಿಸುವ ಕಾರ್ಯ ಮುಂದುವರಿಸಲಿದೆ ಎಂದು ಮರಾಠಿ ಸಾಹಿತ್ಯ ಪರಿಷತ್ತಿನ ಕರ್ನಾಟಕ ರಾಜ್ಯಾಧ್ಯಕ್ಷ ಗುರುಯ್ಯ ಆರ್. ಸ್ವಾಮಿ ಹೇಳಿದರು.

ಪಟ್ಟಣದ ಶ್ರೀ ದಿಗಂಬರ ಜೈನ ಜ್ಞಾನ ಸ್ವಾಸ್ಥ್ಯ ಪ್ರಸಾರಕ ಮಂಡಳಿಯ ಮರಾಠಿ ಮಾಧ್ಯಮ ಶಿಕ್ಷಣ ಸಂಸ್ಥೆಯ ಶತಕೋತ್ತರ ರಜತ ಮಹೋತ್ಸವದ ಅಂಗವಾಗಿ, ಕರ್ನಾಟಕ ರಾಜ್ಯ ಕಲಬುರಗಿ ಮರಾಠಿ ಸಾಹಿತ್ಯ ಪರಿಷತ್ತು ಹಾಗೂ ಮುಂಬೈ ರಾಜ್ಯ ಮರಾಠಿ ಅಭಿವೃದ್ಧಿ ಸಂಸ್ಥೆಯ ಆಶ್ರಯದಲ್ಲಿ ಆಯೋಜಿಸಿದ್ದ ಪ್ರಬಂಧ, ಭಾಷಣ, ನಾಟಕ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಮಗ್ರಿ ವಿತರಣೆ ಮತ್ತು ಶಾಲೆಯ ನಿವೃತ್ತ ಶಿಕ್ಷಕರ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕರ್ನಾಟಕ ರಾಜ್ಯ ಮರಾಠಿ ಸಾಹಿತ್ಯ ಪರಿಷತ್ತಿನ ವತಿಯಿಂದ ನಿವೃತ್ತ ಶಿಕ್ಷಕರು, ಸಾಹಿತಿಗಳು ಹಾಗೂ ಬಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಮಗ್ರಿಗಳನ್ನು ವಿತರಿಸಲಾಗುತ್ತಿದೆ. ಕನ್ನಡ ಕೃತಿಗಳನ್ನು ಮರಾಠಿಗೆ ಹಾಗೂ ಮರಾಠಿ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸುವ ಮೂಲಕ ಎರಡೂ ಭಾಷೆಗಳ ನಡುವೆ ಪರಿಷತ್ತು ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.

ಕಳೆದ ಫೆ. 27ರಂದು ಮಹಾರಾಷ್ಟ್ರದ ನಾಶಿಕ್‌ನಲ್ಲಿ ನಡೆದ 4ನೇ ವಿಶ್ವ ಮರಾಠಿ ಸಾಹಿತ್ಯ ಸಮ್ಮೇಳನದಲ್ಲಿ ಕರ್ನಾಟಕ ರಾಜ್ಯ ಮರಾಠಿ ಸಾಹಿತ್ಯ ಪರಿಷತ್ತಿಗೆ ‘ಕವಿ ಮಂಗೇಶ ಪಾಡಗಾಂವಕರ್ ಭಾಷಾ ಸಂವರ್ಧನ’ ಹೆಸರಿನ ₹2 ಲಕ್ಷ ನಗದು ಒಳಗೊಂಡ ಪ್ರಥಮ ಪುರಸ್ಕಾರ ದೊರೆತಿರುವುದು ಕರ್ನಾಟಕದಲ್ಲಿ ಪರಿಷತ್ತಿನ ಸಾಹಿತ್ಯಿಕ ಕಾರ್ಯಗಳಿಗೆ ಮತ್ತಷ್ಟು ಉತ್ತೇಜನ ನೀಡಿದೆ ಎಂದು ಹೇಳಿದರು.

ಕರ್ನಾಟಕ ರಾಜ್ಯ ಮರಾಠಿ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗುರುಯ್ಯ ಆರ್. ಮಾತನಾಡಿ, ಮರಾಠಿ ಮಾಧ್ಯಮ ಶಾಲೆಯಲ್ಲಿ ಕಲಿಯುತ್ತಿರುವ ಬಡ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಶೈಕ್ಷಣಿಕ ಸಾಮಗ್ರಿಗಳನ್ನು ವಿತರಿಸಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ದಿಗಂಬರ ಜೈನ ಸಂಸ್ಥೆಯ ಅಧ್ಯಕ್ಷ ಮನೋಜ್ ಶಾ, ಕಾರ್ಯದರ್ಶಿ ಸುಜಾತಾ ಶಾ ಹಾಗೂ ಸಮಾಜಸೇವಕ ಡಾ. ಪಿ.ಎನ್. ಶಾ ಅವರನ್ನು ಹಾಗೂ ನಿವೃತ್ತ ಶಿಕ್ಷಕರಾದ ಪಿ.ಎನ್. ಮೆಹತಾ, ಪ್ರಭಾಕರ ಸಲಗರೆ, ಆಶಾಬಾಯಿ ಆಳಂದಕರ, ಭಾನು ದಾಸ ಕಠಾರೆ, ಮಹಾನಂದಾ ರಾಚೋಟಿ, ಕೆ.ಎ. ಮೊಮೀನ್ ಹಾಗೂ ನಿವೃತ್ತ ಸಿಬ್ಬಂದಿ ಪದ್ಮಕುಮಾರ ಬೇಲ್‌ಸೂರೆ ಅವರನ್ನು ಶಾಲು ಹೊದಿಸಿ ನೆನಪಿನ ಕಾಣಿಕೆಯೊಂದಿಗೆ ಸನ್ಮಾನಿಸಿ ಗೌರವಿಸಲಾಯಿತು.

ಪರಿಷತ್ತಿನ ಕೋಶಾಧಿಕಾರಿ ಮಿಲಿಂದ್ ಉಮಾಳಕರ, ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯ ಧನಂಜಯ ಡೋಲೆ, ಶಿಕ್ಷಕರಾದ ರಾಹುಲ್ ಜಾವಳೆ, ಸುರೇಖಾ ಸ್ವಾಮಿ, ಸತೀಶ್ ಚವ್ಹಾಣ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News