ಖರ್ಗೆ ರ‍್ಯಾಲಿ ನಡೆಸಿದ 'ಸ್ಥಳ ಶುದ್ಧೀಕರಣ' :ಚಿತ್ತಾಪುರದಲ್ಲಿ ಕಾಂಗ್ರೆಸ್ ಬೃಹತ್ ಪ್ರತಿಭಟನೆ
ಚಿತ್ತಾಪುರ: ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಉತ್ತರಾಖಂಡದ ಹಲದ್ವಾನಿಯ ರಾಮಲೀಲಾ ಮೈದಾನದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಬಳಿಕ ಬಿಜೆಪಿ, ಆರೆಸ್ಸೆಸ್ ಹಾಗೂ ಸಂಘ ಪರಿವಾರದವರು ಮೈದಾನವನ್ನು ಶುದ್ಧೀಕರಿಸಿದ್ದಾರೆ ಎಂದು ಆರೋಪಿಸಿ, ಚಿತ್ತಾಪುರ ಹಾಗೂ ವಾಡಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಪಟ್ಟಣದ ಲಾಡ್ಜಿಂಗ್ ಕ್ರಾಸ್‌ನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮಾನವ ಸರಪಳಿ ನಿರ್ಮಿಸಿ, ಎರಡು ಗಂಟೆಗೂ ಹೆಚ್ಚು ಕಾಲ ಬಿಜೆಪಿ ಹಾಗೂ ಆರ್‌ಎಸ್‌ಎಸ್ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ನಂತರ ಚಿತ್ತಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ ಹಾಗೂ ವಾಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹೇಮೂದ್ ಸಾಹೇಬ್ ಮಾತನಾಡಿ, ಮಲ್ಲಿಕಾರ್ಜುನ ಖರ್ಗೆ ಅವರು ದಲಿತ ನಾಯಕ ಎಂಬ ಕಾರಣಕ್ಕೆ ರಾಮಲೀಲಾ ಮೈದಾನ ಕಲುಷಿತಗೊಂಡಿದೆ ಎಂದು ಪರಿಗಣಿಸಿ ಗಂಗಾಜಲದಿಂದ ಶುದ್ಧೀಕರಣ ಮಾಡಿರುವುದು ಅಸ್ಪೃಶ್ಯತೆಯ ಆಚರಣೆಯಾಗಿದೆ ಎಂದು ಆರೋಪಿಸಿದರು. ಈ ಘಟನೆ ಕೇವಲ ಖರ್ಗೆ ಅವರಿಗೆ ಮಾಡಿದ ಅವಮಾನವಲ್ಲ, ಇಡೀ ದಲಿತ ಸಮುದಾಯಕ್ಕೆ ಮಾಡಿದ ಅವಮಾನವಾಗಿದೆ. ಇದನ್ನು ಚಿತ್ತಾಪುರ ಮತ್ತು ವಾಡಿ ಬ್ಲಾಕ್ ಕಾಂಗ್ರೆಸ್ ಬಲವಾಗಿ ಖಂಡಿಸುತ್ತದೆ ಎಂದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಮೇಶ್ ಮರಗೋಳ ಮಾತನಾಡಿ, ಬುದ್ಧ, ಬಸವ ಹಾಗೂ ಅಂಬೇಡ್ಕರ್ ಅವರ ತತ್ವ, ಸಿದ್ಧಾಂತಗಳಲ್ಲಿ ನಂಬಿಕೆಯಿಟ್ಟು ಸಾಮಾಜಿಕ ನ್ಯಾಯ ಮತ್ತು ಸಂವಿಧಾನಾತ್ಮಕ ಹಕ್ಕುಗಳಿಗಾಗಿ ಹೋರಾಡುತ್ತಿರುವ ಡಾ. ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅವಮಾನ ಮಾಡಿರುವುದು ಖಂಡನೀಯ. ಇಂತಹ ಘಟನೆ ದೇಶದ ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿದೆ. ಕೇಂದ್ರ ಸರ್ಕಾರ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದರು.
ಮುಖಂಡರಾದ ಸುರೇಶ್ ಮೆಂಗನ್ ಹಾಗೂ ಮಲ್ಲಿಕಾರ್ಜುನ ಬೊಮ್ಮನಳ್ಳಿ ಮಾತನಾಡಿ, ಸಂವಿಧಾನದ ಅನುಚ್ಛೇದ 17ರ ಪ್ರಕಾರ ಅಸ್ಪೃಶ್ಯತೆ ಆಚರಣೆ ಸಂಪೂರ್ಣ ನಿಷೇಧವಾಗಿದೆ. ಆದರೂ ಶುದ್ಧೀಕರಣ ಕಾರ್ಯಕ್ರಮ ನಡೆಸುವ ಮೂಲಕ ಅಸ್ಪೃಶ್ಯತೆಯನ್ನು ಆಚರಿಸಲಾಗಿದೆ ಎಂದು ಆರೋಪಿಸಿದರು. ಈ ಘಟನೆ ನಾಗರಿಕ ಹಕ್ಕುಗಳ ಸಂರಕ್ಷಣಾ ಕಾಯ್ದೆ-1955 ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ-1989ರ ಉಲ್ಲಂಘನೆಯಾಗಿದ್ದರೆ, ಘಟನೆ ಕುರಿತು ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಮುಕ್ತಾರ್ ಪಟೇಲ್ ಮಾತನಾಡಿ, ದಲಿತ ಹಾಗೂ ಹಿಂದುಳಿದ ನಾಯಕರನ್ನು ಅವಮಾನಿಸುವ ಘಟನೆಗಳು ಮರುಕಳಿಸದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಅಸ್ಪೃಶ್ಯತೆ ಆಚರಣೆಯನ್ನು ಉತ್ತೇಜಿಸುವ ಯಾವುದೇ ರೀತಿಯ ಶುದ್ಧೀಕರಣ ಕಾರ್ಯಕ್ರಮಗಳಿಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.
ಮುಖಂಡರಾದ ಚಂದು ಜಾಧವ, ರಮೇಶ್ ಹಡಪದ ಕೊಲ್ಲೂರು, ನಾಗರೆಡ್ಡಿ ಪಾಟೀಲ ಕರದಾಳ, ಶಿವಾನಂದ ಪಾಟೀಲ, ಶ್ರೀನಿವಾಸ ಸಗರ, ಬಸವರಾಜ ಹೊಸಳ್ಳಿ, ಬಸವರಾಜ ಚಿನ್ನಮಳ್ಳಿ, ನಾಗಯ್ಯ ಗುತ್ತೇದಾರ, ಶ್ರೀನಿವಾಸ ಸಗರ, ಶೀಲಾ ಕಾಶಿ, ಭೀಮಾಶಂಕರ ಹೋಳಿಕಟ್ಟಿ ಮಾತನಾಡಿದರು.
ಈ ಸಂದರ್ಭದಲ್ಲಿ ಸುನೀಲ್ ದೊಡ್ಡಮನಿ, ಜಯಪ್ರಕಾಶ್ ಕಮಕನೂರ, ಶಿವರುದ್ರಪ್ಪ ಭೀಣ್ಣಿ, ಅರವಿಂದ ಚವ್ಹಾಣ, ವೀರಣ್ಣಗೌಡ ಪರಸರೆಡ್ಡಿ, ರಾಜಶೇಖರ್ ತಿಮ್ಮನಾಯಕ, ಶಿವಯ್ಯ ಗುತ್ತೇದಾರ, ದೇವಿಂದ್ರ ಅರಣಕಲ್, ಶಿವುಕುಮಾರ ಯಾಗಾಪೂರ, ಚಂದ್ರಶೇಖರ ಕಾಶಿ, ಹಣಮಂತ ಸಂಕನೂರ, ಜಗಣ್ಣಗೌಡ ರಾಮತೀರ್ಥ, ವೀರುಪಾಕ್ಷಪ್ಪ ಗಡ್ಡದ್, ಮಲ್ಲಪ್ಪ ಹೊಸಮನಿ, ಶಿವುಕುಮಾರ ಸುಲ್ತಾನಪೂರ, ಯಲ್ಲಾಲಿಂಗ ಪೂಜಾರಿ, ಶಿವಕಾಂತ ಬೆಣ್ಣೂರಕರ್, ದೇವಿಂದ್ರ ಯಾಬಾಳ, ಬಸವರಾಜ ಪೂಜಾರಿ, ಮಲ್ಲಿಕಾರ್ಜುನ ಬೆಣ್ಣೂರಕರ್, ರಸೂಲ್ ಮುಸ್ತಫಾ, ಸೂರ್ಯಕಾಂತ ರದ್ದೇವಾಡಿ, ಮಲ್ಲಿಕಾರ್ಜುನ ಕಾಳಗಿ, ರಾಮಲಿಂಗ ಬಾನರ್, ಸಿದ್ದುಗೌಡ ಅಫಜಲಪುರ, ನಾಗರೆಡ್ಡಿ ಗೋಪಸೇನ್, ನಿಂಗಣ್ಣ ಹೆಗಲೇರಿ, ಭೀಮಸಿಂಗ ಚವ್ಹಾಣ, ಜಗದೀಶ್ ಚವ್ಹಾಣ, ಸಿದ್ದಮ್ಮ ಕಾಶನೂರ, ಮಲ್ಲಿಕಾರ್ಜುನ ಮುಡಬೂಳಕರ್, ಶೇಖ್ ಬಬ್ಲು, ಸಂಜಯ್ ಬುಳಕರ್, ಬಾಬು ಕಾಶಿ, ಸಂತೋಷ ಪೂಜಾರಿ, ಕಾಶಪ್ಪ ಡೋಣಗಾಂವ, ದಶರಥ್, ಮಾಣಿಕ್ ಸೇರಿದಂತೆ ಕಾಂಗ್ರೆಸ್ ಪಕ್ಷದ ನೂರಾರು ಕಾರ್ಯಕರ್ತರು, ಅಭಿಮಾನಿಗಳು ಇದ್ದರು.